ಯೂಸಲೆಸ್ ಆಗಿರುವುದು ಎಂದರೇನು?” ಹಾಗೆಂದರೆ, ಏನಾದರೂ ಆಗುವ ಬಯಕೆಯಿಂದ ಹೊರತಾಗುವುದು, ಏನಾದರೂ ವಿಶೇಷ ಆಗುವ ಬಯಕೆಯಿಂದ, ಏನನ್ನಾದರೂ ಪಡೆಯಬಯಸುವ ಐಡಿಯಾದಿಂದ ಮೈಂಡ್ ನ ಹೊರತಾಗಿಸಿರೊಳ್ಳುವುದು! ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಒಂದಾನೊಂದು ಕಾಲದಲ್ಲಿ
‘ತಾವೋ’ ವನ್ನು ಅರೆದು ಕುಡಿದವರು
ಕಣ್ಣಿಗೆ ಕಾಣಿಸಿಯೂ ಕಾಣಿಸದಷ್ಟು
ಕೈಗೆ ಸಿಕ್ಕೂ ಸಿಗದಷ್ಟು
ಸೂಕ್ಷ್ಮರೂ, ನಿಗೂಢರೂ,
ಹರಿತ ಜಗಳಗಂಟರೂ ಆಗಿದ್ದರು.
ಅವರ ಆಳ, ಅಗಲಗಳನ್ನು
ಬಲ್ಲವರಿಲ್ಲವಾದ್ದರಿಂದ
ಅವರು ಹೇಗಿದ್ದಿರಬಹುದು ಎಂದು
ಊಹೆ ಮಾತ್ರ ಮಾಡಬಲ್ಲೆ.
ಚಳಿಗಾಲದ ನದಿಯಲ್ಲಿ ನಡೆಯುವವರಂತೆ
ಹೆಜ್ಜೆ ಮೇಲೆ ಹೆಜ್ಜೆ ಇಡುವವರು,
ಪಕ್ಕದ ಮನೆಯ ಕಿಟಕಿಯ ಬಗ್ಗೆ
ಮೈಯೆಲ್ಲ ಕಣ್ಣಾದವರು,
ಮನೆಗೆ ಬಂದ ದೂರದ ನೆಂಟರಂತೆ
ವಿನಮ್ರರು ಮತ್ತು ಭಿಡೇ ಸ್ವಭಾವದವರು,
ಕರಗುವ ಮಂಜಿನಂತೆ ಜಾರಿಕೊಳ್ಳುವವರು,
ಕೆತ್ತಲು ಸಿದ್ಧವಾಗಿರುವ ಮರದ ತುಂಡಿನಂತೆ
ಮುಗ್ಧರು, ಸುಲಭ ಸಾಧ್ಯರು,
ಆಳ ಕಣಿವೆಗಳಂತೆ
ಖಾಲಿ ತೆರೆದುಕೊಳ್ಳುವವರು,
ಬಗ್ಗಡದ ನೀರಿನಂತೆ
ಕೃದ್ಧರು, ದಂಗೆ ಎದ್ದವರು.
ನಿಂತು ನಿಂತು ತಿಳಿಯಾಗುವ
ಕಲೆಯ ತಿಳಿದವರು.
ಚಲನೆಗೊಂದು ಅರ್ಥ ಬರುವತನಕ
ಜಪ್ಪಯ್ಯ ಅಂದರೂ ಏಳದವರು
ತುಂಬಿಕೊಳ್ಳಲೊಲ್ಲದ ಉಡಾಳರು,
ಖಾಲಿತನ ಸೃಷ್ಟಿಸುವ ಅವಕಾಶಗಳ
ಮಹತ್ವ ಅರಿತ ಮಹಾತ್ಮರು.
~ ಲಾವೋತ್ಸೇ
ಒಂದು ಮರದ ಕುರಿತಾದ ಹಳೆಯ ತಾವೋಯಿಸ್ಟ್ ಕಥೆ. ಒಂದು ಅಂಕುಡೊಂಕಾದ ಹಳೆಯ ಮರ ಇತ್ತು. ಅದರ ಟೊಂಗೆಗಳೆಲ್ಲವೂ ಡೊಂಕಾಗಿದ್ದವು, ಗಂಟು ಗಂಟಾಗಿದ್ದವು. ಒಮ್ಮೆ ಮರದ ಹತ್ತಿರ ಹಾಯ್ದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಜುವಾಂಗ್ ತ್ಸೇ ಗೆ ಹೇಳಿದ, “ಇದು ಅನುಪಯುಕ್ತ ಮರ, ಇದರ ಟೊಂಗೆಗಳೆಲ್ಲವೂ ಡೊಂಕಾಗಿವೆ, ಈ ಮರದಿಂದ ಯಾವ ಪ್ರಯೋಜನವೂ ಇಲ್ಲ”.
