ಒಂದೇ ಜಾತಿ, ಒಂದೇ ಮತ, ಒಂದೇ ದೈವ ಮನುಜಗೆ । ನಾರಾಯಣ ಗುರು ಸಾರ #1

ನಾರಾಯಣ ಗುರುಗಳ ಜೊತೆಗೆ ಸಿ.ವಿ. ಕುಂಞುರಾಮನ್ ನಡೆಸಿದ ಸಂವಾದವು 1925 ಅಕ್ಟೋಬರ್ 9ರಂದು ‘ಕೇರಳ ಕೌಮುದಿ’ ಪತ್ರಿಕೆಯಲ್ಲಿ. ತೊಂಬತ್ತೊಂಬತ್ತು ವರ್ಷಗಳ ಹಿಂದೆ ಪ್ರಕಟವಾದ ಈ ಸಂದರ್ಶನದಲ್ಲಿ ಪ್ರತಿಪಾದಿತವಾಗಿರುವ ಸಂಗತಿಗಳು ಇಂದಿಗೂ ಪ್ರಸ್ತುತವಾಗಿಯೇ ಉಳಿದಿವೆ… । ಸಂಗ್ರಹ ಅನುವಾದ : ಎನ್.ಎ.ಎಂ.ಇಸ್ಮಾಯಿಲ್

ವೈಚಾರಿಕ ಮತ್ತು ಬೌದ್ಧಿಕ ಕೇರಳದ ನಿರ್ಮಾತೃಗಳ ಪಟ್ಟಿಯಲ್ಲಿ  ಸೇರುವ ಪ್ರಮುಖ ಹೆಸರು ಸಿ.ವಿ. ಕುಂಞುರಾಮನ್ ಅವರದ್ದು. ಕವಿ, ನಾಟಕಕಾರ, ವಿಮರ್ಶಕ ಮತ್ತು ‘ಕೇರಳ ಕೌಮುದಿ’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಎಂಬಲ್ಲಿಗೆ ಇವರ ಪರಿಚಯ ಮುಗಿಯುವುದಿಲ್ಲ. 1871ರ ಫೆಬ್ರವರಿ 6ರಂದು ಜನಿಸಿದ ಕುಂಞುರಾಮನ್ ಎಂಟನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಿ ಅರಣ್ಯ ಇಲಾಖೆಯ ನೌಕರಿಗೆ ಸೇರಿದರು. ಅಲ್ಲಿರುವಾಗಲೇ ಶಿಕ್ಷಕನಾಗಲು ಬೇಕಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಕ್ಷಕನಾಗಿ ವೃತ್ತಿಯಾರಂಭಿಸಿದರು. 1913ರಲ್ಲಿ ವಕೀಲಿಕೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅವರ ವೃತ್ತಿ ಜೀವನ ಮತ್ತೊಂದು ದಿಕ್ಕಿಗೆ ಹೊರಳಿತು. ಈ ನಡುವೆ ಅವರು ‘ಕೇರಳ ಕೌಮುದಿ’ಯನ್ನು ವಾರಪತ್ರಿಕೆಯಾಗಿ ಆರಂಭಿಸಿದರು. ವಕೀಲಿಕೆಯ ಜೊತೆಗೇ ಪತ್ರಕರ್ತನ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ ಅವರು 1920ರಲ್ಲಿ ‘ಕೇರಳ ಕೌಮುದಿ’ಯನ್ನು ದಿನಪತ್ರಿಕೆಯಾಗಿ ಪರಿವರ್ತಿಸಿ ಪೂರ್ಣಾವಧಿಗೆ ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡರು.

