ಆಲಿಸುವ ಅಂತಃಕರಣವಿರಲಿ…

ಈ ಕಷ್ಟ ಜಗತ್ತಿನಲ್ಲಿ ತನ್ನ ನೋವನ್ನು ಕೇಳಿಸಿಕೊಳ್ಳಲು ಒಬ್ಬ ಮನುಷ್ಯನಾದರೂ ಇದ್ದಾನಲ್ಲ ಎನ್ನುವ ಭರವಸೆಯೇ ಆಕೆಯನ್ನು ಆತ್ಮಹತ್ಯೆಯ ನಿರ್ಧಾರದಿಂದ ಹೊರಬರುವಂತೆ ಮಾಡಿತ್ತು… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ

ವಿಕ್ಟರ್ ಫ್ರಾಂಕಲ್ ಇಪ್ಪತ್ತನೇ ಶತಮಾನದ ಒಬ್ಬ ದೊಡ್ಡ ಮನಶಾಸ್ತ್ರಜ್ಞ, ನಾಝಿ ಜರ್ಮನಿಯ ಡೆತ್ ಕ್ಯಾಂಪ್ ಗಳಿಂದ ಬದುಕಿ ಬಂದವರು. ಬದುಕನ್ನ ರಕ್ಷಿಸುವ ಅವರ ಪುಟ್ಟ ಪುಸ್ತಕ Man’s search for meaning ಪ್ರತಿಯೊಬ್ಬರೂ ಓದಲೇ ಬೇಕಾಗಿರುವುಂಥದು.

ವಿಕ್ಟರ್ ತಮಗೆ ಮಧ್ಯರಾತ್ರಿ ಫೋನ್ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲಿರುವುದಾಗಿ ಶಾಂತ ಚಿತ್ತದಿಂದ ಹೇಳಿದ ಹೆಣ್ಣು ಮಗಳೊಬ್ಬಳ ವಿಷಯ ಹೇಳುತ್ತಾರೆ. ಆ ರಾತ್ರಿ ವಿಕ್ಟರ್ ಅವಳನ್ನು ಫೋನ್ ಮೇಲೆಯೇ ಇರಿಸಿಕೊಂಡು ಅವಳ ಜೊತೆ ಸುದೀರ್ಘವಾಗಿ ಅವಳ ಡಿಪ್ರೆಶ್ಶನ್ ಬಗ್ಗೆ ಮಾತನಾಡುತ್ತಾರೆ. ಅವಳ ಖಿನ್ನತೆಯ ಕಾರಣಗಳನ್ನು ತಿಳಿದುಕೊಂಡು ಅವಳಿಗೆ ಒಂದಾದ ಮೇಲೊಂದರಂತೆ ಬದುಕಿನ ಮಹತ್ವದ ಬಗ್ಗೆ, ಬದುಕುವ ಕಾರಣಗಳ ಬಗ್ಗೆ ತಿಳಿ ಹೇಳುತ್ತಾರೆ. ಬಹಳ ಹೊತ್ತಿನ ಮಾತುಕತೆಯ ನಂತರ ಆಕೆ ತನ್ನ ಆತ್ಮಹತ್ಯೆಯ ನಿರ್ಧಾರವನ್ನು ಬದಲಿಸುತ್ತಾಳೆ. ತಾನು ಬದುಕಿ ತೋರಿಸುತ್ತೇನೆ ಎಂದು ಆಕೆ ವಿಕ್ಟರ್ ಗೆ ಮಾತು ಕೊಡುತ್ತಾಳೆ. ಮತ್ತು ಕೊಟ್ಟ ಮಾತಿನಂತೆ ಬದುಕುತ್ತಾಳೆ.

ಮುಂದೆ ಯಾವಾಗಲೋ ಆಕೆ ವಿಕ್ಟರ್ ಫ್ರಾಂಕಲ್ ಅವರನ್ನ ಭೇಟಿಯಾದಾಗ ವಿಕ್ಟರ್, ಬದುಕಲು ತಾವು ನೀಡಿದ ಯಾವ ಕಾರಣದಿಂದಾಗಿ ಆಕೆ ತನ್ನ ಆತ್ಮಹತ್ಯೆಯ ನಿರ್ಧಾರ ಬದಲಿಸಿದ್ದರ ಬಗ್ಗೆ ಕೇಳುತ್ತಾರೆ.

