ಎಲ್ಲವೂ ನೀವು ಬದುಕನ್ನ ಯಾವ ದೃಷ್ಟಿಕೋನದಿಂದ ನೋಡುತ್ತೀರಿ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ಬದುಕನ್ನ ಕಟ್ಟಿಕೊಳ್ಳುವವರು ನೀವೇ, ಬದುಕನ್ನ ಅನುಭವಿಸುವವರು ನೀವೇ ಮತ್ತು ಬದುಕನ್ನ ವ್ಯಾಖ್ಯಾನ ಮಾಡುವವರು ಕೂಡ ನೀವೇ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ದುಃಖಿ ಜನರಲ್ಲಿ
ಒಂದು ಸಾಮಾನ್ಯ ಸಂಗತಿ
ಗಮನಿಸಿದ್ದೀಯಾ ಹಾಫಿಜ್ ?
ಅವರೆಲ್ಲ ಕಟ್ಟಿಕೊಂಡಿರುತ್ತಾರೆ
ತಮ್ಮ ತಮ್ಮ ಭೂತಕ್ಕೊಂದು
ಗುಡಿ.
ಆಗಿಂದಾಗ್ಗೇ
ಆರ್ತರಾಗುತ್ತಾರೆ ಆ ಗುಡಿಯನ್ನು
ಪ್ರವೇಶ ಮಾಡಿ,
ಆರಾಧನೆ ಮಾಡುತ್ತಾರೆ ದೀನರಾಗಿ.
ಖುಶಿ
ಅವರ ಬದುಕಿನಲ್ಲಿ
ಮತ್ತೆ ಮನೆಮಾಡಬೇಕಾದರೆ
ಏನು ಮಾಡಬೇಕು ?
ಅಷ್ಟೊಂದು ಧಾರ್ಮಿಕರಾಗುವುದನ್ನ
ನಿಲ್ಲಿಸಿಬಿಡಬೇಕು ಕೂಡಲೇ.
- ಹಾಫಿಜ್
“ರಾತ್ರಿ ನಿನ್ನ ಮನೆಯಿಂದ ಜೋರು ಜೋರಾಗಿ ನಗುವಿನ ಸದ್ದು ಕೇಳಿಸತ್ತೆ, ಅಷ್ಟು ರಾತ್ರಿ ಏನು ನಡಿಯತ್ತೆ ನಿನ್ನ ಮನೆಯಲ್ಲಿ ?”
ಗೆಳೆಯ, ನಸ್ರುದ್ದೀನ್ ನ ಪ್ರಶ್ನೆ ಮಾಡಿದ.
“ರಾತ್ರಿಯಾದರೆ ನನಗೂ ನನ್ನ ಹೆಂಡ್ತಿಗೂ ಜೋರು ಜಗಳ”
ಉತ್ತರಿಸಿದ ನಸ್ರುದ್ದೀನ್.
“ ಮತ್ತೆ ನಗುವಿನ ಸದ್ದು ? “ ಗೆಳೆಯನಿಗೆ ಕುತೂಹಲ ಹೆಚ್ಚಾಯಿತು.
“ ಸಿಟ್ಟಿನಲ್ಲಿ ಹೆಂಡ್ತಿ ತನ್ನ ಕೈ ಗೆ ಸಿಕ್ಕ ವಸ್ತುವನ್ನ ನನ್ನ ಮೇಲೆ ಎಸಿತಾಳೆ. ಆ ವಸ್ತು ನನಗೆ ತಾಕಿದಾಗ ಅವಳು ನಗ್ತಾಳೆ, ತಾಕದೇ ಹೋದಾಗ ನಾನು ಜೋರಾಗಿ ನಗ್ತೀನಿ. “
ನಸ್ರುದ್ದೀನ್ ತನ್ನ ಮನೆಯ ನಗುವಿನ ರಹಸ್ಯ ಬಿಡಿಸಿಟ್ಟ.
