ಅವರು ಶಬ್ದಗಳನ್ನು ಬಿಟ್ಟು ಹೋದರು… | ನೆರೂಡ

ಶಬ್ದಗಳು ಅತಿ ಪ್ರಾಚೀನ, ಅತಿ ನವೀನ…ಶವಪೆಟ್ಟಿಗೆಯಲ್ಲಿ, ಅರಳುತ್ತಿರುವ ಮೊಗ್ಗೆಯಲ್ಲಿ ಬಚ್ಚಿಟ್ಟುಕೊಂಡು ವಾಸ ಮಾಡುತ್ತವೆ… ನನ್ನ ಭಾಷೆ ಎಂಥ ಮಹಾನ್ ಭಾಷೆ…ಶತಮಾನಗಳ ಹಿಂದೆ ದಿಗ್ವಿಜಯ ಸಾಧಿಸಿದ ಉಗ್ರವೀರರ ಪೀಳಿಗೆಯ ಅದ್ಭುತದ್ದು ಅದು… । ಪಾಬ್ಲೋ ನೆರೂಡ; ಕನ್ನಡದಲ್ಲಿ: ಓ.ಎಲ್.ನಾಗಭೂಷಣ ಸ್ವಾಮಿ

…ನಿಮಗೆ ಬೇಕಾದ್ದನ್ನು ಹೇಳಬಹುದು, ಆದರೆ ಹಾಡುವುದು, ಹಾರುವುದು, ಇಳಿಯುವುದು ಎಲ್ಲವೂ ಶಬ್ದಗಳು ಮಾತ್ರವೇ…ಶಬ್ದಗಳಿಗೆ ನಮಸ್ಕಾರ…ಶಬ್ದಗಳನ್ನು ಪ್ರೀತಿಸುವೆ, ಅಪ್ಪುವೆ, ಕಚ್ಚುವೆ, ಕರಗಿಸುವೆ, ಅಟ್ಟಿಸಿಕೊಂಡು ಹೋಗಿ ಕೆಡವುವೆ…ಎಷ್ಟು ಪ್ರೀತಿ ಇದೆ ಗೊತ್ತಾ ಶಬ್ದಗಳ ಬಗ್ಗೆ…ಅನಿರೀಕ್ಷಿತವಾದವು… ಕಾಯಿಸಿ ಕಾಯಿಸಿ ಬರುವವು, ಇಲ್ಲೇ ಎಲ್ಲೋ ಸುಳಿದಾಡಿಕೊಂಡಿದ್ದು ಸಿಗದೆ ತಟಕ್ಕನೆ ಉದುರಿಬಿಡುವವು… ಸ್ವರಗಳ ಬಗ್ಗೆ ಪ್ರೀತಿ…ಬಣ್ಣ ಬಣ್ಣದ ಹರಳುಗಳ ಹಾಗೆ, ಪುಳಕ್ಕನೆ ಚಿಮ್ಮುವ ಬೆಳ್ಳಿ ಮೀನಿನ ಹಾಗೆ… ಸ್ವರಗಳೇ ನೊರೆ, ನೂಲು, ಅದಿರು, ಇಬ್ಬನಿ…ಶಬ್ದಗಳ ಬೆನ್ನು ಹತ್ತುವೆ…

ಎಷ್ಟು ಚೆಲುವಾಗಿರುವ ಶಬ್ದಗಳು, ಅವನ್ನೆಲ್ಲ ನನ್ನ ಕವಿತೆಯಲ್ಲಿ ಕೂರಿಸುವ ಆಸೆ…ನಟ್ಟಿರುಳಿನಲ್ಲಿ, ಅವು ನುಂಯ್ಯನೆ ನನ್ನ ದಾಟಿ ಹೋಗುವಾಗ ಬಲೆ ಬೀಸಿ ಹಿಡಿಯುವೆ, ಅವನ್ನು ಸ್ವಚ್ಛಮಾಡಿ, ಸುಲಿದು, ನನ್ನೆದುರು ತಟ್ಟೆಯಲ್ಲಿ ಜೋಡಿಸಿಟ್ಟುಕೊಳ್ಳುವೆ…ಕೆಲವು ಮಿಡಿಯುತ್ತವೆ, ಕೆಲವು ಆನೆ ದಂತದ ಹಾಗೆ, ಕೆಲವು ತರಕಾರಿಯಂತೆ, ಇನ್ನು ಕೆಲವು ಜಿಡ್ಡು ಜಿಡ್ಡು, ಒಂದಷ್ಟು ಶಬ್ದ ಹಣ್ಣಿನ ಹಾಗೆ, ಕೆಲವು ಪಾಚಿ, ಕೆಲವು ಆಲಿವ್, ಮತ್ತೆ ಕೆಲವು ಹವಳ, ಒಂದೊಂದು ಶಬ್ದಕ್ಕೂ ಒಂದೊಂದು ಥರದ ನುಣುಪು ನೇಯ್ಗೆ ಮೈಗುಣ…

