ನಾವು ಪ್ರತಿದಿನ ದೇವರ ಸೃಷ್ಟಿಯಿಂದ ದೂರವಾಗುತ್ತ ಇನ್ನಷ್ಟು ಮತ್ತಷ್ಟು ಬಡವರಾಗುತ್ತಲೇ ಇರುತ್ತೇವೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಒಬ್ಬ ಶ್ರೀಮಂತ ಅಪ್ಪ ತನ್ನ ಮಗನಿಗೆ ಬಡತನದ ಬದುಕನ್ನ ಪರಿಚಯಿಸಲು, ಅವನು ಒಬ್ಬ ಬಡ ರೈತನ ಮನೆಯಲ್ಲಿ ಸ್ವಲ್ಪ ದಿನ ಇದ್ದು ಬರುವಂತೆ ವ್ಯವಸ್ಥೆ ಮಾಡಿದ.
ಮೂರು ದಿನ ಮೂರು ರಾತ್ರಿ ಬಡ ರೈತನ ಮನೆಯಲ್ಲಿ ಇದ್ದ ಮಗ ನಾಲ್ಕನೆಯ ದಿನ ತನ್ನ ಮನೆಗೆ ವಾಪಸ್ಸು ಹೊರಟ. ಅವನು ಇನ್ನೂ ತನ್ನ ಕಾರಿನಲ್ಲಿ ಇರುವಾಗಲೇ ಅವನ ಅಪ್ಪ ಫೋನ್ ಮಾಡಿ ಬಡತನದ ಬದುಕಿನ ಬಗ್ಗೆ ವಿಚಾರಿಸಿದ.
ಮಗ ಅಪ್ಪನಿಗೆ ತಾನು ರೈತನ ಮನೆಯಲ್ಲಿ ಇದ್ದ ಅನುಭವ ವಿವರಿಸತೊಡಗಿದ.
- ನಮ್ಮ ಮನೆಯಲ್ಲಿ ಒಂದೇ ನಾಯಿ ಇದೆ ಅವರು ನಾಲ್ಕು ನಾಯಿ ಸಾಕಿದ್ದಾರೆ.
- ನಮ್ಮ ಮನೆಯಲ್ಲಿ ಗಾರ್ಡನ್ ಗೆ ಹತ್ತಿಕೊಂಡಂತೆ ಒಂದು ವಿಶಾಲ ಟ್ರೀಟೆಡ್ ಸ್ವಿಮ್ಮಿಂಗ್ ಪೂಲ್ ಇದೆ. ಆದರೆ ಅವರ ಹತ್ತಿರ ಒಂದು ದೊಡ್ಡ ನದಿಯೇ ಇದೆ, ಅದರ ನೀರು ಕ್ರಿಸ್ಟಲ್ ಕ್ಲಿಯರ್. ಆ ನದಿಯಲ್ಲಿ ಎಷ್ಟೋ ಬಗೆಯ ಮೀನುಗಳಿವೆ.
- ನಮ್ಮ ಮನೆಯ ಗಾರ್ಡನ್ ನಲ್ಲಿ ಇಲೆಕ್ಟ್ರಿಕ್ ಬಲ್ಬ್ ಗಳಿವೆ ಆದರೆ ಅವರ ಮನೆಯ ತೋಟದಲ್ಲಿ ನಕ್ಷತ್ರಗಳಿವೆ, ಚಂದ್ರನಿದ್ದಾನೆ.
- ನಮ್ಮ ಮನೆಯ ಮುಂದಿನ ಗಾರ್ಡನ್ ನ ಗೋಡೆ ಸುತ್ತುವರೆದಿದ್ದರೆ ಅವರ ತೋಟಕ್ಕೆ ಬೇಲಿಯೇ ಇದೆ ಕಣ್ಣಿಗೆ ಕಾಣುವಷ್ಟು ದೂರ ಹಬ್ಬಿಕೊಂಡಿದೆ.
- ನಾವು ನಮ್ಮ ಆಹಾರವನ್ನ ಅಂಗಡಿಯಿಂದ ಕೊಂಡು ತರುತ್ತೇವೆ ಆದರೆ ಅವರು ತಮ್ಮ ಆಹಾರ ತಾವೇ ಬೆಳೆಯುತ್ತಾರೆ ತಾವೇ ಅಡುಗೆ ಮಾಡಿಕೊಳ್ಳುತ್ತಾರೆ.
- ನಾವು CD ಯಲ್ಲಿ ಸಂಗೀತ ಕೇಳಿದರೆ ಅವರ ಮನೆಯ ಸುತ್ತ ಹಕ್ಕಿಗಳ ಇಂಚರದ ಸಿಂಫನಿ. ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುವ ಜನರ ಹಾಡುಗಳನ್ನ ಕೇಳುತ್ತಲೇ ಇರುತ್ತಾರೆ.
- ನಾವು ಮೈಕ್ರೊವೆವ್ ಲ್ಲಿ ಮಾಡಿದ ಅಡುಗೆಯ ವಾಸನೆ ಒಂದು ಥರ ಆದರೆ ಅವರು ಕಟ್ಟಿಗೆ ಒಲೆಯ ಮೇಲೆ ಮಾಡಿದ ಅಡುಗೆಯ ಪರಿಮಳ ಅದ್ಭುತ.
- ನಮ್ಮ ರಕ್ಷಣೆಗಾಗಿ ನಮ್ಮ ಮನೆಯ ಸುತ್ತ ಗೋಡೆಗಳಿವೆ, ಅಲಾರಾಂಗಳಿವೆ ಆದರೆ ಅವರ ಮನೆಯ ಬಾಗಿಲುಗಳು ಸದಾ ತೆರೆದೇ ಇರುತ್ತದೆ. ಅವರ ಗೆಳೆಯರು, ನೆರೆಹೊರೆಯವರೇ ಅವರ ಕಾವಲಿಗೆ ನಿಂತಿರುತ್ತಾರೆ.
- ನಾವು ಫೋನು, ಕಂಪ್ಯೂಟರ್, ಟೆಲಿವಿಜನ್ ಗೆ ಅಂಟಿಕೊಂಡು ಬದುಕುತ್ತಿದ್ದರೆ ಅವರು, ನದಿ, ಆಕಾಶ, ಸೂರ್ಯ, ಚಂದ್ರ, ಹೊಲ ಗದ್ದೆ ಪೈರು, ಹೂವುಗಳಿಗೆ ಅಂಟಿಕೊಂಡಿದ್ದಾರೆ.
“ಥ್ಯಾಂಕ್ಯೂ ಅಪ್ಪ ನನಗೆ ನಮ್ಮ ಬಡತನವನ್ನು ಪರಿಚಯ ಮಾಡಿಕೊಟ್ಟದ್ದಕ್ಕೆ…” ಅಂದ ಮಗನ ಮಾತು ಕೇಳಿ ಅಪ್ಪನಿಗೆ ಬಹಳ ಸಂತೋಷವಾಯಿತು.