ಎಲ್ಲವೂ ನೀವು ಬದುಕನ್ನ ಯಾವ ದೃಷ್ಟಿಕೋನದಿಂದ ನೋಡುತ್ತೀರಿ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ಬದುಕನ್ನ ಕಟ್ಟಿಕೊಳ್ಳುವವರು ನೀವೇ, ಬದುಕನ್ನ ಅನುಭವಿಸುವವರು ನೀವೇ ಮತ್ತು ಬದುಕನ್ನ ವ್ಯಾಖ್ಯಾನ ಮಾಡುವವರು ಕೂಡ ನೀವೇ. ನಿಮ್ಮನ್ನು ಹೊರತುಪಡಿಸಿ ನಿಮ್ಮ ಬದುಕಿನಲ್ಲಿ ಬೇರೆ ಯಾರೂ ಇಲ್ಲ. ನೀವು ಒಬ್ಬಂಟಿ. ಬೇರೆ ಯಾರಿಗೂ ನಿಮ್ಮ ಬದುಕಿನಲ್ಲಿ ಪ್ರವೇಶ ಇಲ್ಲ. ನಿಮ್ಮ ಬದುಕಿನಲ್ಲಿ ಯಾರಿಗಾದರೂ ಪ್ರವೇಶ ಬೇಕಾದರೆ ನಿಮ್ಮ ಅನುಮತಿ ಅಗತ್ಯ. ಈ ತಿಳುವಳಿಕೆಯಲ್ಲಿ ಒಂದು ಸಮಸ್ಯೆ ಇದೆ ಮತ್ತು ಈ ಸಮಸ್ಯೆಯ ಕಾರಣವಾಗಿ ನೀವು ನಿಮ್ಮ ತಿಳುವಳಿಕೆಯನ್ನು ಮರೆತುಬಿಟ್ಟಿದ್ದೀರಿ.
ಸಮಸ್ಯೆ ಏನೆಂದರೆ : ನೀವು ಒಬ್ಬರೇ ಕಾರಣ ಎಂದುಕೊಂಡಾಗ ಯಾತನೆ ಪಡುವುದು ನಿಮಗೆ ಸಾಧ್ಯವಿಲ್ಲ. ಆದರೂ ನೀವು ಯಾತನೆ ಪಡುತ್ತಿರುವಿರಾದರೆ ನೀವು ಯಾರಿಗೆ ದೂರು ಸಲ್ಲಿಸುತ್ತೀರಿ? ಆಗ ನೀವು ಯಾತನೆ ಮತ್ತು ಕಂಪ್ಲೇಂಟ್ ಎರಡನ್ನೂ ಎಂಜಾಯ್ ಮಾಡುತ್ತೀರಿ.
ನೋವು ಮತ್ತು ಯಾತನೆಯನ್ನು ಸುಖಿಸುತ್ತಿರುವಿರಾದರೆ ನಿಮಗೆ ನಿಮ್ಮ ಬಗ್ಗೆ ಹುತಾತ್ಮ ಭಾವ ಹುಟ್ಟಿಕೊಂಡಿದೆ. ಹುತಾತ್ಮ ಭಾವವನ್ನು ಅನುಭವಿಸುವುದರಲ್ಲಿ ಅತ್ಯಂತ ಹೆಚ್ಚಿನ ಸುಖ ಇದೆ. ನೀವು ದುಃಖಿತರಾಗಿರುವಾಗ ಇನ್ನೊಬ್ಬರಿಂದ ಅನುಕಂಪವನ್ನು ಅಪೇಕ್ಷೆ ಮಾಡುತ್ತೀರಿ. ಮತ್ತು ಅನುಕಂಪ ಎನ್ನುವುದು ಬಹಳ ಆಹ್ಲಾದಕರ. ಹಾಗಾಗಿಯೆ ಜನ ತಮ್ಮ ದುಃಖವನ್ನು ಹತ್ತುಪಟ್ಟು ಹೆಚ್ಚಿಗೆ ಮಾಡಿ ಹೇಳುತ್ತಾರೆ.
