ದೈವ ದರ್ಶನ ನೀಡುವ ಬಗೆ… । ಓಶೋ ವ್ಯಾಖ್ಯಾನ

ಎಲ್ಲ ಕಲ್ಪನೆಗಳು ಬಿದ್ದು ಹೋದಾಗ ಮಾತ್ರ ಸತ್ಯ ಕಾಣಿಸಿಕೊಳ್ಳುತ್ತದೆ. ಕಲ್ಪನೆ ಕರಾರುಗಳನ್ನು ಹಾಕಿದಷ್ಟು ಸತ್ಯ ದೂರವಾಗುತ್ತ ಹೋಗುತ್ತದೆ. ಬೆತ್ತಲೆ ಖಾಲೀ ಮನಸ್ಸಿಗೆ ಮಾತ್ರ ಸತ್ಯದ ದರ್ಶನವಾಗುತ್ತದೆ… ~ ಓಶೋ ರಜನೀಶ್। ಕನ್ನಡಕ್ಕೆ: ಚಿದಂಬರ ನರೇಂದ್ರ

ಕಳೆದ ಶತಮಾನದ ಅತ್ಯಂತ ಸುಂದರ ಮನುಷ್ಯರಲ್ಲಿ ಒಬ್ಬರು ಶಿರ್ಡಿಯ ಸಾಯಿಬಾಬಾ. ಬಾಬಾ ಹಿಂದೂ ಆಗಿದ್ದರೋ ಅಥವಾ ಮುಸ್ಲೀಂ ಆಗಿದ್ದರೋ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಬಾಬಾ ಮಸೀದಿಯಲ್ಲಿ ವಾಸ ಮಾಡುತ್ತಿದ್ದರಿಂದ ಅವರು ಮುಸ್ಲೀಂ ಎಂದೇ ಎಲ್ಲ ತಿಳಿದುಕೊಂಡಿದ್ದರು. ಅವರಿಗೊಬ್ಬ ಹಿಂದೂ ಹಿಂಬಾಲಕನಿದ್ದ, ಅವನು ಬಾಬಾ ಅವರಲ್ಲಿ ಅಪಾರ ನಂಬಿಕೆಯಿಟ್ಟುಕೊಂಡಿದ್ದ, ಬಾಬಾ ಅವರನ್ನು ತೀವ್ರವಾಗಿ ಪ್ರೀತಿಸುತ್ತಿದ್ದ. ಪ್ರತಿನಿತ್ಯ ಅವನು ಬಾಬಾ ದರ್ಶನಕ್ಕೆ ಬರುತ್ತಿದ್ದ, ಒಂದೂ ದಿನ ಅವನು ಬಾಬಾ ಅವರನ್ನು ನೋಡದೇ ಇರುತ್ತಿರಲಿಲ್ಲ. ಕೆಲವೊಮ್ಮೆ ಬಾಬಾ ದರ್ಶನಕ್ಕಾಗಿ ಅವನು ಇಡೀ ದಿನ ಕಾಯಬೇಕಾಗುತ್ತಿತ್ತು. ಬಾಬಾ ದರ್ಶನ ಆಗದೇ ಅವನು ಒಂದು ತುತ್ತೂ ಊಟ ಮಾಡುತ್ತಿರಲಿಲ್ಲ.

ಒಂದು ದಿನ ಬಾಬಾ ದರ್ಶನಕ್ಕೆ ಬಹಳ ಜನ ಸೇರಿದ್ದರಿಂದ ರಾತ್ರಿ ಎಲ್ಲರೂ ಹೋದ ನಂತರ ಅವನು ಬಾಬಾ ಅವರನ್ನು ಭೇಟಿ ಮಾಡಿ ಅವರಿಗೆ ನಮಸ್ಕಾರ ಮಾಡಿದ. ಬಾಬಾ ಅಕ್ಕರೆಯಿಂದ ಅವನನ್ನು ಮಾತನಾಡಿಸಿದರು, “ಯಾಕೆ ಅನಾವಶ್ಯಕವಾಗಿ ಕಷ್ಟಪಡುತ್ತೀಯ? ನಾಳೆಯಿಂದ ನೀನು ಇಲ್ಲಿಗೆ ಬರಬೇಡ. ನಿನ್ನ ಊಟಕ್ಕಿಂತ ಮೊದಲು ನಾನೇ ನೀನು ಇದ್ದಲ್ಲಿಗೆ ಬರುತ್ತೇನೆ”.

