ಬೌದ್ಧ ಸಂತ ತಿಚ್ ನಾತ್ ಹಾನ್ ಪ್ರಕಾರಒಂದು ಆಳವಾದ ಆಪ್ತ ಕೇಳುವಿಕೆ ವ್ಯಕ್ತಿಯೊಬ್ಬನ ಎಲ್ಲ ಸಂಕಟಗಳನ್ನು ಪರಿಹರಿಸಬಲ್ಲದು… । ಚಿದಂಬರ ನರೇಂದ್ರ
ಆಳವಾದ ಕೇಳುವಿಕೆ ಎಂಥ ಕೇಳುವಿಕೆ ಎಂದರೆ ಅದು ಇನ್ನೊಬ್ಬ ವ್ಯಕ್ತಿಯೊಳಗೆ ಬಹುಕಾಲದಿಂದ ಸಿಕ್ಕಿಹಾಕಿಕೊಂಡಿರುವ ಎಷ್ಟೋ ಬಿಕ್ಕಟ್ಟುಗಳಿಂದ ಅವನನ್ನು ಮುಕ್ತಗೊಳಿಸಬಲ್ಲದು. ಇದನ್ನು ಕಾರುಣ್ಯಮಯ ಕೇಳುವಿಕೆ (compassionate listening) ಎಂದು ಗುರುತಿಸಬಹುದು.
ನೀವು ಕೇಳಬೇಕಾಗಿರುವುದು ಕೇವಲ ಒಂದೇ ಉದ್ದೇಶದಿಂದ, ಆ ವ್ಯಕ್ತಿ ತನ್ನ ಹೃದಯವನ್ನು ಖಾಲೀ ಮಾಡಕೊಳ್ಳಬೇಕು, ಬೇರೆ ಯಾವ ಉದ್ದೇಶವೂ ನಿಮ್ಮ ಕೇಳುವಿಕೆಗೆ ಇರಬಾರದು. ಆ ವ್ಯಕ್ತಿ ಸಂಪೂರ್ಣ ತಪ್ಪು ವಿಷಯಗಳನ್ನು ಹೇಳಬಹುದು, ಕಹಿ ವಿಷಯಗಳನ್ನು ಹೇಳಬಹುದು, ಅನೈತಿಕ ವಿಷಯಗಳನ್ನು ಹೇಳಬಹುದು, ಕೆಡುಕಿನ ವಿಷಯಗಳನ್ನು ಹೇಳಬಹುದು, ನೀವು ಯಾವುದನ್ನೂ ನ್ಯಾಯ ನಿರ್ಣಯ ಮಾಡುವ ಹಾಗಿಲ್ಲ. ಈ ಎಲ್ಲವನ್ನೂ ಕಾರುಣ್ಯದಿಂದ ಕೇಳುವುದು ನಿಮಗೆ ಸಾಧ್ಯವಾಗಬೇಕು.
ಏಕೆಂದರೆ ಇಂಥ ಕೇಳುವಿಕೆ ಆ ವ್ಯಕ್ತಿ, ಕಡಿಮೆ ಯಾತನೆ ಪಡಲು ಸಹಾಯ ಮಾಡುತ್ತದೆ. ನಿಮಗೇನಾದರೂ ಅವರಿಗೆ ಸಲಹೆ ನೀಡುವುದಿದ್ದರೆ, ಅವರನ್ನು ಕರೆಕ್ಟ್ ಮಾಡುವುದಿದ್ದರೆ ಈಗ ಬೇಡ, ಇನ್ನೊಂದು ಸಮಯಕ್ಕಾಗಿ ಕಾಯಿರಿ. ಈಗ ಅವರು ಏನು ಹೇಳುತ್ತಿದ್ದರೂ ಅದನ್ನು ಅತ್ಯಂತ ಆರ್ತವಾಗಿ, ಆಪ್ತವಾಗಿ ಅವರ ಹೃದಯದೊಳಗಿನ ಸಂಕಟಗಳನ್ನು ಖಾಲೀ ಮಾಡುವ ಒಂದೇ ಉದ್ದೇಶದಿಂದ ತನ್ಮಯರಾಗಿ ಕೇಳಿ.