ಶಬ್ದಗಳನ್ನು ತಿರುವಿ, ಕಲಕಿ, ಕುಲುಕಿ, ಗುಟುಕರಿಸಿ, ಕುಡಿಯುವೆ…ರುಬ್ಬಿ, ಹಿಸುಕಿ, ಕಣ್ಣಿಗೆ ಚಂದಕಾಣುವ ಹಾಗೆ ಓರಣಗೊಳಿಸಿ ಬಿಡುತ್ತೇನೆ…ಶಬ್ದಗಳನ್ನು ನನ್ನ ಕವಿತೆಯಲ್ಲಿ ಗುಹೆಯೊಳಗೆ ಇಳಿಬಿದ್ದ ಸುಣ್ಣದ ನೀರ್ಗಲ್ಲಿನ ಹಾಗೆ ಸುಮ್ಮನೆ ಬಿಡುತ್ತೇನೆ, ನಯವಾಗಿ ಹತ್ತರಿ ಹೊಡೆದ ಮರದ ಬೆಳ್ಳಿ ತಿರುಳಿನ ಹಾಗೆ, ಕೆಂಡದ ಹಾಗೆ, ಅಪಘಾತಕ್ಕೆ ಸಿಕ್ಕ ನೌಕೆಯಿಂದ ಎತ್ತಿಕೊಂಡ ಅಪರೂಪದ ವಸ್ತುವಿನ ಹಾಗೆ, ಕಡಲ ಅಲೆಗಳು ಕರುಣಿಸಿದ ವರದ ಹಾಗೆ ಶಬ್ದಗಳನ್ನು ಕವಿತೆಯಲ್ಲಿ ಸುಮ್ಮನೆ ಬಿಟ್ಟುಬಿಡುತ್ತೇನೆ…ಎಲ್ಲವೂ ಇರುವುದು ಶಬ್ದದಲ್ಲೇ…

ಶಬ್ದವೊಂದು ತಾನಿರಬೇಕಾದ ಜಾಗವನ್ನು ಬಿಟ್ಟು ಬೇರೆಲ್ಲೋ ಕೂತರೆ, ಅಥವಾ ವಾಕ್ಯದಲ್ಲಿ ಆ ಜಾಗದಲ್ಲಿ ಬರಬೇಕೆಂದು ನಿರೀಕ್ಷೆಯಲ್ಲಿರುವ ನುಡಿಗಟ್ಟಿನ ಬದಲು ತರಲೆ ಮಾಡುವ ಮಗುವಿನ ಥರ ಬೇರೊಂದು ಶಬ್ದ ಬಂದು ನುಡಿಯೊಳಗೆ ಸೇರಿಕೊಂಡು ವಾಕ್ಯವು ಅದನ್ನು ನಿರೀಕ್ಷಿಸಿರದಿದ್ದರೂ ಒಪ್ಪಿಕೊಂಡರೆ ಇಡೀ ಐಡಿಯ ಪೂರಾ ಬದಲಾಗಿಬಿಡುತ್ತದೆ…ಆಳವಾದ ಬೇರಿದ್ದ ಶಬ್ದಗಳು ನದಿಯ ವಾಹದಲ್ಲಿ ಉರುಳುರುಳಿ ಬರುತ್ತಾ, ದೇಶದೇಶಗಳಲ್ಲಿ ಸುತ್ತಿ ಸುಳಿದು ಬರುತ್ತಾ ತಮ್ಮದೇ ನೆರಳು, ತಮ್ಮದೇ ಪಾರದರ್ಶಕಗುಣ, ಭಾರವಾದ ರೆಕ್ಕೆ, ಪೊದೆಗೂದಲು ಎಲ್ಲವನ್ನೂ ಸಂಪಾದಿಸಿಕೊಂಡಿರುತ್ತವೆ…

