ಕಲಿಸಲು ಸಾಧ್ಯವಿಲ್ಲದ್ದನ್ನು ಕಲಿಯುವುದು…

ಮಗ ವಾಪಸ್ ತನ್ನ ಮಾಸ್ಟರ್ ಬಳಿ ಹೋಗಿ, ಯಾವುದನ್ನ ಕಲಿಸುವುದು ಸಾಧ್ಯವಿಲ್ಲವೋ ಅದನ್ನು ಕಲಿಸುವಂತೆ ಬೇಡಿಕೊಂಡ. “ಈ ನಾಲ್ಕು ನೂರು ಕುರಿಗಳನ್ನು ತೆಗೆದುಕೊಂಡು ಕಾಡಿಗೆ ಹೋಗು. ಕುರಿಗಳ ಸಂಖ್ಯೆ ಒಂದು ಸಾವಿರ ಆದಾಗ ವಾಪಸ್ ಬಾ” ಮಾಸ್ಟರ್ ಆ ಯುವಕನನ್ನು ಅಲ್ಲಿಂದ ಕಾಡಿಗೆ ಕಳಿಸಿದ…. | ಸಂಗ್ರಹಾನುವಾದ: ಚಿದಂಬರ ನರೇಂದ್ರ

ಒಂದಾನೊಂದು ಕಾಲದಲ್ಲಿ ಬಸ್ರಾದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿ ಇದ್ದ. ಅವನ ಏಕೈಕ ಕೆಲಸವೆಂದರೆ ತನ್ನ ಹರೆಯದ ಮಗನನ್ನು ಪ್ರೀತಿಯಿಂದ ಆರೈಕೆ ಮಾಡುವುದು. ಆ ಮನುಷ್ಯ ತನ್ನ ಬಳಿ ಇದ್ದ ಹಣವನ್ನೆಲ್ಲ ಮಗನ ವಿದ್ಯಾಭ್ಯಾಸಕ್ಕೆ ಉಪಯೋಗಿಸಿಬಿಟ್ಟಿದ್ದ. ಮಗ ಕೆಲವು ವರ್ಷ ಆ ಕಾಲದ ಪ್ರಸಿದ್ಧ ಯುನಿವರ್ಸಿಟಿಯಲ್ಲಿ ಅಭ್ಯಾಸ ಮಾಡಿ ಪದವಿ ಸಂಪಾದಿಸಿದ.

ಪದವಿಯ ನಂತರ ಮಗ ತನ್ನ ಮನೆಗೆ ವಾಪಸ್ ಬಂದ. ವಯಸ್ಸಾದ ಅಪ್ಪ, ಮಗನ ಬರುವಿಕೆಯನ್ನೇ ಎದುರು ನೋಡುತ್ತ ಬಾಗಿಲಲ್ಲೇ ಕಾಯುತ್ತ ನಿಂತಿದ್ದ. ಮಗ ಮನೆಗೆ ಬಂದು ಅಪ್ಪನನ್ನು ಅಪ್ಪಿಕೊಂಡಾಗ, ಅಪ್ಪ ಮಗನ ಕಣ್ಣುಗಳನ್ನು ಆಳವಾಗಿ ದಿಟ್ಟಿಸಿ ನೋಡಿ ತೀವ್ರ ನಿರಾಶನಾದ. “ಏನೇನು ಕಲಿತಿದ್ದೀಯ ಮಗನೆ?” ಅಪ್ಪ ಮಗನನ್ನು ಪ್ರಶ್ನೆ ಮಾಡಿದ. “ಕಲಿಯಬೇಕಾದ್ದನ್ನೆಲ್ಲ ಕಲಿತೆ ಅಪ್ಪ” ಮಗ ಉತ್ತರಿಸಿದ. “ಆದರೆ ಯಾವುದನ್ನು ಕಲಿಸುವುದು ಸಾಧ್ಯವಿಲ್ಲವೋ ಆ ಎಲ್ಲವನ್ನೂ ಕಲಿತೆಯಾ?” ಅಪ್ಪ ಮಗನನ್ನು ಮತ್ತೆ ಪ್ರಶ್ನೆ ಮಾಡಿದ. ಮಗನ ಮುಖದಲ್ಲಿ ಉತ್ತರವಿಲ್ಲದಿರುವುದನ್ನ ಗಮನಿಸಿದ ಅಪ್ಪ ಮತ್ತೆ ಹೇಳಿದ, “ಹೋಗು ಮಗನೇ, ಯಾವುದನ್ನ ಕಲಿಸುವುದು ಸಾಧ್ಯವಿಲ್ಲವೋ ಅದನ್ನು ಕಲಿತು ಬಾ”.

