ಧ್ಯಾನದಿಂದ ನಿಜಕ್ಕೂ ಏನಾಗುತ್ತದೆ? : ಓಶೋ ವ್ಯಾಖ್ಯಾನ

ನೀವು ನಿಜವಾಗಲೂ ಧ್ಯಾನ ಮಾಡುತ್ತೀರಾದರೆ ಬದುಕಿನಲ್ಲಿ ಫೆಲ್ಯೂರ್ ಆಗುತ್ತೀರಿ, ಬಹುದೊಡ್ಡ ಫೆಲ್ಯೂರ್. ನೀವು ಯಶಸ್ಸಿನ ಮೆಟ್ಟಲು ಏರುತ್ತಿರುವಿರಾದರೆ, ಆ ಯಶಸ್ಸು ಕೂಡ ಮಾಯವಾಗುತ್ತದೆ ಏಕೆಂದರೆ ಧ್ಯಾನ ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ, ನಾನ್ ವಾಯಲೆಂಟ್ ಮಾಡುತ್ತದೆ, ಅಸ್ಪರ್ಧಾತ್ಮಕ ಮಾಡುತ್ತದೆ, ನಾನ್ ಇಗೋಯಿಸ್ಟಿಕ್ ಮಾಡುತ್ತದೆ, ಲವಿಂಗ್ ಪರ್ಸನ್ ಮಾಡುತ್ತದೆ.

ಕಪಟಿ ಮಾಸ್ಟರ್ ಗಳು ನಿಮ್ಮ ಬಯಕೆಗಳನ್ನು ಮುಂದಿಟ್ಟುಕೊಂಡು ಮಾತನಾಡುತ್ತಾರೆ. ನೀವು ಧ್ಯಾನ ಮಾಡಿದರೆ ಶ್ರೀಮಂತರಾಗುತ್ತೀರಿ, ಯಶಸ್ವಿಗಳಾಗುತ್ತೀರಿ ಎಂದೆಲ್ಲ ಕತೆ ಕಟ್ಟುತ್ತಾರೆ. ಇದು ಸಂಪೂರ್ಣ ನಾನ್ಸೆನ್ಸ್.

ಮಹೇಶ್ ಯೋಗಿ ಹೇಳುತ್ತಾರಂತೆ, “ಧ್ಯಾನ ಮಾಡಿದರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ, ನೀವು ಶ್ರೀಮಂತರಾಗುತ್ತೀರಿ, ಯಶಸ್ವಿಯಾಗುತ್ತೀರಿ, ಪ್ರಸಿದ್ಧರಾಗುತ್ತೀರಿ, ನೀವು ಯಾವುದೇ ರಂಗದಲ್ಲಿರಬಹುದು ಅಲ್ಲಿ ನೀವು ಅತ್ಯುಚ್ಚ ಸ್ಥಾನ ತಲುಪುತ್ತೀರಿ” ಎಂದೆಲ್ಲ.

ನೀವು ಕೂಡ ಇಂಥ ಮಾತುಗಳನ್ನೇ ಎದುರುನೋಡುತ್ತಿರುತ್ತೀರಿ. ಸರಿ ಹಾಗಾದರೆ ಇಷ್ಟೆಲ್ಲ ಸಾಧ್ಯವಾಗುತ್ತದೆಯಾದರೆ, ಮುಂಜಾನೆ ಹದಿನೈದು ನಿಮಿಷ, ಸಂಜೆ ಹದಿನೈದು ಧ್ಯಾನ ಮಾಡಲು ಅಡ್ಡಿಯಿಲ್ಲ ಎಂದು ನೀವು ಸಿದ್ಧರಾಗುತ್ತೀರಿ. ಕೇವಲ ಅರ್ಧಗಂಟೆ ಧ್ಯಾನದ ಬದಲಿಗೆ ಇಷ್ಟೆಲ್ಲ ಸಿಗುವುದಾದರೆ ಯಾರು ತಾನೆ ಬೇಡ ಅನ್ನುತ್ತಾರೆ? ಆದರೆ ವಾಸ್ತವ ಇದಕ್ಕೆ ಸಂಪೂರ್ಣ ವಿರುದ್ಧ.

ನೀವು ನನ್ನ ಕೇಳುತ್ತೀರಾದರೆ, ನೀವು ನಿಜವಾಗಲೂ ಧ್ಯಾನ ಮಾಡುತ್ತೀರಾದರೆ ಬದುಕಿನಲ್ಲಿ ಫೆಲ್ಯೂರ್ ಆಗುತ್ತೀರಿ, ಬಹುದೊಡ್ಡ ಫೆಲ್ಯೂರ್. ನೀವು ಯಶಸ್ಸಿನ ಮೆಟ್ಟಲು ಏರುತ್ತಿರುವಿರಾದರೆ, ಆ ಯಶಸ್ಸು ಕೂಡ ಮಾಯವಾಗುತ್ತದೆ ಏಕೆಂದರೆ ಧ್ಯಾನ ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ, ನಾನ್ ವಾಯಲೆಂಟ್ ಮಾಡುತ್ತದೆ, ಅಸ್ಪರ್ಧಾತ್ಮಕ ಮಾಡುತ್ತದೆ, ನಾನ್ ಇಗೋಯಿಸ್ಟಿಕ್ ಮಾಡುತ್ತದೆ, ಲವಿಂಗ್ ಪರ್ಸನ್ ಮಾಡುತ್ತದೆ. ಈ ಯಾವದೂ ಕೂಡ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಯಶಸ್ಸಿಗೆ ಸಹಾಯ ಮಾಡುವಂಥವಲ್ಲ. ಧ್ಯಾನ ನಿಮ್ಮನ್ನು ಎಷ್ಟು ಖುಶಿಯ ಮನುಷ್ಯನನ್ನಾಗಿ ಮಾಡುತ್ತದೆಯೆಂದರೆ, ನೀವು ನಾಳೆಯ ಬಗ್ಗೆ ಯೋಚಿಸುವುದನ್ನ ಬಿಟ್ಟುಬಿಡುತ್ತೀರಿ. ನಾಳೆಗಾಗಿ ಇವತ್ತಿನ ದಿನವನ್ನು ಹಾಳು ಮಾಡಿಕೊಳ್ಳಲು ನೀವು ಸಿದ್ಧರಾಗುವುದಿಲ್ಲ.