ನಾರಾಯಣ ಗುರುಗಳ ಗೃಹಸ್ಥ ಶಿಷ್ಯರಲ್ಲಿ ಸಿ.ವಿ. ಕುಂಞುರಾಮನ್ ಪ್ರಮುಖರು. ಅಸ್ಪೃಶ್ಯತೆಯ ವಿರುದ್ಧ ನಡೆದ ವೈಕಂ ಸತ್ಯಾಗ್ರಹದಲ್ಲಿಯೂ ಇವರದ್ದು ಬಹುಮುಖ್ಯ ಪಾತ್ರ. ಶಿವಗಿರಿ ಮಠದ ಸಾಮಾಜಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದ ಕುಂಞುರಾಮನ್ ಶ್ರೀನಾರಾಯಣ ಧರ್ಮಪರಿಪಾಲನ ಯೋಗಂನ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ನಾರಾಯಣ ಗುರುಗಳ ಜೊತೆಗೆ ಸಿ.ವಿ. ಕುಂಞುರಾಮನ್ ನಡೆಸಿದ ಸಂವಾದವು 1925 ಅಕ್ಟೋಬರ್ 9ರಂದು  ‘ಕೇರಳ ಕೌಮುದಿ’ ಪತ್ರಿಕೆಯಲ್ಲಿ ಈ ಸಂವಾದ ಪ್ರಕಟವಾಯಿತು. ತೊಂಬತ್ತೆಂಟು ವರ್ಷಗಳ ಹಿಂದೆ ಪ್ರಕಟವಾದ ಈ ಸಂದರ್ಶನದಲ್ಲಿ ಪ್ರತಿಪಾದಿತವಾಗಿರುವ ಸಂಗತಿಗಳು ಇಂದಿಗೂ ಪ್ರಸ್ತುತವಾಗಿಯೇ ಉಳಿದಿವೆ.


ಒಂದೇ ಜಾತಿ, ಒಂದೇ ಮತ, ಒಂದೇ ದೈವ ಮನುಜಗೆ

ಶ್ರೀನಾರಾಯಣಗುರುಸ್ವಾಮಿ ಶ್ರೀಪಾದರು ಮತ್ತು ನನ್ನ ನಡುವಣ ಸಂವಾದ ಈ ಕೆಳಗೆ ಬರೆದಿರುವ ಸ್ವರೂಪದಲ್ಲಿ ನಡೆದದ್ದಲ್ಲ. ನನ್ನ ಮತ್ತು ಸ್ವಾಮಿ ಶ್ರೀಪಾದರ ನಡುವೆ ಅನೇಕ ಸಂದರ್ಭಗಳಲ್ಲಿ ನಡೆದ ಮತ ಸಂಬಂಧಿತ ಮಾತುಕತೆಗಳಲ್ಲಿ ಅವರು ಹೇಳಿದ ಮತ್ತು ನಾನು ಅವರಲ್ಲಿ ಕೇಳಿದ ವಿಚಾರಗಳನ್ನು ಹೊರತುಪಡಿಸಿದ ಯಾವುದನ್ನೂ ಇಲ್ಲಿ ಸೇರಿಸಿಲ್ಲ. ಹಲವು ಸಂವಾದಗಳಲ್ಲಿ ಹೊರಬಂದ ಸಂಗತಿಗಳನ್ನು ವಿಷಯಗಳಿಗೆ ಅನುಗುಣವಾಗಿ ಕ್ರೋಢೀಕರಿಸಿ ಮಂಡಿಸಲಾಗಿದೆ. ಇದನ್ನು ಬರೆದ ನಂತರ ಮೊದಲಿಗೆ ಬ್ರಹ್ಮಶ್ರೀ ಬೋಧಾನಂದಸ್ವಾಮಿಗಳು ಮತ್ತು ಇತ್ತೀಚೆಗೆ ಶಿವಗಿರಿಯಲ್ಲಿ ಸೇರಿದ್ದ ಸಂನ್ಯಾಸಿ ಸಂಘದ ಸದಸ್ಯರಿಗೆ ನಾನೇ ಓದಿ ಹೇಳಿದ್ದೇನೆ. ಆಮೇಲೇ ಸತ್ಯವ್ರತ ಸ್ವಾಮಿಗಳ ಮುಖೇನ ಸ್ವಾಮಿ ಶ್ರೀಪಾದರಿಗೂ ಓದಿ ಹೇಳಲಾಗಿದೆ. ಅವರ ಅನುಮತಿಯನ್ನು ಪಡೆದನಂತರವಷ್ಟೇ ಇದನ್ನು ಪ್ರಕಟಿಸಲಾಗುತ್ತಿದೆ. ಇಲ್ಲಿರುವ ವಿಷಯಕ್ಕೆ ಸಂಬಂಧಿಸಿದ ಶ್ರೀಪಾದರ ಸಿದ್ಧಾಂತಗಳಲ್ಲಿ ಕೆಲವನ್ನು ಆಲುವಾದಲ್ಲಿ ನಡೆದ ಸರ್ವಧರ್ಮ ಮಹಾ ಸಮ್ಮೇಳನದ ಸ್ವಾಗತ ಭಾಷಣದಲ್ಲೇ ಸತ್ಯವ್ರತಸ್ವಾಮಿಗಳು ಕ್ರೋಢೀಕರಿಸಿದ್ದರು. ಆ ಭಾಷಣದಲ್ಲಿ ಪ್ರಸ್ತಾಪವಾದ ವಿಚಾರಗಳನ್ನು ಇಲ್ಲಿ ಮತ್ತೆ ಹೇಳಿಲ್ಲ.

