ಆಸ್ತಿ ಎಲ್ಲಿಯವರೆಗೆ ವೈಯಕ್ತಿಕವೋ ಅಲ್ಲಿಯವರೆಗೆ ಕಳ್ಳತನ ತಪ್ಪು ಎನ್ನುವ ನಿಯಮ ಲಾಗೂ ಆಗುತ್ತಿರುತ್ತದೆ. ಆದರೆ ಜಗತ್ತು ಬದಲಾಗಿ, ಆಸ್ತಿ ವೈಯಕ್ತಿಕ ಅಲ್ಲ, ಸಾಮುದಾಯಿಕವಾದಾಗ ಈ ನಿಯಮಕ್ಕೆ ಅರ್ಥವೇ ಇಲ್ಲ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕಾನೂನು ಸಮಾಜಕ್ಕಾಗಿಯಾದರೆ, ಪ್ರೀತಿ ಮನುಷ್ಯನಿಗೆ, ವ್ಯಕ್ತಿಗೆ. ಬೇರೆಯವರೊಡನೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನ ಕಾನೂನು ಹೇಳಿಕೊಟ್ಟರೆ, ಸ್ವತಃ ನಿನ್ನ ಜೊತೆ ನಿನ್ನ ವರ್ತನೆ ಹೇಗಿರಬೇಕು ಎನ್ನುವುದು ಪ್ರೀತಿ. ಪ್ರೀತಿ ವ್ಯಕ್ತಿಯ ಒಳಗೆ ಅರಳುತ್ತದೆಯಾದರೆ, ಕಾನೂನು ಹೊರಗಿನ ಪರಫಾರ್ಮನ್ಸ್. ಹೊರಗೆ ಬೇರೆ ಜನರೊಡನೆ ವ್ಯವಹರಿಸಲು ಕಾನೂನು ಬಹಳ ಮುಖ್ಯ ಆದರೆ ಕೇವಲ ಕಾನೂನು ಸಾಕಾಗುವುದಿಲ್ಲ. ಮನುಷ್ಯ ಕೇವಲ ಕಾನೂನುಬದ್ಧನಾದರೆ ಆತ ಒಳ್ಳೆಯ ನಾಗರಿಕನಾಗಬಹುದು ಆದರೆ ಆಗ ಆತ ಜೀವವಿಲ್ಲದ ಮನುಷ್ಯ. ಕಾನೂನು ಸಮಾಜದ ಫೌಂಡೇಶನ್ ಆಗಬಹುದು ಆದರೆ ಅದು ಸ್ವತಃ ತಾನೇ ಒಂದು ಕಟ್ಟಡವಾಗಲಾರದು. ಕಾನೂನಿನಿಂದಾಗಿ ಉಸಿರಾಡಬಹುದು ಆದರೆ ಕಾನೂನಿಂದಾಗಿ ಬದುಕಲು ಆಗುವುದಿಲ್ಲ. ಬದುಕಲು ಪ್ರೀತಿ ಬೇಕು.
ಕಾನೂನಿಗೆ ಒಂದು ಲೆಕ್ಕ ಇದೆ, ಇದು ಸರಿ ಇದು ತಪ್ಪು ಎಂದು ನಿರ್ಧಾರ ಮಾಡಬಹುದು. ಆದರೆ ಪ್ರೀತಿಗೆ ಯಾವ ನಿಯಮಗಳಿಲ್ಲ, ಯಾವ ಲೆಕ್ಕಾಚಾರವಿಲ್ಲ. ಅದು ಗಣಿತವಲ್ಲ ಅದು ಕಾವ್ಯ. ನೆನಪಿರಲಿ, ಕಾನೂನು ಪಾಲಿಸಿ ಆದರೆ ಅಲ್ಲಿಗೆ ನಿಂತುಬಿಡಬೇಡಿ. ಆಗ ನಿಮ್ಮ ಬದುಕು ವ್ಯರ್ಥ. ಕಾನೂನು ಬೇಕು ಸಮಾಜದಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕಲು ಆದರೆ ಅದೇ ಅಂತಿಮ ಅಲ್ಲ. ಅದು ಬಿಡುಗಡೆಯ ದಾರಿ ಅಲ್ಲ. ಬಿಡುಗಡೆಯ ದಾರಿಯ ಮೇಲೆ ನಿಮ್ಮನ್ನು ಕೈಹಿಡಿದು ನಡೆಸುವುದು ಪ್ರೀತಿ ಮಾತ್ರ.