ಆ ವ್ಯಕ್ತಿಗೆ ಜುವಾಂಗ್ ತ್ಸೇ ಉತ್ತರಿಸಿದ.
“ಬೆಟ್ಟದ ತುದಿಯಲ್ಲಿರುವ ಮರ ತನಗೆ ತಾನೇ ವೈರಿ….. ಚಕ್ಕೆ, ದಾಲ್ಚಿನ್ನಿ (cinnamon) ಮರ ಆಹಾರ ಪದಾರ್ಥಗಳಲ್ಲಿ ಬಳಸಲು ಎಷ್ಟು ಯೋಗ್ಯ : ಹಾಗಾಗಿ ಆ ಮರವನ್ನು ಕತ್ತರಿಸಿಬಿಡುತ್ತಾರೆ. ಶ್ರೀಗಂಧ, ಸಾಗುವಾನಿ ಮರ ಎಷ್ಟು ಲಾಭದಾಯಕ : ಅವನ್ನು ಕೂಡ ಲಾಭಕ್ಕಾಗಿ ಕತ್ತರಿಸಲಾಗುತ್ತದೆ. ಪ್ರತಿ ಮನುಷ್ಯನಿಗೂ ಉಪಯುಕ್ತವಾಗಿರುವುದು ಎಷ್ಟು ಉಪಯುಕ್ತ ಎನ್ನುವುದು ಗೊತ್ತು. ಆದರೆ, ಯಾರಿಗೂ ಅನುಪಯುಕ್ತವಾಗಿರುವುದು ಎಷ್ಟು ಉಪಯುಕ್ತ ಎನ್ನುವುದು ಗೊತ್ತಿಲ್ಲ”.
ಆ ಮರದ ಅನುಪಯುಕ್ತತೆಯೇ ಆ ಮರವನ್ನು ರಕ್ಷಣೆ ಮಾಡುತ್ತಿದೆ. ಆ ಮರ ಯಾರಿಗೂ ಯಾವುದಕ್ಕೂ ಉಪಯೋಗವಿಲ್ಲ. ಹಾಗಾಗಿ ಯಾರೂ ಆ ಮರದ ತಂಟೆಗೆ ಹೋಗುವುದಿಲ್ಲ. ಆದ್ದರಿಂದಲೇ ಆ ಮರ ಪ್ರಕೃತಿಯ ಇಚ್ಛೆಯಂತೆ ತನ್ನ ಪೂರ್ಣ ಬದುಕನ್ನ ಬದುಕುತ್ತದೆ.
ಯೂಸಲೆಸ್ ಆಗಿರುವುದು ಎಷ್ಟು ಯೂಸಫುಲ್ ಎನ್ನುವುದು ಯಾರಿಗೂ ಗೊತ್ತಿಲ್ಲ. “ಯೂಸಲೆಸ್ ಆಗಿರುವುದು ಎಂದರೇನು?” ಹಾಗೆಂದರೆ, ಏನಾದರೂ ಆಗುವ ಬಯಕೆಯಿಂದ ಹೊರತಾಗುವುದು, ಏನಾದರೂ ವಿಶೇಷ ಆಗುವ ಬಯಕೆಯಿಂದ, ಏನನ್ನಾದರೂ ಪಡೆಯಬಯಸುವ ಐಡಿಯಾದಿಂದ ಮೈಂಡ್ ನ ಹೊರತಾಗಿಸಿರೊಳ್ಳುವುದು. ಯೂಸಲೆಸ್ ಆಗುವುದು ಎಂದರೆ, ತನ್ನ ನೈಸರ್ಗಿಕ ಬದುಕನ್ನ ಬದುಕುವುದು, ತನ್ನ ಪ್ರಕೃತಿಯನ್ನ ಸರಳವಾಗಿ, ಸುಲಭವಾಗಿ ಅಭಿವ್ಯಕ್ತಿಸುವುದು.

