ಪ್ರೀತಿ ಇನ್ನೊಬ್ಬರಿಗೆ ಸ್ವಾತಂತ್ರ್ಯವನ್ನು ಸಾಧ್ಯ ಮಾಡಬೇಕು. ಪ್ರೀತಿ ಎಂದರೆನೇ ಸ್ವಾತಂತ್ರ್ಯ. ಪ್ರೇಮ ತನ್ನ ಪ್ರಿಯಕರ ಅಥವಾ ಪ್ರಿಯತಮೆಯನ್ನು ತನ್ನ ಬಂಧನದಿಂದ ಹೆಚ್ಚು ಹೆಚ್ಚು ಬಿಡುಗಡೆಗೊಳಿಸುತ್ತ, ಅವರಿಗೆ ರೆಕ್ಕೆಗಳನ್ನು ಹಚ್ಚಿ, ಮುಕ್ತ ಆಕಾಶವನ್ನು ಅವರಿಗಾಗಿ ತೆರೆದುಬಿಡುತ್ತದೆ. ಪ್ರೇಮ ಸೆರಮನೆಯಾಗಿ ಪ್ರೇಮಿಯನ್ನು ಬಂಧನದಲ್ಲಿಡಲು ಬಯಸುವುದಿಲ್ಲ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಹಕ್ಕಿಗಳ ಅತ್ಯಂತ ಇಷ್ಟದ ಹಾಡುಗಳನ್ನ
ನೀವು ಯಾವತ್ತೂ ಕೇಳಿರಲಾರಿರಿ.
ಹಕ್ಕಿಗಳ ಎದೆಯಾಳದ ಹಾಡು
ಕೇವಲ ಅಕಾಶದಲ್ಲಿ ನಿರಾಳವಾಗಿ ರೆಕ್ಕೆ ಬಿಚ್ಚಿದಾಗ,
ಬಿಡುಗಡೆಯ ಆಫೀಮು ಒಳಕ್ಕಿಳಿದಾಗ ಮಾತ್ರ.
ಕೈದಿಗಳಿಗಂತೂ ಇರಲೇಬೇಕು ಈ ಒಂದು ನಂಬಿಕೆ;
ಒಂದಿಲ್ಲೊಂದು ದಿನ ನಾವೂ ತಲುಪುತ್ತೇವೆ
ನಮ್ಮ ಇಷ್ಟದ ಜಾಗ,
ಎದುರಾಗುತ್ತೇವೆ ಬದುಕಿನ ನಿಯಮಾತೀತ
ಅದ್ಭುತ ಹತೋಟಿಗೆ,
ಮುಕ್ತರಾಗುತ್ತೇವೆ ಎಲ್ಲ ಗಾಯ, ಬಾಕಿಗಳಿಂದ.
ಒಮ್ಮೆ ಹಕ್ಕಿಯನ್ನು ನಿಲ್ಲಿಸಿ ಮಾತನಾಡಿಸಿದೆ.
ಈ ಕತ್ತಲ ಗುರುತ್ವದಿಂದ ಪಾರಾಗಿ
ಹೇಗೆ ಹಾರುತ್ತೀ ನೀನು ?
ಹಕ್ಕಿ ನಕ್ಕು ಹೇಳಿತು ;
ಪ್ರೇಮ, ನನ್ನ ಎತ್ತರಕ್ಕೇರಿಸುತ್ತದೆ .
-ಹಾಫಿಜ್
ಒಂದು ದಿನ ಮುಲ್ಲಾ ನಸ್ರುದ್ದೀನ್ ಲಗುಬಗೆಯಿಂದ ಸ್ಮಶಾನದ ಆಫೀಸ್ ಗೆ ಬಂದವನೇ ಅಲ್ಲಿನ ಮ್ಯಾನೇಜರ್ ಗೆ ದೂರು ಸಲ್ಲಿಸಿದ.
“ನನಗೆ ಸರಿಯಾಗಿ ನೆನಪಿದೆ ನನ್ನ ಹೆಂಡತಿಯ ಅಂತಿಮ ಸಂಸ್ಕಾರ ಈ ಸ್ಮಶಾನದಲ್ಲಿಯೇ ಆಗಿದ್ದು. ಆದರೆ ಇವತ್ತು ನೋಡಿದರೆ ಇಲ್ಲಿ ನನಗೆ ಅವಳ ಗೋರಿ ಕಾಣಿಸುತ್ತಿಲ್ಲ”.
ಮ್ಯಾನೇಜರ್ ಸ್ಮಶಾನದ ರಿಜಿಸ್ಟರ್ ಚೆಕ್ ಮಾಡುತ್ತ ನಸ್ರುದ್ದೀನ್ ನ ಪ್ರಶ್ನೆ ಮಾಡಿದ,
“ಅವಳ ಹೆಸರು ಏನು?”
“ಮಿಸೆಸ್ ಮುಲ್ಲಾ ನಸ್ರುದ್ದೀನ್” ನಸ್ರುದ್ದೀನ್ ಉತ್ತರಿಸಿದ.