ಬಾಬಾ ಮಾತುಕೇಳಿ ಶಿಷ್ಯನಿಗೆ ಬಹಳ ಖುಶಿಯಾಯಿತು. ಮರುದಿನ ಅವನು ತನ್ನ ಜಾಗದಲ್ಲಿಯೇ ಬಾಬಾಗಾಗಿ ಕಾಯತೊಡಗಿದ. ಸಂಜೆಯಾದರೂ ಬಾಬಾ ಪತ್ತೆ ಇಲ್ಲ. ಶಿಷ್ಯ ಊಟವನ್ನೂ ಮಾಡದೇ ಬಾಬಾಗಾಗಿ ಕಾಯುತ್ತಿದ್ದ. ರಾತ್ರಿ ಶಿಷ್ಯ ಸಿಟ್ಟಿಗೆದ್ದು ಬಾಬಾ ಇರುವಲ್ಲಿಗೆ ಹೋಗಿ ತನ್ನ ಅಸಮಾಧಾನವನ್ನು ಹೇಳಿಕೊಂಡ, “ನೀವು ನಾನು ಇರುವಲ್ಲಿಗೆ ಬಂದು ದರ್ಶನ ಕೊಡುತ್ತೇನೆ ಎಂದು ಹೇಳಿದ್ದಿರಿ, ಆದರೆ ನೀವು ಮಾತಿಗೆ ತಪ್ಪಿದಿರಿ”.

ಬಾಬಾ ಉತ್ತರಿಸಿದರು, “ಇಂದು ನೀನು ಇರುವಲ್ಲಿಗೆ ನಾನು ಒಂದಲ್ಲ ಎರಡಲ್ಲ ಮೂರು ಬಾರಿ ಬಂದಿದ್ದೆ. ಆದರೆ ನೀನು ನನ್ನ ಗಮನಿಸಲೇ ಇಲ್ಲ. ಮೊದಲ ಸಲ ನಾನು ಭಿಕ್ಷುಕನಾಗಿ ಬಂದಿದ್ದೆ. ನೀನು ನನ್ನ ನಿನ್ನ ಮನೆಯಿಂದ ಓಡಿಸಿಬಿಟ್ಟೆ. ಎರಡನೇ ಬಾರಿ ನಾನು ಒಬ್ಬ ವಯಸ್ಸಾದ ಹೆಣ್ಣಿನ ರೂಪದಲ್ಲಿ ಬಂದಿದ್ದೆ. ನೀನು ನನ್ನ ಕಣ್ಣೆತ್ತಿಯೂ ನೋಡಲಿಲ್ಲ. ಕೊನೆಗೆ ನಾನು ನಿನ್ನ ಮನೆಗೆ ನಾಯಿಯ ರೂಪದಲ್ಲಿ ಬಂದಿದ್ದೆ. ನೀನು ಕೋಲಿನಿಂದ ಹೊಡೆದು ನನ್ನ ಅಲ್ಲಿಂದ ಓಡಿಸಿಬಿಟ್ಟೆ.”

“ ಇದು ನಿನ್ನ ಜೊತೆ ಮಾತ್ರ ಅಲ್ಲ ಇಡೀ ಮನುಷ್ಯ ಜಾತಿಯ ಜೊತೆ ಆಗುತ್ತಿದೆ. ದೈವ ನಿಮ್ಮನ್ನು ಭೇಟಿ ಮಾಡಲು ಹಲವಾರು ರೂಪಗಳಲ್ಲಿ ಬರುತ್ತದೆ ಆದರೆ ನಿಮಗೆ ದೈವದ ಬಗ್ಗೆ ನಿಮ್ಮದೇ ಆದ ಕಲ್ಪನೆಯಿದೆ. ನೀವು ಒಂದು ನಿರ್ದಿಷ್ಟ ರೂಪದಲ್ಲಿ ಮಾತ್ರ ದೈವವನ್ನು ಕಾಣಬಯಸುತ್ತೀರಿ. ಆದರೆ ದೈವಕ್ಕೆ ನೀವು ಹೀಗೆ ಕರಾರುಗಳನ್ನ ಹಾಕುವಂತಿಲ್ಲ. ದೈವ ಎಂದೂ ನಿಮ್ಮ ಮನಸೋ ಇಚ್ಛೆಯ ಹಾಗೆ ಕಾಣಿಸಿಕೊಳ್ಳುವುದಿಲ್ಲ. ದೈವಕ್ಕೆ ನಿಮಗೆ ಹೀಗೆಯೇ ಕಾಣಿಸಿಕೊಳ್ಳಬೇಕೆಂಬ ಯಾವ ನಿಯಮವಿಲ್ಲ.”

“ಎಲ್ಲ ಕಲ್ಪನೆಗಳು ಬಿದ್ದು ಹೋದಾಗ ಮಾತ್ರ ಸತ್ಯ ಕಾಣಿಸಿಕೊಳ್ಳುತ್ತದೆ. ಕಲ್ಪನೆ ಕರಾರುಗಳನ್ನು ಹಾಕಿದಷ್ಟು ಸತ್ಯ ದೂರವಾಗುತ್ತ ಹೋಗುತ್ತದೆ. ಬೆತ್ತಲೆ ಖಾಲೀ ಮನಸ್ಸಿಗೆ ಮಾತ್ರ ಸತ್ಯದ ದರ್ಶನವಾಗುತ್ತದೆ.”

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.