ವ್ಯಕ್ತಿತ್ವವನ್ನು ಸುಂದರಗೊಳಿಸಲು ಕೊರತೆಗಳನ್ನು ಮುಚ್ಚಿ ಕೃತಕ ನಡವಳಿಕೆಗಳ ಬಣ್ಣ ಬಳಿಯುವುದಲ್ಲ, ಕೊರತೆಗಳನ್ನು ತಿಕ್ಕಿ ತೆಗೆದು ಸಹಜಗೊಳ್ಳುವುದು. ಶುದ್ಧರಾಗುವುದು, ಆ ಮೂಲಕ ಜಗತ್ತಿನ ಸೌಂದರ್ಯವನ್ನು ಪ್ರತಿಫಲಿಸುವುದು! – ಇದು ರೂಮಿ ಹೇಳಿದ ಈ ಕತೆಯಿಂದ ಕಲಿಯಬಹುದಾದ ಪಾಠ. । ಮೂಲ: ಮಸ್ನವಿ – ಜಲಾಲುದ್ದೀನ್ ರೂಮಿ; ಕನ್ನಡ ನಿರೂಪಣೆ: ಚೇತನಾ ತೀರ್ಥಹಳ್ಳಿ
ಅಂತಾಲ್ಯಾದಲ್ಲಿ ಚೀಣೀ ವರ್ಣಚಿತ್ರಕಾರರಿಗೂ ಅವರ ಸಹವರ್ತಿಗಳಾದ ಗ್ರೀಕ್ ವರ್ಣಚಿತ್ರಕಾರರಿಗೂ ಭಾರೀ ಪೈಪೋಟಿ. ಈ ಪೈಪೋಟಿ ಇಂದು – ನೆನ್ನೆಯದಲ್ಲ, ಬಹಳ ಹಿಂದಿನಿಂದಲೂ ಪಾರಂಪರಿಕವಾಗಿ ನಡೆದು ಬಂದಿರುವಂಥದ್ದು. ಎರಡೂ ಕಡೆಯವರೂ ಯಾರ ಶೈಲಿ ಹೆಚ್ಚು ಸುಂದರವಾಗಿದೆ ಅಥವಾ ಯಾರ ಕಲಾಕೃತಿ ಅದ್ವಿತೀಯವಾಗಿದೆ ಎಂದು ತೀರ್ಪು ಕೊಡಲು ಸಾಮಾನ್ಯರಿಗೆ ಸಾಧ್ಯವಾಗದಷ್ಟು ಅದ್ಭುತ ಕಲಾವಿದರು.
ಈ ಪೈಪೋಟಿ ಎಷ್ಟು ಮುಂದಕ್ಕೆ ಹೋಗಿತ್ತೆಂದರೆ, ರೂಮ್ ಸಾಮ್ರಾಜ್ಯದ ಸುಲ್ತಾನನಿಗೆ ಇವರಿಬ್ಬರ ಮೇಲಾಟ ಬವಳಿಕೆ ಬರಿಸಿತ್ತು. ಕೊನೆಗೊಂದು ದಿನ ಸುಲ್ತಾನ ಎರಡೂ ಕಡೆಯವರ ನಡುವೆ ಸ್ಪರ್ಧೆ ಏರ್ಪಡಿಸಿ ಯಾರು ಗೆಲ್ಲುತ್ತಾರೋ ಅವರೇ ಸರ್ವಶ್ರೇಷ್ಟರೆಂದು ತೀರ್ಪು ಕೊಡಲು ನಿರ್ಧರಿಸಿದ. ಅದಕ್ಕಾಗಿ ಅವನು ಒಂದಕ್ಕೊಂದು ಮುಖಮಾಡಿ ನಿಂತ ಎರಡು ಬಂಗಲೆಗಳನ್ನು ಅವರಿಬ್ಬರಿಗೂ ಕೊಟ್ಟ. ಚೀಣೀ ಚಿತ್ರಕಾರರು ಒಂದರಲ್ಲಿ, ಗ್ರೀಕ್ ಚಿತ್ರಕಾರರು ಒಂದರಲ್ಲಿ ಇದ್ದುಕೊಂಡು, ಆ ಬಂಗಲೆಗಳನ್ನು ಕಲಾಕೃತಿಯಾಗಿ ಪರಿವರ್ತಿಸಬೇಕಿತ್ತು.