ಶಬ್ದಗಳು ಅತಿ ಪ್ರಾಚೀನ, ಅತಿ ನವೀನ…ಶವಪೆಟ್ಟಿಗೆಯಲ್ಲಿ, ಅರಳುತ್ತಿರುವ ಮೊಗ್ಗೆಯಲ್ಲಿ ಬಚ್ಚಿಟ್ಟುಕೊಂಡು ವಾಸ ಮಾಡುತ್ತವೆ… ನನ್ನ ಭಾಷೆ ಎಂಥ ಮಹಾನ್ ಭಾಷೆ…ಶತಮಾನಗಳ ಹಿಂದೆ ದಿಗ್ವಿಜಯ ಸಾಧಿಸಿದ ಉಗ್ರವೀರರ ಪೀಳಿಗೆಯ ಅದ್ಭುತದ್ದು ಅದು…ಬೃಹತ್ ಪರ್ವತಶ್ರೇಣಿಗಳನ್ನು ಹತ್ತಿ ಇಳಿದು,  ಆಲುಗಡ್ಡೆ, ಮಾಂಸ, ಹುರಳಿ, ಕಪ್ಪು ಹೊಗೆಸೊಪ್ಪು, ಚಿನ್ನ, ಧಾನ್ಯ, ಬೇಸಿದ ಮೊಟ್ಟೆ, ಜಗತ್ತು ಅದುವರೆಗೆ ಕಂಡಿರದಂಥ ಅಗಾಧ ಹಸಿವೆಯಲ್ಲಿ ಸಿಕ್ಕಿದ್ದೆಲ್ಲವನ್ನೂ ಕಬಳಿಸುತ್ತಾ…ಧರ್ಮಗಳು, ಪಿರಮಿಡ್ಡುಗಳು, ಜನರ ಪಂಗಡಗಳು, ಬೇರೆ ದೇವರ ಪೂಜಕರು ಎಲ್ಲರನ್ನೂ ಎಲ್ಲವನ್ನೂ ನುಂಗಿ ನೊಣೆದವರ ಭಾಷೆ…ಎಲ್ಲೆಲ್ಲಿ ಕಾಲಿಟ್ಟರೋ ಅಲ್ಲಿದ್ದುದೆಲ್ಲ ನೆಲಸಮವೇ ಆಯಿತು…ಈ ಬರ್ಬರರ ಗಡ್ಡದಿಂದ, ಹೆಲ್ಮೆಟ್ಟಿನಿಂದ, ಬೂಟುಗಳಿಂದ, ಕುದುರೆ ಲಾಳಗಳಿಂದ ಶಬ್ದಗಳು ಉದುರಿದವು…ಥಳಥಳ ಹೊಳೆಯುವ ಶಬ್ದಗಳನ್ನು ಇಲ್ಲೇ ಬಿಟ್ಟು ಹೋದರು…ನಮ್ಮ ಭಾಷೆಯಾದವು ಅವು…ನಾವು ಸೋತೆವು, ನಾವು ಗೆದ್ದೆವು…ನಮ್ಮ ನೆಲದ ಚಿನ್ನವನ್ನು ಹೊತ್ತುಕೊಂಡು ಹೋದರು, ಚಿನ್ನವನ್ನು ನಮಗಾಗಿ ಇಲ್ಲೇ ಬಿಟ್ಟುಹೋದರು…ನಮ್ಮದು ಎಲ್ಲವನ್ನೂ ಲೂಟಿ ಮಾಡಿದರು, ನಮಗೆಂದು ಎಲ್ಲವನ್ನೂ ಬಿಟ್ಟು ಹೋದರು: ಅವರು ಶಬ್ದಗಳನ್ನು ಬಿಟ್ಟು ಹೋದರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.