ಏಕ ಮತ । ನಾರಾಯಣ ಗುರು ಸಾರ #2

ನಾರಾಯಣ ಗುರುಗಳ ಜೊತೆಗೆ ಸಿ.ವಿ. ಕುಂಞುರಾಮನ್ ನಡೆಸಿದ ಸಂವಾದವು 1925 ಅಕ್ಟೋಬರ್ 9ರಂದು ‘ಕೇರಳ ಕೌಮುದಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಸಂವಾದದಲ್ಲಿ ಸಿವಿಕೆ ಅವರು ಗುರುಗಳು ಪ್ರತಿಪಾದಿಸುತ್ತಿದ್ದ “ಒಂದೇ ಜಾತಿ, ಒಂದೇ ಮತ, ಒಂದೇ ದೈವ” ಚಿಂತನೆಯ ಕುರಿತು ಚರ್ಚೆ ನಡೆಸಿದ್ದರು. ಈ ಸಂವಾದದ ಮೊದಲ ಭಾಗ ಇಲ್ಲಿದೆ: https://aralimara.com/2024/07/20/nguru/

ಮುಂದೆ ಓದಿ…

~ ಸಂಗ್ರಹ ಮತ್ತು ಅನುವಾದ: ಎನ್. ಎ. ಎಂ. ಇಸ್ಮಾಯಿಲ್

ಸಿವಿಕೆ: ಅವರಿಗೆ ವೇದವೇ ಪ್ರಮಾಣ. ವೇದವು ಅಪೌರುಷೇಯ, ಅದು ಬ್ರಹ್ಮಮುಖದಿಂದಲೇ ಬಂದಿದೆ; ಅದರಿಂದಾಗಿ ವೇದಕ್ಕೂ ಮಿಗಿಲಾದ ಪ್ರಮಾಣ ಪುರುಷನೊಬ್ಬ ಇರಬಾರದು ಎಂದವರು ವಾದಿಸುತ್ತಾರೆ.

ಗುರು: ಕ್ರೈಸ್ತರು ಅವರ ಹತ್ತು ಆದೇಶಗಳ ಕುರಿತು ಏನು ಹೇಳುತ್ತಾರೆ. ಅದೂ ದೇವರಿಂದಲೇ ಬಂದದ್ದೆಂದು ತಾನೇ?

ಸಿವಿಕೆ: ಹೌದು.

ಗುರು: ಯೆಹೋವಾಗೆ ಎಬ್ರಾಯ (ಹೀಬ್ರೂ) ಭಾಷೆ ಮತ್ತು ಬ್ರಹ್ಮನಿಗೆ ಪ್ರಾಚೀನ ಸಂಸ್ಕೃತ ಭಾಷೆಯಷ್ಟೇ ಗೊತ್ತಿದ್ದದ್ದೇ? ವೇದ ಅಪೌರುಷೇಯ ಎಂದರೆ ಎಲ್ಲಾ ವೇದಮಂತ್ರಗಳ ಕರ್ತೃಗಳು ಯಾರೆಂದು ನಮಗೆ ತಿಳಿದಿಲ್ಲ ಎಂದಷ್ಟೇ ಅರ್ಥ. ಅಥವಾ ವೇದಪ್ರತಿಪಾದಿತವಾದ ತತ್ವಗಳು ಅಪೌರುಷೇಯ ಎಂದೂ ಅರ್ಥ ಮಾಡಿಕೊಳ್ಳಬಹುದು.

ಸಿವಿಕೆ: ವೇದ ಪ್ರಾಮಾಣ್ಯವನ್ನು ಬುದ್ಧ ಮುನಿ ನಿರಾಕರಿಸಿದ್ದಾನೆ. ಮುಂಡಕೋಪನಿಷತ್ತು ಕೂಡಾ ವೇದವನ್ನು ಅಪ್ರಧಾನಶಾಸ್ತ್ರವೆಂದು ಹೇಳುತ್ತದೆ.

ಗುರು: ಯಾವುದನ್ನೂ ಇದು ಮಾತ್ರ ಸರಿ ಎಂಬಂಥ ಪ್ರಮಾಣವಾಗಿಸಕೂಡದು. ಎಲ್ಲವನ್ನೂ ಯಾವುದು ಸರಿ ಎಂಬುದನ್ನು ಕಂಡುಕೊಳ್ಳಲು ಬೇಕಿರುವ ಉಪಕರಣವಾಗಿಸಿಕೊಳ್ಳಬೇಕು. ಆದರೆ ಈ ಬೋಧನೆಯು ಅನ್ವೇಷಣೆಯ ಕುತೂಹಲ ಮತ್ತು ಜ್ಞಾನದದಾಹ ಇರುವವರಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಜನರಿಗೆ ಅವರು ನಂಬುವ ಮತಕ್ಕೆ ಆಧಾರವಾಗಿರುವ ಗ್ರಂಥವೇ ಪ್ರಮಾಣವಾಗಿರಲಿ.