ಸಿ.ವಿ. ಕುಂಞುರಾಮನ್(ಸಿವಿಕೆ): ಒಂದೇ ಜಾತಿ ಒಂದೇ ಮತ, ಒಂದೇ ದೈವ ಮನುಜಗೆ ಎಂಬ ತಮ್ಮ ಧರ್ಮೋಪದೇಶವನ್ನು ಶಿಷ್ಯವೃಂದ ಈಗ ಒಂಗು ಘೋಷಣೆಯಾಗಿ ಒಪ್ಪಿಕೊಂಡಿದೆ. ಆದರೆ ಇದನ್ನು ಹಲವರು ಆಕ್ಷೇಪಿಸಿದ್ದಾರೆ. ಹಾಗೆಯೇ ಇನ್ನು ಕೆಲವರು ಇದು ನಿಜಕ್ಕೂ ಸರಿಯಾದ ಧರ್ಮೋಪದೇಶವೇ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಮಹಾತ್ಮಾ ಗಾಂಧಿ ತಮ್ಮ ಆಶ್ರಮಕ್ಕೆ ಭೇಟಿ ನೀಡಿದಾಗಲೂ ಈ ಪರಿಕಲ್ಪನೆಯ ಬಗ್ಗೆ ತಮಗಿರುವ ಭಿನ್ನಾಭಿಪ್ರಾಯವನ್ನು ಪ್ರಸ್ತಾಪಿಸಿದ್ದರು. ಅಷ್ಟೇ ಅಲ್ಲ ತಮ್ಮ ಈ ಉಪದೇಶವನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಈ ವ್ಯಾಖ್ಯಾನಗಳನ್ನು ಕಂಡು ಆಶಾನ್ (ಕವಿ ಕುಮಾರನ್ ಆಶಾನ್) ‘ವ್ಯಾಖಾನಕಾರರಿಂದ ನನ್ನನ್ನು ರಕ್ಷಿಸಿ’ ಎಂದು ಅಲವತ್ತುಕೊಂಡರೇ ಹೊರತು ಸರಿಯಾದ ವ್ಯಾಖ್ಯಾನ ಯಾವುದೆಂದು ಅವರೂ ಹೇಳಲಿಲ್ಲ. ಸರಿಯಾದ ವ್ಯಾಖ್ಯಾನವೊಂದನ್ನು ಶ್ರೀಪಾದರೇ ನೀಡಿದರೆ ಜನಗಳು ಸಂಶಯವನ್ನು ಬಗೆಹರಿಸಿಕೊಂಡು ತೃಪ್ತರಾಗುತ್ತಾರಲ್ಲವೇ?

ನಾರಾಯಣ ಗುರು: ಕುಂಞುರಾಮನ್, ಇದಕ್ಕೆ ನಿಮ್ಮ ವ್ಯಾಖ್ಯಾನವೇನು?