ಸ್ಪರ್ಧೆಯ ಅವಧಿ ಶುರುವಾದ ಕೂಡಲೇ ಚೀಣೀ ಕಲಾವಿದರು ಲಗುಬಗೆಯಿಂದ ತಮಗೆ ಬೇಕಾದ ಬಣ್ಣಗಳ ಪಟ್ಟಿ ಮಾಡತೊಡಗಿದರು. ಆದಷ್ಟು ಬೇಗ ಬಣ್ಣಗಳನ್ನು ತರಿಸಿಕೊಂಡು ಕೆಲಸ ಮಾಡಿ ಮುಗಿಸುವ ಆತುರ ಅವರದ್ದು. ಅವರ ತಲೆಯಲ್ಲಾಗಲೇ ಆ ಪುರಾತನ ಬಂಗಲೆಗೆ ಹೊಂದುವ ವಿನ್ಯಾಸ ತಯಾರಾಗಿ ನಿಂತಿತ್ತು. ಇನ್ನು ಚಿತ್ರಗಳನ್ನು ಬಿಡಿಸಿ, ಬಣ್ಣ ತುಂಬಿ. ಅಲ್ಲಲ್ಲಿ ಚಿನ್ನದ ಲೆಪ್ಪ ಹಾಕುವುದಷ್ಟೇ ಬಾಕಿ!
ಗ್ರೀಕ್ ಕಲಾವಿದರಿಗೆ ಈ ಯಾವ ಆತುರವೂ ಇರಲಿಲ್ಲ. ಅವರು ಬಣ್ಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಇಲ್ಲ. ಅವರು ಒಂದಷ್ಟು ಕೆರೆಯುವ, ಕೆತ್ತುವ, ಉಜ್ಜುವ ಪರಿಕರಗಳನ್ನು ತರಿಸಿಕೊಂಡು ತಮ್ಮ ಕೆಲಸ ಶುರು ಮಾಡಿದರು. ಅವರಿಗೆ ಚೀಣೀ ಚಿತ್ರ ಕಲಾವಿದರ ಸಾಮರ್ಥ್ಯದ ಅರಿವಿತ್ತು. ಅವರೇನು ಮಾಡಲು ಹೊರಟಿದ್ದಾರೆಂದೂ ಅಂದಾಜಿತ್ತು. ಆದ್ದರಿಂದ, ತಮ್ಮ ಪಾಡಿಗೆ ತಾವು ತಮಗೆ ಕೊಟ್ಟಿದ್ದ ಪುರಾತನ ಬಂಗಲೆಯ ಗೋಡೆ, ನೆಲಗಳನ್ನು ಉಜ್ಜುಜ್ಜಿ ಸ್ವಚ್ಛ ಮಾಡತೊಡಗಿದರು. ಅದಕ್ಕೆ ಅಂಟಿಕೊಂಡು ಒಣಗಿದ್ದ ಪಾಚಿ, ವರ್ಷಗಟ್ಟಲೆಯಿಂದ ಮೆತ್ತಿದ್ದ ಧೂಳು – ಕಲೆ, ಒರಟಾಗಿದ್ದ ಮೇಲ್ಮೈ ಎಲ್ಲವನ್ನೂ ತಿಕ್ಕಿ ತಿಕ್ಕಿ ತೆಗೆದರು. ನಯಗೊಳಿಸುತ್ತ ಸಾಗಿದರು.
ಚೀಣೀ ಚಿತ್ರ ಕಲಾವಿದರು ಹಳೆಯ ಗೋಡೆಗಳ ಮೇಲಿನ ಕಲೆಯನ್ನು ಹೊಸ ಬಣ್ಣದ ಪದರಗಳಿಂದ ಮುಚ್ಚುತ್ತಾ ಹೋದರೆ, ಗ್ರೀಕ್ ಚಿತ್ರ ಕಲಾವಿದರು ತಮ್ಮ ಬಂಗಲೆಯ ಗೋಡೆ ಮೇಲೆ ಪದರಗಟ್ಟಿದ್ದನ್ನು ತಿಕ್ಕಿ ತೆಗೆಯುತ್ತಾ ಹೋದರು.
ತಿಂಗಳು ಕಳೆಯಿತು. ಜನ ಕಾತರದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಸುಲ್ತಾನನೂ ತೀರ್ಪು ನೀಡೀ ಈ ವ್ಯಾಜ್ಯ ಬಗೆಹರಿಸಲು ಕಾದಿದ್ದ. ಕೊನೆಗೂ ಆ ಸಿನ ಬಂತು. ಎರಡೂ ಬಂಗಲೆಗಳಿಗೆ ಹೋಂದಿಕೊಂಡಂತೆ ಇದ್ದ ವಿಶಾಲ ಬಯಲಿನಲ್ಲಿ ಜನ ಸಂದಣಿ ನೆರೆದಿತ್ತು. ವಾದ್ಯಗೋಷ್ಟಿ, ಹಾಡು, ನೃತ್ಯ ಎಲ್ಲವೂ ನಡೆಯಿತು. ಸುಲ್ತಾನ ಬಂದ. ಬಂದವನೇ ಮೊದಲು ಚೀಣೀ ಚಿತ್ರಕಲಾವಿದರ ಬಂಗಲೆಗೆ ಹೋದ.