ಸಿವಿಕೆ: ಹಾಗೆ ಪ್ರಮಾಣವೆಂದು ಪರಿಗಣಿಸಬೇಕಾದ ಗ್ರಂಥಗಳಲ್ಲಿ ಧರ್ಮ ವಿರೋಧಿಯಾದ ಬೋಧನೆಗಳಿದ್ದರೆ ಸಾಮಾನ್ಯರು ಅದನ್ನೂ ನಂಬಿಬಿಡುವರಲ್ಲವೇ?

ಗುರು: ಅಂಥದ್ದು ನಡೆಯದಂತೆ ಆಯಾ ಮತಗಳ ಗುರುಗಳು ನೋಡಿಕೊಳ್ಳಬೇಕು. ದಯಾನಂದ ಸ್ವರಸ್ವತಿಯವರು ವೇದ ಪ್ರಮಾಣವೆಂದು ಹೇಳಿದರೂ ಅದರಲ್ಲಿರುವ ಅಸಂಗತಗಳನ್ನು ಒಪ್ಪುವುದಿಲ್ಲವಲ್ಲ. ಎಲ್ಲಾ ಮತಾಚಾರ್ಯರೂ ಇದನ್ನೇ ಮಾಡಬೇಕು.

ಸಿವಿಕೆ: ಯಾವುದು ಒಪ್ಪತಕ್ಕದ್ದು, ಯಾವುದು ನಿರಾಕರಿಸಬೇಕಾದದ್ದು ಎಂಬ ವಿವೇಕದೊಂದಿಗೆ ಮತ ಗ್ರಂಥಗಳನ್ನು ಓದಬೇಕು ಎಂದು ತಮ್ಮ ಮಾತನ್ನು ಅರ್ಥೈಸಬಹುದೇ? ಅದು ಸರಿಯಾಗಿರಬಹುದೇ?

ಗುರು: ನಮ್ಮ ಬೋಧನೆ ಅದುವೇ ಆಗಿದೆ. ಆಲುವಾದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಸಂದರ್ಭದಲ್ಲೂ ನಾವಿದನ್ನೇ ಮಂಡಿಸಿದ್ದೆವು. ದೇಶಗಳ ನಡುವಣ ವೈಮನಸ್ಸು ಹಾಗೆಯೇ ಸಮುದಾಯಗಳ ನಡುವಣ ಮೇಲಾಟಗಳು ಒಬ್ಬರು ಮತ್ತೊಬ್ಬರನ್ನು ಸೋಲಿಸುವವಲ್ಲಿ ಮುಗಿಯಬಹುದು. ಮತಗಳ ನಡುವಣ ಯುದ್ಧಕ್ಕೆ ಅಂತ್ಯವೇ ಇಲ್ಲದಿರುವುದರಿಂದ ಒಂದು ಮತ್ತೊಂದನ್ನು ಸೋಲಿಸುವುದು ಅಸಾಧ್ಯ. ಮತಗಳ ನಡುವಣ ಯುದ್ಧವನ್ನು ಕೊನೆಗೊಳಿಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಎಲ್ಲಾ ಮತಗಳನ್ನೂ ಎಲ್ಲರೂ ಸಮಚಿತ್ತದಿಂದ ಅಧ್ಯಯನ ಮಾಡಬೇಕು. ಆಗ ಅವು ಪ್ರತಿಪಾದಿಸುವ ಪ್ರಧಾನ ತತ್ವಗಳಲ್ಲಿ ಪರಸ್ಪರ ದೊಡ್ಡ ಭಿನ್ನತೆಯೇನೂ ಇಲ್ಲವೆಂಬುದು ಬೆಳಕಿಗೆ ಬರುತ್ತದೆ. ಹಾಗೇ ಬೆಳಕಿಗೆ ಬಂದ ಮತವೇ ನಾವು ಬೋಧಿಸುವ ‘ಏಕಮತ’

ಸಿವಿಕೆ: ಇನ್ನೂ ಒಂದು ಅನುಮಾನವಿದೆ.

