ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 5ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ಸ್ವಾಮಿಗಳು ಜನಸಮೂಹದಿಂದ ದೂರವಾಗಿ ಏಕಾಂಗಿಯಾಗಿ ಸಂಚರಿಸುವುದು ಹೆಚ್ಚಾಗಿತ್ತು. ಯಾವುದಾದರೂ ಹಳ್ಳಿ ಅಥವಾ ಪಟ್ಟಣದಲ್ಲಿ ಸ್ವಾಮಿಗಳು ಕಾಣಿಸಿಕೊಂಡರೆ ದರ್ಶನಕ್ಕಾಗಿ ಜನರು ಗುಂಪುಗೂಡುವುದು ಸಾಮಾನ್ಯವಾಗಿತ್ತು. ಈ ಕಾಲಘಟ್ಟದಲ್ಲಿ ಸ್ವಾಮಿಗಳು ಆಹಾರ ಪಾನೀಯಗಳ ವಿಷಯದಲ್ಲಿ ಯಾವುದೇ ಭೇದಭಾವವನ್ನು ತೋರುತ್ತಿರಲಿಲ್ಲ. ಜಾತಿ ಭೇದವನ್ನಂತೂ ಅವರು ಎಂದೂ ಆಚರಿಸಲಿಲ್ಲ…
ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/25/guru-36/ ಮುಂದೆ ಓದಿ…
ಮಲಯಾಳ ವರ್ಷ 1063ರಲ್ಲಿ (ಕ್ರಿ.ಶ. 1888) ಸ್ವಾಮಿಗಳು ಅರುವಿಪ್ಪುರಂಗೆ ಬಂದರು. ಆಗ ಅಲ್ಲಿದ್ದದ್ದು ದಟ್ಟ ಕಾಡು ಮತ್ತು ಪ್ರವಾಹೋಪಾದಿಯಲ್ಲಿ ನುಗ್ಗುವ ನದಿಯ ನೀರು ಬಂಡೆಗಳಿಗೆ ಅಪ್ಪಳಿಸಿದಾಗ ಮೊಳಗುತ್ತಿದ್ದ ಸದ್ದು ಮಾತ್ರ. ನದಿ ಪಾತ್ರದೊಳಗಿಂದ ತೀರದ ತನಕವೂ ಹರಡಿಕೊಂಡಿದ್ದ ಬಂಡೆಗಳು, ಪುಟ್ಟ ಮರಳಿನ ದಿಣ್ಣೆಗಳು, ಎಲ್ಲದಕ್ಕೂ ಮಿಗಿಲಾಗಿ ನದಿಯ ಇಕ್ಕೆಲಗಳಲ್ಲಿಯೂ ಎತ್ತರದ ಬೆಟ್ಟಗಳು, ಇಡೀ ಪ್ರದೇಶಕ್ಕೆ ಹಸಿರು ಬಳಿದಿರುವ ಮರ, ಗಿಡ ಮತ್ತು ಬಳ್ಳಿಗಳು ಏಕಾಂತ ಪ್ರಿಯರಾದ ಸ್ವಾಮಿಗಳನ್ನು ಆಕರ್ಷಿಸಿದ್ದು ಸಹಜವೇ ಆಗಿತ್ತು.
ಆ ಬಂಡೆಗಳ ನಡುವೆ ಅದೆಷ್ಟೋ ದಿನಗಳ ಕಾಲ ಯಾರ ಅರಿವಿಗೂ ಬಾರದಂತೆ ಅನ್ನಾಹಾರಗಳ ಪರಿವೆಯೇ ಇಲ್ಲದೆ ಸ್ವಾಮಿಗಳು ಧ್ಯಾನಸ್ಥರಾಗಿದ್ದಿದೆ. ಕ್ರಮೇಣ ಜನರಿಗೆ ಸ್ವಾಮಿಗಳು ಅಲ್ಲಿರುವುದು ಮತ್ತು ಅವರು ವಾಸಕ್ಕಾಗಿ ಬಳಸುತ್ತಿದ್ದ ಸ್ಥಳಗಳ ಅರಿವಾಯಿತು. ಹತ್ತಿರದ ಹಳ್ಳಿಗಳಿಂದ ಕೆಲವು ಭಕ್ತರು ಸ್ವಾಮಿಗಳಿಗಾಗಿ ಆಹಾರ ಪದಾರ್ಥಗಳನ್ನು ತಂದಿಡಲು ಆರಂಭಿಸಿದರು. ಇದು ಆರಂಭವಾದ ಮೇಲೆ ಅರುವಿಪ್ಪುರಂ ಜನ ಸಂಚಾರವಿಲ್ಲದ ಸ್ಥಳವಾಗಿ ಉಳಿಯಲಿಲ್ಲ. ಸಕಲ ದಿಕ್ಕುಗಳಿಂದಲೂ ಸ್ವಾಮಿಗಳ ದರ್ಶನಕ್ಕಾಗಿ ಜನರು ಬರತೊಡಗಿದರು.
