ಸಂಸ್ಕೃತದ ಅಗಾಧ ಪ್ರೇಮಕಾವ್ಯದ ಸಾಗರದಿಂದ ಹೆಕ್ಕಲಾದ ಸುಂದರ ಸಾಲುಗಳ ಗುಚ್ಛವೊಂದು ಇಂಗ್ಲೀಶಿನಲ್ಲಿ ಪುಸ್ತಕವಾಗಿದೆ. ಶೀರ್ಷಿಕೆ : How to love in sanskritಅಂತ. ಈ ಪುಸ್ತಕದ ಕೆಲವು ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಕನ್ನಡಕ್ಕೆ ತಂದಿದ್ದಾರೆ. ಅವುಗಳಲ್ಲಿ ಮೊದಲ ಕಂತು ಇಲ್ಲಿದೆ…
ಸಂಸ್ಕೃತದಲ್ಲಿ ಎಷ್ಟು ಅಲೌಕಿಕ ಸಾಹಿತ್ಯ ಇದೆಯೋ ಅಷ್ಟೇ ಲೌಕಿಕ ಸಾಹಿತ್ಯವೂ ಇದೆ. ಎಷ್ಟು ವೈರಾಗ್ಯ ಪಾಠಗಳಿವೆಯೋ ಅಷ್ಟೇ ಶೃಂಗಾರ ಕಾವ್ಯಗಳೂ ಇವೆ. ವಾಲ್ಮೀಕಿ ರಾಮಾಯಣದಿಂದ ಹಿಡಿದು ಸಂಸ್ಕೃತದ ಸುಪ್ರಸಿದ್ಧ ಕವಿ – ನಾಟಕಕಾರರವರೆಗೆ ಪ್ರೇಮಪಾಠಗಳ ವಿಸ್ತಾರ ಹರಡಿಕೊಂಡಿದೆ. ಬಾಣ ಭಟ್ಟನ ಕಾದಂಬರಿ ಇರಬಹುದು, ಕಾಳಿದಾಸನ ಅಭಿಜ್ಞಾನ ಶಾಕುಂತಲ ಅಥವಾ ಮೇಘದೂತ ಮಹಾಕಾವ್ಯಗಳಿರಬಹುದು… ಭಾಸನ ಸ್ವಪ್ನವಾಸವದತ್ತ ಇರಬಹುದು ಅಥವಾ ಭರ್ತೃಹರಿಯ ಶೃಂಗಾರ ಶತಕಬ್ವೇ ಇರಬಹುದು; ಆಚಾರ್ಯ ಶಂಕರರ ಸೌಂದರ್ಯ ಲಹರಿ ಇರಬಹುದು ಅಥವಾ ಬೌದ್ಧ ಬಿಕ್ಖುಗಳ, ಸಮಣರ ಸಾಹಿತ್ಯವೇ ಇರಬಹುದು… ಎಲ್ಲಿಯೂ ಶೃಂಗಾರ ರಸಕ್ಕೆ ಕೊರತೆ ಇಲ್ಲ!
ಇಂಥಾ ಅಗಾಧ ಪ್ರೇಮಕಾವ್ಯದ ಸಾಗರದಿಂದ ಹೆಕ್ಕಲಾದ ಸುಂದರ ಸಾಲುಗಳ ಗುಚ್ಛವೊಂದು ಇಂಗ್ಲೀಶಿನಲ್ಲಿ ಪುಸ್ತಕವಾಗಿದೆ. ಶೀರ್ಷಿಕೆ : How to love in sanskrti ಅಂತ. ಈ ಪುಸ್ತಕದ ಕೆಲವು ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಕನ್ನಡಕ್ಕೆ ತಂದಿದ್ದಾರೆ. ಅವುಗಳಲ್ಲಿ ಮೊದಲ ಕಂತು ಇಲ್ಲಿದೆ…
- ಕೀಳರಿಮೆ
ನಿನ್ನ ತುಟಿಗಳ ರಂಗನ್ನು ಕಂಡು
ನೇಣು ಹಾಕಿಕಿಕೊಂಡಿವೆ ಮರಕ್ಕೆ
ಕಳವಳದಲ್ಲಿ,
ಚೆರ್ರಿ ಹಣ್ಣುಗಳು.