ನಿಮ್ಮ ದುಃಖವನ್ನು ಕೇಳುವುದರಲ್ಲಿ ಯಾರಿಗೆ ತಾನೆ ಆಸಕ್ತಿ ಇದೆ? ನಿಮ್ಮ ದುಃಖದ ಕತೆಗಳು ಇನ್ನೊಬ್ಬರೊಳಗೆ ವಿಷಾದವನ್ನು ಹುಟ್ಟಿಸಬಲ್ಲವೇ ಹೊರತು ಅವರ ಬದುಕಿನಲ್ಲಿ ಹೂಗಳನ್ನು ಅರಳಿಸಲಾರವು. ಅವರು ನಿಮ್ಮ ಕತೆಗಳನ್ನು ಕೇಳುತ್ತಿರುವುದು, ನೀವು ಕೂಡ ಅವರ ಕತೆಗಳನ್ನು ಕೇಳುತ್ತೀರ ಎನ್ನುವ ಭರವಸೆಯಿಂದ. ಅದು ಸಾಧ್ಯವಿಲ್ಲವಾದಾಗ ಅವರು ನಿಮ್ಮಿಂದ ಕಳಚಿಕೊಳ್ಳುತ್ತಾರೆ.
ನೀವು ದುಃಖದಲ್ಲಿದ್ದಾಗ ಮಾತ್ರ ನಿಮ್ಮ ಸುತ್ತ ಭರವಸೆಯನ್ನು ಕಾಣುತ್ತೀರಿ. ಆಗ ಜನ ನಿಮಗೆ ಸಹಾಯ ಸಹಕಾರ ನೀಡುತ್ತಾರೆ. ಅವರು ನಿಮ್ಮ ಮೇಲೆ ಅನುಕಂಪದ ಧಾರೆಯನ್ನು ಹರಿಸುತ್ತಿದ್ದಾರೆ. ಅನುಕಂಪ ಎನ್ನುವುದು ರಬ್ಬಿಶ್. ನೀವು ನಿಮ್ಮ ಬದುಕಿನಲ್ಲಿ ಯಾವತ್ತೂ ಪ್ರೀತಿಯನ್ನು ಪಡೆದಿಲ್ಲ, ಪ್ರೀತಿ ಇಲ್ಲದಾಗ ನೀವು ಅನುಕಂಪವನ್ನೇ ಪ್ರೀತಿ ಎಂದು ಸಂಭ್ರಮಿಸುತ್ತೀರಿ.
ಅನುಕಂಪ ಎನ್ನುವುದು ಸುಳ್ಳು ಪ್ರೀತಿ. ನಿಮಗೆ ನಿಜವಾಗಿ ಬೇಕಾಗಿರುವುದು ಪ್ರೀತಿ. ಆದರೆ ಪ್ರೀತಿಯನ್ನು ಗಳಿಸಬೇಕಾಗುತ್ತದೆ. ಯಾರು ಪ್ರೀತಿಯನ್ನು ಕೊಡಬಲ್ಲರೋ ಅವರು ಮಾತ್ರ ಪ್ರೀತಿಯನ್ನು ಗಳಿಸಬಲ್ಲರು. ನೀವು ಏನು ಕೊಡುತ್ತಿರುವುರೋ ಅದರ ಪ್ರತಿಬಿಂಬ ಪ್ರೀತಿ. ಆದರೆ ನಿಮಗೆ ಸ್ವತಃ ಪ್ರೀತಿಯನ್ನು ಕೊಡುವುದು ಸಾಧ್ಯವಿಲ್ಲ. ಆಗ ನೀವು ಪ್ರೀತಿಯ ಭಿಕ್ಷೆ ಬೇಡುತ್ತೀರಿ. ನೀವು ದುಃಖದಲ್ಲಿದ್ದಾಗ ಭಿಕ್ಷೆ ಬೇಡುವುದು ಸುಲಭ.
