ಪ್ಲೇಟೋ ಪ್ರಕಾರ ಅಟ್ಲಾಂಟಿಸ್ ನಾಗರೀಕತೆಯಲ್ಲಿ ಬಡತನವಿರಲಿಲ್ಲ, ಯುದ್ಧವಿರಲಿಲ್ಲ, ಹಸಿವು ಎನ್ನುವುದೇ ಅಲ್ಲಿಯ ಜನಕ್ಕೆ ತಿಳಿದಿರಲಿಲ್ಲ. ಅಟ್ಲಾಂಟಿಸ್ ನಾಗರಿತೆಯ ನಾಯಕರ ಬಳಿ ನಾವು ಊಹೆ ಮಾಡಲಾಗದಂತಹ ತಂತ್ರಜ್ಞಾನವಿತ್ತು, ಅವರಿಗೆ ಪ್ರಕೃತಿಯನ್ನೇ ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವಿತ್ತು. ಆದರೂ ಅದು ಪ್ರಕೃತಿಯ ಮುಂದೆ ತಲೆಬಾಗಲೇಬೇಕಾಯ್ತು…! : ಪ್ರಣವ ಚೈತನ್ಯ
ಅಟ್ಲಾಂಟಿಸ್ ಎನ್ನುವ ಹೆಸರನ್ನು ಕೇಳದವರೇ ಇಲ್ಲ. ಪುಸ್ತಕ, ಸಿನೆಮಾ, ವಿಡಿಯೋ ಗೇಮ್ – ಎಲ್ಲಾದರೂ ಒಮ್ಮೆಯಾದರೂ ನಾವು ಈ ಹೆಸರನ್ನು ಕೇಳಿರುತ್ತೇವೆ. ಆದರೆ ನಿಜಕ್ಕೂ ಅಟ್ಲಾಂಟಿಸ್ ಎಂದರೇನು? ಅಂಥದ್ದೊಂದು ನಾಗರಿಕತೆ ಎಲ್ಲಿದೆ? ಅಥವಾ ಎಲ್ಲಿತ್ತು? ಇದರ ಬಗ್ಗೆ ಮೊದಲು ಮಾತನಾಡಿದ್ದು ಪ್ಲೇಟೋ.
ಪ್ರಾಚೀನ ಗ್ರೀಕ್ ದೇಶದ ಅತ್ಯಂತ ಬುದ್ದಿವಂತ ಚಿಂತಕರಲ್ಲಿ ಒಬ್ಬ ಪ್ಲೇಟೋ. ಕ್ರಿ.ಪೂ. ಸುಮಾರು 360ರಲ್ಲಿ ಪ್ಲೇಟೋ ತನ್ನ ಪುಸ್ತಕದಲ್ಲಿ ಅಟ್ಲಾಂಟಿಸ್ ಬಗ್ಗೆ ಬರೆಯುತ್ತಾನೆ. ಪ್ಲೇಟೋ ಪ್ರಕಾರ ಅಟ್ಲಾಂಟಿಸ್ ಎನ್ನುವುದು ಒಂದು ನಾಗರಿಕತೆ. ಈ ನಾಗರಿಕತೆಯು ತುಂಬ ಹಳೆಯದು. ಎಷ್ಟು ಹಳೆಯದೆಂದರೆ, ಪ್ಲೇಟೋ ಅಟ್ಲಾಂಟಿಸ್ ಬಗ್ಗೆ ಬರೆಯುವಾಗಲೇ ಆ ನಾಗರಿಕತೆ ಸುಮಾರು 6,000 ವರ್ಷಗಳಿಂದ 10,000 ವರ್ಷ ಹಳೆಯದು!
ಪ್ಲೇಟೋ ಪ್ರಕಾರ ಅಟ್ಲಾಂಟಿಸ್ ನಾಗರಿಕತೆಯು ಒಂದು ದೊಡ್ಡ ದ್ವೀಪದಲ್ಲಿ ಹುಟ್ಟಿ – ಬೆಳೆದಿದ್ದು. “ಅಟ್ಲಾಂಟಿಸ್ ನಾಗರೀಕತೆಯಲ್ಲಿ ಬಡತನವಿರಲಿಲ್ಲ, ಯುದ್ಧವಿರಲಿಲ್ಲ, ಹಸಿವು ಎನ್ನುವುದೇ ಅಲ್ಲಿಯ ಜನಕ್ಕೆ ತಿಳಿದಿರಲಿಲ್ಲ. ಅಟ್ಲಾಂಟಿಸ್ ನಾಗರಿತೆಯ ನಾಯಕರ ಬಳಿ ನಾವು ಊಹೆ ಮಾಡಲಾಗದಂತಹ ತಂತ್ರಜ್ಞಾನವಿತ್ತು, ಅವರಿಗೆ ಪ್ರಕೃತಿಯನ್ನೇ ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವಿತ್ತು” ಎಂದು ಪ್ಲೇಟೋ ಬರೆಯುತ್ತಾನೆ.
ಪ್ರಾಚೀನ ಈಜಿಪ್ಟ್ ದಾಖಲೆಗಳಲ್ಲಿ ಅಟ್ಲಾಂಟಿಸ್ ನಾಗರೀಕತೆಯ ಬಗ್ಗೆ ಉಲ್ಲೇಖಗಳಿವೆ, ಈ ಉಲ್ಲೇಖಗಳು ಕ್ರಿ.ಪೂ. ಸುಮಾರು 1500 ರಷ್ಟು ಹಳೆಯವು. ಅಂದರೆ ಈ ದಾಖಲೆಗಳನ್ನು ಬರೆದ ಸುಮಾರು 1,200 ವರ್ಷಗಳಾದ ಮೇಲೆ ಪ್ಲೇಟೋ ಅಟ್ಲಾಂಟಿಸ್ ಬಗ್ಗೆ ಬರೆದಿದ್ದು. ಇದರಿಂದಲೇ ನಾವು ಊಹಿಸಬಹುದು, ಅಟ್ಲಾಂಟಿಸ್ ಎಷ್ಟು ಪುರಾತನ ನಾಗರೀಕತೆಯೆಂದು. ಪ್ಲೇಟೋ ಬರೆಯುತ್ತಾನೆ, “ಅಟ್ಲಾಂಟಿಸ್’ನಲ್ಲಿ ಶಾಂತಿಯಿತ್ತು, ಸಾಮರಸ್ಯವಿತ್ತು, ಎಲ್ಲಾ ಪ್ರಜೆಗಳು ಕೇವಲ ಒಂದು ಗುರಿಯನ್ನು ಸಾಧಿಸಲು ದುಡಿಯುತ್ತಿದ್ದರು, ಆ ಗುರಿ ಅಟ್ಲಾಂಟಿಸ್ ಎಂಬ ದೇಶವನ್ನು ಇನ್ನಸ್ಟು ಎತ್ತರಕ್ಕೆ ಬೆಳೆಸುವುದು, ಅದರ ಜೊತೆಗೆ ತಾವು ಬೆಳೆಯುವುದು” ಎಂದು. ಪ್ಲೇಟೋ ಪ್ರಕಾರ ಅಟ್ಲಾಂಟಿಸ್ ನಾಗರೀಕತೆಯೂ ಎಲ್ಲಾ ಪ್ರಾಚೀನ ನಾಗರಿತೆಗಳ ಹಾಗೆ ಪ್ರವಾಹಕ್ಕೆ ಸಿಕ್ಕು ಸಮುದ್ರದ ಒಳಗೆ ಮುಳುಗಡೆಯಾಯಿತು. ಆ ಪ್ರವಾಹದಲ್ಲಿ ಬದುಕುಳಿದವರೇ ಪ್ರಾಚೀನ ಗ್ರೀಕರು. ಪ್ಲೇಟೋ, “ಇಂದಿಗೂ ಅಟ್ಲಾಂಟಿಸ್ ನಾಗರೀಕತೆ ಅವಶೇಷಗಳಿವೆ, ಸಮುದ್ರದ ಮೂಲೆಯಲ್ಲಿ ಎಲ್ಲೋ ಕುಳಿತಿದೆ. ಅದನ್ನು ಹುಡುಕಿದರೆ ಮನುಷ್ಯರನ್ನು ದಂಗುಬಡಿಸುವಂಥ ತಂತ್ರಜ್ಞಾನ ಅನಾವರಣಗೊಳ್ಳುತ್ತದೆ” ಎಂದು ಆ ಕಾಲದಲ್ಲೇ ಪ್ಲೇಟೋ ಬರೆಯುತ್ತಾನೆ.
ಪ್ಲೇಟೋ ಹೇಳಿಕೆಗೆ ಪೂರಕವಾಗಿ ಹಲವಾರು ಪ್ರಾಚೀನ ನಕ್ಷೆಗಳು, ದಾಖಲೆಗಳು ಇದೆ. ಇಂದಿಗೂ ವ್ಯಾಟಿಕನ್ ಆರ್ಕೈವ್’ನಲ್ಲಿ ಅಟ್ಲಾಂಟಿಸ್ ಬಗ್ಗೆ ಒಂದು ದೊಡ್ಡ ಪುಸ್ತಕವೇ ಇದೆ ಎಂದು ವದಂತಿಗಳಿವೆ.
