ಪಾಬ್ಲೊ ನೆರೂಡನ ‘ಪ್ರಶ್ನೆಗಳು’

ಇಲ್ಲಿನ ಒಂದೊಂದು ಕಿರು ಕವಿತೆಯೂ ಹಲವು ಪ್ರಶ್ನೆಗಳ ಗೊಂಚಲು. ಇದರಲ್ಲಿರುವ ಒಟ್ಟು ೩೧೬ ಪ್ರಶ್ನೆಗಳಲ್ಲಿ ಒಂದೊಂದು ಪ್ರಶ್ನೆಯೂ ಅದು ಮೂಡಲು ಕಾರಣವಾದ ಅನುಭವಕ್ಕೆ ನೀಡಿರುವ ಭಾವವಿನ್ಯಾಸ. ನೆರೂಡನ ಕಾವ್ಯವನ್ನು ಬಲ್ಲವರು ಹೇಳುವ ಹಾಗೆ ನೆರೂಡ ಚಿಂತನೆಯ ಹಲವು ದಾರಿ, ಕಾವ್ಯದ ಹಲವು ಶೈಲಿ, ಹಲವು ದನಿಗಳ ಬಳಕೆಯನ್ನು ಅನ್ವೇಷಿಸಿದ ಕವಿ. ಆದರೂ ನುಡಿಯಲಾಗದ, ನುಡಿಯಲು ಬಾರದ ಸತ್ಯಗಳನ್ನು ಸ್ಪಾನಿಶ್‌ ಭಾಷೆಯ ಮೂಲ ಲಯದ ಗ್ರಹಿಕೆಯ ಮೂಲಕ ವ್ಯಕ್ತಪಡಿಸುವ ತವಕ ಅವನದ್ದು… । ಪ್ರೊ. ಓ.ಎಲ್.ನಾಗಭೂಷಣ ಸ್ವಾಮಿ

ಪಾಬ್ಲೊ ನೆರೂಡ ತೀರಿಕೊಂಡದ್ದು  ಸೆಪ್ಟೆಂಬರ್‌ ೧೯೭೩, ತನ್ನ ಅರವತ್ತೊಂಬತ್ತನೆಯ ವಯಸಿನಲ್ಲಿ. ಅದಕ್ಕೆ ಕೆಲವು ತಿಂಗಳ ಮೊದಲಷ್ಟೇ  ʻಪ್ರಶ್ನೆಗಳ ಪುಸ್ತಕʼ( ದಿ ಬುಕ್‌ ಆಫ್‌ ಕ್ವೆಶ್ಚನ್ಸ್) ಬರೆದು ಮುಗಿಸಿದ. 

ನೆರೂಡ ಬದುಕಿನುದ್ದಕ್ಕೂ ತನ್ನನ್ನು ತಾನು ಅರಿಯುವ ಅನ್ವೇಷಣೆಯಲ್ಲಿ ತೊಡಗಿದ್ದು ಕಾಣುತ್ತದೆ; ತನಗೆ ಗೊತ್ತಿರುವುದನ್ನು ಅಮಾನತ್ತಿನಲ್ಲಿರಿಸಿ ಬೇರೊಂದು ಕೋನದಲ್ಲಿ ಬೇರೊಂದು ನೋಟದಲ್ಲಿ ಕಣ್ಣೆದುರಿನ ಸತ್ಯವನ್ನು ಕಾಣಲು ಹವಣಿಸಿದ ಕವಿ ಅವನು. ಅವನ ಕೊನೆಗಾಲದ ಕವಿತೆಗಳಲ್ಲಿ ನಿರ್ದಿಷ್ಟ ರಾಜಕೀಯ ತತ್ವ ಅಥವಾ ಕಲೆಯ ತತ್ವದ ಆಸರೆ ಪಡೆಯದೆ, ಪರಿಚಿತ ವಿನ್ಯಾಸಗಳನ್ನು ನಿರಾಕರಿಸಿದವನು ನೆರೂಡ.

ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅ-ಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ.

