ಪ್ರೀತಿಸುವ ಇಚ್ಛೆ ಮಾತ್ರ ಸಾಕಾಗುವುದಿಲ್ಲ. ಪ್ರೀತಿಸುವ ಕುರಿತು ತಿಳುವಳಿಕೆ ಇಲ್ಲದೇ ಹೋದರೆ ನಿಮಗೆ ಪ್ರೀತಿಸುವುದು ಸಾಧ್ಯವಾಗುವುದಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನಿಮ್ಮೊಳಗೆ ಒಪ್ಪಿಕೊಳ್ಳುವಿಕೆ ಮತ್ತು ಪ್ರೀತಿಯ ಅಂತಃಕರಣವನ್ನು ಸಾಧ್ಯಮಾಡುವುದು ~Thich Nhat Hanh | ಕನ್ನಡಕ್ಕೆ: ಚಿದಂಬರ ನರೇಂದ್ರ
ಕೆಲವು ನಿಶ್ಚಿತ ರೂಪದಲ್ಲಿ
ಒದಗಿ ಬಂದರೆ ಮಾತ್ರ
ಅದು ಖುಶಿ ಎನ್ನುವ
ನಂಬಿಕೆಯ ಸುಳಿಯಲ್ಲಿ
ನಾವು
ಸಿಕ್ಕಿಹಾಕಿಕೊಂಡಿರುವ ತನಕ
ಕಾಣಿಸುವವುದಿಲ್ಲ ನಮಗೆ
ಖುಶಿಗೆ ಇರುವ
ಅಪರಿಮಿತ ಅವಕಾಶಗಳು
ನಮ್ಮ
ಮೂಗಿನ ತುದಿಯಲ್ಲಿ.
ಮುಂದಿನ ಬುದ್ಧ ಮೈತ್ರೇಯ, ಪ್ರೀತಿ ಪ್ರೇಮಗಳ ವಕ್ತಾರ ಎಂದು ಶಾಕ್ಯಮುನಿ ಬುದ್ಧ ಹೇಳಿದ್ದಾನೆ. ನಮಗೆಲ್ಲ ಇಂದು ಅತ್ಯವಶ್ಯಕವಾಗಿ ಬೇಕಾದದ್ದು ಪ್ರೀತಿ. ಬುದ್ಧನ ಟೀಚಿಂಗ್ಸ್ ಗಳಿಂದ ನಮಗೆ ಗೊತ್ತಾಗುವುದೇನೆಂದರೆ, ಪ್ರೀತಿ ಹುಟ್ಟುವುದು ತಿಳುವಳಿಕೆಯಿಂದಾಗಿ.
ಪ್ರೀತಿಸುವ ಇಚ್ಛೆ ಮಾತ್ರ ಸಾಕಾಗುವುದಿಲ್ಲ. ಪ್ರೀತಿಸುವ ಕುರಿತು ತಿಳುವಳಿಕೆ ಇಲ್ಲದೇ ಹೋದರೆ ನಿಮಗೆ ಪ್ರೀತಿಸುವುದು ಸಾಧ್ಯವಾಗುವುದಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನಿಮ್ಮೊಳಗೆ ಒಪ್ಪಿಕೊಳ್ಳುವಿಕೆ ಮತ್ತು ಪ್ರೀತಿಯ ಅಂತಃಕರಣವನ್ನು ಸಾಧ್ಯಮಾಡುವುದು.
ಮುಂದಿನ ಬುದ್ಧ ಒಬ್ಬ ವ್ಯಕ್ತಿಯ ರೂಪದಲ್ಲಿ ಕಾಣಿಸಿಕೊಳ್ಳಲಿಕ್ಕಿಲ್ಲ, ಮುಂದಿನ ಬುದ್ಧ ಸಮುದಾಯದ ರೂಪದಲ್ಲಿ ಕಾಣಿಸಿಕೊಳ್ಳಬಹುದು, ಅಂತಃಕರಣದ ಪ್ರೀತಿ ಮತ್ತು ತಿಳುವಳಿಕೆಯನ್ನು ಪ್ರ್ಯಾಕ್ಟೀಸ್ ಮಾಡುವ ಸಮುದಾಯದ ರೂಪದಲ್ಲಿ, ಮೈಂಡ್ ಫುಲ್ ಬದುಕನ್ನ ಪ್ರ್ಯಾಕ್ಟೀಸ್ ಮಾಡುವ ಸಮುದಾಯದ ರೂಪದಲ್ಲಿ. ಮತ್ತು ಗುಂಪುಗಳು, ಊರುಗಳು, ದೇಶಗಳು ಒಂದಾಗಿ ಈ ಪ್ಯಾಕ್ಟೀಸ್ ನಲ್ಲಿ ಭಾಗಿಯಾಗಬಹುದು.
ಲೋಟಸ್ ಸೂತ್ರದ ಪ್ರಕಾರ ನಾವು ಯಾವುದೇ ಸಂಪ್ರದಾಯಗಳನ್ನು ಆಚರಿಸುತ್ತಿದ್ದರೂ, ನಾವೆಲ್ಲರೂ ಬುದ್ಧನ ವಿದ್ಯಾರ್ಥಿಗಳೇ. ಬುದ್ಧಿಸ್ಟ್ ಅಲ್ಲದ ಸಂಪ್ರದಾಯಗಳಿಗೆ ನಾವು ಈ ಸ್ಪಿರೀಟ್ ನ್ನ ವಿಸ್ತರಿಸಿಕೊಳ್ಳಬೇಕು.
ಬೇರೆ ಸಂಪ್ರದಾಯಗಳಲ್ಲಿಯೂ ನಮಗೆ ಬುದ್ಧ, ಧಮ್ಮ ಮತ್ತು ಸಂಘಕ್ಕೆ ಸಮಾನವಾದ ಮುತ್ತು ರತ್ನಗಳು ಸಿಗಬಹುದು. ಒಮ್ಮೆ ನಿಮಗೆ ಇತರ ಅಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಇರುವ ಮುತ್ತುಗಳನ್ನ ಗ್ರಹಿಸುವ ಸಾಮರ್ಥ್ಯ ಪ್ರಾಪ್ತವಾದಾಗ, ಎಲ್ಲರೂ ಕೂಡಿ ಶಾಂತಿ ಮತ್ತು ಭ್ರಾತೃತ್ವ ದ ಕಾಮನ್ ಗುರಿಗಳತ್ತ ಹೆಜ್ಜೆ ಹಾಕುವುದು ಸಾಧ್ಯವಾಗಬಹುದು.