“ನೀವು ನೀಡಿದ ಯಾವ ಸಲಹೆಯೂ ನಾನು ಆತ್ಮಹತ್ಯೆಯ ನಿರ್ಧಾರ ಬದಲಿಸಲು ಕಾರಣವಲ್ಲ” ಆಕೆಯ ಉತ್ತರ ಕೇಳಿ ವಿಕ್ಟರ್ ಗೆ ಆಶ್ಚರ್ಯವಾಗುತ್ತದೆ.

“ಮತ್ತೆ ನೀನು ಆತ್ಮಹತ್ಯೆಯ ನಿರ್ಧಾರ ಬದಲಿಸಲು ಏನು ಕಾರಣ? “ ವಿಕ್ಟರ್ ಮತ್ತೆ ಅವಳಿಗೆ ಒತ್ತಾಯ ಮಾಡಿ ಕೇಳುತ್ತಾರೆ.

ವಿಕ್ಟರ್ ಪ್ರಶ್ನೆಗೆ ಅವಳ ಉತ್ತರ ಬಹಳ ಸರಳವಾಗಿತ್ತು. ಅಂದು ರಾತ್ರಿ ವಿಕ್ಟರ್ ಅವಳೊಂದಿಗೆ ಮಾತನಾಡಲು ಒಪ್ಪಿಕೊಂಡಿದ್ದು ಮತ್ತು ಸುದೀರ್ಘವಾಗಿ ಅವಳು ಹೇಳಿದ್ದನ್ನೆಲ್ಲ ಕೇಳಿಸಿಕೊಂಡಿದ್ದಷ್ಟೇ ಅವಳು ತನ್ನ ಸಾಯುವ ಆಲೋಚನೆಯನ್ನು ಬದಲಾಯಿಸಿಕೊಳ್ಳಲು ಕಾರಣವಾಗಿತ್ತು. ಈ ಕಷ್ಟ ಜಗತ್ತಿನಲ್ಲಿ ತನ್ನ ನೋವನ್ನು ಕೇಳಿಸಿಕೊಳ್ಳಲು ಒಬ್ಬ ಮನುಷ್ಯನಾದರೂ ಇದ್ದಾನಲ್ಲ ಎನ್ನುವ ಭರವಸೆಯೇ ಆಕೆಯನ್ನು ಆತ್ಮಹತ್ಯೆಯ ನಿರ್ಧಾರದಿಂದ ಹೊರಬರುವಂತೆ ಮಾಡಿತ್ತು.

ಬಹಳಷ್ಟು ಬಾರಿ ನಮ್ಮ ಬ್ರಿಲಿಯಂಟ್ ಆರ್ಗ್ಯುಮೆಂಟ್ ಗಳು, ಅಪೂರ್ವ ಸಲಹೆಗಳು ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಬದಲಾಗಿ ಅವರ ಕೈ ಹಿಡಿದುಕೊಂಡು ಅವರು ಹೇಳುತ್ತಿರುವ ಮಾತುಗಳನ್ನ ಅಂತಃಕರಣದಿಂದ ಕೇಳುವಂಥ ನಮ್ಮ ಸಣ್ಣ ಸಣ್ಣ ಆ್ಯಕ್ಟ್ ಗಳು ಅವರ ಬದುಕಿಗೆ ಬಹುದೊಡ್ಡ ಉಡುಗೊರೆಯಾಗಿ ಪರಿಣಮಿಸುತ್ತವೆ. ಕೇಳುವಿಕೆಯ ಇಂಥ ಯಾವ ಅವಕಾಶಗಳನ್ನೂ ತಪ್ಪಿಸಿಕೊಳ್ಳಬೇಡಿ. ಅವರು ನಿಮ್ಮಿಂದ ಯಾವ ಮಹಾ ಸಲಹೆಯನ್ನೂ ನಿರೀಕ್ಷಿಸುತ್ತಿರುವುದಿಲ್ಲ. ತಮ್ಮ ಮಾತುಗಳಿಗೆ ಆಪ್ತ ಕಿವಿಯೊಂದನ್ನು ಮಾತ್ರ ಅವರು ಬಯಸುತ್ತಿರುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.