ದಾರಿಯ ಮೇಲಿನ ನಕಲಿ ಭಿಕ್ಷುಕರನ್ನು ಗಮನಿಸಿ. ಅವರು ತಮ್ಮ ಮೈಮೆಲೆ ಕೃತಕ ಗಾಯಗಳನ್ನ ಮಾಡಿಕೊಂಡಿದ್ದಾರೆ. ಆ ಗಾಯಗಳು ನಿಜವಲ್ಲ. ಆದರೆ ಭಿಕ್ಷುಕ ತೀವ್ರ ಯಾತನೆಯಲ್ಲಿ ಇರುವವನಂತೆ ಕಾಣಿಸಿಕೊಳ್ಳುತ್ತಿದ್ದಾನೆ, ಅವನಿಗೆ ಇಲ್ಲ ಎನ್ನಲು ನಿಮಗೆ ಮನಸಾಗುವುದಿಲ್ಲ. ಅವನಿಗೆ ಸಹಾಯ ಇಲ್ಲವೆನ್ನುವುದು ನಿಮ್ಮಲ್ಲಿ ಗಿಲ್ಟೀ ಫೀಲಿಂಗ್ ಹುಟ್ಟುಹಾಕುತ್ತದೆ. ನಿಮ್ಮ ಈಗೋ ಹರ್ಟ್ ಆಗುತ್ತದೆ. ಆಗ ನಿಮ್ಮೊಳಗೆ ಆ ವ್ಯಕ್ತಿಯ ಕುರಿತು ಅನುಕಂಪ ಹುಟ್ಟಿಕೊಳ್ಳುತ್ತದೆ.
ಆ ಭಿಕ್ಷುಕ ಗಟ್ಟಿ ಮುಟ್ಟಾಗಿದ್ದರೆ, ಏನಾದರು ಕೆಲಸ ಮಾಡು ಎಂದು ಹೇಳಬಹುದಾಗಿತ್ತು ಆದರೆ ನಿಮಗೆ ಅವನು ಬಣ್ಣಿಸುತ್ತಿರುವ ಯಾತನೆ ಕಾಣಿಸುತ್ತಿದೆೆ, ಆಗ ನಿಮಗೆ ಅನುಕಂಪವನ್ನು ತೋರಿಸದೇ ಬೇರೆ ವಿಧಿಯೇ ಇಲ್ಲ, ಅದು ಸುಳ್ಳು ಅನುಕಂಪವಾಗಿದ್ದರೂ.
ನೀವು ಪಡೆದದ್ದು ಅನುಕಂಪ ವಾಗಿರುವಾಗ ನೀವು ಯಾತನೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೀರಿ. ಯಾರು ತಮ್ಮ ಬದುಕಲ್ಲಿ ಪ್ರೀತಿಯನ್ನು ಪಡೆದಿದ್ದಾರೋ ಅವರು ಆನಂದದಿಂದ ತುಂಬಿಕೊಂಡಿದ್ದಾರೆ. ಆದರೆ ಯಾರು ಕೇವಲ ಅನುಕಂಪವನ್ನು ಪಡೆದಿದ್ದಾರೋ ಅವರು ತಮ್ಮ ಯಾತನೆಯನ್ನೇ ನೆಚ್ಚಿಕೊಂಡಿದ್ದಾರೆ.
ಸ್ಪಷ್ಟವಾಗಿ ತಿಳಿದುಕೊಳ್ಳಿ. ನೀವು ಮಾತ್ರ ನಿಮ್ಮ ಅಸ್ತಿತ್ವದ ಆಧಾರಸ್ಥಂಬ. ನಿಮ್ಮ ಎಲ್ಲದಕ್ಕೂ ನೀವೇ ರೆಸ್ಪಾನ್ಸಿಬಲ್. ಎಷ್ಟೇ ಭಾರವಾಗಿದ್ದರೂ ಅದು ನಿಮ್ಮ ಜವಾಬ್ದಾರಿಯೇ. ಈ ಸತ್ಯ ಗಟ್ಟಿಯಾದಾಗ ಎಲ್ಲ ದುಃಖಗಳು ಮಾಯವಾಗುತ್ತವೆ.

