ಪಾಪದ ಮುದುಕ ಆಡಲಾಗದೆ ಅನುಭವಿಸಲಾಗದೆ ಹೊರಳುತ್ತಿದ್ದರೆ, ಜಂಭದ ಕಿವುಡ ತನ್ನ ಭೇಟಿಯಿಂದ ಈ ಮುದುಕನಿಗೆ ಇಷ್ಟಾದರೂ ಸಂತೋಷವಾಯ್ತಲ್ಲ, ಇವನಿಗೆ ನಾಲ್ಕು ಒಳ್ಳೆ ಮಾತಾಡಿ ಪುಣ್ಯ ಸಂಪಾದನೆ ಮಾಡಿದ ಹಾಗಾಯ್ತು ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡು ಅಲ್ಲಿಂದ ಹೊರಟ… । ಮೂಲ: ಮಸ್ನವಿ, ಜಲಾಲುದ್ದೀನ್ ರೂಮಿ; ಕನ್ನಡ ನಿರೂಪಣೆ: ಚೇತನಾ ತೀರ್ಥಹಳ್ಳಿ
ಒಂದೂರಿನಲ್ಲಿ ಒಬ್ಬ ಕಿವುಡನಿದ್ದ. ಆದರೆ ತನಗೆ ಕಿವುಡು ಎಂದು ಹೇಳಿಕೊಳ್ಳೋದು ಅವನಿಗೆ ಇಷ್ಟವಿರಲಿಲ್ಲ. ತಾನು ಎಲ್ಲರಂತೆ ಸಹಜವಾಗಿದ್ದೀನೆಂದೇ ತೋರಿಸಿಕೊಳ್ಳುತ್ತಿದ್ದ.
ಒಂದು ದಿನ ದಾರಿಯಲ್ಲಿ ಸಿಕ್ಕ ಗೆಳೆಯನೊಬ್ಬ, ನಿನ್ನ ನೆರೆಮನೆಯಲ್ಲಿರೋದು ನನ್ನ ದೂರದ ನೆಂಟರು. ಅವರಿಗೆ ತುಂಬಾ ಹುಷಾರಿಲ್ಲವಂತೆ. ನಾನು ತುರ್ತು ಕೆಲಸದ ಮೇಲೆ ಹೊರಟಿದ್ದೀನಿ. ನಾಳೆ ಹೋಗಿ ವಿಚಾರಿಸ್ತೀನಿ. ದಯವಿಟ್ಟು ಈ ಸಂಜೆ ಅವರ ಮನೆಗೆ ಭೇಟಿ ಕೊಡ್ತೀಯಾ?” ಎಂದು ಕೇಳಿಕೊಂಡ.
ಗೆಳೆಯನ ತುಟಿ ಚಲನೆ, ಕೈ ಸನ್ನೆ ಇತ್ಯಾದಿಯನ್ನು ಗಮನಿಸುತ್ತಾ ಕಿವುಡ ಅದು ಹೇಗೋ ಅವನ ಮಾತು ಅರ್ಥ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ. ಇವತ್ತೇ ಸಂಜೆ ಹೋಗಿ ನೋಡಿಕೊಂಡು ಬರುವೆನೆಂದು ಮಾತು ಕೊಟ್ಟ.
ಆ ವ್ಯಕ್ತಿ ಹೋದ ಮೇಲೆ ಕಿವುಡನಿಗೆ ಚಿಂತೆ ಶುರುವಾಯ್ತು. “ಉಳಿದವರೇನೋ ಗಟ್ಟಿ ದನಿಯಲ್ಲಿ, ಕೈಸನ್ನೆ ಗಳೊಂದಿಗೆ, ತುಟಿಗಳನ್ನು ಜೋರಾಗಿ ತೆರೆಯುತ್ತ – ಮುಚ್ಚುತ್ತ ಮಾತಾಡುತ್ತಿದ್ದರು. ಆದರೆ ಈ ನೆರೆಮನೆಯಾತ ಮುದಿಯಾಗಿದ್ದಾನೆ, ಹುಷಾರಿಲ್ಲದೆ ಮಲಗಿದ್ದಾನೆ. ಅವನು ಹೇಗೆ ಮಾತಾಡಿಯಾನು? ಹೆಚ್ಚೆಂದರೆ ಪಿಸುಗುಡಬಲ್ಲ ಅಷ್ಟೇ. ಅವನ ಮಾತು ನಾನು ಅರ್ಥ ಮಾಡಿಕೊಳ್ಳೋದು ಹೇಗೆ?”
ಒಮ್ಮೆ ಮಾತು ಕೊಟ್ಟ ಮೇಲೆ ಕಿವುಡ ಹಿಂಜರಿಯುವ ಮಾತೇ ಇರಲಿಲ್ಲ. ಕೊನೆಗೂ ಧೈರ್ಯ ಮಾಡಿ ಹೊರಟೇಬಿಟ್ಟ. ಹೊರಡುವ ಮುನ್ನ ಒಂದಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಅದಕ್ಕೆ ಉತ್ತರಗಳನ್ನೂ ತನಗೆ ತಾನೇ ಊಹಿಸಿಕೊಂಡ.
ತಾನು “ಈಗ ಹೇಗಿದ್ದೀರಿ” ಅಂತ ಕೇಳಿದರೆ ಆತ “ಈಗ ಪರವಾಗಿಲ್ಲ” ಅನ್ನುತ್ತಾನೆ.
