ನೀವು ಅನುಭವಿಸುತ್ತಿರುವುದು ನಿಜವೇ ಆಗಿದ್ದರೆ, ಮುಖವಾಡಗಳನ್ನು ಕಿತ್ತುಹಾಕಿ. ನೆನಪಿರಲಿ ಮುಖವಾಡಗಳನ್ನು ನಾಶಮಾಡಿ ಕನ್ನಡಿಗಳನ್ನಲ್ಲ. ನಿಜದ ಕನ್ನಡಿ ಯಾವ ಸುಳ್ಳನ್ನೂ ರಿಫ್ಲೆಕ್ಟ್ ಮಾಡುವುದಿಲ್ಲ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
‘ಕಾರಣ’
ದಯವಿಟ್ಟು ಜಾಗ ಖಾಲಿ ಮಾಡು
ನಿನಗಿಲ್ಲಿ ಜಾಗ ಇಲ್ಲವೇ ಇಲ್ಲ.
ಉಹೂಂ, ನೀನು ಒಂದೇ ಒಂದು ಕೊದಲಿನಷ್ಟು
ಸೂಕ್ಷ್ಮವಾಗುತ್ತೇನೆಂದರೂ
ನಾನು ಒಪ್ಪುವುದಿಲ್ಲ.
ಮುಂಜಾನೆ ಆಗುತ್ತದೆ ನಿಜ
ಆದರೆ
ನಿನ್ನ ಕೈಯಲ್ಲಿರುವ
ಮೇಣದ ಬತ್ತಿಯನ್ನು ನೋಡಿ
ಸೂರ್ಯ
ಬಿದ್ದು ಬಿದ್ದು ನಗುತ್ತಾನೆ.
ನನಗೆ ಅಪಮಾನವಾಗುತ್ತದೆ.
- ರೂಮಿ
ಒಂದು ಊರಿನಲ್ಲಿ ಒಬ್ಬ ಕುರೂಪಿ ಹೆಂಗಸಿದ್ದಳು. ಅವಳಿಗೆ ತನ್ನ ರೂಪದ ಮೇಲೆಯೇ ಬೇಸರ. ಅವಳು ಎಲ್ಲ ಕನ್ನಡಿಗಳನ್ನೂ ದ್ವೇಷಿಸುತ್ತಿದ್ದಳು. ತನ್ನನ್ನು ಕುರೂಪಿಯಾಗಿ ಕಾಣಿಸಲಿಕ್ಕಾಗಿಯೇ ಈ ಕನ್ನಡಿಗಳು ಇರೋದು ಎನ್ನುವುದು ಅವಳ ಐಡಿಯಾ ಆಗಿತ್ತು. ಅವಳು ತನ್ನ ಮನೆಯಲ್ಲಿನ ಎಲ್ಲ ಕನ್ನಡಿಗಳನ್ನು ಒಡೆದು ಹಾಕಿದ್ದಳು. ಅಷ್ಟೇ ಅಲ್ಲ ಆ ಊರಿನಲ್ಲಿ ಎಲ್ಲಿ ಕನ್ನಡಿ ಕಾಣಿಸಿದರೂ ಅವಳು ಅದನ್ನು ಒಡೆದು ಹಾಕುತ್ತಿದ್ದಳು. ಕನ್ನಡಿ ಒಡೆಯುವುದಕ್ಕಾಗಿಯೇ ಅವಳು ಸದಾ ಕೈಯಲ್ಲಿ ಕೋಲು ಹಿಡಿದುಕೊಂಡು ಓಡಾಡುತ್ತಿದ್ದಳು. ಜಗತ್ತಿನಲ್ಲಿ ಕನ್ನಡಿಗಳು ಇರುವ ತನಕ ತಾನು ಕುರೂಪಿಯಾಗಿ ಕಾಣಿಸಿಕೊಳ್ಳುತ್ತಿರುತ್ತೇನೆ ಎಂದು ಅವಳು ಕನ್ನಡಿಗಳ ವಿರುದ್ಧ ಸಮರ ಸಾರಿದ್ದಳು.
ಈ ಹೆಂಗಸಿನ ವರ್ತನೆಯಿಂದಾಗಿ ಊರ ಜನ ಎಲ್ಲ ಬೇಸರಗೊಂಡಿದ್ದರು. ಆದರೆ ಆ ಹೆಂಗಸು ಮಾತ್ರ ತನ್ನನ್ನು ಕುರೂಪಿಯಾಗಿಸುವುದು ಕನ್ನಡಿ ತಯಾರಕರ ಸಂಚು ಎಂದು ಬಲವಾಗಿ ನಂಬಿದ್ದಳು.