ರೋಗಶಮನ, ಭೂತೋಚ್ಚಾಟನೆಯಂಥ ವಿನಂತಿಗಳನ್ನು ನಿರ್ವಹಿಸುವುದು, ಶಾಸ್ತ್ರಗಳ ಅರ್ಥವಿವರಣೆಯೂ ಸೇರಿದಂತೆ ಹಲಬಗೆಯಲ್ಲಿ ದೀನರನ್ನು ಅನುಗ್ರಹಿಸುವ ಕಾರ್ಯಭಾರ ಸ್ವಾಮಿಗಳನ್ನು ಹಿಂಬಾಲಿಸಿತು. ಆ ದಿನಗಳಲ್ಲಿ ಅನೇಕರು ಸ್ವಾಮಿಗಳ ದೂರದೃಷ್ಟಿ ಮತ್ತು ಪರಹೃದಯಜ್ಞಾನ ಮುಂತಾದ ಸಿದ್ಧಿಗಳನ್ನು ಕಂಡು ಅರಿತಿದ್ದಾರೆ.
ಹಲವು ಜಾತಿಗಳ ಜನರು ಸ್ವಾಮಿಗಳ ಸಂದರ್ಶನಕ್ಕಾಗಿ ಅಲ್ಲಿಗೆ ಬಂದರು. ಅವರಲ್ಲಿ ಅನೇಕರು ಸ್ವಾಮಿಗಳ ಶಿಷ್ಯತ್ವ ಸ್ವೀಕರಿಸಿದರು. ಹಲವೆಡೆ ಇದ್ದ ಗೃಹಸ್ಥ ಭಕ್ತರು ಅಕ್ಕಿ ಮುಂತಾದ ಪದಾರ್ಥಗಳೊಂದಿಗೆ ಅರುವಿಪ್ಪುರಂಗೆ ಬರುತ್ತಿದ್ದರು. ಹೀಗೆ ಬಂದವರು ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸ್ವಾಮಿಗಳಿಗೆ ಅರ್ಪಿಸುವುದರ ಜೊತೆಗೆ ಅಲ್ಲಿದ್ದ ಎಲ್ಲರಿಗೂ ಉಣಬಡಿಸಿ ತಾವೂ ಸೇವಿಸಿದ ನಂತರ ಹಿಂದಿರುಗುವುದು ಸಾಮಾನ್ಯವಾಗಿತ್ತು. ಸ್ವಾಮಿಗಳ ಸಾನ್ನಿಧ್ಯದಿಂದ ಕಾಡಾಗಿದ್ದ ಪ್ರದೇಶವೊಂದು ಪುಣ್ಯಸ್ಥಳವಾಗಿ ಬದಲಾಯಿತು. ಸ್ವಾಮಿಗಳು ಸ್ಥಳದಲ್ಲಿ ಇಲ್ಲದ ದಿನಗಳಲ್ಲಿಯೂ ಜನರು ಬಂದು ನದಿಯಲ್ಲಿ ಸ್ನಾನ ಮಾಡಿ ವಂದಿಸುವುದು ಸಾಮಾನ್ಯವಾಗಿಬಿಟ್ಟಿತು.
ಈ ಹಂತದಲ್ಲಿ ಅರುವಿಪ್ಪುರಂನಲ್ಲಿ ಒಂದು ದೇಗುಲವಿದ್ದರೆ ಒಳ್ಳೆಯದು ಎಂದು ಸ್ವಾಮಿಗಳಿಗನ್ನಿಸಿತು. ಅವರನ್ನು ನಿಯತವಾಗಿ ಸಂದರ್ಶಿಸುತ್ತಿದ್ದ ಯುವಕರ ಬಳಿಯೂ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ಸ್ವಾಮಿಗಳ ಈ ಅಭಿಲಾಶೆಯನ್ನು ಭಕ್ತರು ಅರಿಯುವ ಹೊತ್ತಿಗೆ ಮಲಯಾಳ ವರ್ಷ 1063ರ (ಕ್ರಿ,ಶ. 1888) ಶಿವರಾತ್ರಿ ದಿನವೂ ಹತ್ತಿರ ಬಂದಿತ್ತು. ವಿಗ್ರಹವನ್ನು ಕೆತ್ತಿಸುವುದಕ್ಕಾಗಲೀ ದೇಗುಲ ನಿರ್ಮಾಣಕ್ಕಾಗಲೀ ಬೇಕಿರುವ ಯಾವ ಸೌಕರ್ಯವೂ ಆ ಅರಣ್ಯ ಪ್ರದೇಶದಲ್ಲಿ ಇರಲಿಲ್ಲ. ಸ್ವಾಮಿಗಳೂ ಇವು ಬೇಕು ಎಂದು ಕೇಳಿರಲೂ ಇಲ್ಲ.
