ಖುಶಿಯನ್ನ ಹುಡುಕುತ್ತ ನಾವು ಬೇಕಾಬಿಟ್ಟಿಯಾಗಿ ಓಡಾಡುತ್ತಿರುತ್ತೇವೆ. ಆದರೆ ನಮ್ಮ ಖುಶಿ ಬಹುತೇಕ ಇನ್ನೊಬ್ಬರ ಖುಶಿಯಲ್ಲಿ ಇರುತ್ತದೆ, ಅವರ ಖುಶಿ ನಮ್ಮ ಬಳಿ ಇರುತ್ತದೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಪರ್ಸನಾಲಿಟಿ ಡೆವಲಪ್ಮೆಂಟ್ ಕುರಿತಾದ ಸೆಮಿನಾರ್ ಒಂದರಲ್ಲಿ, 100 ಜನ ಕೆಲಸಗಾರರು ಭಾಗವಹಿಸುತ್ತಿದ್ದರು.
ಸೆಮಿನಾರಿನ ಮಧ್ಯದಲ್ಲಿ ಸ್ಪೀಕರ್, ಅಚಾನಕ್ ಆಗಿ ಒಂದು ಗ್ರುಪ್ ಆ್ಯಕ್ಟಿವಿಟಿ ನಡೆಸಲು ಮುಂದಾದ. ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಒಂದೊಂದು ಬಲೂನ್ ಕೊಡಲಾಯಿತು ಮತ್ತು ಎಲ್ಲರಿಗೂ ಬಲೂನ್ ಮೇಲೆ ತಮ್ಮ ಹೆಸರು ಬರೆಯಲು ಹೇಳಲಾಯಿತು. ನಂತರ ಸ್ಪೀಕರ್ ಎಲ್ಲ ಬಲೂನ್ ಗಳನ್ನು ಸಂಗ್ರಹಿಸಿ ಪಕ್ಕದ ಕೋಣೆಯಲ್ಲಿ ಇರಿಸಿದ.
ನಂತರ ಸ್ಪೀಕರ್ ಭಾಗವಹಿಸಿದ 100 ಜನಕ್ಕೆ ಪಕ್ಕದ ಕೋಣೆಗೆ ಹೋಗಿ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ತೆಗೆದುಕೊಂಡು 5 ನಿಮಿಷದಲ್ಲಿ ವಾಪಸ್ ಬರುವಂತೆ ಸೂಚನೆ ಕೊಟ್ಟ. ಸ್ಪೀಕರ್ ಸೂಚನೆಯಂತೆ ೧೦೦ ಜನ ಪಕ್ಕದ ಕೋಣೆಗೆ ನುಗ್ಗಿ ತಮ್ಮ ಹೆಸರಿನ ಬಲೂನ್ ಹುಡುಕತೊಡಗಿದರು. ಐದು ನಿಮಿಷದಲ್ಲಿ ವಾಪಸ್ ಬರಬೇಕಾಗಿದ್ದರಿಂದ ಅಲ್ಲೊಂದು ದೊಂಬಿ ಏರ್ಪಟ್ಟಿತು. ಜನ ಒಬ್ಬರನೊಬ್ಬರು ನೂಕಾಡುತ್ತ ತಮ್ಮ ಬಲೂನ್ ಹುಡುಕಾಡತೊಡಗಿದರು.
ಐದು ನಿಮಿಷಗಳ ನಂತರ್ ಸ್ಪೀಕರ್ ಅಲ್ಲಿಗೆ ಬಂದು ನೋಡಿದರೆ ಯಾರಿಗೂ ತಮ್ಮ ಹೆಸರಿನ ಬಲೂನ್ ಸಿಕ್ಕಿರಲಿಲ್ಲ. ಆಗ ಸ್ಪೀಕರ್ ಎಲ್ಲರಿಗೂ ಯಾವುದಾದರೊಂದು ಬಲೂನ್ ತೆಗೆದುಕೊಂಡು, ಆ ಬಲೂನ್ ಮೇಲಿನ ಹೆಸರನ್ನು ಕೂಗಿ ಹೇಳಿ ಆಯಾ ಹೆಸರಿನವರಿಗೆ ಬಲೂನ್ ತಲುಪಿಸುವಂತೆ ಹೇಳಿದ. ಮುಂದೆ ಐದು ನಿಮಿಷದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಅವರ ಹೆಸರಿನ ಬಲೂನ್ ಇತ್ತು.
ನಮ್ಮ ಬದುಕಿನಲ್ಲಿಯೂ ಬಹುತೇಕ ಹೀಗೆಯೇ ಆಗುತ್ತದೆ. ಖುಶಿಯನ್ನ ಹುಡುಕುತ್ತ ನಾವು ಬೇಕಾಬಿಟ್ಟಿಯಾಗಿ ಓಡಾಡುತ್ತಿರುತ್ತೇವೆ. ಆದರೆ ನಮ್ಮ ಖುಶಿ ಬಹುತೇಕ ಇನ್ನೊಬ್ಬರ ಖುಶಿಯಲ್ಲಿ ಇರುತ್ತದೆ, ಅವರ ಖುಶಿ ನಮ್ಮ ಬಳಿ ಇರುತ್ತದೆ. ನಾವು ಅವರಿಗೆ ಅವರ ಖುಶಿಯನ್ನು ಕೊಟ್ಟಾಗ ನಮ್ಮ ಖುಶಿಯನ್ನು ಯಾರೋ ನಮಗೆ ಕೊಡುತ್ತಾರೆ. ಖುಶಿ ಮತ್ತು ತೃಪ್ತಿ ಯಾವತ್ತೂ ಸ್ವಾರ್ಥಿ ಹುಡುಕಾಟದಿಂದ ಲಭ್ಯವಾಗುವುದಿಲ್ಲ. ಅವು ಸಿಗುವುದು ನಾವು ಇನ್ನೊಬ್ಬರಿಗೆ ಒಳ್ಳೆಯದನ್ನ ಮಾಡಿದಾಗ ಮಾತ್ರ. ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ನಾವು ನಮಗೆ ಸಹಾಯ ಮಾಡಿಕೊಳ್ಳುತ್ತಿರುತ್ತೇವೆ.

