ಸಾಧನೆಯ ಹಾದಿಯಲ್ಲಿ ತರ್ಕ ಈ ಥರ ಮಾತ್ರ ನಿಮಗೆ ಸಹಾಯ ಮಾಡಬಹುದು. ತರ್ಕಿಸಿ, ವಿಶ್ಲೇಷಿಸಿ, ವಾದ ಮಾಡಿ , ಈ ಎಲ್ಲ ಪ್ರಯತ್ನಗಳಿಂದ ನಿಮಗೆ ಕನ್ವಿನ್ಸ್ ಆಗುವುದು ಏನೆಂದರೆ ಸತ್ಯವನ್ನು ದೊರಕಿಸಿಕೊಳ್ಳಲು ತರ್ಕ ಯಾವ ರೀತಿಯಲ್ಲೂ ಸಹಾಯ ಮಾಡುವುದಿಲ್ಲ ಎನ್ನುವುದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ತರ್ಕಕ್ಕೆ (reason) ಮತ್ತು ಬುದ್ಧಿಶಕ್ತಿಗೆ (intellect) ಗೆ ಅಧ್ಯಾತ್ಮಿಕ ಸಾಧನೆಯಲ್ಲಿ ಜಾಗ ಇದೆಯಾ?
ಇಷ್ಟೇ ಜಾಗ ಇದೆ : ತರ್ಕ ತಾನು ಅನುಪಯೋಗಿ ಮತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಘೋಷಿಸಬೇಕು ಅಷ್ಟೇ. “ಶಾಸ್ತ್ರಗಳು ಸಹಾಯ ಮಾಡುವುದಿಲ್ಲವೆ?” ಎಂದು ಯಾರೋ ಒಬ್ಬರು ಕೇಳಿದಾಗ, ಟಿಬೇಟ್ ನ ದೊಡ್ಡ ಅನುಭಾವಿ ಮಾರ್ಪಾ ಹೇಳುತ್ತಾನೆ, “ಖಂಡಿತ ಸಹಾಯ ಮಾಡುತ್ತವೆ. ಶಾಸ್ತ್ರಳನ್ನು ಮೀರಿ ಹೋಗಲು ಸಹಾಯ ಮಾಡುತ್ತವೆ. ಶಾಸ್ತ್ರಗಳನ್ನು ಓದಿ, ಅಭ್ಯಾಸ ಮಾಡಿ. ಶಾಸ್ತ್ರಗಳು ಯೂಸ್ ಲೆಸ್ ಎಂದು ನಿಮಗೆ ಮನದಟ್ಟು ಮಾಡಿಕೊಡಲು ಅವು ಸಹಾಯ ಮಾಡುತ್ತವೆ. ಮತ್ತು ಶಾಸ್ತ್ರಗಳ ಮೂಲಕ ಸತ್ಯವನ್ನು ಸಾಧಿಸುವುದು ಸಾಧ್ಯವಿಲ್ಲ ಎನ್ನುವುದನ್ನ ಅವು ನಿಮಗೆ ಕಲಿಸಿಕೊಡುತ್ತವೆ”.
ಸಾಧನೆಯ ಹಾದಿಯಲ್ಲಿ ತರ್ಕ ಈ ಥರ ಮಾತ್ರ ನಿಮಗೆ ಸಹಾಯ ಮಾಡಬಹುದು. ತರ್ಕಿಸಿ, ವಿಶ್ಲೇಷಿಸಿ, ವಾದ ಮಾಡಿ , ಈ ಎಲ್ಲ ಪ್ರಯತ್ನಗಳಿಂದ ನಿಮಗೆ ಕನ್ವಿನ್ಸ್ ಆಗುವುದು ಏನೆಂದರೆ ಸತ್ಯವನ್ನು ದೊರಕಿಸಿಕೊಳ್ಳಲು ತರ್ಕ ಯಾವ ರೀತಿಯಲ್ಲೂ ಸಹಾಯ ಮಾಡುವುದಿಲ್ಲ ಎನ್ನುವುದು. ಆದರೆ ಇವು ನಿಮಗೆ ಅತ್ಯಂತ ದೊಡ್ಡ ಅವಕಾಶವನ್ನು ಒದಗಿಸಿಕೊಡುತ್ತವೆ. ಒಮ್ಮೆ ನಿಮ್ಮ ಸಾಧನೆಯಲ್ಲಿ ತರ್ಕಕ್ಕೆ ಜಾಗ ಇಲ್ಲ ಎನ್ನುವುದು ನಿಮಗೆ ಗೊತ್ತಾದಾಗ ನೀವು ತರ್ಕವನ್ನು ಡ್ರಾಪ್ ಮಾಡುತ್ತೀರಿ. ತರ್ಕವನ್ನು