ಜಗತ್ತನ್ನು ಸುಂದರಗೊಳಿಸುವ ಅವಕಾಶ : ಓಶೋ ವ್ಯಾಖ್ಯಾನ

“ಎಲ್ಲೋ ಕೆಲವು ಜನರಿಗಾದರೂ ನಾನು ಸಂತೋಷವನ್ನು ಹಂಚುತ್ತಿದ್ದೇನೆ. ಅಷ್ಟು ಮಾತ್ರ ನನಗೆ ಗೊತ್ತು. ಆ ಜನರಿಗೆ ನನ್ನ ಪರಿಚಯ ಇದೆಯೋ ಇಲ್ಲವೋ ಅದು ನನಗೆ ಮುಖ್ಯವಲ್ಲ. ನನ್ನಿಂದಾಗಿ ಕೆಲವರಾದರೂ ಸಂತೋಷ ಅನುಭವಿಸುತ್ತಿದ್ದಾರೆ ಎನ್ನುವುದು ನನಗೆ ಮುಖ್ಯ” ಅನ್ನುತ್ತಿದ್ದರು ಮ್ಯಾಡಂ ಬ್ಲವಾತ್ಸ್ಕಿ. ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಮಗೆ ಊಟದಲ್ಲಿನ ರುಚಿ ಬೇಕೊ?
ಅಥವಾ ನೀವು
ಊಟದಲ್ಲಿ ರುಚಿ ಬೆರೆಸುವವನ
ರುಚಿ ನೋಡ ಬೇಕೊ?

ಸಾಗರದಲ್ಲಿ ಅದ್ಬುತ ಸಂಗತಿಗಳಿವೆ,
ಒಪ್ಪುವ ಮಾತು,
ಮತ್ತು ಸ್ವತಃ ಇಡೀ ಸಾಗರವೇ ಇದೆಯಲ್ಲ?

ಮನೆ ಕಟ್ಟುವವನ ತಿಳುವಳಿಕೆಯ ಬಗ್ಗೆ
ಗೌರವ ಸರಿ,
ಈಗ ಆ ತಿಳುವಳಿಕೆಯನ್ನೇ ಕಟ್ಟಿದವನ ಬಗ್ಗೆ
ಒಮ್ಮೆ ಯೋಚಿಸಿ.

ಬೀಜದಿಂದ ಎಣ್ಣೆ ತೆಗೆಯುವುದು ಕಲೆ ಹೌದು,
ಕಣ್ಣೊಳಗೆ ದೃಷ್ಟಿ ಮನೆಮಾಡಿರುವ
ಅದ್ಭುತದ ಮೇಲೊಮ್ಮೆ ಕಣ್ಣು ಹಾಯಿಸಿ.

ಇಡೀ ರಾತ್ರಿ, ಬೇಕುಗಳ ಹುಚ್ಚಾಟ.

ಬೆಳಕು ಹರಿಯುತ್ತಿದ್ದಂತೆಯೇ
ನಿನ್ನ ಅಂಗೈಯಲ್ಲಿ ನನ್ನ ಅಂಗೈ ಹಿಡಿದುಕೊ.
ಇದು ಸಾಧ್ಯವೇ ಎಂದು
ಸಂದೇಹ ಪಡುವವರು ಇದ್ದಾರೆ ಇನ್ನೂ.

ಅವರು ಬಂಗಾರದ ಹುಡಿಯನ್ನು
ಬಿಸಾಕುತ್ತಾರೆ ಖಾಲಿ ತೊಟ್ಟಿಯಲ್ಲಿ,
ಕೊಟ್ಟಿಗೆಗೆ ಹೋಗುತ್ತಾರೆ
ಕತ್ತೆಗಳನ್ನು ಹುಡುಕಿಕೊಂಡು.

ಈಗ ಮಾತು ಸಾಕು ಗೆಳೆಯ,
ಕಿವಿಗೆ ಕಣ್ಣು ಹಚ್ಚುವ ಸಾಧ್ಯತೆ ನಿನ್ನಲ್ಲಿದೆ.
ಕವಿತೆಯ ಉಳಿದ ಭಾಗವನ್ನು
ಆ ಭಾಷೆಯಲ್ಲಿ ಹಾಡು.

  • ರೂಮಿ.

ನನಗೆ ಥಿಯಾಸೊಫಿಕಲ್ ಸೊಸೈಟಿಯ ಫೌಂಡರ್ ಗಳಲ್ಲಿ ಒಬ್ಬರಾದ ಮ್ಯಾಡಂ ಬ್ಲವಾತ್ಸ್ಕಿ ಯವರ ನೆನಪಾಗುತ್ತಿದೆ. ಅವರು ಯಾವಾಗಲೂ ತಮ್ಮ ಜೊತೆ ಎರಡು ಬ್ಯಾಗ್ ಗಳನ್ನ ಹಿಡಿದುಕೊಂಡೇ ಓಡಾಡುತ್ತಿದ್ದರು. ಅದು ಬೆಳಗಿನ ವಾಕಿಂಗ್ ಆಗಿರಬಹುದು ಅಥವಾ ದೂರದ ರೈಲು ಪ್ರಯಾಣ ಆಗಿರಬಹುದು ಯಾವಾಗಲೂ ನೀವು ಅವರ ಕೈಗಳಲ್ಲಿ ಈ ಎರಡು ಬ್ಯಾಗ್ ಗಳನ್ನ ನೋಡಬಹುದಾಗಿತ್ತು. ರೈಲಿನಲ್ಲಿ ಪ್ರಯಾಣಿಸುವಾಗ ಅವರು ಬ್ಯಾಗ್ ನಿಂದ ಏನೋ ಒಂದನ್ನ ಹೊರತೆಗೆದು ಕಿಟಕಿಯಿಂದ ಹೊರಗೆ ಆಗಿಂದಾಗ್ಗೆ ಎಸೆಯುತ್ತಿದ್ದರು. ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕರು ಅವರನ್ನು ಪ್ರಶ್ನೆ ಮಾಡುತ್ತಿದ್ದರು,

