ಪಾಬ್ಲೋ ನೆರೂಡನ ‘ದ ಬುಕ್ ಆಫ್ ಕ್ವೆಶ್ಚನ್’ ಕೃತಿಯ ಆಯ್ದ ಪ್ರಶ್ನಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ ಓ.ಎಲ್.ನಾಗಭೂಷಣ ಸ್ವಾಮಿ. ಈ ಸರಣಿಯ 9ನೇ ಕಂತು ಇಲ್ಲಿದೆ…
ನಗರ-ಕಂಪಿಸುವ ಹಾಸುಗೆಗಳ ಮಹಾ ಸಾಗರ. ಅಲ್ಲವಾ?
ವಾಯು ಮಂಡಲದ ಸಮುದ್ರಖಂಡದಲ್ಲಿ
ತಾಳೆಯ ಮರಗಳ ದ್ವೀಪ ಇರಲ್ಲವಾ?
ಕೊನೆಯಿರದ ಕಡಲನ್ನು ನೋಡುತ್ತಾ
ನನ್ನೊಳಗೆ ಉದಾಸೀನ ಹುಟ್ಟುವುದು ಯಾಕೆ?
**

ಅದರ ಎಂಟೂ ಕೈ ಕಬ್ಬಿಣದವಾ?
ಕಣ್ಣಲ್ಲಿ ಸತ್ತ ಬೆಂಕಿ ಇತ್ತಾ?
ತ್ರಿವರ್ಣದ ತಿಮಿಂಗಿಲ
ನನ್ನ ದಾರಿಯನ್ನು ಕತ್ತರಿಸಿದ್ದು ಯಾಕೆ?
**
ಬೆನ್ನ ಮೇಲೆ ಜೋಡಿ ಡುಬ್ಬ ಇರುವ ಒಂಟೆ
ಅದರೊಳಗೆ ಬೆಳದಿಂಗಳು ಬಚ್ಚಿಟ್ಟುಕೊಂಡಿರುತ್ತವಾ?
ಬಿಡದೆ ಬಲವಂತ ಮಾಡಿದರೆ
ಮರುಭೂಮಿಯಲ್ಲಿ ಬೆಳದಿಂಗಳು ಬಿತ್ತನೆ ಮಾಡುತ್ತವಾ?
ಭೂಮಿಗೆ ಕೊಟ್ಟಿರುವ ಸಾಲ ಅಲ್ಲವಾ ಕಡಲು?
ಹುಣ್ಣಿಮೆಯಲ್ಲಿ ಉಬ್ಬರಿಸುವ ಅಲೆಗಳ ಬಡ್ಡಿಯೊಡನೆ ಚಂದ್ರನಿಗೆ ವಾಪಸು ಮಾಡಬೇಕಲ್ಲವಾ?
ಗ್ರಹಾಂತರ ಚುಂಬನವನ್ನು ಕಾನೂನು ಪ್ರಕಾರ ನಿಷೇಧಿಸಬೇಕಲ್ಲವೇ/
**
ಬತ್ತಲೆ ಕಡಲು ಬತ್ತಲೆ ಆಕಾಶ
ಎರಡರಲ್ಲಿ ಒಂದು ನನ್ನ ಪಾಲಿನ ಆಯ್ಕೆಯೋ ಇವತ್ತು?
ಇಷ್ಟು ನಸುಕಿಗೇ ಆಕಾಶ
ಮಂಜಿನ ಉಡುಪು ತೊಟ್ಟಿದೆ ಯಾಕೆ?
ನನ್ನೂರು ಇಸ್ಲಾನೆಗ್ರಾದಲ್ಲಿ ನನ್ನ ಪಾಲಿಗೆ ಕಾದಿರುವುದೇನು—
ಹಸಿರು ಸತ್ಯವೋ ಮರ್ಯಾದೆಯ ಸಜ್ಜನಿಕೆಯೋ?

ಪಾಬ್ಲೋ ನೆರೂಡನ ವಿಶಿಷ್ಟ ಸಂಕಲನ ‘ದಿ ಬುಕ್ ಆಫ್ ಕ್ವೆಶ್ಚನ್ಸ್’ ಕುರಿತು “ಇಲ್ಲಿ ʻಪ್ರಶ್ನೆʼಗಳನ್ನು ಕೇಳುತಿರುವ ಕವಿ ಅಸಹಾಯಕ ವ್ಯಕ್ತಿ. ಈ ರಚನೆಗಳಲ್ಲಿ ಮಗುವಿನ ಬೆರಗು, ಹಿರೀಕನ ಅನುಭವ ಎರಡೂ ಬೆರೆತಿವೆ. ಮಕ್ಕಳು ಕೇಳುವ ವೈಚಾರಿಕವಲ್ಲದ ಪ್ರಶ್ನೆಗಳಿಗೆ ಹಿರಿಯರು ವೈಚಾರಿಕ ಬುದ್ಧಿಯನ್ನು ಬಳಸಿಯೇ ಉತ್ತರ ಹೇಳುತ್ತಾರೆ. ಬದುಕಿನ ವೈಚಾರಿಕ ಪರಿಶೀಲನೆಯಿಂದ ಬರುವ ಕ್ಲಾರಿಟಿ ನೆರೂಡನಿಗೆ ಬೇಕು ಅನಿಸಿದರೂ ವೈಚಾರಿಕ ಮನಸಿನ ಹಂಗಿಗೆ ಒಳಗಾಗಲು ಒಲ್ಲೆ ಅನ್ನುತ್ತಾನೆ. ಇಲ್ಲಿನ ಯಾವ ಪ್ರಶ್ನೆಗೂ ವೈಚಾರಿಕ ಉತ್ತರವಿಲ್ಲ. ಈ ಪ್ರಶ್ನೆಗಳನ್ನು ಕುರಿತು ಮಾಡಲು ತೊಡಗಿದರೆ ನಮ್ಮ ನಮ್ಮ ಮುಖಗಳೇ ಕಾಣುತ್ತವೆ” ಅನ್ನುತ್ತಾರೆ ಬರಹಗಾರರೂ ಭಾಷಾಂತರಕಾರರೂ ಆದ ಓ. ಎಲ್. ನಾಗಭೂಷಣ ಸ್ವಾಮಿ. ಇವರು ಈ ಕೃತಿಯ ಹಲವು ಪ್ರಶ್ನ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದು, ಅವುಗಳನ್ನು ‘ಅರಳಿಮರ’ ವಾರಾಂತ್ಯ ಸರಣಿಯಾಗಿ ಪ್ರಕಟಿಸುತ್ತಿದೆ.
(Illustrations: Chetana Thirthahalli)