ಜೀಸಸ್, ಮೋಸೆಸ್ ನ ಪರಿಪೂರ್ಣ ರೂಪ. ಮೋಸೆಸ್ ಶುರು ಮಾಡಿದ್ದನ್ನ ಜೀಸಸ್ ಪೂರ್ಣ ಮಾಡಿದ. ಆದರೆ ಯಹೂದಿಗಳು ಇದನ್ನು ಒಪ್ಪುವುದಿಲ್ಲ. ವೇದೋಪನಿಷತ್ತುಗಳು ಶುರು ಮಾಡಿದ್ದನ್ನ ಬುದ್ಧ ಪೂರ್ಣಗೊಳಿಸಿದ. ಆದರೆ ಹಿಂದೂಗಳು ಇದನ್ನು ಒಪ್ಪುವುದಿಲ್ಲ. ಈ ಜಗತ್ತಿನಲ್ಲಿ ಮಾರ್ಕ್ಸ್ ನಿಗೆ ಬುದ್ಧ ಮತ್ತು ಜೀಸಸ್ ಬೇಕಾಗುತ್ತಾರೆ ಆದರೆ ಕಮ್ಯುನಿಸ್ಟರು ಇದನ್ನು ಒಪ್ಪುವುದಿಲ್ಲ. ಈ ಎಲ್ಲ ವಿರೋಧಿಗಳು ಕಾನೂನಿನ ಪರಿಪಾಲಕರು ಆಗ ಪ್ರೀತಿ, ಕಾನೂನಿಗೆ ವಿರುದ್ಧ ಏನೋ ಎಂದು ಅನಿಸುತ್ತದೆ. ಹಾಗೆ ನೋಡಿದರೆ ಕಾನೂನು ಬೇಕಾಗಿರುವುದು ಪ್ರೀತಿಯ ರಕ್ಷಣೆಗೆ ಮಾತ್ರ. ಕಾನೂನು ಬೇಕಾಗಿರುವುದು ಜನ ಶಾಂತಿಯಿಂದ, ಪ್ರೀತಿಯಿಂದ ಬದುಕಲು. ಕಾನೂನು ತನ್ನಷ್ಟಕ್ಕೆ ತಾನೇ ಅಂತಿಮವಲ್ಲ. ಆದರೆ ಯಾವಾಗ ಜನ ಕೇವಲ ಕಠಿಣ ಕಾನೂನು ಪರಿಪಾಲಕರಾಗುತ್ತಾರೋ ಆಗ ಪ್ರೀತಿಯೇ ಕಾನೂನಿಗೆ ವಿರುದ್ಧ ಅನಿಸಲು ಶುರುವಾಗುತ್ತದೆ.
ಟೆನ್ ಕಮಾಂಡ್ಮೆಂಟ್ಸ್ ನ ಸೃಷ್ಟಿ ಮಾಡಿದ್ದು ಮೋಸೆಸ್. ಅವು ಭಗವಂತ ಆಯ್ಕೆ ಮಾಡಿದ ನಿಯಮಗಳಲ್ಲ. ಅವು ಮನುಷ್ಯ ತಾನು ರೂಪಿಸಿಕೊಂಡ ನಿಯಮಗಳು. ಆಸ್ತಿ ಎಲ್ಲಿಯವರೆಗೆ ವೈಯಕ್ತಿಕವೋ ಅಲ್ಲಿಯವರೆಗೆ ಕಳ್ಳತನ ತಪ್ಪು ಎನ್ನುವ ನಿಯಮ ಲಾಗೂ ಆಗುತ್ತಿರುತ್ತದೆ. ಆದರೆ ಜಗತ್ತು ಬದಲಾಗಿ, ಆಸ್ತಿ ವೈಯಕ್ತಿಕ ಅಲ್ಲ, ಸಾಮುದಾಯಿಕವಾದಾಗ ಈ ನಿಯಮಕ್ಕೆ ಅರ್ಥವೇ ಇಲ್ಲ. ಬಡತನ, ಹಸಿವು, ಅಸಮಾನತೆ ಇದ್ದಾಗ ಮಾತ್ರ ಕಳ್ಳತನ ಸಾಧ್ಯ. ಜಗತ್ತು ಸಂಪದ್ಭರಿತವಾಗಿ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳು ಲಭ್ಯವಾದಾಗ ಈ ಕಮಾಂಡ್ಮೆಂಟ್ ಮಾಯವಾಗುತ್ತದೆ. ಮೋಸೆಸ್ ಕಾನೂನನ್ನು ಸ್ಥಾಪಿಸುತ್ತಾನಾದರೆ ಜೀಸಸ್ ಸ್ಥಾಪನೆ ಮಾಡುವುದು, ಸತ್ಯ, ಪ್ರೀತಿ ಮತ್ತು ಘನತೆ. ಕಾನೂನು ಮೈಂಡ್ ನ ಕಾಣಿಕೆಯಾದರೆ, ಪ್ರೀತಿ ಭಗವಂತನ ಅನುಗ್ರಹ.
ಮತ್ತು ಪ್ರೀತಿ ಸಾಧ್ಯವಾದಾಗ ಅದರ ಜೊತೆ ಜೊತೆಯೇ ಘನತೆ ಮತ್ತು ಸತ್ಯ ಸ್ಥಾಪಿತಗೊಳ್ಳುತ್ತವೆ. ನೆನಪಿರಲಿ, ಜೀಸಸ್ ನ ಅರ್ಥಮಾಡಿಕೊಳ್ಳಬೇಕಾದರೆ ಪ್ರೀತಿಯ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಬೇಕು. ಜೀಸಸ್ ನ ಅರ್ಥಮಾಡಿಕೊಳ್ಳಬೇಕಾದರೆ, ಸತ್ಯ ಮತ್ತು ಘನತೆಯ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಬೇಕು. ನೆನಪಿರಲಿ, ಒಮ್ಮೆ ನಿಮಗೆ ಸತ್ಯ ಅರ್ಥ ಆಯಿತೆಂದರೆ ಅದು ನಿಮ್ಮನ್ನು ಬಿಡುಗಡೆ ಮಾಡುತ್ತದೆ ಮತ್ತು ಬಿಡುಗಡೆಯ ಹೊರತಾಗಿ ಮನುಷ್ಯನಿಗೆ ಬೇರೆ ಯಾವುದೂ ಅಷ್ಟು ಮುಖ್ಯವಲ್ಲ.
Source:
Come Follow To You Vol 1
And the Word was Made Flesh
Osho