Kumarapala’s awakening, Somaprabha Suri, 1200 CE, Gurjara.
ಈ ಪದ್ಯ ಬರೆದವನು ಹರೆಯದ ರೋಮ್ಯಾಂಟಿಕ್ ಹುಡುಗ ಎಂದುಕೊಂಡಿರುವಿರಾ? ವಾಸ್ತವದಲ್ಲಿ ಈ ಪದ್ಯದ ರಚನೆ ಜೈನ ಸನ್ಯಾಸಿ, ಸೋಮಪ್ರಭಾ ಸೂರಿಯದು.
- ಕಾಲ ನಿಂತುಹೋದ ಗಳಿಗೆ
ಬಾವಿ ಕಟ್ಟೆಯ ಮೇಲೆ
ನೀರು ಉಣಿಸುತ್ತಿದ್ದಾಳೆ ಯುವತಿ
ಬಾಯಾರಿದ ಪ್ರಯಾಣಿಕನಿಗೆ
ತನ್ನ ಕೊಡದಿಂದ.
ಆಕೆ ನೀರು ಸುರಿಯುವುದನ್ನ
ಕಡಿಮೆ ಕಡಿಮೆ ಕಡಿಮೆ ಮಾಡಿದಂತೆಲ್ಲ,
ಮೇಲೆ ನೋಡುತ್ತ ಕಣ್ಣರಳಿಸುತ್ತಿದ್ದಾನೆ
ಬಾಗಿರುವ ಪ್ರಯಾಣಿಕ
ನೀರು ಕುಡಿಯುತ್ತಲೇ
ಅಗಲ ಅಗಲ ಅಗಲ ಮಾಡುತ್ತಿದ್ದಾನೆ
ತನ್ನ ಬೊಗಸೆಯನ್ನು.
Seven hundred Gahas, 100 CE? , Deccan
ಪ್ರಾಚೀನ ಭಾರತದಲ್ಲಿ ಈ ಪದ್ಯ ವೈರಲ್ ಆಗಿತ್ತು. ಹಲವಾರು ಇತರ ರಚನೆಗಳು ಈ ಪದ್ಯವನ್ನು ಕೋಟ್ ಮಾಡುತ್ತವೆ ಇಲ್ಲ ಇಮಿಟೇಟ್ ಮಾಡುತ್ತವೆ.
- ನಾನು ಯಾಕೆ ನಾಸ್ತಿಕ
ಸೃಷ್ಟಿಕರ್ತ ಅವಳನ್ನು ಸೃಷ್ಟಿಸುವಾಗ
ತನ್ನ ಕಣ್ಣುಗಳನ್ನೇನಾದರೂ ತೆರೆದುಕೊಂಡಿದ್ದರೆ,
ಕಳುಹಿಸಿಬಿಡಬಹುದಿತ್ತೆ ಅವನು
ತನ್ನ ಸ್ವರ್ಗದಿಂದ ಅವಳನ್ನು ? ಖಂಡಿತ ಇಲ್ಲ.
ಅಥವಾ ಮುಚ್ಚಿಕೊಂಡಿದ್ದರೆ ತನ್ನ ಕಣ್ಣುಗಳನ್ನ,
ಸಾಧ್ಯವಾಗಬಹುದಿತ್ತೆ ಅವನಿಂದ ಇಂಥ
ಪರಿಪೂರ್ಣ ಸೃಷ್ಟಿ? ಸರ್ವಥಾ ಸಾಧ್ಯವಿಲ್ಲ.
ಹಾಗಾದರೆ
ಬುದ್ಧ ಹೇಳಿದ್ದು ನಿಜ ಎಂದಾಯ್ತು,
ಇಲ್ಲವೇ ಇಲ್ಲ ಸೃಷ್ಟಿಕರ್ತನೆಂಬುವುನು.
Treasury of Verse-Jewels, 1000 CE, Bengal
ಈ ಪದ್ಯ ಪ್ರಚಂಡ ಬೌದ್ಧ ವಿದ್ವಾಂಸ ಧರ್ಮಕೀರ್ತಿಯ ಹೆಸರಿನಲ್ಲಿದೆ. ಕೆಲವು ಮೂಲಗಳ ಪ್ರಕಾರ ಈತ ನಳಂದ ವಿಶ್ವವಿದ್ಯಾಲಯದವನು ಎನ್ನಲಾಗಿದೆ.