ಹೊಳೆಗಳ ನೀರೆಲ್ಲ ಸಿಹಿಯಾಗಿದ್ದರೆ ಕಡಲ ಉಪ್ಪು ಎಲ್ಲಿಂದ ಬಂತು ಅನ್ನುವ ಪ್ರಶ್ನೆ ಮೂಡಿದಾಗ ಅದಕ್ಕೆ ವೈಜ್ಞಾನಿಕ ಉತ್ತರ ಹುಡುಕಿದರೆ ಫಲವಿಲ್ಲ. ವಿಚಾರ ಬುದ್ಧಿಯಿಂದ ಇಂಥ ಪ್ರಶ್ನೆಯನ್ನು ಎದುರಿಸಲು ದುಡುಕಬಾರದು. ಹೊಳೆಗಳ ಚಿತ್ರ, ಕಡಲಿನ ಚಿತ್ರ, ಸಿಹಿ ಮತ್ತು ಉಪ್ಪಿನ ರುಚಿ ಎಲ್ಲವೂ ನಮ್ಮ ಮನಸಿನಲ್ಲಿ ಮೂಡಬೇಕು, ತರಂಗಗಳನ್ನು ಹುಟ್ಟಿಸಬೇಕು.. ಇರುಳಿನಲ್ಲಿ, ನಗರಗಳ ಬೆಳಕು ಇಲ್ಲದ ಎಡೆಯಲ್ಲಿ ಮಿರುಗುವ ನಕ್ಷತ್ರ ಕಣ್ಣಂಚಿನಲ್ಲಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತವೆ, ದಿಟ್ಟಿಸಿ ನೋಡಿದರೆ ಮಸುಕಾಗುತ್ತವೆ. ಆ ನಕ್ಷತ್ರಗಳ ಹಾಗೇ ಈ ಪ್ರಶ್ನೆಗಳನ್ನು ಮನಸಿನ ಅಂಚಿನಲ್ಲಿ ನಿಂತು ಗ್ರಹಿಸಬೇಕು ಅನಿಸುತ್ತದೆ. ವಿಚಾರವನ್ನು ಮೀರಿ ಹೊಳೆಯುವ, ಭಾವದಲ್ಲಿ ಮೂಡುವ ಉತ್ತರಗಳನ್ನು ಹಿಡಿದಿಟ್ಟುಕೊಳ್ಳುವ ಸಹನೆಯೂ ಬೇಕಾದೀತು.

ಮೋಡ, ಬ್ರೆಡ್ಡು, ನಿಂಬೆಹಣ್ಣು, ಒಂಟೆ, ಸ್ನೇಹಿತರು, ಶತ್ರುಗಳು ಇಂಥ ಸಹಜ ವಸ್ತು, ಸಂಗತಿಗಳನ್ನು ಬಳಸಿಕೊಂಡು ಇಲ್ಲಿನ ಪ್ರಶ್ನೆಗಳು ಹುಟ್ಟಿವೆ. ಇವೆಲ್ಲವೂ ನಮ್ಮ ದಿನ ನಿತ್ಯದ ಬದುಕಿನೊಡನೆ ಹೆಣೆದುಕೊಂಡಿವೆ. ಹುಟ್ಟು ಮತ್ತು ಸಾವು ಹೊರ ಲೋಕದ ಕಣ್ಣಿಗೆ ಕಾಣುವ ಸುಸ್ಪಷ್ಟ ಮಿತಿಗಳು. ನಾವು ಕಾಣುವ, ಅನುಭವಿಸುವ ವಸ್ತು, ರೂಪ, ಘಟನೆಗಳಿಗೂ ಭೌತಿಕ ಲೋಕಕ್ಕೂ ಇರುವ ಸಂಬಂಧವನ್ನು ಪ್ರಶ್ನೆಗೆ ಒಡ್ಡಿದಾಗ ಹೊಸ ಅರಿವು ಸಾಧ್ಯವಾದೀತು.