ಧ್ಯಾನ ನಿಮ್ಮನ್ನು ಅಂತರಂಗದ ಶ್ರೀಮಂತರನ್ನಾಗಿಸುತ್ತದೆ ಖಂಡಿತ. ಆದರೆ ಹೊರಜಗತ್ತಿನ ಯಶಸ್ಸು, ಶ್ರೀಮಂತಿಕೆ, ಆರೋಗ್ಯ ಈ ಯಾವುದನ್ನೂ ಗ್ಯಾರಂಟಿಯಾಗಿ ಹೇಳುವುದು ಅಸಾಧ್ಯ. ಧ್ಯಾನ ಇವನ್ನೆಲ್ಲ ಸಾಧ್ಯ ಮಾಡುತ್ತದೆ ಎನ್ನುವುದು ಮಹಾ ಸುಳ್ಳು.

ಮಹರ್ಷಿ ರಮಣರು ಕ್ಯಾನ್ಸರ್ ನಿಂದ ತೀರಿಕೊಂಡರು, ರಾಮಕೃಷ್ಣ ಪರಮಹಂಸರು ಕೂಡ. ಇವರಿಗಿಂತ ಶ್ರೇಷ್ಠ ಮೆಡಿಟೇಟರ್ಸ್ ಬೇರೆ ಯಾರಾದರೂ ಇದ್ದಾರೆಯೆ? ಜಿಡ್ಡು ಕೃಷ್ಣಮೂರ್ತಿ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು. ಅವರಿಗೆ ಸುಮಾರು ಇಪ್ಪತ್ತು ವರ್ಷಗಳಿಂದ ಅಸಾಧ್ಯ ತಲೆನೋವು ಕಾಡುತ್ತಿತ್ತು. ಈ ತಲೆ ನೋವು ಎಷ್ಟು ತೀವ್ರವಾಗಿತ್ತೆಂದರೆ, ಅವರಿಗೆ ಗೋಡೆಗೆ ತಲೆ ಚಚ್ಚಿಕೊಳ್ಳಬೇಕೆಂದು ಅನಿಸುತ್ತಿತ್ತು. ಜಿಡ್ಡುಗಿಂತ ದೊಡ್ಡ ಧ್ಯಾನಿ ಯಾರಾದರೂ ಇದ್ದಾರಾ? ಅವರಿಗಿಂತ ದೊಡ್ಡ ಜೀವಂತ ಬುದ್ಧ ಯಾರಾದರೂ ಇದ್ದಾರಾ? ಕೃಷ್ಣಮೂರ್ತಿಯವರಿಗೆ ಇಂಥ ಕೆಟ್ಟ ತಲೆನೋವು ಇದೆಯೆಂದರೆ, ರಮಣ ಮತ್ತು ರಾಮಕೃಷ್ಣರು ಕ್ಯಾನ್ಸರ್ ನಿಂದ ತೀರಿಕೊಳ್ಳುತ್ತಾರೆಂದರೆ, ಧ್ಯಾನ ಒಳ್ಳೆಯ ಆರೋಗ್ಯವನ್ನು ಕೊಡುತ್ತದೆ ಎನ್ನುವ ಸುಳ್ಳನ್ನು ಯಾರಾದರೂ ನಂಬಬಹುದೆ?

ಹೌದು ಧ್ಯಾನ ನಿಮಗೆ ಆರೋಗ್ಯವನ್ನು ಸಾಧ್ಯ ಮಾಡುತ್ತದೆ ಆದರೆ ಅದು ಅಂತರಂಗದ ಆರೋಗ್ಯ. ನೀವು ಒಳಗಿನಿಂದ ಆರೋಗ್ಯವಂತರಾಗುತ್ತೀರಿ, ಪೂರ್ಣವಾಗುತ್ತೀರಿ, ಅಂತರಂಗದ ಅಧ್ಯಾತ್ಮಿಕ ಆರೋಗ್ಯ ನಿಮ್ಮದಾಗುತ್ತದೆ. ಹೌದು ರಮಣರು ಕ್ಯಾನ್ಸರ್ ನಿಂದ ತೀರಿಕೊಂಡರು, ಆದರೆ ಅವರ ಕಣ್ಣುಗಳು ಖುಷಿಯಿಂದ ತುಂಬಿಕೊಂಡಿದಿದವು. ಅವರು ನಗುನಗುತ್ತ ಸಾವನ್ನು ಬರಮಾಡಿಕೊಂಡರು. ಇದು ನಿಜವಾದ ಆರೋಗ್ಯ. ಅವರ ದೇಹದಲ್ಲಿ ಅಪಾರ ಸಂಕಟವಿತ್ತು ಆದರೆ ಅವರು ಅದಕ್ಕೆ ಕೇವಲ ಸಾಕ್ಷಿಗಳಾಗಿದ್ದರು. ಇದು ಧ್ಯಾನ, ಇದು ಧ್ಯಾನ ಸಾಧ್ಯಮಾಡುವ ಆರೋಗ್ಯ.


source: Osho/ The Dhammapada: The Way of the Buddha.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.