ಎಡವಟ್ಟರ ದಾರಿ! : ಅಧ್ಯಾತ್ಮ ಡೈರಿ

ನಿಯಮ ಮೀರುವುದರಲ್ಲಿ ನಮಗೆ ಎಲ್ಲಿಲ್ಲದ ಉತ್ಸಾಹ. “ರೂಲ್ಸ್ ಇರೋದೇ ಬ್ರೇಕ್ ಮಾಡೋದಕ್ಕೆ” ಅನ್ನುವರ್ಥದ ಟಿ ಶರ್ಟುಗಳು, ಕ್ಯಾಪ್`ಗಳು ಕಡಿಮೆ ಏನೂ ಮಾರಾಟವಾಗೋದಿಲ್ಲ! ನಿಯಮ ಮೀರುವ ಕ್ರೇಜ್ ಮತ್ತು ಟ್ರೆಂಡ್ ಅಷ್ಟು ಬಲವಾಗಿದೆ. ಆದರೆ, ಮೀರುವ ಮುನ್ನ ಅರಿಯುವ ಉತ್ಸಾಹ ಎಷ್ಟು ಜನಕ್ಕಿದೆ? ‘ಅರಿವು’, ನಮಗೆ ಮೀರುವ ಅಧಿಕೃತತೆ ಒದಗಿಸುವ ಸಾಧನ ಅನ್ನೋದು ಎಷ್ಟು ಜನಕ್ಕೆ ತಿಳಿದಿದೆ? । ಚೇತನಾ ತೀರ್ಥಹಳ್ಳಿ

“ಊರಿಗೇ ಒಂದು ದಾರಿಯಾದ್ರೆ ಎಡವಟ್ಟರಿಗೇ ಒಂದು ದಾರಿ!” ಹೀಗೆ ಬೈಸಿಕೊಳ್ಳುವವರಲ್ಲಿ ನೀವೂ ಒಬ್ಬರಾಗಿದ್ದರೆ ಖುಷಿಪಡಿ. ನಿಮ್ಮಲ್ಲಿ ಹೊಸತೇನೋ, ವಿಭಿನ್ನವಾದುದೇನೋ ಮಾಡುವ, ಕೊನೆಪಕ್ಷ ಆಲೋಚಿಸುವ ಗುಣವಿದೆ. ಲೋಕರೂಢಿಗೆ ವಿರುದ್ಧವಾದುದನ್ನು ನೀವು ಆಲೋಚಿಸುತ್ತೀರಿ. ಹಳಬರು ಕಂಡುಕೊಂಡು ಬರೆದಿಟ್ಟು ಹೋದುದಕ್ಕಿಂದ ಬೇರೆಯಾದ, ನಿಮ್ಮದೇ ಆಲೋಚನೆಯನ್ನು ಹೊಂದಿರುತ್ತೀರಿ. ಅಥವಾ ಅವರು ಹೇಳಿದ್ದನ್ನೇ ನೀವು ನಿಮ್ಮದೇ ಬಗೆಯಲ್ಲಿ ಕಂಡುಕೊಂಡು ಅನಂತರ ನಂಬುವ ಜನರಾಗಿದ್ದೀರಿ.