ಗುರು: ಅದೇನು?

ಸಿವಿಕೆ: ಸಮಾಜದಲ್ಲಿ ಮತಾಂತರದ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಕೆಲವರು ಬೌದ್ಧ ಮತ ಒಳ್ಳೆಯದೆನ್ನುತ್ತಾರೆ. ಇನ್ನು ಕೆಲವರಿಗೆ ಕ್ರೈಸ್ತ ಮತ ಉತ್ತಮವೆನಿಸುತ್ತಿದೆ. ಇನ್ನೂ ಒಂದಷ್ಟು ಮಂದಿ ಆರ್ಯಸಮಾಜವೇ ಸರಿ ಎನ್ನುತ್ತಿದ್ದಾರೆ. ಹಾಗೆಯೇ ಮತಾಂತರದ ಅಗತ್ಯವೇ ಇಲ್ಲ ಎನ್ನುವವರೂ ಇದ್ದಾರೆ…

ಗುರು: ಪ್ರತೀ ಮತಕ್ಕೂ ಬಾಹ್ಯ ಮತ್ತು ಆಂತರಿಕ ಎಂದು ಗುರುತಿಸಬಹುದಾದ ಎರಡು ಆಯಾಮಗಳಿವೆ. ಇದರಲ್ಲಿ ಯಾವುದರತ್ತ ಜನರು ಹೆಚ್ಚು ಆಕರ್ಷಿತರಾಗಿದ್ದಾರೆ. ಮತದ ಬಾಹ್ಯ ಆಯಾಮದತ್ತ ಒಲವು ತೋರುತ್ತಿದ್ದರೆ ಅದನ್ನು ಅದನ್ನು ಮತಾಂತರ ಅಥವಾ ಮತ ಪರಿವರ್ತನೆ ಎನ್ನಲು ಸಾಧ್ಯವಿಲ್ಲ. ಅದು ಸಾಮಾಜಿಕ ಪರಿವರ್ತನೆಯ ಒಲವಷ್ಟೇ. ಮತದ ಆಂತರಿಕ ಆಯಾಮದ ಕಡೆಗಿರುವ ಒಲವಿನಿಂದ ತನ್ನ ಮತವನ್ನು ಬದಲಾಯಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯೊಳಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.  ಇದು ವಿಚಾರದ ಬೆಳವಣಿಗೆಯೊಂದಿಗೆ ಸ್ವಾಭಾವಿಕವಾಗಿ ನಡೆಯುವ ಪರಿವರ್ತನೆಯೇ ಹೊರತು ಮತ್ಯಾರೋ ತರುವ ಬದಲಾವಣೆಯಲ್ಲ. ಹಿಂದೂ ಮತ, ಕ್ರೈಸ್ತ ಮತ ಇತ್ಯಾದಿ ಹೆಸರುಗಳಲ್ಲಿ ಗುರುತಿಸಲಾಗುವ ಮತಗಳನ್ನು ಪಾಲಿಸುವವರು ಆಯಾ ಮತಗಳಲ್ಲಿ ನಂಬಿಕೆ ಕಳೆದುಕೊಂಡರೆ ಅವರು ತಮ್ಮ ಮತವನ್ನು ಬದಲಾಯಿಸಿಕೊಳ್ಳುವುದೇ ಸರಿಯಾದುದು. ನಂಬಿಕೆ ಇಲ್ಲದ ಮತದಲ್ಲೇ ಇರುವುದು ಕಪಟತನವಾಗುತ್ತದೆ. ಇಂಥವರು ಮತಾಂತರಗೊಳ್ಳುವುದು ಅವರಿಗೂ ಅವರು ನಂಬಿಕೆ ಕಳೆದುಕೊಂಡ ಮತಕ್ಕೂ ಒಳ್ಳೆಯದು. ಯಾವ ಮತದೊಳಗೂ ಅದನ್ನು ನಂಬದವರ ಸಂಖ್ಯೆ ಹೆಚ್ಚುತ್ತಾಹೋಗುವುದು ಶ್ರೇಯಸ್ಕರವಲ್ಲ.

ಸಿವಿಕೆ: ಹಿಂದೂ ಮತದಲ್ಲೇ ಉಳಿಯಬೇಕು ಎಂದು ಹೇಳುವವರೂ ಈಗಿನ ಹಿಂದೂ ಮತ ಒಳ್ಳೆಯದಲ್ಲ ಎಂದೂ ಹೇಳುತ್ತಾರೆ.

