ಪ್ರೇಮಿಗಳಿಗೆ ಸ್ವಂತದ ಪ್ರತ್ಯೇಕ ಗುರುತು ಇರುವುದಿಲ್ಲ. ಪ್ರೇಮಿಗೆ ತನ್ನ ಪ್ರೇಮಿಯ ಗುರುತು, ಪ್ರೇಮಿಯ ಅಸ್ತಿತ್ವವೇ ತನ್ನ ಅಸ್ತಿತ್ವ, ತಾನೂ ಪ್ರೇಮಿಯೂ ಒಂದೇ! – ಇದು ರೂಮಿ ಹೇಳಿದ ಕತೆಯ ಸಾರಾಂಶ । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಒಂದೂರಿನಲ್ಲಿ ಒಬ್ಬ ಅದಮ್ಯ ಪ್ರೇಮಿ ಇದ್ದ. ಅವನೊಮ್ಮೆ ತನ್ನ ಪ್ರಿಯತಮೆಯ ಮನೆಗೆ ಬಂದು ಬಾಗಿಲು ಬಡಿದ.
“ಯಾರದು?” ಪ್ರಶ್ನೆ ಬಂದಿತು.
“ನಾನು” ಅಂದ ಆ ಪ್ರೇಮಿ.
“ನಡಿ ಇಲ್ಲಿಂದ. ನಿನ್ನಂಥವರಿಗೆ ಈ ಮನೆಯಲ್ಲಿ ಜಾಗವಿಲ್ಲ” ಗದ್ಗದಿತ ಧ್ವನಿಯ ಉತ್ತರ ಬಂತು.
ನಾನು ಅಂದ ಕೂಡಲೇ ಪ್ರಿಯತಮೆ ಬಾಗಿಲು ತೆರೆಯುತ್ತಾಳೆಂಬ ಭರವಸೆಯಲ್ಲಿದ್ದ ಪ್ರೇಮಿಗೆ ನಿರಾಸೆಯಾಯ್ತು. ಪ್ರಿಯತಮೆಯ ದನಿಯಲ್ಲಿದ್ದ ದುಃಖ ಅವನನ್ನು ಅಪಾರವಾಗಿ ಕಲಕಿಬಿಟ್ಟಿತು. ಅವಳ ಉತ್ತರದಲ್ಲಿ ನೀನಿನ್ನೂ ಸಂಪೂರ್ಣ ಪ್ರೇಮಿಯಾಗಿಲ್ಲವೆಂಬ ಸಂದೇಶವಿದ್ದುದನ್ನು ಅವನು ಅರಿತುಕೊಂಡ.
ಒಂದಷ್ಟು ಕಾಲ ಕಳೆಯಿತು. ಆ ಅದಮ್ಯ ಪ್ರೇಮಿಗೆ ಹೋದಲ್ಲಿ – ಬಂದಲ್ಲೆಲ್ಲ ಪ್ರಿಯತಮೆಯ ನೆನಪೇ ಕಾಡಹತ್ತಿತು. ವಿರಹದ ಬೆಂಕಿಯಲ್ಲಿ ಸಂಪೂರ್ಣ ಬೆಂದು ಬಸವಳಿದು ಹೋಗಿದ್ದ.
ಕೊನೆಗೂ ಒಂದು ದಿನ ಧೈರ್ಯ ಮಾಡಿ ಮತ್ತೆ ಪ್ರಿಯತಮೆಯ ಮನೆಗೆ ಬಂದ. ಬಾಗಿಲು ಬಡಿಯುತ್ತಿದ್ದಂತೆ ಮತ್ತದೇ ಪ್ರಶ್ನೆ ಎದುರಾಯ್ತು, “ಯಾರದು?”
“ನೀನು” ಅದಮ್ಯ ಪ್ರೇಮಿ ಉತ್ತರಿಸಿದ, “ಬಾಗಿಲಿಂದೀಚೆ ನಿಂತಿರೋದು ನಿನ್ನ ಅಸ್ತಿತ್ವದಲ್ಲಿ ಕರಗಿ ಇಲ್ಲವಾದವನು”.
ಪ್ರಿಯತಮೆ ಓಡೋಡಿ ಬಂದು ಬಾಗಿಲು ತೆರೆದಳು. ಪ್ರೇಮಿಯನ್ನು ಬಿಗಿಯಾಗಿ ಅಪ್ಪಿಕೊಂಡು ಸ್ವಾಗತಿಸಿದಳು.