ನಾನು “ಒಳ್ಳೆಯದಾಯ್ತು. ಊಟಕ್ಕೆ ಏನು ತಿಂದಿರಿ?” ಅಂತ ಕೇಳಿದರೆ, “ಸಕ್ಕರೆ – ಹಾಲು ಹಾಕಿದ ರುಚಿಯಾದ ರವೆ ಗಂಜಿ ಕುಡಿದೆ” ಅನ್ನಬಹುದು.
ನಾನು “ನಿಜಕ್ಕೂ ಅದು ರುಚಿಯಾಗಿರುತ್ತೆ” ಅಂದು, “ನಿಮಗೆ ಚಿಕಿತ್ಸೆ ಕೊಡ್ತಿರೋದು ಯಾವ ವೈದ್ಯರು?” ಎಂದು ಕೇಳುತ್ತೇನೆ. ಅದಕ್ಕವನು ಇಲ್ಲೇ ಅಕ್ಕಪಕ್ಕದ ಸ್ಥಳೀಯ ವೈದ್ಯರ ಹೆಸರು ಹೇಳುತ್ತಾನೆ.
ನಾನು ಆ ವೈದ್ಯರನ್ನು ಹೊಗಳಿ ಅವರಿಗೆ ಧೈರ್ಯ ತುಂಬುತ್ತೇನೆ. ಅವರು ಖುಷಿಯಾಗಿ ನಾಳೆ ನನ್ನ ಗೆಳೆಯನ ಮುಂದೆ ನನ್ನ ಬಗ್ಗೆ ಎರಡು ಒಳ್ಳೆಯ ಮಾತಾಡುತ್ತಾರೆ.
-ಹೀಗೆ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿಕೊಂಡ ಕಿವುಡ, ನೆರೆಮನೆಗೆ ಹೋದ. ಅಲ್ಲಿ ಮುದುಕ ನರಳುತ್ತಾ ಮಲಗಿದ್ದ. ಅವನ ನರಳಾಟ ಕಿವುಡನಿಗೆ ಕೇಳೀಸೋದಾದ್ರೂ ಹೇಗೆ? ಅವನು ತಾನು ಸಿದ್ಧಪಡಿಸಿಕೊಂಡಿದ್ದ ಮೊದಲನೇ ಪ್ರಶ್ನೆ ಕೇಳಿದ; “ಹೇಗಿದ್ದೀರಿ?”
“ಸಾಯ್ತಾ ಇದ್ದೀನಿ” ಮುದುಕ ಅಂದ.
“ಬಹಳ ಒಳ್ಳೆಯದು” ತನ್ನ ಸಿದ್ಧ ಉತ್ತರ ಕೊಟ್ಟ ಕಿವುಡ, “ಊಟಕ್ಕೇನು ತಿಂದಿರಿ?” ಕೇಳಿದ.
ಮುದುಕನಿಗೆ ಕಿವುಡನ ಪ್ರತಿಕ್ರಿಯೆಯಿಂದ ಸಿಟ್ಟು ಬಂದಿತ್ತು. ಕಟುವಾಗಿ, “ವಿಷ ತಿಂದೆ” ಅಂದ.
ಕಿವುಡ ತಲೆದೂಗುತ್ತಾ, “ನಿಜಕ್ಕೂ ಅದು ರುಚಿಯಾಗಿರುತ್ತೆ” ಅಂದು, “ನಿಮಗೆ ಚಿಕಿತ್ಸೆ ಕೊಡ್ತಿರೋದು ಯಾವ ವೈದ್ಯರು?” ಎಂದು ಕೇಳಿದ. ಮುದುಕನ ಪಿತ್ಥ ನೆತ್ತಿಗೇರಿತು. ಅವ “ನನಗೆ ಚಿಕಿತ್ಸೆ ಕೊಡ್ತಿರೋದು ಅಜ್ರಾಯಿಲ್!” ಎಂದು ಕೂಗಿದ. ಅವನ ಕೂಗು ಕಿವುಡನ ಕಿವಿ ತಲುಪಲಿಲ್ಲ. ಅವನು ಮೆಚ್ಚುಗೆ ವ್ಯಕ್ತಪಡಿಸುತ್ತಾ, “ನಿಜಕ್ಕೂ ಅವರು ತುಂಬಾ ಒಳ್ಳೆಯ ವೈದ್ಯರು. ಎಂಥದ್ದೇ ಕಾಯಿಲೆ ಇದ್ದರೂ ಅವರು ಶಾಶ್ವತ ಪರಿಹಾರ ಕೊಡುತ್ತಾರೆ. ಅವರು ಆದಷ್ಟು ಬೇಗ ನಿಮ್ಮನ್ನು ಅನಾರೋಗ್ಯದಿಂದ ಮುಕ್ತಗೊಳಿಸಲಿ” ಅಂದುಬಿಟ್ಟ.
ಪಾಪದ ಮುದುಕ ಆಡಲಾಗದೆ ಅನುಭವಿಸಲಾಗದೆ ಹೊರಳುತ್ತಿದ್ದರೆ, ಜಂಭದ ಕಿವುಡ ತನ್ನ ಭೇಟಿಯಿಂದ ಈ ಮುದುಕನಿಗೆ ಇಷ್ಟಾದರೂ ಸಂತೋಷವಾಯ್ತಲ್ಲ, ಇವನಿಗೆ ನಾಲ್ಕು ಒಳ್ಳೆ ಮಾತಾಡಿ ಪುಣ್ಯ ಸಂಪಾದನೆ ಮಾಡಿದ ಹಾಗಾಯ್ತು ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡು ಅಲ್ಲಿಂದ ಹೊರಟ.
ಅವನು ಹೋದಕೂಡಲೇ ಮುದುಕ ಸಮಾಧಾನದ ನಿಟ್ಟುಸಿರು ಬಿಟ್ಟ!