ನಮ್ಮಲ್ಲಿ ರೂಢಿಗತ ಪರಂಪರೆಯನ್ನು ಒಪ್ಪುವುದು, ಅದರಂತೆ ನಡೆದುಕೊಳ್ಳುವುದು, ಸಾಮಾಜಿಕ ಕಟ್ಟುಪಾಡಿನಂತೆ ನಡೆಯುವುದನ್ನೇ ಆದರ್ಶವೆಂಬಂತೆ ಚಿತ್ರಿಸಲಾಗಿದೆ. ಅದನ್ನೇ ವಿನಯವಂತಿಕೆ, ಶಿಸ್ತು ಎಂದೆಲ್ಲ ಕರೆಯಲಾಗುತ್ತದೆ. ಯಾವುದೇ ವ್ಯಕ್ತಿಯ ‘ತನ್ನತನ’ವನ್ನು ಕಸಿಯುವ ಸಮರೂಪ ಸಂಹಿತೆಗಳನ್ನು ರಚಿಸಿ ಹೇರಲಾಗುತ್ತದೆ. ಅವನ್ನು ‘ಸಾಮಾಜಿಕ ನಡವಳಿಕೆ’ಗಳು ಎಂದು ಕರೆಯಲಾಗುತ್ತದೆ. ಏನೋ ಯೋಚಿಸುತ್ತಾ ರಸ್ತೆಯಲ್ಲಿ ಸಾಗುತ್ತಿರುವ ವ್ಯಕ್ತಿಯೊಬ್ಬ/ಳು ಇದ್ದಕ್ಕಿದ್ದಂತೆ ಖುಷಿಯಾಗಿ ಹಾಡಿಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದರೆ ಆ ವ್ಯಕ್ತಿಯನ್ನು ಹುಚ್ಚರ ಹಾಗೆ ನೋಡಲಾಗುತ್ತದೆ. ಅಥವಾ ದುಃಖಡಿಸಿ ಬಿಕ್ಕುವಂತಿಲ್ಲ, ದುರ್ಬಲ ಮನಸ್ಸಿನವರು ಅನ್ನುವ ಮೊಹರು ಒತ್ತಲಾಗುತ್ತದೆ. ಮದುವೆಯಾಗದೇ ಜೊತೆಯಲ್ಲಿ ಇರುವಂತಿಲ್ಲ (ಕಾನೂನು ಸಮ್ಮತಿಯಿದೆ, ನಮ್ಮ ಸಮಾಜ ಸಾಮಾನ್ಯವಾಗಿ ಇದನ್ನು ಅಂಗೀಕರಿಸುವುದಿಲ್ಲ), ಮಕ್ಕಳನ್ನು ಹೆರುವಂತಿಲ್ಲ; ಸಮಾಜ ಬಯಸುವ ಶಿಸ್ತು, ಅಚ್ಚುಕಟ್ಟುತನ, ವ್ಯವಸ್ಥೆ ಇವೆಲ್ಲವನ್ನೂ ನಾವು ನಮ್ಮ ಮೇಲೆ ಹೇರಿಕೊಳ್ಳಬೇಕಾಗಿದೆ. ಅದು ಸೂಚಿಸುವ ನಿಯಮಗಳಿಗೆ ಒಳಗಾಗಲೇ ಬೇಕಾಗಿದೆ. ಮದುವೆ ಇರಬಹುದು, ಮಕ್ಕಳಿರಬಹುದು, ಶಿಕ್ಷಣ, ಉದ್ಯೋಗ ಯಾವುದೇ ಇರಬಹುದು. ಎಲ್ಲಕ್ಕೂ ಒಂದು ವ್ಯವಸ್ಥೆಯನ್ನು ಸೂಚಿಸಲಾಗಿದೆ. ಈ ವ್ಯವಸ್ಥೆಗಳು ಮನುಷ್ಯರ ಸ್ವಭಾವತಃ ಮುಕ್ತಾತ್ಮಕ್ಕೆ ತೊಡಿಸಿರುವ ಸಂಕೋಲೆಗಳಲ್ಲದೆ ಮತ್ತೇನೂ ಅಲ್ಲ.

ಹಾಗಾದರೆ ಲೋಕರೂಢಿಗೆ ಕಟ್ಟುಬೀಳುವುದು ಬೇಡವೇ? ಸಮಾಜ ವ್ಯವಸ್ಥಿತವಾಗಿರಬೇಕೆಂದರೆ ಇಂಥಾ ಶಿಸ್ತಿನ, ವಿನಯದ ಅಗತ್ಯ ಇಲ್ಲವೆ?

