ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 6ನೇ ಕಂತು ಇಲ್ಲಿದೆ…
5ನೇ ಕಂತು ಇಲ್ಲಿ ನೋಡಿ: https://aralimara.com/2024/06/09/neruda-4/
ನಿಂಬೆಯೊಳಗಿರುವ ಎಳೆ ಬಿಸಿಲಲ್ಲೂ
ಸಾವು ಇದೆ ಅಂದರೆ ನಂಬಲ್ಲವಾ?
ಚೈತ್ರದ ಚುಂಬನ ಕೂಡ
ಸಾವು ತರಬಹುದು, ಅಲ್ಲವಾ?
ನಿನ್ನ ವಿಧಿಯ ಬಾವುಟ ಹಿಡಿದು ದುಃಖ
ನಿನಗಿಂತ ಮುಂದೆ ಹೆಜ್ಜೆ ಹಾಕುತಿದೆ ಅಂದರೆ ನಂಬುತ್ತೀಯಾ?
ಎಲುಬಾಗಿ ಉಳಿದ ನಿನ್ನ ಹಿರೀಕರೆಲ್ಲ
ನಿನ್ನ ತಲೆಬುರುಡೆಯೊಳಗಿದ್ದಾರೆ ಅಂದರೆ ನಂಬುತ್ತೀಯಾ?
**
ಕಡಲ ನಗುವಿನಲ್ಲಿ ಅಪಾಯ ಕಾಣದೇ?
ಸೇಬು ಗಿಡ ಹೂವು ಬಿಡುವುದು
ಹಣ್ಣಾಗಿ ಸಾಯುವುದಕ್ಕಷ್ಟೆ, ಅಲ್ಲವೇ?
ಬಾಟಲಿಗಟ್ಟಲೆ ಮರೆವಿನ ಮಧ್ಯೆ
ನಗುನಗುತ್ತಾ ಅಳುತ್ತೀಯಾ ಅಲ್ಲವಾ?
**

ಸದಾ ಕಾಯುತ್ತಲೇ ಇರುವವರು
ಯಾರಿಗೂ ಕಾಯದವರಿಗಿಂತ ಹೆಚ್ಚು ಸಂಕಟಪಡುತ್ತಾರಾ?
ಕಾಮನ ಬಿಲ್ಲು ಮುಗಿಯುವುದೆಲ್ಲಿ,
ನಮ್ಮ ಆತ್ಮದಲ್ಲೋ ದಿಗಂತದಲ್ಲೋ?
ಕಣ್ಣಿಗೆ ಕಾಣದ ನಕ್ಷತ್ರ
ಆತ್ಮಹತ್ಯೆ ಮಾಡಿಕೊಂಡವರ ಸ್ವರ್ಗವಿರಬಹುದೇ?
**
ಚಳಿಗಾಲ ಬಂದಾಗ
ಮರದ ಎಲೆಗಳೆಲ್ಲ ಬೇರಿನ ಜೊತೆ ಬಚ್ಚಿಟ್ಟುಕೊಳ್ಳುತ್ತವಾ?
ಆಕಾಶದ ಜೊತೆ ಮಾತಾಡುವ ಹಾಗೆ
ಭೂಮಿಯಿಂದ ಏನನ್ನು ಕಲಿಯಿತೋ ಮರ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.
(Illustrations: Chetana Thirthahalli)