ಸಿವಿಕೆ: “ಮಾನವನಿಗೊಂದೇ ಜಾತಿ” ಎಂಬುದರ ವ್ಯಾಖ್ಯಾನ ಸರಳವಾಗಿದೆ ಎಂದು ನನಗನ್ನಿಸುತ್ತದೆ. “ಮನುಷ್ಯಾಣಾಂ ಮನುಷ್ಯತ್ವಂ ಜಾತಿರ್ ಗೋತ್ವಂ ಗವಾಂ ಯಥಾ” ಎಂದು ತಾವೇ ತಿಳಿಸಿಕೊಟ್ಟಿರುವಂತೆ ಮನುಷ್ಯತ್ವವಿರುವ ಜೀವಿ ಮನುಷ್ಯಜಾತಿಗೆ ಸೇರುತ್ತಾನೆ ಎಂಬುದರ ಬಗ್ಗೆ ಯಾರಿಗೂ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲದೇ ಇರುವುದರಿಂದ ಅದರ ಬಗ್ಗೆ ಆಕ್ಷೇಪವೂ ಇಲ್ಲ. “ಮನುಜನಿಗೊಂದೇ ದೈವ” ಎಂಬುದಕ್ಕೆ ದೇವರಲ್ಲಿ ನಂಬಿಕೆ ಇರುವವರು ಆಕ್ಷೇಪಿಸಲು ಸಾಧ್ಯವಿಲ್ಲ. “ಒಂದೇ ಮತ” ಎಂಬುದರ ಬಗ್ಗೆ ಎಲ್ಲರಿಗೂ ಸಂಶಯವಿದೆ. ‘ಹಲಮತಸಾರವೂ ಏಕವೆಂದರಿಯದ ಜಗದಲೊಂದಾನೆಯಲಿ ಅಂಧರಂತೆ ಹಲವಿದ ತರ್ಕಗಳನ್ನೊದರುತ ಪಾಮರರಲೆವರು’[1] ಎಂಬ ಶ್ರೀಪಾದರ ನುಡಿಯೂ ಸಂಶಯವನ್ನು ನಿವಾರಿಸದೇ ಇರುವುದರಿಂದ “ಒಂದೇ ಮತ” ಪರಿಕಲ್ಪನೆಗೊಂದು ವ್ಯಾಖ್ಯಾನದ ಅಗತ್ಯವಿದೆ.

ಗುರು: “ಹಲಮತಸಾರವೂ ಏಕವು” ಎಂಬುದರ ಬಗ್ಗೆ ಯಾರಿಗಾದರೂ ಆಕ್ಷೇಪವಿದೆಯೇ?

ಸಿವಿಕೆ: ಅದರ ಬಗ್ಗೆಯೂ ಆಕ್ಷೇಪವಿದೆಯೆಂದೇ ವಾದಿಸಬಹುದು. ಆಸ್ತಿಕ ಮತ ಮತ್ತು ನಾಸ್ತಿಕ ಮತಗಳ ಸಾರ ಒಂದೇ ಅಲ್ಲವಲ್ಲ.

ಗುರು: ಮತ ಎಂಬ ಪದಕ್ಕೆ ಇರುವ ಹಲವು ಅರ್ಥಗಳು ಈ ಭ್ರಮೆಯನ್ನು ಹುಟ್ಟುಹಾಕುತ್ತದೆ. ನಾಸ್ತಿಕವಾದ ಎಂಬುದು ಕೆಲವು ವ್ಯಕ್ತಿಗಳು ಹೊರಗೆಡವಿರುವ ‘ಅಭಿಪ್ರಾಯಗಳು’ ಮಾತ್ರ. ಅದು ಯಾವತ್ತೂ ಒಂದು ಜನಸಮುದಾಯದ ಮತವಾಗಿರಲಿಲ್ಲ.

ಸಿವಿಕೆ: ಬೌದ್ಧ ಮತವನ್ನು ಕೆಲವರು ನಾಸ್ತಿಕ ಮತವೆಂದು ಹೇಳುತ್ತಾರೆ.

ಗುರು: ಅದು ಸರಿಯೇ? ನೀವೆಲ್ಲಾ ಬೌದ್ಧ ಮತ ಪಕ್ಷಪಾತಿಗಳಲ್ಲವೇ?

ಸಿವಿಕೆ: ದೇವರನ್ನು ನಂಬವುದು ಎಂದರೆ ಯಾರನ್ನು ಅಥವಾ ಯಾವುದನ್ನು ನಂಬುವುದು ಎಂದರಿಯದವರು; ಅರ್ಥಾತ್ ತಮ್ಮ ನಂಬಿಕೆಗಳ ಕುರಿತ ಸೂಕ್ಷ್ಮಪ್ರಜ್ಞೆ ಇಲ್ಲದವರಷ್ಟೇ ಎತ್ತುವ ಆಕ್ಷೇಪವಿದು. ಬೌದ್ಧ ಮತದ ಬಗೆಗಿನ ಮಾತಿಗೂ ಇದು ಅನ್ವಯಿಸುತ್ತದೆ ಎಂಬುದು ನನ್ನ ಅಭಿಪ್ರಾಯ.