ಖಂಡಿತಾ ಇದೆ. ಇಷ್ಟಕ್ಕೂ ಈ ಲೋಕರೂಢಿಯನ್ನು ಮೀರುವುದೂ ಅಷ್ಟು ಸುಲಭವೇನಲ್ಲ. ಹಾಗೆ ಮೀರುವವರು ಒಂದೋ ತಿಳಿವನ್ನು ಎದೆಯಾಳಕ್ಕಿಳಿಸಿಕೊಂಡ ಸಾಧಕರಾಗಿರಬೇಕು, ಅಥವಾ ತಿಳಿವೆಂದರೆ ಇಷ್ಟೇ ಮತ್ತೇನಲ್ಲ ಅನ್ನುವ ಹಗುರದಲ್ಲಿ ಹಾಸ್ಯ ಚಟಾಕಿ ಹಾರಿಸಿಕೊಂಡು ಓಡಾಡುವ ಸಾಮಾನ್ಯ ಮನುಷ್ಯರ ವೇಷದಲ್ಲಿರುವ ಸಂತರಾಗಿರಬೇಕು. ಅಂಥವರು ರಸ್ತೆಯಲ್ಲಿ ಸಾಗುವಾಗ ಇದ್ದಕ್ಕಿದ್ದಂತೆ ‘”ಅಲಕ್ ನಿರಂಜನ್” ಅನ್ನುತ್ತಾ ತಾಳ ಕುಟ್ಟಿ ಹಾಡಲುತೊಡಗಿದರೆ; ಅಥವಾ ತಾಳ ತಂಬೂರಿ ಹಿಡಿದು ನಡುರಸ್ತೆಯಲ್ಲೇ ಹರಿ ಹರಿ ಅನ್ನುತ್ತಾ ಕುಣಿಯತೊಡಗಿದರೆ, ನಕ್ಕರೆ, ಅತ್ತರೆ ಅವರನ್ನು ಯಾರೂ ಹುಚ್ಚರೆನ್ನುವುದಿಲ್ಲ. ನಮ್ಮ ಇತಿಹಾಸದುದ್ದಕ್ಕೂ ಕಂಡುಬರುವ ಅವಧೂತರನ್ನು, ದರ್ವೇಶಿಗಳನ್ನು, ಸೂಫಿಗಳನ್ನು, ಬಾವುಲರನ್ನು ಯಾರಾದರೂ ಹುಚ್ಚರು ಅಂತ ಕರೆಯಲು ಸಾಧ್ಯವೇ!?