“ನೀವು ಕಿಟಕಿಯ ಹೊರಗೆ ಎಸೆಯುವುದು ಏನನ್ನ? ಯಾಕೆ ಹೀಗೆ ಮಾಡುತ್ತೀರಿ?”
ಆಗ ಮ್ಯಾಡಂ ಬ್ಲವಾತ್ಸ್ಕಿ ನಗುನಗುತ್ತ ಉತ್ತರಿಸುತ್ತಿದ್ದರು,

“ಇದು ನನ್ನ ಜನ್ಮಕ್ಕೆ ಹತ್ತಿದ ಚಟ. ನಾನು ಹೊರಗೆ ಎಸೆಯುತ್ತಿರುವುದು ಸೀಸನಲ್ ಹೂವಿನ ಬೀಜಗಳು. ನಾನು ಮತ್ತೆ ಈ ದಾರಿಯಲ್ಲಿ ಬರಬಹುದು ಅಥವಾ ಬರದೇ ಇರಬಹುದು, ಆದರೆ ಪರವಾಗಿಲ್ಲ, ಸೀಸನ್ ಬಂದಾಗ ಈ ರೈಲು ದಾರಿಯಲ್ಲಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರು ಇಲ್ಲಿ ಅರಳಿ ನಿಂತ ಹೂಗಳನ್ನು ನೋಡಿ ಸಂತೋಷ ಪಡಬಹುದು. ಅವರಿಗೆ ನನ್ನ ಪರಿಚಯ ಇಲ್ಲದಿರಬಹುದು ಅಡ್ಡಿ ಇಲ್ಲ, ಅವರಿಗೆ ಈ ಹೂಗಳನ್ನು ನೋಡಿ ಸಂತೋಷ ಆದರೆ ನನಗೆ ಅಷ್ಟೇ ಸಾಕು.” ಮ್ಯಾಡಂ ಬ್ಲವಾತ್ಸ್ಕಿ ಜಗತ್ತಿನ ಉದ್ದಗಲಕ್ಕೂ ಓಡಾಡಿದವರು. ಅವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ ಆದರೆ ಅವರಿಂದಾಗಿ ಅರಳಿನಿಂತ ಹೂಗಳ ಸೊಗಸನ್ನು ಸಾಕಷ್ಟು ಜನ ನೋಡಿ ಕಣ್ತುಂಬಿಕೊಂಡಿದ್ದಾರೆ.

“ ಆದರೆ ಒಂದಂತೂ ನಿಜ : ಎಲ್ಲೋ ಕೆಲವು ಜನರಿಗಾದರೂ ನಾನು ಸಂತೋಷವನ್ನು ಹಂಚುತ್ತಿದ್ದೇನೆ. ಅಷ್ಟು ಮಾತ್ರ ನನಗೆ ಗೊತ್ತು. ಆ ಜನರಿಗೆ ನನ್ನ ಪರಿಚಯ ಇದೆಯೋ ಇಲ್ಲವೋ ಅದು ನನಗೆ ಮುಖ್ಯವಲ್ಲ. ನನ್ನಿಂದಾಗಿ ಕೆಲವರಾದರೂ ಸಂತೋಷ ಅನುಭವಿಸುತ್ತಿದ್ದಾರೆ ಎನ್ನುವುದು ನನಗೆ ಮುಖ್ಯ. ಕೆಲವು ಮಕ್ಕಳು ಬಂದು ಅರಳಿನಿಂತ ಹೂಗಳನ್ನು ಕಿತ್ತುಕೊಂಡು ಮನೆಗೆ ಹೋಗಬಹುದು. ಯಾರೋ ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ ಈ ಹೂ ಮುಡಿಸಿ ಸಂತೋಷಪಡಬಹುದು. ಆಗ ನನಗೆ ಗೊತ್ತಿಲ್ಲದಂದಂತೆ ನಾನು ಆ ಮಕ್ಕಳ ಸಂತೋಷದ ಭಾಗವಾಗಿಬಿಡುವೆ, ಆ ಪ್ರೇಮಿಗಳ ಪ್ರೇಮದ ಭಾಗವಾಗಿಬಿಡುವೆ. ಆ ದಾರಿಯಲ್ಲಿ ಪ್ರಯಾಣ ಮಾಡುತ್ತ ಕಣ್ತುಂಬಿಕೊಂಡ ಸಾವಿರು ಜನರ ಆನಂದದ ಭಾಗವಾಗಿಬಿಡುವೆ.” ಮ್ಯಾಡಂ ಬ್ಲವಾತ್ಸ್ಕಿ ಹೀಗೆ ತಮ್ಮನ್ನು ತಾವು ವಿವರಿಸುತ್ತಿದ್ದರು.

ಸ್ವಾತಂತ್ರ್ಯ ಎಂದರೆ ಬೇರೇನೂ ಅಲ್ಲ, ಈ ಜಗತ್ತನ್ನು ಸುಂದರಗೊಳಿಸಲು ನಮಗೆ ಸಿಕ್ಕಿರುವ ಪುಟ್ಟ ಅವಕಾಶ ಎನ್ನುವುದನ್ನ ಅರ್ಥಮಾಡಿಕೊಂಡಿರುವ ಮನುಷ್ಯ ಯಾವತ್ತೂ ತನ್ನನ್ನು ತಾನು ದುಃಖದಲ್ಲಿ ಕಂಡುಕೊಳ್ಳುವುದಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.