ಗುರು: ಬೌದ್ಧ ಮತವು ಒಂದು ನಾಸ್ತಿಕ ಮತವಾಗಿರಲು ಸಾಧ್ಯವಿಲ್ಲ. ಶುದ್ಧ ನಾಸ್ತಿಕ ಮತವೊಂದರಲ್ಲಿ ಇಷ್ಟು ದೊಡ್ಡ ಜನಸಮುದಾಯ ಇಷ್ಟು ಕಾಲವೂ ಉಳಿಯುವುದು ಸಂಭವನೀಯ ಸಂಗತಿಯಲ್ಲ. ನಿಮ್ಮ ಈಗಿನ ನಂಬಿಕೆಯನ್ನು ವಿಶ್ಲೇಷಿಸಿ ನೀವೀಗ ನಾಸ್ತಿಕನೋ ಅಥವಾ ಆಸ್ತಿಕನೋ ಎಂಬ ತೀರ್ಮಾನಕ್ಕೆ ಬಂದಿದ್ದೀರಾ?

ಸಿವಿಕೆ: ತೀರ್ಮಾನಕ್ಕೆ ಬಂದಿದ್ದೇನೆ. ಇಲ್ಲಿಯ ತನಕವೂ ನಾನು ದೇವರ ಅಸ್ತಿತ್ವದಲ್ಲಿ ದೃಢನಂಬಿಕೆ ಇರುವ ಆಸ್ತಿಕ.

ಗುರು: ನಾಸ್ತಿಕವಾದವನ್ನು ಅನುಸರಿಸುತ್ತೀರಿ ಎಂಬ ಮಾತು ಕೇಳಿದ್ದೇನೆ.

ಸಿವಿಕೆ: ನನ್ನ ಬಗ್ಗೆ ಹಾಗೆ ಕೇಳಿಬಂದಿದ್ದಲ್ಲಿ ಆಶ್ಚರ್ಯವಿಲ್ಲ. ನಾಸ್ತಿಕರನ್ನು ಖಂಡಿಸಲು ಯತ್ನಿಸುವ ಆಸ್ತಿಕರ ಬಳಿಯೂ ಆಸ್ತಿಕರನ್ನು ಟೀಕಿಸಲು ಮುಂದಾಗುವ ನಾಸ್ತಿಕರ ಬಳಿಯೂ ನಾನು ಸಾಕಷ್ಟು ವಾದ ಮಾಡಿದ್ದೇನೆ.

ಗುರು: ವಾದಕ್ಕಾಗಿ ವಾದ ಬೇಡ. ಸಂಶಯ ನಿವಾರಣೆಗೂ, ತಾತ್ವಿಕತೆಯ ಸ್ಪಷ್ಟತೆಗೂ ಬೇಕಾಗಿ ವಾಗ್ವಾದಗಳನ್ನು ನಡೆಸಬೇಕು. ಆಸ್ತಿಕ ಮತಗಳಿಗೆ ಬಾಹ್ಯ ಸ್ವರೂಪದ ಹೊರತಾಗಿ ಆಂತರಿಕ ಸ್ವರೂಪದಲ್ಲೇನಾದರೂ ವ್ಯತ್ಯಾಸವಿದೆಯೇ?

ಸಿವಿಕೆ: ಕೆಲ ಸಂಗತಿಗಳ ಬಗ್ಗೆ ವಿಚಾರ ಮಾಡಿದಾಗ ಆಂತರಿಕ ಸ್ವರೂಪದಲ್ಲೂ ವ್ಯತ್ಯಾಸಗಳಿವೆ ಎಂದೇ ಹೇಳಬೇಕಾಗುತ್ತದೆ.

ಗುರು: ಆ ವ್ಯತ್ಯಾಸಗಳು ಯಾವುವು?