ಈ ಕವಿತೆಗಳು ಸಹಜಸ್ಫೂರ್ತವಾದ, ಭಾವನಾತ್ಮಕವಾದ ಅಥವಾ ಆಧ್ಯಾತ್ಮಿಕವಾದ ದಾರಿಗಳನ್ನು ಸೂಚಿಸುವ ನಕ್ಷೆಗಳಲ್ಲ. ಈ ಪ್ರಶ್ನೆಗಳು ಪ್ರಶ್ನೆ ಎಂಬ ಪದ ʻಕೇಳುʼ ಎಂಬ ಅರ್ಥದ ಸಂಸ್ಕೃತದ ಮೂಲ ಧಾತುವಿನಿಂದ ಹುಟ್ಟಿದ್ದು. ಜಗತ್ತಿನ ಮುಖ್ಯ ಭಾಷೆಗಳಲ್ಲೆಲ್ಲ ʻಕೇಳುʼವುದು ಮುಖ್ಯವಾದೊಂದು ಕ್ರಿಯ. ಕೇಳು ನಿನಗೆ ದೊರೆಯುತ್ತದೆ ಅನ್ನುವ ಬೈಬಲಿನ ನುಡಿ, ಗಾಳಿ ಬೀಸುವುದು ಯಾಕೆ, ನದಿ ಹರಿಯುವುದು ಯಾಕೆ ಅನ್ನುವಂಥ ಪ್ರಶ್ನೆಗಳನ್ನು ಕೇಳುವ ಉಪನಿಷತ್ತು, ಕ್ವೆಸ್ಟ್‌ ಎಂಬ ಮೂಲದಿಂದ ಹುಟ್ಟದ ಕ್ವೆಶ್ಚನ್‌ನ ಸಂಬಂಧಿಗಳಾದ ಕಾಂಕ್ವೆಸ್ಟ್‌, ಕ್ವೆಸ್ಟ್‌ ಇತ್ಯಾದಿಗಳನ್ನು ನೆನೆಯಬಹುದು. ಕರುಣೆ, ಹೊಸತನದ ಹುಡುಕಾರ, ಸರಿತಪ್ಪುಗಳ ವಿಚಾರಣೆ, ಅರಿವು, ಗೆಲುವು ಇಂಥ ನೂರೆಂಟು ಕ್ರಿಯೆಗಳ ಬೇರು ಇರುವುದು ಪ್ರಶ್ನೆಯಲ್ಲೇ.

ಝೆನ್‌ ಗುರುಗಳು ಒಡ್ಡುವ ಕೋನ್‌, ಅಲ್ಲಮನ ಬೆಡಗಿನ ವಚನ, ಕನಕದಾಸರ ಮುಂಡಿಗೆ ಇವೆಲ್ಲ ನುಡಿಬಲೆಯನ್ನು ಬೀಸಿ ನಮ್ಮ ಮನಸ್ಸನ್ನು ಹಿಡಿಯುತ್ತವೆ. ಇವು ಒಡ್ಡುವ ಪ್ರಶ್ನೆಗಳನ್ನು ಎದುರಿಸುತ್ತ ಹೊಸ ಅರಿವನ್ನು ಪಡೆಯಬಹುದು, ಆದರೆ ಉತ್ತರ ಮತ್ತು ಅರಿವು ಹೆಸರಿಲ್ಲದ ಅಜ್ಞಾತದ ವಲಯಕ್ಕೆ ಸೇರಿದವು.  ಇಂಥ ಪ್ರಶ್ನೆ ಅಥವ ಹೇಳಿಕೆಯ ರೂಪವನ್ನು ತಳೆದಿರುವ ಪ್ರಶ್ನೆ ವೈರುಧ್ಯವನ್ನು ಮನಸಿಗೆ ತಂದು ಅದರ ಪರಿಹಾರಕ್ಕೆ ನಾವೇ ದಾರಿ ಹುಡುಕುವ ಹಾಗೆ ಒತ್ತಾಯಿಸುತ್ತದೆ. ಝೆನ್‌ ಗುರುವಿನ ಈ ಮಾತು ಕೇಳಿ:

ಗಾಳಿ, ಬಾವುಟ, ಮನಸು ಚಲಿಸುತಿವೆ/ ಅರಿವು ಒಂದೇ/ ಬಾಯ್ದೆರೆದು ಹೇಳಿದರೆ ಎಲ್ಲಾ ಸುಳ್ಳೇ.

ಮನಸು ತನ್ನ ಬೋನಿನಲ್ಲಿ ತಾನೇ ಬಂದಿ. ಭಾಷೆ, ತರ್ಕ, ವಿಚಾರಗಳ ಬೋನು ಅದು. ಅರಿತದ್ದನ್ನು ಬಾಯ್ದೆರೆದು ಆಡುವ ಮಾತಿನಿಂದ ಕತ್ತಲು ಇನ್ನಷ್ಟು ಹೆಚ್ಚುತ್ತದಲ್ಲಾ ಅದು ವಿಚಿತ್ರ.

