ಪದ್ಮ ಸೂತ್ರದ ವಿವಿಧ ಅಧ್ಯಾಯಗಳಲ್ಲಿರುವ 6 ದೃಷ್ಟಾಂತಗಳು ಜನರ ಆಸಕ್ತಿಯನ್ನು ಲೌಕಿಕದಿಂದ ಹೊರತಂದು ಮೋಕ್ಷಮಾರ್ಗದಲ್ಲಿ ನಡೆಸುವ ವಿವಿಧ ಹಂತಗಳನ್ನು ಹಾಗೂ ಸೂಕ್ಷ್ಮ ಶರೀರದ 6 ಚಕ್ರ ಮತ್ತು ಅವುಗಳ ಕಾರ್ಯಗತಿಯನ್ನು ಪ್ರತಿನಿಧಿಸುತ್ತವೆ. ಇಲ್ಲಿರುವ ದೃಷ್ಟಾಂತ ಕತೆ ಈ ಯಾದಿಯಲ್ಲಿ ಮೊದಲನೆಯದಾಗಿದ್ದು, ಲೋಟಸ್ ಸೂತ್ರದ (ಸದ್ಧರ್ಮ ಪುಂಡರೀಕ ಸೂತ್ರ) 3ನೇ ಅಧ್ಯಾಯದಲ್ಲಿ ಕಂಡುಬರುತ್ತದೆ; ಸಂಗ್ರಹ ಮತ್ತು ಕನ್ನಡ ನಿರೂಪಣೆ: ಚೇತನಾ ತೀರ್ಥಹಳ್ಳಿ.
ಒಮ್ಮೆ ಜ್ಞಾನಿಯೂ ಶ್ರೀಮಂತನೂ ಆದ ವ್ಯಕ್ತಿಯೊಬ್ಬನ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿತು. ಆ ವೇಳೆ ಅವನ ಮಕ್ಕಳು ಹಜಾರದಲ್ಲಿ ಆಟಿಕೆಗಳೊಂದಿಗೆ ಆಡುತ್ತ ಕುಳಿತಿದ್ದರು. ಹಿತ್ತಲಲ್ಲಿ ಹೊತ್ತಿ ಹಬ್ಬತೊಡಗಿದ ಬೆಂಕಿ ಒಂದೊಂದಾಗೇ ಎಲ್ಲವನ್ನೂ ಸುಡುತ್ತಾ ಹಜಾರಕ್ಕೆ ಧಾವಿಸುತ್ತಿತ್ತು.
ಶ್ರೀಮಂತ ಒಳಗೆ ಹೋಗಲಾಗದಂತೆ ಬಾಗಿಲಿನ ದಾರಂದಗಳಿಗೂ ಬೆಂಕಿ ಹೊತ್ತಿಕೊಂಡಿತ್ತು. ಸಹಾಯಕ್ಕೆ ಯಾರೂ ಇರಲಿಲ್ಲ. ಶ್ರೀಮಂತ ಜೋರಾಗಿ “ಮಕ್ಕಳೇ, ಬೆಂಕಿ ನಿಮ್ಮನ್ನು ನುಂಗಿ ಹಾಕುತ್ತದೆ. ಅದರ ಬೇಗೆಯಲ್ಲಿ ನೀವು ಬೆಂದುಹೋಗುತ್ತೀರಿ, ಹೊರಗೆ ಬನ್ನಿ” ಎಂದು ಕೂಗತೊಡಗಿದ. ಮಕ್ಕಳಿಗೆ ಅವನ ಕೂಗು ಕೇಳಿಸಿದರೂ ಕುಳಿತಲ್ಲಿಂದ ಕದಲಿಲ್ಲ, ಓಗೊಳ್ಳಲೂ ಇಲ್ಲ. ಸುಡುತ್ತಿರುವ ಮನೆಯ ಕಾವು ಹಜಾರದಲ್ಲಿದ್ದವರ ಮೈಗೆ ಸೋಕುತ್ತಿದ್ದರೂ ಮಕ್ಕಳು ಆಟಿಕೆಯ ಮೋಹಕ್ಕೆ ಬಿದ್ದು ಅದರಲ್ಲೇ ಮುಳುಗಿಹೋಗಿದ್ದರು.