ಸಿವಿಕೆ: ಈ ಪ್ರಪಂಚವನ್ನು ಒಬ್ಬ ಸೃಷ್ಟಿಕರ್ತ ಸೃಷ್ಟಿಸಿದ್ದಾನೆಂದು ಕೆಲವು ಮತಗಳು ಹೇಳಿದರೆ ಇನ್ನು ಕೆಲವು ಮತಗಳು ವಿಕಾಸವಾದಿಗಳು ಹೇಳುವಂತೆ ಬ್ರಹ್ಮಾಂಡದಿಂದ ಆಕಾಶ, ವಾಯು, ಅಗ್ನಿ ಇತ್ಯಾದಿ ಪಂಚಭೂತಗಳುಂಟಾದವು. ಅವುಗಳ ಸಂಶ್ಲೇಷಣಾ ಪ್ರಕ್ರಿಯೆಯಲ್ಲಿ ಕಾಲಾನಂತರಲ್ಲಿ ಜಗತ್ತು ಸೃಷ್ಟಿಯಾಯಿತು ಎನ್ನುತ್ತವೆ. ಹಾಗೆಯೇ ಸೃಷ್ಟಿಕರ್ತನು ಶೂನ್ಯದಿಂದ ಆತ್ಮವನ್ನು ಸೃಷ್ಟಿಸಿದನೆಂದೂ ಅದಲ್ಲ ಬ್ರಹ್ಮವೇ ಆತ್ಮವೆಂದೂ ಹೇಳುವ ಮತಗಳು, ಪುನರ್ಜನ್ಮ ಇದೆಯೆಂದೂ ಇಲ್ಲವೆಂದೂ ಹೇಳುವ ಮತಗಳು, ಕರ್ಮದ ಕುರಿತ ನಂಬಿಕೆ ಸರಿಯೆಂದೂ ಸರಿಯಲ್ಲವೆಂದೂ ಹೇಳುವ ಮತಗಳನ್ನೆಲ್ಲಾ ನೋಡಿದಾಗ ಈ ಮತಗಳ ಆಂತರಿಕ ಸ್ವರೂಪದಲ್ಲಿಯೂ ಭಿನ್ನತೆ ಇದೆ ಎಂದೇ ಹೇಳಬೇಕಾಗುತ್ತದೆ.

ಗುರು: ತತ್ವಗಳು ಭಿನ್ನವಾಗಿರಬಹುದು. ಆದರೆ ಈ ಮತಗಳ ಉದ್ದೇಶಗಳಲ್ಲಿ ಭಿನ್ನತೆ ಇದೆಯೇ?

ಸಿವಿಕೆ: ಅದರಲ್ಲೂ ಭಿನ್ನತೆ ಇದೆ ಎನ್ನಬಹುದು. ಕೆಲ ಮತಗಳು ಸ್ವರ್ಗ ಪ್ರಾಪ್ತಿಯನ್ನಷ್ಟೇ ಆದರ್ಶವಾಗಿಟ್ಟುಕೊಂಡಿವೆ. ಇನ್ನು ಕೆಲವು ಧರ್ಮಗಳು ಸ್ವರ್ಗದಾಚೆಗಿನ ಮೋಕ್ಷಪ್ರಾಪ್ತಿಯನ್ನು ಗುರಿಯಾಗಿಟ್ಟುಕೊಂಡಿವೆ.

ಗುರು: ಸ್ವರ್ಗಾನುಭೂತಿ ಪಡೆದವರಿಗೆ ಅದರಾಚೆಗಿನ ಮತ್ತೊಂದು ಸ್ಥಿತಿಯ ಬಗೆಗಿನ ಅರಿವುಂಟಾಗುವುದು ಸಹಜವಲ್ಲವೇ?

ಸಿವಿಕೆ:  ಅದು ಉಂಟಾಗಲೇಬೇಕಲ್ಲವೇ.

ಗುರು: ಹೌದು, ಖಂಡಿತವಾಗಿಯೂ ಆ ಅರಿವು ಮೂಡುತ್ತದೆ. ಮೋಕ್ಷವನ್ನು ಪ್ರತಿಪಾದಿಸುವ ಮತಗಳು ಸ್ವರ್ಗವನ್ನು ನಿರಾಕರಿಸುವುದಿಲ್ಲವಲ್ಲ. ಭೂಲೋಕ, ಭುವರ್ಲೋಕ ಮೊದಲಾದ ಊರ್ಧ್ವಗತಿಯಲ್ಲಿರುವ ಏಳು ಲೋಕಗಳೂ ಆನಂತರ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯಗಳೆಲ್ಲವೂ ಮೋಕ್ಷದೆಡೆಗಿನ ಸೋಪಾನಗಳೇ ತಾನೆ. ಇದರಲ್ಲಿ ಯಾವುದೋ ಒಂದು ಮೆಟ್ಟಿಲಿನ ತನಕ ತಲುಪಿದನಿಗೆ ಮುಂದಿನ ಮೆಟ್ಟಿಲೇರಬೇಕು ಎಂದು ಅನ್ನಿಸದೇ ಇರಲು ಸಾಧ್ಯವೇ?