ಗುರು: ಅಂದರೆ ಅವರು ಹಿಂದೂಗಳಿಗಷ್ಟೇ ಅಲ್ಲ ಹಿಂದೂ ಮತಕ್ಕೂ ಬದಲಾವಣೆ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಹಿಂದೂ ಮತವೆಂಬ ಒಂದು ಮತವೇ ಇಲ್ಲವಲ್ಲ. ಹಿಂದುಸ್ಥಾನದ ನಿವಾಸಿಗಳನ್ನು ಹಿಂದೂಗಳೆಂದು ವಿದೇಶಿಯರು ಗುರುತಿಸುತ್ತಾ ಬಂದರು. ಹಿಂದುಸ್ಥಾನ ನಿವಾಸಿಗಳದ್ದು ಹಿಂದೂ ಮತವೆಂಬ ಅರ್ಥ ಅದಕ್ಕಿದ್ದರೆ ಇಲ್ಲಿ ವಾಸಿಸುವ ಕ್ರೈಸ್ತರು ಮತ್ತು ಮಹಮದೀಯರದ್ದೂ ಹಿಂದೂ ಮತವೇ ಆಗಿಬಿಡುತ್ತದೆ. ಹಾಗೆ ಯಾರೂ ಹೇಳುತ್ತಿಲ್ಲ; ಹಾಗೆಂದು ಒಪ್ಪುವುದೂ ಇಲ್ಲ.  ಹಿಂದುಸ್ಥಾನಕ್ಕೆ ಹೊರಗಿನಿಂದ ಬಂದ ಕ್ರೈಸ್ತ, ಮಹಮದೀಯ ಮತಗಳನ್ನು ಹೊರತು ಪಡಿಸಿ ಹಿಂದುಸ್ಥಾನದಲ್ಲೇ ಹುಟ್ಟಿದ ಮತಗಳನ್ನೆಲ್ಲಾ ಒಟ್ಟಾಗಿಟ್ಟುಕೊಂಡು ಅದನ್ನು ಹಿಂದೂ ಮತವೆಂದು ಗುರುತಿಸಲಾಗುತ್ತಿದೆ. ಆದ್ದರಿಂದ ಬೌದ್ಧ ಮತ, ಜೈನ ಮತ ಮುಂತಾದುವುಗಳನ್ನೂ ಹಿಂದೂ ಮತವೆಂದೇ ಹಲವರು ಹೇಳುತ್ತಾರೆ. ವೈದಿಕ ಮತ, ಸಾಂಖ್ಯ ಮತ, ವೈಶೇಷಿಕ ಮತ, ಮೀಮಾಂಸಕ ಮತ, ಶೈವ ಮತ, ಶಾಕ್ತೇಯ ಮತ, ವೈಷ್ಣವ ಮತ ಹೀಗೆ ಪರಸ್ಪರ ಭಿನ್ನವೂ ವಿಶಿಷ್ಟವೂ ಆದ ಅನೇಕ ಮತಗಳಿಗೆ ಸಾಮಾನ್ಯೀಕೃತವಾದ ಹೆಸರಿಟ್ಟು ‘ಹಿಂದೂ ಮತ’ ಎಂದು ಕರೆಯುವುದು ತರ್ಕಹೀನವಲ್ಲ ಎಂದಾದರೆ, ಮನುಷ್ಯಜಾತಿಯ ಮೋಕ್ಷಪ್ರಾಪ್ತಿಗೆ ಉಪಯುಕ್ತವಾದ, ದೇಶಕಾಲಗಳಿಗೆ ಅನುಗುಣವಾಗಿ ಒಬ್ಬೊಬ್ಬ ಆಚಾರ್ಯರೂ ಬೋಧಿಸಿದ ಎಲ್ಲಾ ಮತಗಳನ್ನೂ ಅದರ ಏಕೋದ್ದೇಶದ ಮೂಲಕ ಗುರುತಿಸುವ ‘ಏಕಮತ’ ಎಂಬ ಹೆಸರಿನಿಂದ ಕರೆಯುವುದು ಹೇಗೆ ತರ್ಕಹೀನವಾಗುತ್ತದೆ?