ಚಂದಿರನ ಬೆಳಕು ಚಂದಿರನಿಂದೆಷ್ಟು ದೂರ? ಇದು ಜಲಾಲುದೀನ್‌ ರೂಮಿ ಹದಿಮೂರನೆಯ ಶತಮಾನದಲ್ಲಿ ಕೇಳಿದ ಪ್ರಶ್ನೆ. ನಮ್ಮೊಳಗೆ ನಾವು ಭಾಷೆಯ ಮೂಲಕ ರೂಪಿಸಿಕೊಂಡಿರುವ ಊಹೆ, ಸಿದ್ಧಾಂತ, ಪ್ರಮೇಯ, ಇದೇ ಸತ್ಯ ಎಂಬ ಖಚಿತತೆ ಇತ್ಯಾದಿಗಳು ನಮ್ಮ ಭೂತ ಭವಿಷ್ಯ ಮತ್ತು ಹಗಲುಗನಸುಗಳನ್ನೆಲ್ಲ ಆವರಿಸಿವೆ. ಅವನ್ನು ತೊರೆಯಲು ಸಾಧ್ಯವಾದರೆ ಮನಸಿಗೆ ಬಿಡುಗಡೆ ಸಿಕ್ಕಿ ಅದು ಇರುವಲ್ಲಿಂದಲೇ ಇರುವುದನ್ನೆಲ್ಲ ಇರುವ ಹಾಗೆ ಕಂಡೀತು ಅನ್ನುತ್ತಾರೆ.

ನೆರೂಡ ವಸ್ತು ಮತ್ತು ಸಂಗತಿಗಳನ್ನು ಕುರಿತು ಅನುಭವದಲ್ಲಿ ಬೇರುಬಿಟ್ಟ ಪ್ರಶ್ನೆಗಳನ್ನು ಕೇಳುತ್ತಾನೆ. ತನಗೆ ನಿಜವೆಂದು ತೋರುವ ಆದರೆ ಅರ್ಥವಾಗದ ಸಂಗತಿಯನ್ನು ಪ್ರಶ್ನೆಯಾಗಿಸಿ ನಮಗೆ ಒಪ್ಪಿಸುತ್ತಾನೆ. ಅವನಿಗೆ ಹೊಳೆಯುವ ಉತ್ತರವಿರದ ಪ್ರಶ್ನೆಗಳಿಗೆ ʼನನಗೇನೂ ತಿಳಿಯದುʼ ಎಂದು ಶರಣಾಗುತ್ತಾನೆ. ಅವನ ಮನಸು ಆತ್ಮಗಳು ನಂಬಿರುವ ಸಂಗತಿಗೂ ಅವನ ಭಾವನೆ ಮತ್ತು ಆಲೋಚನೆಯ ನಿಗದಿತ ವಿನ್ಯಾಸಗಳಿಗೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳುವುದು, ನಮಗೂ ಕಾಣಿಸುವುದು ಅವನಿಗೆ ಮುಖ್ಯ. ವಿನ್ಯಾಸಕ್ಕೆ ಬದ್ಧವಾದ ಆಲೋಚನೆ, ಭಾವನೆಗಳು ಕಲ್ಪನೆಯ ಬೆಳವಣಿಗೆಗೆ ಅಡ್ಡಿ ಮಾಡುತ್ತವೆ.