ಕೊನೆಗೆ ಶ್ರೀಮಂತ ಅಪ್ಪ, “ಮಕ್ಕಳೇ ಆ ಆಟಿಕೆಗಳನ್ನು ಬಿಡಿ. ಇಲ್ಲಿ ಮೇಕೆ ಬಂಡಿ, ಜಿಂಕೆ ಬಂಡಿ ಹಾಗೂ ಎತ್ತಿನ ಬಂಡಿಗಳಿವೆ. ಈ ಆಟಿಕೆಗಳು ಅವಕ್ಕಿಂತ ಚೆನ್ನಾಗಿವೆ, ಬೇಗ ಬನ್ನಿ” ಎಂದು ಆಮಿಷ ಒಡ್ಡಿದ. ಹೊಸ ಬಗೆಯ ಆಟಿಕೆಗಳ ಹೆಸರು ಕಿವಿಗೆ ಬೀಳುತ್ತಲೇ ಮಕ್ಕಳು ಕೈಲಿದ್ದವನ್ನು ಅಲ್ಲೇ ಬಿಟ್ಟು ಸಿಕ್ಕ ಸಂದುಗೊಂದಿಯಲ್ಲಿ ನುಗ್ಗಿ ಕಷ್ಟಪಟ್ಟು ಹೊರಗೆ ಬಂದರು. ಅಪ್ಪ, ಆ ಮಕ್ಕಳಿಗೆ ಅತ್ಯುತ್ತಮವಾದ ಬಿಳಿ ಎತ್ತಿನ ಬಂಡಿಯನ್ನೇ ಉಡುಗೊರೆಯಾಗಿ ಕೊಟ್ಟ.
ಹೀಗೆ ಆ ಮಕ್ಕಳು ಬೆಂಕಿಯ ತಾಪದಿಂದ ಉಳಿದುಕೊಂಡರು, ಬಹುಮಾನವನ್ನೂ ಪಡೆದರು.
ಒಳನೋಟ:
ಈ ದೃಷ್ಟಾಂತದಲ್ಲಿ ಹೇಳಲಾಗಿರುವ ಶ್ರೀಮಂತ ತಂದೆಯನ್ನು ಬುದ್ಧನೆಂದು ತಿಳಿಯಬೇಕು, ಮತ್ತು ಮಕ್ಕಳನ್ನು ಅವನ ಶಿಷ್ಯರೆಂದು. ತಾಪತ್ರಯಗಳೇ ಮನೆಗೆ ಬಿದ್ದ ಬೆಂಕಿ. ಅಪ್ಪ, ಅಂದರೆ ಬುದ್ಧ ಹೇಳಿದ ಮೇಕೆ ಬಂಡಿ – ನಾಲ್ಕು ಉದಾತ್ತ ಸತ್ಯಗಳು (ದುಃಖ, ತೃಷ್ಣಾ, ನಿರೋಧ ಮತ್ತು ಮಾರ್ಗ).
ಜಿಂಕೆ ಬಂಡಿ – ಪ್ರತ್ಯೇಕ ಬುದ್ಧರನ್ನು ಜಾಗೃತಗೊಳಿಸುವ ಹನ್ನೆರಡು ಕಾರಣಗಳ ((ಮೌಢ್ಯ, ಕಾರ್ಯ, ಪ್ರಜ್ಞಾ, ರೂಪ – ಆಕಾರ, ಆರು ಇಂದ್ರಿಯ ಕ್ಷೇತ್ರಗಳು, ಸಂಪರ್ಕ, ಸಂವೇದನೆ, ಬಯಕೆ, ಬಾಂಧವ್ಯ, ಅಸ್ತಿತ್ವ, ಹುಟ್ಟು ಮತ್ತು ಸಾವು) ಕೊಂಡಿ.
ಹಾಗೂ ಎತ್ತಿನ ಬಂಡಿ – ಬೋಧಿಸತ್ವರ ಆರು ಪರಿಮಿತಗಳು (ಔದಾರ್ಯ, ಶೀಲ, ಕ್ಷಾಂತಿ, ವೀರ್ಯ, ಧ್ಯಾನ ಮತ್ತು ಪ್ರಜ್ಞಾ).
ಅಂತಿಮವಾಗಿ, ಬುದ್ಧ ಅವರಿಗೆ ನೀಡುವ (ತಂದೆ ತನ್ನ ಮಕ್ಕಳಿಗೆ ನೀಡಿದ) ಬಿಳಿ ಎತ್ತಿನ ಬಂಡಿ – ಸ್ವತಃ ಬುದ್ಧನ ವಾಹನ. ಇದು ಇದು ಸರ್ವೋಚ್ಚ ಪರಿಪೂರ್ಣ ಜ್ಞಾನೋದಯದ ನಿಯಮದ ದ್ಯೋತಕ.
ಬುದ್ಧ ಆತ್ಯಂತಿಕ ಆನಂದ ನೀಡುವ ಆಟಿಕೆಗಳನ್ನು ಮುಂದಿಟ್ಟು ಜನರನ್ನು ಕ್ಷುಲ್ಲಕ – ದುಃಖದಾಯಕ ಬದುಕಿನ ಆಟದಿಂದ ಹೊರಗೆ ತರುತ್ತಾನೆ ಅನ್ನುವುದು ಈ ದೃಷ್ಟಾಂತ ಸಾರುವ ನೀತಿ.