ಒಂದು ದಿನ ಊರಿನ ಹಿರಿಯ ಹೆಣ್ಣುಮಗಳೊಬ್ಬಳು ಶಹರದ ಕನ್ನಡಿ ತಯಾರಿಸುವ ಫ್ಯಾಕ್ಟರಿಗೆ ಹೋಗಿ, ಕುರೂಪಿಗಳು ಸುಂದರವಾಗಿ ಕಾಣಿಸುವಂಥ ಕನ್ನಡಿ ತಯಾರು ಮಾಡಿಕೊಡುವಂತೆ ಕೇಳಿಕೊಂಡಳು.
ನಿಮಗೆ ಗೊತ್ತಿರುವಂತೆ ಹಲವಾರು ಪ್ರಕಾರದ ಕನ್ನಡಿಗಳನ್ನು ತಯಾರಿಸಲಾಗುತ್ತದೆ. ಕೆಲವು ಕನ್ನಡಿಗಳು ನಿಮ್ಮನ್ನು ತೆಳ್ಳಗೆ ತೋರಿಸಿದರೆ ಕೆಲವು ದಪ್ಪ ತೋರಿಸುತ್ತವೆ. ಕೆಲವು ಕನ್ನಡಿಗಳಲ್ಲಿ ನಿಮ್ಮ ಮೂಗು ಉದ್ದವಾಗಿದ್ದರೆ ಇನ್ನೂ ಕೆಲವು ಕನ್ನಡಿಗಳಲ್ಲಿ ದಪ್ಪ ಆಗಿರುತ್ತದೆ. ಇಂಥ ನೂರಾರು ಕನ್ನಡಿಗಳನ್ನು ನೀವು ಮಿರರ್ ಹೌಸ್ ಗಳಲ್ಲಿ ನೋಡಬಹುದು.
ಹಿರಿಯ ಹೆಣ್ಣು ಮಗಳ ಬಯಕೆಯಂತೆ ಫ್ಯಾಕ್ಟರಿಯವರು ಕುರೂಪಿಗಳು ಸುಂದರವಾಗಿ ಕಾಣಿಸುವಂತ ಕನ್ನಡಿ ತಯಾರಿಸಿಕೊಟ್ಟರು. “ಇದು ನಿಜವಾದ ಕನ್ನಡಿ, ಒಡೆಯುವ ಮೊದಲು ಈ ಕನ್ನಡಿಯನ್ನೊಮ್ಮೆ ನೋಡು” ಎಂದು ಹಿರಿಯ ಹೆಣ್ಣುಮಗಳು, ಆ ಹೆಂಗಸಿಗೆ ಹೇಳಿದರು. ಕನ್ನಡಿಯಲ್ಲಿನ ತನ್ನ ರೂಪ ನೋಡಿ ಆ ಹೆಂಗಸಿಗೆ ಬಹಳ ಸಂತೋಷವಾಯಿತು. ಆಕೆ ಆ ಕನ್ನಡಿಯನ್ನು ಅಪ್ಪಿ ಮುದ್ದಾಡಿದಳು. ಕೊನೆಗೂ ತಾನು ಎಲ್ಲ ಸುಳ್ಳು ಕನ್ನಡಿಗಳನ್ನು ಒಡೆದುಹಾಕಿದ್ದು ಸಾರ್ಥಕವಾಯಿತೆಂದು ಸಂಭ್ರಮಿಸಿದಳು.
ಈಗ ನೀವು ನನಗೆ ಹೇಳಿ, ನಾನು ನಿಮ್ಮ ನಿಜವಾದ ಕನ್ನಡಿ ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತೀರಿ? ಬಹುಶಃ ನಾನು ಹತ್ತಿರ ಇದ್ದಾಗ ನಿಮಗೆ ಖುಶಿಯಾಗುತ್ತದೆ, ನಿಮ್ಮನ್ನು ನೀವು ಸುಂದರ ಎಂದು ಫೀಲ್ ಮಾಡಿಕೊಳ್ಳುತ್ತೀರಿ, ನಾನು ಹತ್ತಿರ ಇದ್ದಾಗ ನೀವು ಪ್ರಶಾಂತತೆಯನ್ನ, ಧ್ಯಾನಸ್ಥ ಸ್ಥಿತಿಯನ್ನ ಅನುಭವಿಸುತ್ತೀರಿ. ನಿಮ್ಮ ಮೈಂಡ್ ನಿಮಗೆ ಕಾರಣಗಳನ್ನು ಸಪ್ಲೈ ಮಾಡುತ್ತಾ ಇರುತ್ತದೆ. ನನ್ನ ಸುತ್ತ ಇರುವ ಕನ್ನಡಿಗಳು ನಾನು ಹಾಕಿಕೊಂಡಿರುವ ಮುಖವಾಡವನ್ನ ನಿಮಗೆ ಆಪ್ತವಾಗಿ ತೋರಿಸುತ್ತಿರಬಹುದು. ಆದರೆ ಯಾವುದು ನಿಜ, ಯಾವುದು ಮುಖವಾಡ ಎಂದು ಹೇಗೆ ನಿರ್ಧರಿಸುತ್ತೀರಿ? ನಿಮ್ಮ ನಂಬಿಕೆಯ ಬಗ್ಗೆ ನಿಮಗೆ ಖಚಿತತೆ ಇದೆಯಾ? ನಂಬಿಕೆ ಖಚಿತವಾಗಿರೋದು ಹೇಗೆ ಸಾಧ್ಯ?