ಚೀಣೀಯರು ಆ ಪುರಾತನ ಬಂಗಲೆಯಲ್ಲೊಂದು ಮಾಯಾಲೋಕವನ್ನೇ ಸೃಷ್ಟಿಸಿದ್ದರು! ಬಣ್ಣಗಳ ಸಂಯೋಜನೆ, ಸೂಕ್ಷ್ಮ ಕುಸುರಿ, ಚಿತ್ರಗಳ ನಾಜೂಕು – ಪ್ರತಿಯೊಂದೂ ಮನಸೂರೆಗೊಳ್ಳುವಂತಿತ್ತು. ಸುಲ್ತಾನ “ಇದು ಅದೇ ಬಂಗಲೆಯೋ, ಕಿನ್ನರ ಲೋಕದ ಅರಮನೆಯೋ?” ಎಂದು ಅಚ್ಚರಿಯಿಂದ ಉದ್ಗರಿಸಿದ.
ಚೀಣೀ ಕಲಾವಿದರು ತಾವು ಗೆದ್ದೇಬಿಟ್ಟೆವೆಂದು ಸಂಭ್ರಮಿಸಿದರು.
ಸುಲ್ತಾನ ಎದುರುಗಡೆ ಇದ್ದ ಗ್ರೀಕರ ಬಂಗಲೆ ಮುಂದೆ ಬಂದು ನಿಂತ. ಆ ಬಂಗಲೆಯನ್ನು ಮಖಮಲ್ ಬಟ್ಟೆಯಿಂದ ಸಂಪೂರ್ಣ ಮುಚ್ಚಲಾಗಿತ್ತು. ಸುಲ್ತಾನ ಅಲ್ಲಿಗೆ ಬಂದು ನಿಂತ ಮರುಕ್ಷಣವೇ ಆ ಹೊದಿಕೆಯನ್ನು ತೆಗೆಯಲಾಯಿತು.
ನೋಡುವುದೇನು! ಪುರಾತನ ಬಂಗಲೆ ಹೊಚ್ಚಹೊಸ ನಿರ್ಮಿತಿಯಂತೆ ಫಳಫಳ ಹೊಳೆಯುತ್ತಿದೆ!! ನಯವಾಗಿ, ಶುಭ್ರವಾಗಿ, ಹೊಚ್ಚಹೊಸತಾಗಿ ಕಾಣುತ್ತಿದೆ. ಆ ಬಂಗಲೆಯ ಗೋಡೆಗಳು ಗ್ರೀಕ್ ಚಿತ್ರಕಲಾವಿದ ಪರಿಶ್ರಮದ ದಾಖಲೆಯಾಗಿ ತನ್ನೆಲ್ಲ ಕೊಳೆ ಕಳೆದುಕೊಂಡು ನಿಂತಿದೆ. ಅದರ ಮೇಲ್ಮೈ ಮೇಲೆ ಎದುರಿದ್ದ ಚೀಣೀ ಬಂಗಲೆಯ ಮೇಲಿನ ಕಲಾಕೃತಿ ಕನ್ನಡಿಯ ಮೇಲೋ ಅನ್ನುವಂತೆ ಪ್ರತಿಫಲಿಸುತ್ತಿದೆ!
ಗ್ರೀಕ್ ಕಲಾವಿದರು ಚಿತ್ರವನ್ನೇ ಬಿಡಿಸದೆ, ಬಣ್ಣವನ್ನೇ ಮುಟ್ಟದೆ ತಮಗೆ ಕೊಟ್ಟಿದ್ದ ಬಂಗಲೆ ಮೇಲೆ ಚೀಣೀಯರ ಕಲಾಕೃತಿ ಪ್ರತಿಫಲನಗೊಳ್ಳುವಂತೆ ಸಜ್ಜುಗೊಳಿಸಿದ್ದರು! ಅದರ ಶುಭ್ರ ಗೋಡೆಗಳ ಮೇಲೆ ಚೀಣೀ ಕಲಾಕೃತಿಯ ಪ್ರತಿಫಲನ ಮೂಲಕ್ಕಿಂತ ಹೆಚ್ಚು ಸುಂದರವಾಗಿ ಮತ್ತು ಅದ್ಭುತವಾಗಿ ತೋರುತ್ತಿತ್ತು. ಚೀಣೀಯರು ತಮ್ಮ ಕೌಶಲ್ಯ, ಶ್ರಮದಿಂದ ನಿರ್ಮಿಸಿದ್ದನ್ನು ಗ್ರೀಕರು ತಮ್ಮ ಬುದ್ಧಿವಂತಿಕೆಯಿಂದ ಗೆದ್ದಿದ್ದರು!
ಸುಲ್ತಾನ ಆ ದಿನ ಯಾರನ್ನು ವಿಜೇತರನ್ನಾಗಿ ಘೋಷಿಸಿದನೆಂದು ಪ್ರತ್ಯೇಕ ಹೇಳಬೇಕಿಲ್ಲ ತಾನೆ?