ಸಿವಿಕೆ: ಈ ವಿಷಯದಲ್ಲಿ ತಪ್ಪು ಕಲ್ಪನೆಗಳಿಂದ ಉಂಟಾಗಿರುವ ಗೊಂದಲಗಳು ಹಿಂದೂಗಳ ನಡುವೆಯಷ್ಟೇ ಅಲ್ಲ, ಹಿಂದೂಯೇತರ ಮತಗಳಲ್ಲೂ ಇವೆ. ಕ್ರಿಸ್ತನಿಗೂ ಮುಂಚಿನ ಮೋಸೆಸ್ ಮತ್ತು ಸೊಲೋಮನ್‌ನ ಹಾಗೆಯೇ ಕ್ರಿಸ್ತಾನಂತರದ ಸಂತ ಪಾಲ್‌ನ ಬೋಧನೆಗಳನ್ನೂ ‘ಕ್ರಿಸ್ತ ಮತ’ವೆಂಬ ಒಂದು ಹೆಸರಿನೊಳಕ್ಕೆ ತುರುಕುವ ಕೆಲಸವನ್ನು ಕ್ರೈಸ್ತರೂ ಮಾಡಿದ್ದಾರೆ.

ಗುರು: ಹೆಚ್ಚು-ಕಡಿಮೆ ಎಲ್ಲಾ ಮತಗಳವರೂ ಅದನ್ನೇ ಮಾಡಿದ್ದಾರೆ. ಹಲವು ಆಚಾರ್ಯರ ಬೋಧನೆಗಳನ್ನು ಒಬ್ಬ ಮತಾಚಾರ್ಯರ ಹೆಸರಿಗೆ ಅಂಟಿಸಿ ಅದನ್ನೊಂದು ಮತವೆಂದು ಕರೆಯಬಹುದಾದರೆ ಹಲವು ಆಚಾರ್ಯರು ಸ್ಥಾಪಿಸಿರುವ ಎಲ್ಲಾ ಮತಗಳನ್ನೂ ಒಟ್ಟುಗೂಡಿಸಿ ಅದಕ್ಕೆ ಒಂದು ಮತವೆಂದೋ, ಏಕಮತವೆಂದೋ, ಮನುಜಮತವೆಂದೋ ಅಥವಾ ಮಾನವಧರ್ಮವೆಂದೋ ಹೆಸರಿಡಬಾರದೇಕೆ? ಹೀಗೆ ಮಾಡುವುದು ತರ್ಕಹೀನವೂ ಅಂಸಗತವೂ ಆಗಿದ್ದರೆ ಅದು ಈಗಾಗಲೇ ಅಸ್ತಿತ್ವದಲ್ಲಿ ಇರುವ ಎಲ್ಲಾ ಮತಗಳಲ್ಲೂ ಈ ಅಸಂಗತತೆ ಇದೆ ಎಂಬುದನ್ನೂ ಒಪ್ಪಬೇಕು. ತಮ್ಮ ತಮ್ಮ ಮತಗಳ ಚೌಕಟ್ಟಿನೊಳಗೆ ನಿಂತು ಏಕತೆಯಲ್ಲಿರುವ ವೈವಿಧ್ಯವನ್ನೂ ವೈವಿಧ್ಯದಲ್ಲಿರುವ ಏಕತೆಯನ್ನೂ ವಿವರಿಸುವ ಚತುರ ಮಾತುಗಾರರಿಗೆ ಮಾನವ ಜಾತಿಯ ಮತವನ್ನು ಒಟ್ಟಾಗಿ ಗ್ರಹಿಸಿ ಅದರ ಏಕತೆಯಲ್ಲಿರುವ ವೈವಿಧ್ಯವನ್ನೂ ಹಾಗೆಯೇ ವೈವಿಧ್ಯದಲ್ಲಿರುವ ಏಕತೆಯನ್ನೂ ಕಾಣಲಾಗದೇ ಹೋದದ್ದು ಆಶ್ಚರ್ಯಕರವೇ ಸರಿ. ಮಹಾತ್ಮಾಜಿ ಇಲ್ಲಿಗೆ ಬಂದಿದ್ದಾಗ ಮಾಡಿದ ಭಾಷಣದಲ್ಲಿ ಆಶ್ರಮದ ಅಂಗಳದಲ್ಲಿರುವ ಮಾವಿನ ಮರವನ್ನು ತೋರಿಸಿ “ಅದರ ಕೊಂಬೆ-ರೆಂಬೆಗಳೂ ಎಲೆಗಳೂ ಹೇಗೆ ಒಂದಕ್ಕಿಂತ ಮತ್ತೊಂದು ಭಿನ್ನವೋ ಹಾಗೆಯೇ ಮನುಷ್ಯರೂ ಭಿನ್ನವ್ಯಕ್ತಿಗಳೇ ಆಗಿದ್ದಾರೆ. ಈ ಭಿನ್ನತೆ ಇರುವಷ್ಟು ಕಾಲವೂ ಮನುಷ್ಯರು ಅನುಸರಿಸುವ ಮತಗಳೂ ಭಿನ್ನವೇ ಆಗಿರುತ್ತವೆ” ಎಂದು ಹೇಳಿದರು. ಅವರು ಹೇಳಿದ್ದು ಸರಿಯೇ. ಆದರೆ ನೈಯಾಯಿಕ ದೃಷ್ಟಿಕೋನದಲ್ಲಿ ಅದನ್ನು ವಿಶ್ಲೇಷಿಸಿದರೆ ಪ್ರತೀ ವ್ಯಕ್ತಿಗೊಂದು ಮತ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹಾಗಾದಾಗ ಹಿಂದೂವಾಗಿರುವ ರಾಮನೂ ಕೃಷ್ಣನೂ ಅನುಸರಿಸುವ ಮತಗಳು ಬೇರೆ ಬೇರೆಯಾಗಿರುತ್ತವೆ. ಅಂದರೆ ಈಗಿರುವ ಇಪ್ಪತ್ತು ಕೋಟಿ ಹಿಂದೂಗಳದ್ದೂ ಇಪ್ಪತ್ತು ಕೋಟಿ ಬೇರೆ ಬೇರೆ ಮತಗಳಾಗುತ್ತವೆ. ವಾಸ್ತವ ಇದುವೇ ಆಗಿದೆ. ಆದರೂ ಈ ಇಪ್ಪತ್ತು ಕೋಟಿ ನಂಬಿಕೆಗಳಲ್ಲೂ ಕೆಲವು ಸಾಮಾನ್ಯ ಲಕ್ಷಣಗಳಿವೆ. ಈ ಲಕ್ಷಣಗಳನ್ನು ಹೊಂದಿರುವವರನ್ನೆಲ್ಲಾ ಸೇರಿಸಿ ಒಂದು ನಿರ್ದಿಷ್ಟ ಮತದವರು ಎಂದು ಗುರುತಿಸುತ್ತೇವೆ. ಹಾಗೆಯೇ ಎಲ್ಲಾ ಮತಗಳ ನಂಬಿಕೆಗಳನ್ನು ಹೋಲಿಸಿ ನೋಡಿದಾಗಲೂ ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಮನುಷ್ಯರೆಲ್ಲಾ ಒಂದೇ ಮತಕ್ಕೆ ಸೇರಿದವರೇ ಆಗುತ್ತಾರೆ. ಸನಾತನವಾದ (ಶಾಶ್ವತವಾದ) ಯಾವುದೋ ಒಂದು ಧರ್ಮವನ್ನೋ (ಮೌಲ್ಯವನ್ನೋ) ಸತ್ಯವನ್ನೋ ಆಧಾರವಾಗಿಟ್ಟುಕೊಳ್ಳದೆ ಯಾವುದೇ ಮತಕ್ಕೂ ತನ್ನ ಅಸ್ತಿತ್ವವನ್ನುಳಿಸಿಕೊಳ್ಳಲು ಸಾಧ್ಯವಿಲ್ಲ. ಮುಹಮ್ಮದರ ಮತ ಸೋದರತಾಭಾವವನ್ನು ಮುಖ್ಯವೆಂದು ಪರಿಗಣಿಸಿದರೆ ಕ್ರೈಸ್ತ ಮತವು ಪ್ರೀತಿಯನ್ನು ಮುಖ್ಯವೆಂದು