ಸಿವಿಕೆ: ಈ ಎಲ್ಲಾ ಸೋಪಾನಗಳನ್ನು ಎಲ್ಲಾ ಮತಗಳವರೂ ಒಪ್ಪುವುದಿಲ್ಲವಲ್ಲ.

ಗುರು: ಅದರಿಂದ ತೊಂದರೆಯೇನು? ಮೇಲ್ಮುಖ ಚಲನೆಯಲ್ಲದೆ ಕೆಳಮುಖ ಚಲನೆಯನ್ನು ಯಾವುದಾದರೂ ಮತ ಬೋಧಿಸುತ್ತಿದೆಯೇ?

ಸಿವಿಕೆ: ಇಲ್ಲ…

ಗುರು: ಎಲ್ಲಾ ಮತಗಳ ಉದ್ದೇಶವೂ ಒಂದೇ. ನದಿಗಳು ಸಮುದ್ರ ಸೇರಿದ ಮೇಲೆ ತೀರ ಮತ್ತು ನಡುಕಡಲೆಂಬ ವ್ಯತ್ಯಾಸವೇ ಅಳಿಯುವುದಿಲ್ಲವೇ? ಜೀವಾತ್ಮಗಳಿಗೆ ಊರ್ಧ್ವಮುಖತ್ವವನ್ನು ನೀಡುವ ಅಧಿಕಾರವಷ್ಟೇ ಮತಗಳಿಗೆ ಇರುವುದು. ಅಷ್ಟು ದೊರೆತ ಮೇಲೆ ಸೂಕ್ಷ್ಮವನ್ನು ಅವರವರೇ ಹುಡುಕಿ ಕಂಡುಕೊಳ್ಳುತ್ತಾರೆ.  ಸೂಕ್ಷ್ಮವನ್ನು ಹುಡಕಲು ಬೇಕಿರುವ ಮಾರ್ಗದರ್ಶಿಗಳಾಗಿ ಮತಗಳಿರುತ್ತವೆ. ಸೂಕ್ಷ್ಮವನ್ನು ಅರಿತವನಿಗೆ ಮತ ಪ್ರಮಾಣವಲ್ಲ. ಅವನೇ ಮತಕ್ಕೆ ಪ್ರಮಾಣ. ನಿರ್ವಾಣ ಮಾರ್ಗವನ್ನು ಬೋಧಿಸುವ ಮೊದಲು ಬುದ್ಧನೇನು ಬೌದ್ಧ ಮತಾಧ್ಯಯನ ಮಾಡಿದ್ದನೇ? ಬುದ್ಧ ನಿರ್ವಾಣ ಮಾರ್ಗವನ್ನು ತಾನೇ ಹುಡುಕಿ ಕಂಡುಕೊಂಡ ಮೇಲೆ ಅದನ್ನು ಬೋಧಿಸಿದ. ಅದುವೇ ಮುಂದೆ ಬೌದ್ಧ ಮತವಾಯಿತು. ಬೌದ್ಧ ಮತದಿಂದ ಬುದ್ಧನಿಗೇನಾದರೂ ಪ್ರಯೋಜನವಿದೆಯೇ?

ಸಿವಿಕೆ: ಇಲ್ಲ

ಗುರು: ಕ್ರೈಸ್ತ ಮತದಿಂದ ಕ್ರಿಸ್ತನಿಗೆ ಯಾವ ಪ್ರಯೋಜನವೂ ಇಲ್ಲ.  ಇದೇ ಮಾತನ್ನು ಉಳಿದ ಮತಗಳ ಬಗ್ಗೆಯೂ ಹೇಳಬಹುದು. ಆದರೆ ಬೌದ್ಧ ಮತದಿಂದ ಬೌದ್ಧ ಮತಾನುಯಾಯಿಗಳಿಗೆ ಹಾಗೇಯೇ ಕ್ರೈಸ್ತ ಮತದಿಂದ ಕ್ರೈಸ್ತ ಮತಾನುಯಾಯಿಗಳಿಗೆ ಪ್ರಯೋಜನವಿದೆ. ಹಾಗೆಯೇ ಎಲ್ಲಾ ಮತಗಳೂ ಆಯಾ ಮತಾನುಯಾಯಿಗಳಿಗೆ ಪ್ರಯೋಜನಕರವೇ ಆಗಿವೆ.