ಇದರ ಅರ್ಥ ಇಷ್ಟೇ, ಲೋಕರೂಢಿಯ ಮೀರುವಿಕೆ, ಅರಿವಿನ ಮೂಲಕವೇ ನಡೆಯಬೇಕು. ಆ ಅರಿವು ಎಂಥದ್ದು? ಎಲ್ಲವೂ ಒಂದೇ, ಯಾವುದೂ ಹೆಚ್ಚಲ್ಲ ಕಡಿಮೆಯಲ್ಲ. ಉಸಿರಿದ್ದಷ್ಟು ದಿನ ಬದುಕು – ಅನ್ನುವಂಥದ್ದು. ನಮ್ಮೆಲ್ಲರಿಗೂ ಈ ಸಾಲುಗಳು ಬಾಯಿಪಾಠವೇ. ನಮ್ಮ ಪಾಲಿಗೆ ಇದು ಕಾಮನ್ ಸೆನ್ಸ್`ಗಿಂತ ಹೆಚ್ಚೇನಲ್ಲ. ಇದು ಅತ್ಯಂತ ಸಾಮಾನ್ಯವಾದ ಜ್ಞಾನವಷ್ಟೇ. ಆದರೆ, ನಮಗೆ ತಿಳಿಯದೆ ಇರುವ ವಿಷಯವೇನೆಂದರೆ, ಈ ಸಾಲುಗಳು ನಮ್ಮ ಅರಿವಲ್ಲ. ನಮ್ಮ ಜ್ಞಾನವಲ್ಲ. ಇವು ನಮಗಿರುವ ಮಾಹಿತಿ ಅಷ್ಟೇ. ನೀತಿಪುಸ್ತಕಗಳ ಮೂಲಕ, ಹಿರಿಯರ ಮಾತಿನ ಮೂಲಕ, ಅಲ್ಲೋ ಇಲ್ಲೋ ಓದಿ – ಕೇಳಿ ನೆನಪಿಟ್ಟುಕೊಂಡ, ವಿಜ್ಞಾನ ಪುಸ್ತಕದಲ್ಲಿ ಓದಿ ಬಾಯಿಪಾಠ ಮಾಡಿದ ಸಾಲುಗಳಷ್ಟೇ ಇವು. ಈ ಮಾಹಿತಿ ನಮ್ಮ ಆಚರಣೆಯ ಮೇಲೆ ಪ್ರಭಾವ ಬೀರಿದಾಗ, ನಾವು ನಿಜಕ್ಕೂ ತರತಮ ತೋರದೆ, ನಿಜಕ್ಕೂ ಉಸಿರಿನ ಜೊತೆ ಜೀವನ ಮುಗಿಯುತ್ತದೆ ಅನ್ನುವ ಅರಿವಿನಿಂದ ಇರುವಷ್ಟು ದಿನವನ್ನು ಯಾವುದೇ ಸ್ವಾರ್ಥಲೋಭಮೋಹಗಳಿಲ್ಲದೆ ಆನಂದದಿಂದ ಕಳೆಯತೊಡಗಿದರೆ; ಆಗ ಇದು, ಈ ಮಾಹಿತಿ, ಜ್ಞಾನವಾಗಿ ಹೊಮ್ಮುತ್ತದೆ. ಆತ್ಮ ಮೂಲತಃ ಮುಕ್ತ. ಸಮಾಜದ ವ್ಯವಸ್ಥೆ ಅಥವಾ ನಿಯಮಗಳು ಅವಕ್ಕೆ ತೊಡಿಸಿದ ಸಂಕೋಲೆಗಳು ನಿಜವೇ ಹೌದು. ಆದರೆ ಆತ್ಮ ಮೂಲತಃ ಮುಕ್ತ, ಅದಕ್ಕೆ ನಾಮರೂಪಾದಿ ಗುರುತಿಲ್ಲ ಅನ್ನುವ ಅರಿವು ಮೂಡಿದಾಗ ಮಾತ್ರ ಆತ್ಮಕ್ಕೆ ಸಾಮಾಜಿಕ ವ್ಯವಸ್ಥೆ / ನಿಯಮಗಳು ಹೊರೆ ಅಥವಾ ಬಂಧನದ ಸಂಕೋಲೆಗಳೇ ಹೊರತು; ಹೆಸರು ಸ್ಥಾನಮಾನ ಜಾತಿಧರ್ಮಗಳ ಗುರುತಲ್ಲಿ ತಮ್ಮನ್ನು ತಾವು ಕಟ್ಟಿಹಾಕಿಕೊಂಡಿರುವ ವ್ಯಕ್ತಿಗಳಿಗಲ್ಲ! ಆದ್ದರಿಂದ, ಎಲ್ಲಿಯವರೆಗೆ ನಾವು ಇವುಗಳಿಂದ ಕಟ್ಟಿಹಾಕಿಕೊಂಡಿದ್ದೀವೋ ಅಲ್ಲಿಯವರೆಗೆ ನಮಗೆ ಅವನ್ನು ಹೊರೆ ಅನ್ನುವ ಅಧಿಕಾರವೂ ಇರುವುದಿಲ್ಲ.