- ತರ್ಕಶಾಸ್ತ್ರಜ್ಞನ ಇಕ್ಕಟ್ಟು
ಒಳ್ಳೆಯದು, ಕೆಟ್ಟದ್ದು, ಸುಂದರ,
ಕುರೂಪ
ಎಲ್ಲ ರೀತಿಯ ಸಂಗತಿಗಳನ್ನೂ ಸೃಷ್ಟಿಸಿದ
ವಿವೇಚನೆ ಇಲ್ಲದ ದೇವರು,
ನಿನ್ನ ಸೃಷ್ಟಿಸಿರಬಹುದು ಎನ್ನುವುದು
ಖಂಡಿತ ಅಸಾಧ್ಯದ ಮಾತು.
ಹಾಗಾದರೆ ಹೊಸ ದೇವರೊಬ್ಬನನ್ನು
ಕಲ್ಪನೆ ಮಾಡಿಕೊಳ್ಳಣವೆ?
ಆದರೆ ಈ ಹೊಸ ಅನನುಭವಿ ದೇವರ ಕೈಯಲ್ಲಿ
ಅಂಥ ಮಹತ್ಕಾರ್ಯ ಸಾಧ್ಯವಾಗಬಹುದೆ?
ಅಥವಾ
ಇದೊಂದು ಮಧುರ ಅಪಘಾತವಾ,
ತಾಳೆಗರಿಗಳ ಮೆಲ್ಲಗೆ ತಿಂದುಹಾಕುತ್ತ ಹುಳುಗಳು
ಅಕ್ಷರಗಳ ಸಹವಾಸಕ್ಕೆ ಬಿದ್ದಂತೆ?
ಖಂಡಿತ ಸಾಧ್ಯವಿಲ್ಲ.
ಹಾಗಾಗಿಯೇ
ಸಿಕ್ಕಿಹಾಕಿಕೊಂಡಿದ್ದಾರೆ ಎಲ್ಲ ತರ್ಕಶಾಸ್ತ್ರಜ್ಞರು
ಗೊಂದಲದಲ್ಲಿ,
ನೀನು ಹೇಗೆ ಹುಟ್ಟಿರಬಹುದು ಎನ್ನುವ
ಜಗತ್ತಿನ ಏಕೈಕ ಪರಿಹರಿಸಲಾಗದ
ಪ್ರಶ್ನೆಯಲ್ಲಿ.
Bhartrisarasvata’s Anology, Bhartrisarasvata, 1000 CE, Kashmir.
- ಕೆನ್ನೆಯ ಗುಳಿಗಳು
ಅವಳನ್ನು
ಸೃಷ್ಟಿಸಿಯಾದಮೇಲೆ ದೇವರು,
ಆ ಚೆಂದದ ಮುಖವನ್ನು
ತನ್ನ ಬೊಗಸೆಯಲ್ಲಿ ಹಿಡಿದುಕೊಂಡು,
ಆಕೆಯ ಎರಡೂ ಗಲ್ಲಗಳನ್ನು
ಹೆಬ್ಬೆರಳುಗಳಿಂದ ಒತ್ತಿಹಿಡಿದು
ತನ್ನ ಸೃಷ್ಟಿಯನ್ನೊಮ್ಮೆ
ಹೆಮ್ಮೆಯಿಂದ ನೋಡಿರಬಹುದು.
ಅವಳ ಕೆನ್ನೆಯ ಮೇಲಿನ
ಪರಿಪೂರ್ಣ ಗುಳಿಗಳ ಹುಟ್ಟಿಗೆ ಕಾರಣ
ಬಹುಶಃ ದೇವರ
ಆ ದಿವ್ಯ ಬೆರಳುಗಳೇ ಇರಬಹುದು.
Deeds of the Nishadha King, Stiharsha, 1100 CE, Kanyakubja?
ಹಲವು ವಿದ್ವಾಂಸರ ಪ್ರಕಾರ Deeds of the Nishadha King ಸಂಸ್ಕೃತ ಭಾಷೆಯಲ್ಲಿಯೇ ಅತ್ಯಂತ ಸವಾಲಿನ ಪದ್ಯ.