ಡ್ರಾಪ್ ಮಾಡಿದ ಕೂಡಲೇ ನೀವು ಸಂಪೂರ್ಣವಾಗಿ ನಿಮ್ಮ ಅಸ್ತಿತ್ವದ ವಿಭಿನ್ನ ಕೇಂದ್ರದಿಂದ ಕೆಲಸ ಮಾಡಲು ಶುರು ಮಾಡುತ್ತೀರಿ, ಅದು ನಿಮ್ಮ ಹೃದಯ. ತರ್ಕಕ್ಕೆ ನಂಬಿಕೆಯಲ್ಲಿ ವಿಶ್ವಾಸವಿಲ್ಲ ಆದರೆ ಹೃದಯಕ್ಕೆ ಇದೆ. ತರ್ಕದ್ದು ಮೂಲತಃ ಅಪನಂಬಿಕೆಯ ಸ್ವಭಾವ. ನೆನಪಿರಲಿ ತರ್ಕ ಒಂದು ಸಂಗತಿಯನ್ನ ಒಡೆದು ನೋಡಬಲ್ಲದೆ (analyse) ಹೊರತು ಅದಕ್ಕೆ ಕೂಡಿಸುವುದು (synthesise) ಗೊತ್ತಿಲ್ಲ. ತರ್ಕಕ್ಕೆ ವಿಭಜನೆ ಮಾಡುವುದು ಗೊತ್ತೇ ವಿನಃ ಒಂದು ಮಾಡಿ ಸೌಹಾರ್ದತೆಯನ್ನು ಸಾಧಿಸುವುದು ಗೊತ್ತಿಲ್ಲ. ತರ್ಕ ಕೇವಲ ಕತ್ತರಿಯಂತೆ, ಅದಕ್ಕೆ ಕತ್ತರಿಸುವುದು ಮಾತ್ರ ಗೊತ್ತು.
ಒಮ್ಮೆ ಯಾರೋ ಒಬ್ಬರು ಸೂಫಿ ಸಂತ Bayazid ಗೆ ಒಂದು ಜೊತೆ ಬಂಗಾರದ ಕತ್ತರಿಯನ್ನ ಉಡುಗೊರೆಯಾಗಿ ಕೊಟ್ಟರು. ಅವು ತುಂಬ ಬೆಲೆಬಾಳುವ ಕತ್ತರಿಗಳಾಗಿದ್ದವು. ಆ ಕತ್ತರಿಗಳ ಮೇಲೆ ವಜ್ರಗಳಿಂದ ಅಲಂಕಾರ ಮಾಡಲಾಗಿತ್ತು. ಕತ್ತರಿಯನ್ನು ಉಡುಗೊರೆಯಾಗಿ ಕೊಟ್ಟ ವ್ಯಕ್ತಿಗೆ ತಾನು ಒಂದು ಅಪರೂಪದ ಅಮೂಲ್ಯ ಉಡುಗೊರೆಯನ್ನು ಸೂಫಿಗೆ ಕೊಟ್ಟಿರುವ ಬಗ್ಗೆ ಹೆಮ್ಮೆ ಇತ್ತು. ಆದರೆ ಸೂಫಿ ಹೇಳಿದ, “ದಯವಿಟ್ಟು ಇವನ್ನ ವಾಪಸ್ ತೆಗೆದುಕೋ. ಏಕೆಂದರೆ ನನ್ನ ಇಡೀ ಬದುಕು ಜೊಡಿಸುವುದಕ್ಕೆ ಮುಡಿಪಾಗಿದೆಯೇ ಹೊರತು ಕತ್ತರಿಸುವುದಕ್ಕಲ್ಲ. ಇದರ ಬದಲಿಗೆ ಬೇಕಾದರೆ ನನಗೊಂದು ಸೂಜಿ – ದಾರ ವನ್ನು ಉಡುಗೊರೆಯಾಗಿ ಕೊಡು. ಏಕೆಂದರೆ ಜೋಡಿಸುವುದೇ ನನ್ನ ಬದುಕಿನ ಗುರಿ. ನಾನು ಸಂಗತಿಗಳನ್ನು ಕತ್ತರಿಸಿ ಬೇರೆ ಮಾಡಲು ಬಯಸುವುದಿಲ್ಲ ಬದಲಾಗಿ ಬೇರೆ ಬೇರೆ ಸಂಗತಿಗಳನ್ನು ಕೂಡಿಸಿ ಒಂದಾಗಿಸಲು ಬಯಸುತ್ತೇನೆ. ಬಂಗಾರದ್ದಾಗಿರಲಿ ಅಥವಾ ಆಗಿರದೇ ಇರಲಿ ನನಗೆ ಸೂಜಿಯೇ ಬೇಕು. ಬಂಗಾರದ ಕತ್ತರಿ ಅದು ಎಷ್ಟೇ ಅಮೂಲ್ಯವಾಗಿದ್ದರೂ ಅದರಿಂದ ನನಗೆ ಯಾವ ಪ್ರಯೋಜನವೂ ಇಲ್ಲ”.