ಕೃಷ್ಣ ಚೈತನ್ಯ, ಮೀರಾ, ದಾಸರು ಇವರೆಲ್ಲ ರೂಢಿಗತ ನಿಯಮ ಮೀರಿದ್ದು, ಕಂಡಲ್ಲಿ ಗೆಜ್ಜೆ ಕಟ್ಟಿ ಕುಣಿದಿದ್ದು ಇದೇ ಅರಿವಿನಿಂದ. ಅಕ್ಕ, ಲಲ್ಲಾ ಬೆತ್ತಲಾಗಿದ್ದೂ ಇದೇ ಅರಿವಿನಿಂದ. ರಾಮಕೃಷ್ಣ ಪರಮಹಂಸ, ಕಬೀರ, ಷರೀಫರಾದಿಯಾಗಿ ನಮ್ಮ ಸಂತಪರಂಪರೆಯಲ್ಲಿ ಆಗಿಹೋದ ಅದೆಷ್ಟೋ ಎಷ್ಟೋ ಸಂತರು ನಿಂತನಿಂತಲ್ಲೇ ಅಳುತ್ತಿದ್ದುದೂ ನಗುತ್ತಿದ್ದುದೂ ಇದೇ ಅರಿವಿನಿಂದಲೇ. ಆದ್ದರಿಂದ, ‘ಅರಿವು’, ನಮಗೆ ಮೀರುವ ಅಧಿಕೃತತೆ ಒದಗಿಸುವ ಸಾಧನ.

ಈ ಮೀರುವಿಕೆಯನ್ನು ಎರಡು ಜಾಗತಿಕ ಐಕಾನಿಕ್ ಚಿತ್ರಗಳು ಬಹಳ ಸೊಗಸಾಗಿ ಸೂಚಿಸುತ್ತವೆ. ಈ ಚಿತ್ರಗಳಲ್ಲಿರುವ ಇಬ್ಬರೂ ‘ಎಡವಟ್ಟ’ರೇ. ಊರಿಗೊಂದು ದಾರಿಯಾದರೆ ಅಕ್ಷರಶಃ ಇವರದ್ದೇ ಒಂದು ದಾರಿ. ಆ ಇಬ್ಬರಲ್ಲಿ ಒಬ್ಬ ಲಾವೋ ಜಿ, ಮತ್ತೊಬ್ಬ ಮುಲ್ಲಾ ನಸ್ರುದ್ದೀನ್!

ಲಾವೋ ಜಿ ಎತ್ತಿನ ಮೇಲೆ ಹಿಂದುಮುಂದಾಗಿ ಕುಳಿತು ಪ್ರಯಾಣಿಸುವ ಚಿತ್ರ ಬಹಳ ಜನಪ್ರಿಯ. ಈತನ ಈ ಭಂಗಿ ಈತನ ಆವರೆಗಿದ್ದ ರೂಢಿಗೆ ವಿರುದ್ಧವಾಗಿ ಅಥವಾ ಅದಕ್ಕೆ ಬೆನ್ನುಹಾಕಿ ಸಾಗುವ ಪ್ರತಿಭಟನೆಗೆ ರೂಪಕ. ಅದು ದಾವ್ ದೆ ಚಿಂಗ್`ನಲ್ಲಿ ಸ್ಪಷ್ಟವಾಗಿ ಎದ್ದುಕಾಣುತ್ತದೆ. ರೂಢಿಗತ ನಂಬಿಕೆಯನ್ನೆಲ್ಲ ನಿವಾಳಿಸಿ ಹಾಕಿ ಅಧ್ಯಾತ್ಮಿಕ ಮತ್ತು ತಾತ್ವಿಕ ಚಿಂತನೆಗೊಂದು ಹೊಸ ಆಯಾಮವನ್ನೇ ಕೊಡುತ್ತಾನೆ ಲಾವೋ ಜಿ.

