ನಮ್ಮ ದೈನದಿಂನ ಬದುಕಿನಲ್ಲಿ ನಾವು ಗಮನಿಸಬೇಕಾದದ್ದು ಏನೆಂದರೆ, ಖುಶಿ ನಮ್ಮೊಳಗೆ ಕೃತಜ್ಞತೆಯನ್ನೂ ಮೂಡಿಸುವುದಿಲ್ಲ ಬದಲಾಗಿ ಕೃತಜ್ಞತೆ ನಮ್ಮ ಬದುಕಿನಲ್ಲಿ ಖುಶಿಗೆ ಕಾರಣವಾಗುತ್ತದೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಒಂದು ದಿನ ಒಬ್ಬ ಪ್ರಸಿದ್ಧ ಲೇಖಕ ತನ್ನ ಸ್ಟಡಿ ರೂಂ ಲ್ಲಿ ಕುಳಿತುಕೊಂಡಿದ್ದ. ಅವನಿಗೇನನಿಸಿತೋ ಆತ ಪೆನ್ನು ಕೈಗೆತ್ತಿಕೊಂಡು ಒಂದು ಕಾಗದದಲ್ಲಿ ಸರಸರನೇ ಬರೆಯಲಾರಂಭಿಸಿದ.
- ಕಳೆದ ವರ್ಷ ನನಗೆ ಸರ್ಜರಿ ಆಯ್ತು. ವೈದ್ಯರು ನನ್ನ ಗಾಲ್ ಬ್ಲ್ಯಾಡರ್ ತೆಗೆದು ಹಾಕಿದರು. ಈ ಸರ್ಜರಿ ಕಾರಣವಾಗಿ ಎಷ್ಟೋದಿನ ನಾನು ಹಾಸಿಗೆಗೆ ಅಂಟಿಕೊಂಡು ಇರಬೇಕಾಯಿತು.
- ಅದೇ ವರ್ಷ ನನಗೆ 60 ತುಂಬಿ, ನಾನು 30 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪ್ರಕಾಶನ ಸಂಸ್ಥೆಯಿಂದ ನಿವೃತ್ತನಾಗಬೇಕಾಯಿತು.
- ಆ ವರ್ಷವೇ ನನ್ನ ತಂದೆ ತೀರಿಕೊಂಡರು, ನಾನು ತೀವ್ರ ದುಃಖಕ್ಕೆ ಒಳಗಾದೆ.
- ಅದೇ ವರ್ಷ ಒಂದು ಕಾರ್ ಅಪಘಾತದ ಕಾರಣವಾಗಿ ನನ್ನ ಮಗ ತನ್ನ ಮೆಡಿಕಲ್ ಎಕ್ಸಾಂ ಲ್ಲಿ ಫೇಲ್ ಆಗಬೇಕಾಯಿತು. ಮಗ ಎಷ್ಟೋ ದಿನ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬೇಕಾಯಿತು. ಕಾರ್ ಗೆ ಆದ ಹಾನಿಯದು ಇನ್ನೊಂದು ಲೆಕ್ಕ.
- ಕೊನೆಗೆ ಆ ಲೇಖಕ ಹೀಗೆ ಬರೆದಿದ್ದ, “ ಓಹ್ ದೇವರೇ ಎಂಥ ಕೆಟ್ಟ ವರ್ಷ ನನ್ನ ಪಾಲಿಗೆ ಇದು”.
ಆಗಲೇ ಲೇಖಕನ ಹೆಂಡತಿ ಸ್ಟಡಿ ರೂಂ ಪ್ರವೇಶಿಸಿ ತನ್ನ ಗಂಡ ಅತ್ಯಂತ ದುಃಖಿತನಾಗಿರುವುದನ್ನ ಗಮನಿಸಿದಳು. ಅವಳು ಅವನ ಹಿಂದೆ ನಿಂತ ಆತ ಕಾಗದದಲ್ಲಿ ಬರೆದಿರುವುದನ್ನ ಓದಿಕೊಂಡಳು. ಅವಳು ಅಲ್ಲಿಂದ ಸದ್ದಿದಿಲ್ಲದೇ ಹೊರಟು ಇನ್ನೊಂದು ಕಾಗದ ತೆಗೆದುಕೊಂಡು ಬಂದು ಗಂಡನ ಕಾಗದದ ಪಕ್ಕದಲ್ಲಿಟ್ಟಳು. ಗಂಡನಿಗೆ ಆ ಕಾಗದಲ್ಲಿ ಬರೆದಿರುವುದನ್ನ ಮತ್ತು ಕೆಳಗೆ ತನ್ನ ಹೆಸರು ಇರುವುದನ್ನ ನೋಡಿ ಆಶ್ಚರ್ಯವಾಯಿತು. ಆ ಕಾಗದದಲ್ಲಿ ಹೆಂಡತಿ ಹೀಗೆ ಬರೆದಿದ್ದಳು.
