ನೆರೂಡನ Book of Questions, ಕನ್ನಡದಲ್ಲಿ… #8

ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 8ನೇ ಕಂತು ಇಲ್ಲಿದೆ…

ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/06/16/neruda-6/


ಡಿಸೆಂಬರಿಗೂ ಜನವರಿಗೂ ಮಧ್ಯೆ ಬರುತ್ತಲ್ಲಾ
ಆ ತಿಂಗಳ ಹೆಸರೇನು?

ವರ್ಷಪೂರ್ತಿ ಇರುವಂಥ
ಒಂದು ತಿಂಗಳು ಯಾಕಿಲ್ಲ?

ಅರಳದ ಮುತ್ತುಗಳ ನಿನಗಿತ್ತು
ಚೈತ್ರ ಮೋಸ ಮಾಡಿಲ್ಲವಾ ಯಾವತ್ತೂ?

ಯಾವ ಕಾರಣಕ್ಕೆ ಅಥವಾ ಅನ್ಯಾಯಕ್ಕೆ
ಖುಷಿಯ ಕಣ್ಣೀರು ಸುರಿಸತ್ತೆ ಮಳೆ?


ಎಲೆಯುದುರುವ ಕಾಲದಲ್ಲಿ
ಹಳದಿಯ ಸ್ಫೋಟ ಕೇಳಿಸುತ್ತದಾ?

**
ಸಮುದ್ರವನ್ನು ಮತ್ತೊಮ್ಮೆ ಕಂಡಾಗ ನಾನು
ಸಮುದ್ರ ನನ್ನ ಕಂಡಿರುತ್ತೋ ಇಲ್ಲವೋ?

ನಾನು ಕೇಳುವ ಪ್ರಶ್ನೆಗಳನ್ನೇ
ಅಲೆಗಳು ಮತ್ತ ನನ್ನನ್ನೇ ಕೇಳುತ್ತವಲ್ಲಾ, ಯಾಕೆ?

ವ್ಯರ್ಥ ಭಾವಾವೇಶದಿಂದ ಅಲೆಗಳು
ಮತ್ತೆ ಮತ್ತೆ ಬಂಡೆಗಳನಪ್ಪಳಿಸುವುದು ಯಾಕೆ?

ಅದೇ ಘೋಷಣೆಯನ್ನು ಮತ್ತೆ ಮತ್ತೆ
ಮರಳಿಗೆ ಮೊರೆಯುತ್ತಾ ಅಲೆಗಳಿಗೆ ಬೇಸರವೇ ಇಲ್ಲವೇ?

**

ಈ ಕಡಲಿಗೆ ಬುದ್ಧಿ ಹೇಳಿ
ಒಪ್ಪಿಸೋರು ಯಾರು?

ನೀಲಿ, ಕಡುಕಂದು, ಹಸಿರು
ಹೆಬ್ಬಂಡೆಗಳ ನಾಶ ಮಾಡಿ ಅದಕ್ಕೆ ಸಿಗೋದು ಏನು?

ಬಂಡೆಯ ಮೈ ಮೇಲೆ ಅಷ್ಟೊಂದು ಸುಕ್ಕು
ಅಷ್ಟೊಂದು ರಂಧ್ರ ಯಾಕೆ?

ನಾನು ಬಂದದ್ದು ಕಡಲಿನಿಂದ,
ಕಡಲು ನನ್ನಿಂದ ಕತ್ತರಿಸಿಕೊಂಡಾಗ ಎಲ್ಲಿ ಹೋಗಲಿ?


ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್‌ ಆಫ್‌ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.

(Illustrations: Chetana Thirthahalli)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.