ನಸ್ರುದ್ದೀನನ ತುಂಟತನವೂ ಇದಕ್ಕಿಂತ ಹೊರತಲ್ಲ. ನಸ್ರುದ್ದೀನ್ ಹೆಸರಲ್ಲಿರುವ ಕಥೆಗಳು, ಅದರಲ್ಲೂ – ಆತ ವ್ಯಾಜ್ಯ ಪರಿಹರಿಸುವ ರೀತಿ, ಆತನ ದೈನಂದಿನ ಬದುಕಿನ ಜಾಣತನ ಇತ್ಯಾದಿಯನ್ನು ಹೇಳುವ ಕಥೆಗಳನ್ನು ಕೇಳಿದ ಕೂಡಲೆ ನಗು ಬಂದರೂ, ಅವು ಆಳದಲ್ಲೊಂದು ಬೆಳಕಿನ ಕಿಡಿ ಹೊತ್ತುಕೊಂಡಿರುತ್ತವೆ. ಇಂಥಾ ನಸ್ರುದ್ದೀನನನ್ನು ಕತ್ತೆಯ ಮೇಲೆ ಉಲ್ಟಾ ಕುಳಿತು ಹೋಗುತ್ತಿರುವಂತೆ ಚಿತ್ರಿಸಲಾಗಿದೆ. ಈ ಚಿತ್ರ, ಅವನು ರೂಢಿಗೆ ಬೆನ್ನು ಹಾಕಿ ತನ್ನದೇ ಚಿಂತನೆಯನ್ನು ಕಟ್ಟಿಕೊಂಡವನು ಎಂಬುದನ್ನು ಸಶಕ್ತವಾಗಿ, ಅಷ್ಟೇ ಕ್ಯೂಟ್ ಆಗಿ ಕಟ್ಟಿಕೊಡುತ್ತದೆ.

ನಮ್ಮಲ್ಲಿ ಬಹುತೇಕರು ಸಮಾಜಕ್ಕೆ ಸೆಡ್ಡು ಹೊಡೆಯುವುದು, ರೂಢಿಗತಕ್ಕೆ ಬೆನ್ನುಹಾಕುವುದು ಒಂದು ಸಾಹಸವೆಂದು ತಿಳಿದಿದ್ದೇವೆ. ನಿಯಮ ಮೀರುವುದರಲ್ಲಿ ನಮಗೆ ಎಲ್ಲಿಲ್ಲದ ಉತ್ಸಾಹ. “ರೂಲ್ಸ್ ಇರೋದೇ ಬ್ರೇಕ್ ಮಾಡೋದಕ್ಕೆ” ಅನ್ನುವರ್ಥದ ಟಿ ಶರ್ಟುಗಳು, ಕ್ಯಾಪ್`ಗಳು ಕಡಿಮೆ ಏನೂ ಮಾರಾಟವಾಗೋದಿಲ್ಲ! ನಿಯಮ ಮೀರುವ ಕ್ರೇಜ್ ಮತ್ತು ಟ್ರೆಂಡ್ ಅಷ್ಟು ಬಲವಾಗಿದೆ. ಆದರೆ, ಮೀರುವ ಮುನ್ನ ಅರಿಯುವ ಉತ್ಸಾಹ ಎಷ್ಟು ಜನಕ್ಕಿದೆ? ಮೀರುವ ಯೋಗ್ಯತೆ ಗಳಿಸಿಕೊಳ್ಳಬೇಕು ಅನ್ನುವ ತಿಳಿವಾದರೂ ಎಷ್ಟು ಜನಕ್ಕಿದೆ!?