“ಈ ರಿಜಿಸ್ಟರ್ ನಲ್ಲಿ ಮಿಸೆಸ್ ಮುಲ್ಲಾ ನಸ್ರುದ್ದೀನ್ ಅಂತ ಯಾವ ಹೆಸರೂ ಇಲ್ಲ. ಆದರೆ ಮುಲ್ಲಾ ನಸ್ರುದ್ದೀನ್ ಅಂತ ಒಂದು ಹೆಸರು ಇದೆ. ತಪ್ಪಾಗಿ ಎಂಟ್ರಿ ಆಗಿರಬಹುದು”. ಸ್ಮಶಾನದ ಮ್ಯಾನೇಜರ್ ಕ್ಷಮೆ ಕೇಳಿದ.
“ಅದು ತಪ್ಪು ಎಂಟ್ರಿ ಏನೂ ಅಲ್ಲ. ಎಲ್ಲಿದೆ ಮುಲ್ಲಾ ನಸ್ರುದ್ದೀನ್ ಹೆಸರಿನ ಗೋರಿ? ನನ್ನ ಮನೆಯಲ್ಲಿ ಎಲ್ಲವೂ ನನ್ನ ಹೆಸರಿನಲ್ಲಿಯೇ ಇದೆ. ನನ್ನ ಹೆಂಡತಿಯ ಗೋರಿಯೂ” ನಸ್ರುದ್ದೀನ್ ಸಮಜಾಯಿಷಿ ಹೇಳಿದ.
ಒಡೆತನ….. ಪ್ರತಿಯೊಬ್ಬರೂ ಇನ್ನೊಬ್ಬರ ಮೇಲೆ ಒಡೆತನ ಹೊಂದಲು ಇಚ್ಛೆ ಪಡುತ್ತಾರೆ. ತಮ್ಮ ಪ್ರೀತಿಪಾತ್ರರ ಮೇಲೆ, ತಮ್ಮ ಪ್ರೇಮಿಯ ಮೇಲೆ ಒಡೆತನ ಹೊಂದಲು ಹೆಣಗುತ್ತಾರೆ. ಹೀಗಾದಾಗ ಅದು ಪ್ರೇಮವಾಗಿ ಉಳಿಯುವುದಿಲ್ಲ. ಬದಲಾಗಿ ಯಾವಾಗ ನೀವು ನಿಮ್ಮ ಸಂಗಾತಿಯ ಮೇಲೆ ಒಡೆತನ ಸಾಧಿಸಲು ಇಚ್ಛೆ ಪಡುತ್ತೀರೋ ಆಗ ನೀವು, ಆ ವ್ಯಕ್ತಿಯನ್ನು ದ್ವೇಷ ಮಾಡಲು ಶುರು ಮಾಡುತ್ತೀರಿ, ಆ ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುತ್ತೀರಿ, ಆ ವ್ಯಕ್ತಿಯ ಆಸೆ ಆಕಾಂಕ್ಷೆಗಳ ಕೊಲೆ ಮಾಡುತ್ತೀರಿ ; ಆಗ ನೀವು ಒಬ್ಬ ಕೊಲೆಗಾರರು.
ಪ್ರೀತಿ ಇನ್ನೊಬ್ಬರಿಗೆ ಸ್ವಾತಂತ್ರ್ಯವನ್ನು ಸಾಧ್ಯ ಮಾಡಬೇಕು. ಪ್ರೀತಿ ಎಂದರೆನೇ ಸ್ವಾತಂತ್ರ್ಯ. ಪ್ರೇಮ ತನ್ನ ಪ್ರಿಯಕರ ಅಥವಾ ಪ್ರಿಯತಮೆಯನ್ನು ತನ್ನ ಬಂಧನದಿಂದ ಹೆಚ್ಚು ಹೆಚ್ಚು ಬಿಡುಗಡೆಗೊಳಿಸುತ್ತ, ಅವರಿಗೆ ರೆಕ್ಕೆಗಳನ್ನು ಹಚ್ಚಿ, ಮುಕ್ತ ಆಕಾಶವನ್ನು ಅವರಿಗಾಗಿ ತೆರೆದುಬಿಡುತ್ತದೆ. ಪ್ರೇಮ ಸೆರಮನೆಯಾಗಿ ಪ್ರೇಮಿಯನ್ನು ಬಂಧನದಲ್ಲಿಡಲು ಬಯಸುವುದಿಲ್ಲ.
ಆದರೆ ನಿಮಗೆ ಇಂಥ ಪ್ರೇಮದ ಪರಿಚಯ ಇಲ್ಲ. ಏಕೆಂದರೆ ಇಂಥ ಪ್ರೇಮ ಸಾಧ್ಯವಾಗೋದು ನಿಮಗೆ ಅರಿವು ಸಾಧ್ಯವಾದಾಗ ಮಾತ್ರ. ಪ್ರೇಮದ ಇಂಥ ಕ್ವಾಲಿಟಿಯ ಪರಿಚಯ ನಿಮಗಾಗೋದು ನಿಮ್ಮೊಳಗೆ ಅರಿವು ತುಂಬಿಕೊಂಡಾಗ ಮಾತ್ರ. ಯಾವುದನ್ನ sin ಎಂದು ಕರೆಯಾಗುತ್ತದೆಯೋ ಅಂಥ ಪ್ರೇಮ ಮಾತ್ರ ನಿಮಗೆ ಪರಿಚಿತ ಏಕೆಂದರೆ, ಅದು ಹುಟ್ಟಿಬಂದಿರುವುದು ನಿಮ್ಮ ಎಚ್ಚರದ ಸ್ಥಿತಿಯಲ್ಲಿ ಅಲ್ಲ.
Source – Osho Book “The Hidden Harmony”