ಅಟ್ಲಾಂಟಿಸ್ ಎನ್ನುವ ಒಂದು ಶ್ರೀಮಂತ ನಾಗರಿತೆ ಇದ್ದಿರಬಹುದು, ಅದರ ಬಳಿ ಪ್ರಕೃತಿಯನ್ನೇ ನಿಯಂತ್ರಿಸುವ ತಂತ್ರಜ್ಞಾನವೂ ಇದ್ದಿರಬಹುದು. ಆದರೂ ಅವರಿಂದ, ಅವರ ತಂತ್ರಜ್ಞಾನದಿಂದ ಪ್ರವಾಹವನ್ನು ನಿಯಂತ್ರಿಸಲಾಗಲಿಲ್ಲ, ಅದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ. ಅಥವಾ ಅವರಿಗೆ ನಿಯಂತ್ರಿಸಲಾಗದಷ್ಟು ದೊಡ್ಡ ಪ್ರವಾಹ ಬಂದಿತ್ತೇನೋ!? ಭೂಮಿಯ ಮೇಲೆ ಅದರ ಕುರುಹೂ ಉಳಿಯದಂತೆ ಕಾಣೆಯಾಗಿಯ್ತು.
ಇದನ್ನೆಲ್ಲ ನೋಡಿದಾಗ, ಎಷ್ಟೇ ಪುರಾವೆಗಳಿದ್ದರೂ ಒಂದು ಅನುಮಾನ ಮೂಡುತ್ತದೆ. ಅಟ್ಲಾಂಟಿಸ್ ಎನ್ನುವುದು ಪ್ಲೇಟೋ ಕಲ್ಪನೆಯ ಒಂದು ರೂಪಕವಷ್ಟೇ ಆಗಿರಬಹುದೇ ಎಂದು! ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಮನುಷ್ಯರೆಲ್ಲರೂ ಒಂದು ಸಮುದಾಯವಾಗಿ ನಿಂತರೆ ಏನುಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅಟ್ಲಾಂಟಿಸ್ ಎನ್ನುವ ನಾಗರೀಕತೆಯೇ ಸಾಕ್ಷಿ ಅನಿಸುತ್ತದೆ. ಅಕಸ್ಮಾತ್ ನಾವೆಲ್ಲರೂ ನಮ್ಮ ನಮ್ಮ ದೇಶದ ಪ್ರಜೆಗಳು ಅನ್ನುವುದನ್ನು ಬಿಟ್ಟು ಇಡೀ ಭೂಮಿಯೇ ಒಂದು ದೇಶ, ನಾವೆಲ್ಲರೂ ಅದರ ಪ್ರಜೆಗಳು ಎಂದು ಭಾವಿಸಿ, ಭೂಮಿಯ ಒಳಿತಿಗಾಗಿ ದುಡಿದರೆ, ಎಲ್ಲ ಮನುಷ್ಯರ ಅಭಿವೃದ್ಧಿಗಾಗಿ ದುಡಿದರೆ ಅಟ್ಲಾಂಟಿಸ್ ನಾಗರಿಕತೆಯಂತೆಯೇ ಏಳಿಗೆಯಾಗಬಹುದು – ಅನ್ನುವುದನ್ನು ಪ್ಲೇಟೋ ಈ ಮೂಲಕ ಹೇಳಲು ಹೊರಟಿದ್ದಿರಬಹುದು. ಅದರ ಜೊತೆಗೇ, ನಾವೆಲ್ಲರೂ ಜೊತೆಯಾಗಿ ಎಂಥ ಅಭಿವೃದ್ಧಿ ಸಾಧಿಸಿದರೂ ಪ್ರಕೃತಿಯ ಮುಂದೆ ತಲೆಬಾಗಲೇಬೇಕು. ಸುಂದರ ವಾತಾವರಣ ಸೃಷ್ಟಿ ಮಾಡುವುದಷ್ಟೆ ನಮ್ಮ ಕೈಯಲ್ಲಿರುವುದು, ವಿನಾಶ ಮಾಡುವ ಅಧಿಕಾರ, ಶಕ್ತಿ ಏನಿದ್ದರೂ ಇರುವುದು ಪ್ರಕೃತಿಯ ಕೈಯಲ್ಲಿ – ಅನ್ನುವುದನ್ನೂ ಇದು ಮನದಟ್ಟು ಮಾಡಿಸುತ್ತದೆ. ಬಹುಶಃ ಅಟ್ಲಾಂಟಿಸ್ ಬಗ್ಗೆ ಬರೆದ ಪ್ಲೇಟೋ ಉದ್ದೇಶ ಇದನ್ನು ಸಾರುವುದೇ ಆಗಿತ್ತೇನೋ!