ಆದ್ದರಿಂದ, ಮದುವೆಯ ರೂಢಿಗತ ಸಂಪ್ರದಾಯ ಮುರಿಯುತ್ತೀರಾ, ಮುರಿಯಿರಿ; ಆದರೆ, ಸಾಂಗತ್ಯ ಮತ್ತು ಪ್ರೇಮದ ಅರಿವು ಮೊದಲು ಪಡೆದುಕೊಂಡಿರಿ. ಮದುವೆಯಾಗದೆ ಮಕ್ಕಳನ್ನು ಪಡೆಯಲು ಮುಂದಾಗುತ್ತೀರಾ? ಆಗಿ. ಆದರೆ, ಮತ್ತೊಂದು ಜೀವವನ್ನು ಭೂಮಿಗೆ ತಂದಮೇಲೆ ಅದರ ಜವಾಬ್ದಾರಿಗಳನ್ನು ಯಾವುದೇ ಕೊರತೆಯಿಲ್ಲದೆ ನಿಭಾಯಿಸುವ ಅರಿವನ್ನು ಪಡೆದುಕೊಂಡಿರಿ. ನರ್ಸರಿ ಕ್ಲಾಸಿಂದ ಪೋಸ್ಟ್ ಗ್ರಾಜುಯೇಶನ್`ವರೆಗೆ ಓದುವ ಸಾಂಪ್ರದಾಯಿಕ ಶಿಕ್ಷಣಕ್ಕೆ ಬೆನ್ನು ಹಾಕುತ್ತೀರಾ? ಖಂಡಿತಾ ಹಾಕಿ. ಐನ್`ಸ್ಟೀನ್, ಬಿಲ್ ಗೇಟ್ಸ್ ಉದಾಹರಣೆ ಕೊಡ್ತೀರಾ? ಖಂಡಿತಾ ಕೊಡಿ. ಆದರೆ ಅವರ ಛಲ, ಪ್ರಯತ್ನ, ಬದ್ಧತೆ ಹೇಗಿತ್ತು ಅನ್ನುವ ಅರಿವನ್ನು ಎಲ್ಲಕ್ಕಿಂತ ಮೊದಲು ಪಡೆದುಕೊಂಡಿರಿ; ಹಾಗೇ ನಿಮ್ಮ ದಾರಿ – ಗುರಿಗಳ ಬಗ್ಗೆಯೂ!

ನಿಯಮದಂತೆ ನಡೆಯುವುದು ಕಷ್ಟವೇನಲ್ಲ. ಯಾವುದೇ ಬಗೆಯ ಅರಿವಿಲ್ಲದವರೂ ಏನು ಮಾಡಬೇಕು/ ಮಾಡಬಾರದು ಅನ್ನುವ ಮಾಹಿತಿ ಇಟ್ಟುಕೊಂಡು ನಿಯಮದಂತೆ ಬದುಕಿಬಿಡಬಹುದು. ಆದರೆ, ನಿಯಮ ಮೀರಲು ವಿಶೇಷ ಅರ್ಹತೆ ಬೇಕಾಗುತ್ತದೆ. ಇಲ್ಲಿ ಕೇವಲ ಮಾಹಿತಿಯಲ್ಲ, ಅರಿವು ಬಹಳ ಮುಖ್ಯವಾಗುತ್ತದೆ. ಆದರೆ ನಮ್ಮಲ್ಲಿ ಮೀರುವ ಮಾತಾಡುವವರಲ್ಲಿ ಬಹುತೇಕ ಅಯೋಗ್ಯರೇ ಹೆಚ್ಚು. ಆದ್ದರಿಂದಲೇ ಮೀರುವಿಕೆಯ ಪರಿಣಾಮ ಬಹುತೇಕ ವೈಫಲ್ಯದಲ್ಲೇ ಕೊನೆಗಾಣುವುದು.

ಆದ್ದರಿಂದ,
ಮೀರುವ ಮುನ್ನ
(ಅರಿವಿನ)
ಎಲ್ಲೆಗಳನ್ನು ಮುಟ್ಟಿ.

ಎಡವಟ್ಟರು ಅನಿಸಿಕೊಂಡಾಗ ಖುಷಿಪಡಿ. ಆದರೆ ಅರಿವಿನ ಮೂಲಕ ಆ ಖುಷಿಯನ್ನು ಖಾಯಂಗೊಳಿಸಿಕೊಳ್ಳಲು ಪ್ರಯತ್ನಿಸಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.