ಭಾವಿಸುತ್ತದೆ. ಆದರೆ ಸೋದರತೆಯು ಪ್ರೀತಿಯನ್ನೂ ಹಾಗೆಯೇ ಪ್ರೀತಿಯು ಸೋದರಭಾವವನ್ನೂ ಆಶ್ರಯಿಸಿದೆ. ಇದನ್ನರಿಯದೆ ಸೋದರತೆಯೇ ಶ್ರೇಷ್ಠ ಅಥವಾ ಪ್ರೀತಿಯೇ ಶ್ರೇಷ್ಠ ಎಂಬ ವಿವಾದವನ್ನುಂಟು ಮಾಡಿದರೆ ಅದೊಂದು ವ್ಯರ್ಥ ವಿವಾದವೆನ್ನದೆ ಬೇರೆ ದಾರಿಯಿದೆಯೇ? ಸನಾತನವಾದ ಧರ್ಮಗಳೆಲ್ಲವೂ ಮೌಲ್ಯಪ್ರಧಾನವಾದವು. ದೇಶ ಮತ್ತು ಕಾಲಗಳು ಬೇಡುವ ಅಗತ್ಯಗಳಿಗೆ ಅನುಗುಣವಾಗಿ ಯಾವುದೋ ಒಂದು ಮೌಲ್ಯಕ್ಕೆ ಪ್ರಾಮುಖ್ಯತೆಯನ್ನು ಕಲ್ಪಿಸುವುದು ಅನಿವಾರ್ಯವಾಗುತ್ತದೆ. ಹಿಂಸೆಯೇ ವಿಜೃಂಭಿಸುತ್ತಿದ್ದ ದೇಶ-ಕಾಲದಲ್ಲಿ ಜಗದ್‌ಗುರುಗಳು ಅಹಿಂಸಾಧರ್ಮಕ್ಕೆ ಉಳಿದೆಲ್ಲಾ ಧರ್ಮಗಳಿಗಿಂತೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಬುದ್ಧನ ಕಾಲದಲ್ಲಿ ಹಿಂಸೆ ಮೆರೆಯುತ್ತಿತ್ತು. ಹಾಗಾಗಿ ಬುದ್ಧ ಅದನ್ನು ಆದ್ಯತೆಯಾಗಿ ಪರಿಗಣಿಸಿದ. ನೆಬಿಯ (ಪ್ರವಾದಿ ಮುಹಮ್ಮದ್) ಕಾಲದಲ್ಲಿ ಅರೇಬಿಯಾದಲ್ಲಿ ಸೋದರತಾಭಾವವನ್ನು ಎತ್ತಿಹಿಡಿಯುವ ಅಗತ್ಯವಿತ್ತು. ಅದರಿಂದಾಗಿ ಅವರ ಮತದಲ್ಲಿ ಸೋದರತೆ ಮುಖ್ಯವಾಯಿತು. ಇಂದಿನ ಇಂಡಿಯಾದ ಅಗತ್ಯವೇನು? ಜಾತಿ ಮತ್ತು ಮತಗಳ ಮೇಲಾಟದಿಂದ ವಿಮೋಚನೆ ಪಡೆಯುವುದು. ಸಮಚಿತ್ತ ಮತ್ತು ಸಮಾನ ಗೌರವದಿಂದ ಎಲ್ಲಾ ಮತಗಳನ್ನು ಎಲ್ಲರೂ ಕಲಿತು ಅರಿತು ಹಾಗೂ ಈ ಅರಿವನ್ನು ಪ್ರೀತಿಯಿಂದ ಹಂಚಿಕೊಳ್ಳಲು ಪ್ರಯತ್ನಿಸಲಿ. ಮೇಲಾಟ ನಡೆಯುತ್ತಿರುವುದು ಮತಗಳ ನಡುವೆಯಲ್ಲ ಮದ ತುಂಬಿದವರ ಮಧ್ಯೆ ಎಂದು ಎಲ್ಲರೂ ಅರಿಯುತ್ತಾರೆ. ಆಗ ಮತಾಂತಗೊಳ್ಳುವ ಉತ್ಸಾಹವೂ ಅಸ್ತಮಿಸುತ್ತದೆ.