ಅತ್ಯುತ್ತಮ ಕಾವ್ಯ ಪಾರಂಪರಿಕವಾಗಿ ಮಾಡಿಕೊಂಡು ಬಂದಿರುವ ಕೆಲಸವನ್ನೇ ಬುಕ್‌ ಆಫ್‌ ಕ್ವೆಶ್ಚನ್ಸ್‌ ಮಾಡುತ್ತದೆ. ಕಾವ್ಯ ನೋಡುವುದು ಹೇಗೆಂದು ನಾವೇ ಕಲಿಯುವಂತೆ ಮಾಡುತ್ತದೆ. ನಮ್ಮೊಳಗಿನ ಹುಡುಕಾಟಕ್ಕೆ ಕುಮ್ಮಕ್ಕು ಕೊಡುತ್ತ ಸ್ಫೂರ್ತಿ ತುಂಬುವುದು ಕೂಡ ಕಾವ್ಯ ಹುಟ್ಟಿಸುವ ಪ್ರಶ್ನೆಗಳ ಕೆಲಸ. ಬುದ್ಧಿಪ್ರಧಾನವಾದ ಮನಸಿನಿಂದ ಪ್ರತಿಕ್ರಿಯೆ ತೋರುವ ಬದಲು ನೆರುಡ ರೂಪಿಸುವ ಶಬ್ದಬಿಂಬಗಳ ಜೊತೆಯಲ್ಲಿ ಹೆಜ್ಜೆ ಹಾಕುವುದಕ್ಕೆ ಸಾಧ್ಯವಾದರೆ ಆಗ ಈ ಪ್ರಶ್ನೆಗಳ ಜೊತೆ ಸಂವಾದ ಸಾಧ್ಯವಾದೀತು. ಕಲ್ಪನೆಯಲ್ಲಿ ಮೂಡಿದ ಪ್ರಶ್ನೆಗಳ ಜೊತೆಯಲ್ಲಿ ಬದುಕಿದರೆ, ಆ ಪ್ರಶ್ನೆಗಳು ಇರುವಂತೆಯೇ ಅವನ್ನು ಅನುಭವಿಸುವುದಕ್ಕೆ ಸಾಧ್ಯವಾದರೆ ಸತ್ಯಗಳು ಹೊಳೆದಾವು. ಹೀಗೆ ಮಾಡುವಾಗ ನಮ್ಮೊಳಗಿನ ಕಲ್ಪನೆ ಮತ್ತು ದಿಗಿಲು ಎಚ್ಚರಗೊಳ್ಳುತ್ತವೆ. ಉತ್ತರ ಹೇಳಲಾಗದ ಪ್ರಶ್ನೆಗಳನ್ನು ಕೇಳುತ್ತೇವೆ. ಮನಸಿಗೂ ನೋಟಕ್ಕೂ ಮೀರಿದ ಲೋಕವನ್ನು ಕಾಣಲು,ಭಾವಿಸಲು ಸಾಧ್ಯವಾಗಬಹುದು.

ನೆರೂಡ ಮಹಾನ್‌ ಕಲಾವಿದ. ಅವನು ಕೇವಲ ರಾಜಕೀಯ ಕವಿಯಲ್ಲ, ಅಥವಾ ಪ್ರೇಮಗೀತೆಗಳ ಕವಿಯೂ ಅಲ್ಲ. ಬಿನ್ನಹದ  ಕವಿ, ನಿಸರ್ಗದ ಕವಿ ಅನ್ನುವ ಹಣೆಪಟ್ಟಿಗಳೂ ಉಪಯೋಗವಿಲ್ಲ. ʻನಾನು ಯಾರು/ನನ್ನೊಳಗೆ ಎಷ್ಟು ನಾನುಗಳಿವೆ ಅಥವಾ ಎಷ್ಟು ನಾನುಗಳಾಗುತ್ತೇನೆʼ ಎಂದು ನಿಜವಾಗಿ ಕೇಳಿಕೊಳ್ಳುವ ಅರ್ಹತೆ ಇರುವ ಕವಿ ಅವನು. ಅವನ ವ್ಯಕ್ತಿವೈಚಿತ್ರ್ಯ ಮತ್ತು ಕುತೂಹಲ ವಿಸ್ತಾರವನ್ನು ತಿಳಿಯಬಯಸುವವರು ನೆರೂಡನ ಆತ್ಮಕಥೆ ʻನೆನಪುಗಳುʼ ಓದಬಹುದು.

ಯಾವ ಹಳದಿ ಹಕ್ಕಿ / ಗೂಡಿನ ತುಂಬ ನಿಂಬೆಯ ತುಂಬುವುದು? – ಎಂಬ ಪ್ರಶ್ನೆಯಿಂದ ಹಿಡಿದು ನರಕದಲ್ಲಿ ಹಿಟ್ಲರ್‌ ಯಾವ ಕಠಿಣ ಶಿಕ್ಷೆ ಅನುಭವಿಸುತ್ತಾನೆ? ಎಂದು ಕೇಳುವವರೆಗೆ ಈ ಪ್ರಶ್ನೆಗಳ ವ್ಯಾಪ್ತಿ ಇದೆ.