ಮಗ ವಾಪಸ್ ತನ್ನ ಮಾಸ್ಟರ್ ಬಳಿ ಹೋಗಿ, ಯಾವುದನ್ನ ಕಲಿಸುವುದು ಸಾಧ್ಯವಿಲ್ಲವೋ ಅದನ್ನು ಕಲಿಸುವಂತೆ ಬೇಡಿಕೊಂಡ. “ಈ ನಾಲ್ಕು ನೂರು ಕುರಿಗಳನ್ನು ತೆಗೆದುಕೊಂಡು ಕಾಡಿಗೆ ಹೋಗು. ಕುರಿಗಳ ಸಂಖ್ಯೆ ಒಂದು ಸಾವಿರ ಆದಾಗ ವಾಪಸ್ ಬಾ” ಮಾಸ್ಟರ್ ಆ ಯುವಕನನ್ನು ಅಲ್ಲಿಂದ ಕಾಡಿಗೆ ಕಳಿಸಿದ.

ನಾಲ್ಕು ನೂರು ಕುರಿಗಳೊಂದಿಗೆ ಕಾಡಿಗೆ ಹೊರಟ ಆ ಯುವಕ ಕುರಿಗಾಹಿಯಾದ. ಕುರಿಗಳನ್ನು ಸಾಕುತ್ತ, ಮೇಯಿಸುತ್ತ ಬೆಟ್ಟಗುಡ್ಡಗಳಲ್ಲಿ ಓಡಾಡುವಾಗ ಅವನಿಗೆ ಮೊದಲ ಬಾರಿ ಮೌನದ ಅನುಭವವಾಯಿತು. ಅಲ್ಲಿ ಅವನ ಜೊತೆ ಮಾತನಾಡಲು ಬೇರೆ ಯಾರೂ ಇರಲಿಲ್ಲ. ಕುರಿಗಳಿಗೆ ಅವನ ಮಾತು ಅರ್ಥವಾಗುತ್ತಿರಲಿಲ್ಲ. ಆ ಯುವಕ ಮೌನವನ್ನು ಸಹಿಸಲಾರದೇ ಕುರಿಗಳ ಜೊತೆ ಮಾತನಾಡುವ ಪ್ರಯತ್ನ ಮಾಡುತ್ತಿದ್ದ. ಕುರಿಗಳು ವಾಪಸ್ ಮಾತನಾಡುವುದು, “ನೀನೊಬ್ಬ ಮೂರ್ಖ” ಎಂದು ಅವು ಹೇಳುತ್ತಿದ್ದಂತೆ ಅವನಿಗೆ ಅನಿಸುತ್ತಿತ್ತು. ನಿಧಾನವಾಗಿ ಆ ಯುವಕ ತಾನು ಕಲಿತ ಪುಸ್ತಕದ ವಿದ್ಯೆಯನ್ನು, ತನ್ನ ಹೆಮ್ಮೆ, ಅಹಂ ಎಲ್ಲವನ್ನೂ ಮರೆಯತೊಡಗಿದ. ಮತ್ತು ಸ್ವತಃ ತಾನೂ ಕುರಿಗಳ ಹಾಗೆಯೇ ಆಗಿಬಿಟ್ಟ. ಆಗ ಅವನನ್ನು ಮಹಾ ವಿನಯ ಮತ್ತು ವಿವೇಕ ಕೂಡಿಕೊಂಡವು.

ಎರಡು ಮೂರು ವರ್ಷಗಳ ನಂತರ ಕುರಿಗಳ ಸಂಖ್ಯೆ ಸಾವಿರಕ್ಕೆ ತಲುಪಿದಾಗ, ಆ ಯುವಕ ವಾಪಸ್ ಮಾಸ್ಟರ್ ಹತ್ತಿರ ಬಂದು ಅವರ ಪಾದಗಳ ಮೇಲೆ ಬಿದ್ದ. ಮಾಸ್ಟರ್ ಅವನನ್ನು ಒಂದು ಕ್ಷಣ ದಿಟ್ಟಿಸಿ ನೋಡಿ ಹೇಳಿದರು, “ಈಗ ನೀನು ಯಾವುದನ್ನು ಕಲಿಸುವುದು ಸಾಧ್ಯವಿಲ್ಲವೋ ಅದನ್ನು ಕಲಿತಿದ್ದೀಯಾ. ಮನೆಗೆ ಹೋಗು ಅಪ್ಪನಿಗೆ ಈಗ ನಿನ್ನ ನೋಡಿ ಸಂತೋಷವಾಗುತ್ತದೆ”.


(Source: Sufi & zen parables page)

Leave a Reply