ಸಿವಿಕೆ: ಹಾಗಿದ್ದರೆ ಶ್ರೀಪಾದರ ಶಿಷ್ಯವೃಂದವನ್ನು ಸೇರಲು ಹಿಂದೂ ಮತವನ್ನು ಅನುಸರಿಸುವವರಿಗೂ ಬೌದ್ಧ, ಕ್ರೈಸ್ತ ಮತ್ತು ಮಹಮದೀಯ ಮತವನ್ನು ಪಾಲಿಸುವವರಿಗೂ ಅವಕಾಶಕೊಡಬೇಕಲ್ಲವೇ?

ಗುರು: ಅವಕಾಶ ನೀಡುವುದಕ್ಕೆ ನಮ್ಮ ವಿರೋಧವೂ ಇಲ್ಲ.

ಸಿವಿಕೆ: ನನಗೆ ಇತರ ಎಲ್ಲಾ ಮತಗಳಿಗಿಂತ ಬೌದ್ಧ ಮತದ ಬಗ್ಗೆಯೇ ಹೆಚ್ಚು ನಂಬಿಕೆ ಮತ್ತು ಗೌರವ.

ಗುರು: ಹಾಗೆಂದು ನಿಮಗೆ ಇತರ ಮತಗಳ ಕುರಿತ ದ್ವೇಷವಿಲ್ಲವಲ್ಲ.

ಸಿವಿಕೆ: ಇಲ್ಲವೇ ಇಲ್ಲ.

ಗುರು: ಬೌದ್ಧ ಮತದ ಗ್ರಂಥಗಳನ್ನು ಓದಿದ್ದೀರಾ?

ಸಿವಿಕೆ: ಅನುವಾದಗಳನ್ನು ಓದಿದ್ದೇನೆ.

ಗುರು: ಅದೇಕೆ ಬೌದ್ಧ ಮತದ ಬಗ್ಗೆ ಇಷ್ಟು ಆಸಕ್ತಿ?

ಸಿವಿಕೆ: ಈ ಕಾಲದೇಶಗಳ ಸಂದರ್ಭದಲ್ಲಿ ಬುದ್ಧ ಮುನಿಯ ಧರ್ಮೋಪದೇಶಗಳ ಬಗ್ಗೆ ಆಸಕ್ತಿ ಹುಟ್ಟದೇ ಇರಲು ಸಾಧ್ಯವಿಲ್ಲ. ಜಾತಿಭೇದ, ಮತಭೇದ ಮತ್ತು ಮೂಢ ಆಚಾರಗಳಿಂದ ಜನರನ್ನು ವಿಮೋಚಿಸುವುದಕ್ಕೆ ಉಳಿದೆಲ್ಲಾ ಮತಗಳಿಗಿಂತಲೂ ಬೌದ್ಧ ಮತವೇ ಒಳ್ಳೆಯದೆಂಬುದು ನನ್ನ ಬಲವಾದ ನಂಬಿಕೆ.

 ಗುರು: ನಮ್ಮ ಸಂನ್ಯಾಸಿ ಬಳಗವನ್ನು ಸೇರುವುದರ ಬಗ್ಗೆ ಆಲೋಚಿಸಿದ್ದಿದೆಯೇ?

ಸಿವಿಕೆ: ಸೇರಿಕೊಳ್ಳುವ ಆಸಕ್ತಿ ಇದೆ. ಬೌದ್ಧ ಮತದ ಪ್ರಕಾರವಿರುವ ಸಂನ್ಯಾಸವಾದರಷ್ಟೇ ನಾನು ಸೇರಲು ಸಾಧ್ಯ.

ಗುರು: ಬೌದ್ಧ ಮತದ ಪ್ರಕಾರವೇ ಇರುವ ಸಂನ್ಯಾಸವಾದರೂ ಸಾಕೆಂದು ನಾವು ಆಲುವಾದಲ್ಲಿಯೇ ಹೇಳಿದ್ದೆವಲ್ಲವೇ?

ಸಿವಿಕೆ: ಬೌದ್ಧ ಮತದ ಗುರುಗಳು ಕ್ಷಯ ರೋಗಿಗಳಿಗೆ ಸಂನ್ಯಾಸದೀಕ್ಷೆ ನೀಡುವುದಿಲ್ಲ.

ಗುರು: ವಾತರೋಗಿಗಳಿಗೆ ಅವರು ಸಂನ್ಯಾಸ ದೀಕ್ಷೆ ನೀಡುತ್ತಾರೆಯೇ?

ಸಿವಿಕೆ: ಅದು ನನಗೆ ತಿಳಿಯದು.

ಗುರು: ಈ ಬಗೆಯ ಕಾಲಹರಣದ ನಿರ್ಬಂಧಗಳು ಕೆಲವು ಎಲ್ಲಾ ಮತಗಳಲ್ಲಿಯೂ ಇವೆ.

ಸಿವಿಕೆ: ನಾನು ತಮ್ಮ ಹಸ್ತದಿಂದಲ್ಲದೆ ಇನ್ಯಾರಿಂದಲೂ ಸಂನ್ಯಾಸ ದೀಕ್ಷೆ ಪಡೆಯುವುದಿಲ್ಲ.


(ಈ ಅನುವಾದ 2023ರ ವಾರ್ತಾಭಾರತಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು. ಇದನ್ನು ಲೇಖಕರ ಅನುಮತಿಯೊಂದಿಗೆ ‘ಅರಳಿಮರ’ ಪ್ರಕಟಿಸುತ್ತಿದೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.