ಸಿವಿಕೆ: ಆದರೆ ಹಿಂದೂಗಳು ಹೀಗೆ ಹೇಳುವುದಿಲ್ಲವಲ್ಲ.

ಗುರು: ಅವರು ಮತ್ತೇನು ಹೇಳುತ್ತಾರೆ?

ಸಿವಿಕೆ: ಅವರಿಗೆ ವೇದವೇ ಪ್ರಮಾಣ. ವೇದವು ಅಪೌರುಷೇಯ, ಅದು ಬ್ರಹ್ಮಮುಖದಿಂದಲೇ ಬಂದಿದೆ; ಅದರಿಂದಾಗಿ ವೇದಕ್ಕೂ ಮಿಗಿಲಾದ ಪ್ರಮಾಣ ಪುರುಷನೊಬ್ಬ ಇರಬಾರದು ಎಂದವರು ವಾದಿಸುತ್ತಾರೆ.

ಗುರು: ಕ್ರೈಸ್ತರು ಅವರ ಹತ್ತು ಆದೇಶಗಳ ಕುರಿತು ಏನು ಹೇಳುತ್ತಾರೆ. ಅದೂ ದೇವರಿಂದಲೇ ಬಂದದ್ದೆಂದು ತಾನೇ?

ಸಿವಿಕೆ: ಹೌದು.

ಗುರು: ಯೆಹೋವಾಗೆ ಎಬ್ರಾಯ (ಹೀಬ್ರೂ) ಭಾಷೆ ಮತ್ತು ಬ್ರಹ್ಮನಿಗೆ ಪ್ರಾಚೀನ ಸಂಸ್ಕೃತ ಭಾಷೆಯಷ್ಟೇ ಗೊತ್ತಿದ್ದದ್ದೇ? ವೇದ ಅಪೌರುಷೇಯ ಎಂದರೆ ಎಲ್ಲಾ ವೇದಮಂತ್ರಗಳ ಕರ್ತೃಗಳು ಯಾರೆಂದು ನಮಗೆ ತಿಳಿದಿಲ್ಲ ಎಂದಷ್ಟೇ ಅರ್ಥ. ಅಥವಾ ವೇದಪ್ರತಿಪಾದಿತವಾದ ತತ್ವಗಳು ಅಪೌರುಷೇಯ ಎಂದೂ ಅರ್ಥ ಮಾಡಿಕೊಳ್ಳಬಹುದು.


[1] ಆತ್ಮೋಪದೇಶ ಶತಕಂ, ಪದ್ಯ 44, ವಿನಯ ಚೈತನ್ಯ ಅವರ ಕನ್ನಡ ಅನುವಾದ.


(ಈ ಅನುವಾದ 2023ರ ವಾರ್ತಾಭಾರತಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು. ಇದನ್ನು ಲೇಖಕರ ಅನುಮತಿಯೊಂದಿಗೆ ‘ಅರಳಿಮರ’ ಪ್ರಕಟಿಸುತ್ತಿದೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ನಾರಾಯಣ ಗುರುಗಳ ಜೊತೆಗೆ ಸಿ.ವಿ. ಕುಂಞುರಾಮನ್ ನಡೆಸಿದ ಸಂವಾದವು 1925 ಅಕ್ಟೋಬರ್ 9ರಂದು ‘ಕೇರಳ ಕೌಮುದಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಸಂವಾದದಲ್ಲಿ ಸಿವಿಕೆ ಅವರು ಗುರುಗಳು ಪ್ರತಿಪಾದಿಸುತ್ತಿದ್ದ “ಒಂದೇ ಜಾತಿ, ಒಂದೇ ಮತ, ಒಂದೇ ದೈವ” ಚಿಂತನೆಯ ಕುರಿತು ಚರ್ಚೆ ನಡೆಸಿದ್ದರು. ಈ ಸಂವಾದದ ಮೊದಲ ಭಾಗ ಇಲ್ಲಿದೆ: https://aralimara.com/2024/07/20/nguru/ […]

    Like

Leave a Reply

This site uses Akismet to reduce spam. Learn how your comment data is processed.