ಈಗ ಮಾತ್ರ ಅವರ ಮಾತಿಗೆ ಅಡ್ಡಿ ಮಾಡಬೇಡಿ. ಅವರೊಂದಿಗೆ ವಾದಕ್ಕೆ ಇಳಿಯಬೇಡಿ. ನೀವು ಹಾಗೇನಾದರೂ ಮಾಡಿದಿರಾದರೆ ಅವರಿಗೆ ದೊರೆತಿರುವ ದಿವ್ಯ ಅವಕಾಶದಿಂದ ಅವರನ್ನು ವಂಚಿತರನ್ನಾಗಿ ಮಾಡುವಿರಿ. ನೀವು ಕೇವಲ ಪೂರ್ಣ ಅತಃಕರಣದಿಂದ ಅವರು ಹೇಳುತ್ತಿರುವುದನ್ನು ಕೇಳಿಸಿಕೊಳ್ಳಿ, ಕಡಿಮೆ ಯಾತನೆ ಪಡಲು ಅವರಿಗೆ ಸಹಾಯ ಮಾಡಿ.
ಒಂದು ಗಂಟೆಯ ಇಂಥ ಪರಿಪೂರ್ಣ ಕೇಳುವಿಕೆ ಆ ವ್ಯಕ್ತಿಯಲ್ಲಿ ಬದಲಾವಣೆಯನ್ನು ತರುವುದು ಅವರನ್ನು ಅವರ ಯಾತನೆಗಳಿಂದ ಮುಕ್ತಮಾಡುವುದು .
ಒಂದು ದಿನ ಸುಝೂಕಿ ರೋಶಿ ಅವರ ಶಿಷ್ಯೆ, ಅವರ ಹತ್ತಿರ ಬಂದು ತನ್ನ ಮನಸ್ಸಿನ ತಳಮಳವನ್ನು ನಿವೇದಿಸಿಕೊಂಡಳು.
“ ಮಾಸ್ಟರ್, ಯಾಕೋ ಗೊತ್ತಿಲ್ಲ ನಿಮ್ಮ ಮೇಲೆ ನನಗೆ ವಿಪರೀತ ಪ್ರೇಮ ಉಕ್ಕಿ ಬರುತ್ತಿದೆ. ಕೂತಲ್ಲಿ, ನಿಂತಲ್ಲಿ ಸದಾ ನಿಮ್ಮ ಯೋಚನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ, ತುಂಬ ಗೊಂದಲವಾಗುತ್ತಿದೆ. “
ಮಾಸ್ಟರ್ ರೋಶಿ ಉತ್ತರಿಸಿದರು, “ ಹುಡುಗಿ, ಇದು ತಪ್ಪು ಒಪ್ಪಿನ ಪ್ರಶ್ನೆ ಅಲ್ಲ. ನಿನ್ನ ಗುರುವಿನ ಬಗ್ಗೆ ಯಾವ ಭಾವನೆ ಹೊಂದಲೂ ನೀನು ಸ್ವತಂತ್ರಳು. ಭಾವನೆಗಳನ್ನು ಹತ್ತಿಕ್ಕಬೇಡ, ಮುಕ್ತವಾಗಿ ವ್ಯಕ್ತಪಡಿಸು “
ಹುಡುಗಿ ಆಶ್ಚರ್ಯಚಕಿತಳಾಗಿ ಮಾಸ್ಟರ್ ರೋಶಿಯನ್ನೇ ನೋಡತೊಡಗಿದಳು “
ಮಾಸ್ಟರ್ ರೋಶಿ ಅವಳ ತಲೆ ಮೇಲೆ ಕೈಯಿಟ್ಟು ಹೇಳಿದರು.
“ ಹೆದರಬೇಡ ಹುಡುಗಿ, ನನ್ನ ಹತ್ತಿರ ಇಬ್ಬರಿಗೂ ಸಾಕಾಗುವಷ್ಟು ಶಿಸ್ತು ಇದೆ. “
Source: Discourse by Thích Nhất Hạnh