ಬಹುಶಃ ನನ್ನ ಹಾಜರಾತಿ, ದೇವರು ಇಲ್ಲದ ಈ ಆಶ್ರಮದಲ್ಲಿ ನಿಮಗೆ ದೈವತ್ವದ ಅನುಭವ ಮಾಡಿಸುತ್ತಿರಬಹುದು, ನೀವು ಪ್ರಶಾಂತ ಸ್ಥಿತಿಯನ್ನು ಅನುಭವಿಸುತ್ತಿರಬಹುದು. ಬಹುಶಃ ಇದು ನನ್ನ ಮುಖವಾಡ ಆಗಿರಬಹುದು, ನೀವು ಎಲ್ಲ ನನ್ನ ಮುಖವಾಡವನ್ನ ರಿಫ್ಲೆಕ್ಟ್ ಮಾಡುತ್ತಿರಬಹುದು.
ನೀವು ಅನುಭವಿಸುತ್ತಿರುವುದು ನಿಜವೇ ಆಗಿದ್ದರೆ, ಮುಖವಾಡಗಳನ್ನು ಕಿತ್ತುಹಾಕಿ. ನೆನಪಿರಲಿ ಮುಖವಾಡಗಳನ್ನು ನಾಶಮಾಡಿ ಕನ್ನಡಿಗಳನ್ನಲ್ಲ. ನಿಜದ ಕನ್ನಡಿ ಯಾವ ಸುಳ್ಳನ್ನೂ ರಿಫ್ಲೆಕ್ಟ್ ಮಾಡುವುದಿಲ್ಲ.
ಕನ್ನಡಿಗಳನ್ನು ನಾಶ ಮಾಡಬೇಡಿ ಏಕೆಂದರೆ ಕನ್ನಡಿ ಸಾಚಾ. ಅದು ನಿಮ್ಮ ಮುಖವಾಡವನ್ನು ನಿಮಗೆ ತೋರಿಸುತ್ತಿದ್ದರೆ, ನಿಮ್ಮ ಮುಖವಾಡವನ್ನು ಕಿತ್ತುಹಾಕಿ, ಮುಖವಾಡಗಳನ್ನು ಸಂಭ್ರಮಿಸಬೇಡಿ. ಮುಖವಾಡ ಕಿತ್ತುಹಾಕಿದಾಗ ಎಲ್ಲ ಕನ್ನಡಿಗಳೂ ನಿಮ್ಮ ನೈಜತೆಯನ್ನು ರಿಫ್ಲೆಕ್ಟ್ ಮಾಡಲು ಶುರುಮಾಡುತ್ತವೆ. ನಿಮ್ಮ ಕೆಲಸಗಾರನ ಕನ್ನಡಿ, ನಿಮ್ಮ ಹೆಂಡತಿಯ ಕನ್ನಡಿ, ನಿಮ್ಮ ಮಕ್ಕಳ ಕನ್ನಡಿ, ಕೊನೆಗೆ ನಿಮ್ಮ ವೈರಿಗಳ ಕನ್ನಡಿ ಎಲ್ಲವೂ ಒಂದೇ ಮುಖವನ್ನು ರಿಫ್ಲೆಕ್ಟ್ ಮಾಡುತ್ತಿವೆಯಾದರೆ ಮಾತ್ರ, ನೀವು ನಿಮ್ಮ ನೈಜತೆಯನ್ನು ಸಾಧಿಸಿದ್ದೀರಿ. ಎಲ್ಲರಿಗೂ ನೀವು ಬೇರೆ ಬೇರೆಯಾಗಿ ಕಾಣಿಸುತ್ತಿರುವಿರಾದರೆ ನೀವು ಇನ್ನೂ ಮುಖವಾಡ ಹಾಕಿಕೊಂಡಿದ್ದೀರಿ.