- ಕಳೆದ ವರ್ಷ ಕೊನೆಗೂ ನಾನು ಹಲವಾರು ವರ್ಷಗಳಿಂದ ಅನುಭವಿಸುತ್ತಿದ್ದ ಗಾಲ್ ಬ್ಲ್ಯಾಡರ್ ನೋವಿನ ತೊಂದರೆಯಿಂದ ಮುಕ್ತನಾದೆ.
- ಅದೇ ವರ್ಷ ನನಗೆ ಅರವತ್ತು ತುಂಬಿ ನಾನು ತುಂಬು ಆರೋಗ್ಯದಿಂದಿರುವಾಗಲೇ ನಿವೃತ್ತನಾದೆ. ಇನ್ನು ನಾನು ನನ್ನ ಸಮಯವನ್ನು ಹೆಚ್ಚು ಶಾಂತಿಯಿಂದ, ಹೆಚ್ಚು ಫೋಕಸ್ ನೀಡಿ, ಇನ್ನೂ ಉತ್ತಮ ಬರವಣಿಗೆಗೆ ಮೀಸಲಾಗಿಡಬಹುದು.
- ಅದೇ ವರ್ಷ 95 ವರ್ಷ ತುಂಬು ಜೀವನ ನಡೆಸಿದ ನನ್ನ ತಂದೆ ಯಾವ ಕಾಯಿಲೆ ನೋವುಗಳಿಲ್ಲದೆ ದೇವರನ್ನ ಸೇರಿಕೊಂಡರು.
- ಅದೇ ವರ್ಷ ನನ್ನ ಮಗನಿಗೆ ಇನ್ನೊಂದು ಹೊಸ ಬದುಕು ದೊರೆಯಿತು. ನನ್ನ ಕಾರಿಗೆ ಹಾನಿಯಾಯಿತು ನಿಜ ಆದರೆ ಮಗ ಯಾವುದೇ ಅಂಗಹೀನನಾಗದೇ ಪವಾಡದ ರೀತಿಯಲ್ಲಿ ಚೀತರಿಸಿಕೊಂಡ.
ಕೊನೆಯಲ್ಲಿ ಆಕೆ ಹೀಗೆ ಬರೆದಿದ್ದಳು…
- ಇದು ನಮ್ಮ ಅದೃಷ್ಟದ ವರ್ಷ. ದೇವರ ಅಪಾರ ಕರುಣೆಯ ಕಾರಣವಾಗಿ ನಾವು ಎಲ್ಲ ತೊಂದರೆಗಳಿಂದ ಯಶಸ್ವಿಯಾಗಿ ಹೊರಗೆ ಬಂದೆವು.
ಲೇಖಕನಿಗೆ ತನ್ನ ಹೆಂಡತಿಯ ಬದುಕಿನ ಕುರಿತಾದ ತಿಳುವಳಿಕೆಯನ್ನು ಓದಿ ಬಹಳ ಸಂತೋಷವಾಯಿತು. ಬದುಕಿನಲ್ಲಿ ನಡೆದ ದಾರುಣ ಘಟನೆಗಳನ್ನ ತನ್ನ ಹೆಂಡತಿ ಧನಾತ್ಮಕವಾಗಿ ನೋಡಿ ವ್ಯಾಖ್ಯಾನ ಮಾಡಿದ ರೀತಿ ಅವನಿಗೆ ತನ್ನ ಹೆಂಡತಿಯ ಬಗ್ಗೆ ಹೆಮ್ಮೆ ಮೂಡಿಸಿತು.
ನಮ್ಮ ದೈನದಿಂನ ಬದುಕಿನಲ್ಲಿ ನಾವು ಗಮನಿಸಬೇಕಾದದ್ದು ಏನೆಂದರೆ, ಖುಶಿ ನಮ್ಮೊಳಗೆ ಕೃತಜ್ಞತೆಯನ್ನೂ ಮೂಡಿಸುವುದಿಲ್ಲ ಬದಲಾಗಿ ಕೃತಜ್ಞತೆ ನಮ್ಮ ಬದುಕಿನಲ್ಲಿ ಖುಶಿಗೆ ಕಾರಣವಾಗುತ್ತದೆ.
ಧನಾತ್ಮಕವಾಗಿ ಯೋಚಿಸಿ… ಕೃತಜ್ಞರಾಗಿರಿ… ಖುಶಿಯಾಗಿರಿ.