ನೆರೂಡ ಕತ್ತಲನ್ನೂ ಬೆಳಕನ್ನೂ ಬೆಸೆದ ಕವಿ. ಮನುಷ್ಯರಿಗೆ ದೊರೆಯಬಹುದಾದ ಎಲ್ಲ ಬಗೆಯ ಅನುಭವಗಳಿಗೆ ನುಡಿಪ್ರತಿಕ್ರಿಯೆ ತೋರಿರುವ ಕವಿ. ತನ್ನೊಳಗಿನ ವೈರುಧ್ಯಗಳನ್ನು ಬಲ್ಲವು, ಒಪ್ಪಿ ಅಪ್ಪಿದವನು, ಹಾಗೆ ಮಾಡುತ್ತ ತನ್ನ ಕವಿತೆ ಸರಳೀಕರಣದಿಂದ, ಐಡಿಯಾಲಜಿಯ ಮಿತಿಯಿಂದ, ನಾನತ್ವದಿಂದ ಪಾರಾಗುವಂತೆ ನೋಡಿಕೊಂಡವನು.ವಿಸ್ತಾರವಾದ ಬರವಣಿಗೆಯ ಹೆಣಿಗೆಯನ್ನು ಮಾಡಿದವನು. ಅರಿಯುವ ಯಾನ ಮುಂದುವರೆಯುತದೆ ಅನ್ನುವುದನ್ನು ಖಚಿತವಾಗಿ ಹೇಳಿದವನು

ಕಲಿತದ್ದು ಮರೆಯುತ್ತದೆ. ಮರೆಯುವುದರಿಂದಲೇ ಪ್ರಶ್ನೆ ಹುಟ್ಟಿ ಹೊಸ ಕಲಿಕೆ ಶುರುವಾಗುತ್ತದೆ.

ನನ್ನ ಮಗನ ಮಗನ ಮಕ್ಕಳ ಮಕ್ಕಳು / ಈ ಜಗತ್ತನ್ನು ಕಾಣುವರು ಹೇಗೆ?

ಒಳ್ಳೆಯವರಾಗುತ್ತಾರೋ ಕೆಟ್ಟವರಾಗುತ್ತಾರೋ?/ ನೊಣಗಳಾಗುತ್ತಾರೋ ಗೋಧಿತೆನೆಯಾಗುತ್ತಾರೋ?

ಉತ್ತರ ಹೇಳುವುದು ಬೇಕಿಲ್ಲ/ ಪ್ರಶ್ನೆಗಳು ಸಾಯುವುದಿಲ್ಲ.

ನಮಗೆ ಗೊತ್ತಿರುವ ಉತ್ತರ ಬೇರೆಯವರಿಂದಲೂ ಬಂದು ಸಮರ್ಥನೆ ದೊರೆಯಲಿ ಎಂಬ ಆಸೆಯಲ್ಲಿ ಪ್ರಶ್ನೆಗಳು ಮೂಡುವುದೇ ಹೆಚ್ಚು. ಉತ್ತರವನ್ನು ಹುಡುಕುವುದಲ್ಲ, ಧೇನಿಸಲು ಯೋಗ್ಯವಾಗುವಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಬಹಳ ಕಷ್ಟ. ಉತ್ತರ ಹುಡುಕಲು ತೊಡಗದೆ ಪ್ರಶ್ನೆಯನ್ನೇ ಅರ್ಥಮಾಡಿಕೊಳ್ಳಲು ಒತ್ತಾಯಿಸುವಂಥ ೩೧೬ ಪ್ರಶ್ನೆಗಳಲ್ಲಿ ನನ್ನ ಕನ್ನಡಕ್ಕೆ ಹೊಂದುವಂಥ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ. 


ಪ್ರತಿ ಶನಿವಾರ, ಭಾನುವಾರ ‘ನೆರೂಡ ಪ್ರಶ್ನೆಗಳು’ ಅನುವಾದ ಸರಣಿ ಪ್ರಕಟವಾಗಲಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.