ನದಿಯ ಪೂರ್ವ ತೀರದ ಬಂಡೆಯನ್ನೇ ಪೀಠವನ್ನಾಗಿ ಭಾವಿಸಿ ಅದರ ಮೇಲೆ ಶಿವಲಿಂಗ ರೂಪದ ಕಲ್ಲೊಂದನ್ನು ನದಿಯೊಳಗಿಂದ ಎತ್ತಿ ತಂದು ಶಿವರಾತ್ರಿಯ ದಿನ ಪ್ರತಿಷ್ಠಾಪಿಸುವುದೆಂಬುದು ಸ್ವಾಮಿಗಳ ಮನಸ್ಸಿನಲ್ಲಿದ್ದ ವಿಚಾರ. ಇದನ್ನು ಅರಿತ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಷ್ಠಾಪನೆಗೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಂಡರು. ಸ್ವಾಮಿಗಳು ಅರುವಿಪ್ಪುರಂನಲ್ಲಿ ಶಿವರಾತ್ರಿ ದಿನ ಇರುತ್ತಾರೆಂಬುದನ್ನು ಅರಿತ ಕೆಲವು ವ್ರತನಿಷ್ಠರೂ ಭಜನೆಯಲ್ಲಿ ಆಸಕ್ತಿಯುಳ್ಳವರೂ ಜಾಗರಣೆಗಾಗಿ ಅಲ್ಲಿ ಸೇರಿದರು. ಇದರ ಹೊರತಾಗಿ ಪ್ರತಿಷ್ಠಾಪನಾ ಕಾರ್ಯಕ್ಕಾಗಿ ಅಲ್ಲಿದ್ದದ್ದು ಒಂದಷ್ಟು ಹೂವು ಮತ್ತು ಹಣತೆಗಳು ಹಾಗೂ ನಾದಸ್ವರ ವಾದನದ ವ್ಯವಸ್ಥೆ ಮಾತ್ರ.
ಪೀಠಕ್ಕಾಗಿ ಆರಿಸಿಕೊಂಡಿದ್ದ ಬಂಡೆಯ ಮೇಲೆ ಸಣ್ಣದೊಂದು ಚಪ್ಪರವಿತ್ತು. ಮಧ್ಯರಾತ್ರಿಯಾಗುವ ಹೊತ್ತಿಗೆ ಸ್ವಾಮಿಗಳು ಸ್ನಾನ ಮಾಡಿಕೊಂಡು ಚಪ್ಪರದೊಳಕ್ಕೆ ಪ್ರವೇಶಿಸಿದರು. ಪ್ರತಿಷ್ಠಾಪನೆಗಾಗಿ ತಂದಿದ್ದ ಶಿಲೆಯನ್ನು ಕೈಯಲ್ಲಿ ಹಿಡಿದು ಮೂರು ಗಂಟೆಯ ತನಕವೂ ಧ್ಯಾನಸ್ಥನಾಗಿ ಅಲುಗಾಡದೆ ಕುಳಿತಿದ್ದರು. ಸ್ವಾಮಿಗಳ ತೇಜೋಮಯವಾದ ಮುಖದ ಮೇಲೆ ಕಣ್ಣೀರ ಧಾರೆ ಹರಿಯುತ್ತಿತ್ತು. ಜನರೆಲ್ಲಾ ಭಕ್ತಿಪರವಶರಾಗಿ ಪಂಚಾಕ್ಷರಿಮಂತ್ರವನ್ನು ಉಚ್ಚಸ್ಥಾಯಿಯಲ್ಲಿ ಜಪಿಸುತ್ತಾ ಸುತ್ತುಗಟ್ಟಿ ನಿಂತರು. ಸರಿಯಾಗಿ ಮೂರು ಗಂಟೆಗೆ ಸ್ವಾಮಿಗಳು ಶಿಲೆಯನ್ನು ಪೀಠದ ಮೇಲೆ ಪ್ರತಿಷ್ಠಾಪಿಸಿ ಅಭಿಷೇಕ ಮಾಡಿದರು. ಇದರೊಂದಿಗೆ ಸ್ವಾಮಿಗಳು ಸ್ಥಾಪಿಸಿದ ಮೊದಲ ಧಾರ್ಮಿಕ ಸಂಸ್ಥೆಯಾದ ಅರುವಿಪ್ಪುರಂ ದೇಗುಲ ಅಸ್ತಿತ್ವಕ್ಕೆ ಬಂತು. ಆ ಕ್ಷಣದಲ್ಲಿ ಅನೇಕ ಅದ್ಭುತಗಳು ಸಂಭವಿಸಿದವು ಎಂದು ಕಂಡವರು ಹೇಳುತ್ತಾರೆ.
ದೇಗುಲ ಪ್ರತಿಷ್ಠಾಪನೆಯ ನಂತರ ಸ್ವಾಮಿಗಳು ಅರುವಿಪ್ಪುರಂನಲ್ಲೇ ಹೆಚ್ಚು ಕಾಲ ಇರತೊಡಗಿದರು. . ಕ್ಷೇತ್ರ ಸಾನ್ನಿಧ್ಯವೂ ಕ್ರಮೇಣ ಹೆಚ್ಚುತ್ತಾ ಹೋಯಿತು. ಅಲ್ಲಿ ಸಂಗ್ರಹವಾಗುವ ಕಾಣಿಕೆಯ ಜೊತೆಗೆ ಚಂದಾ ಎತ್ತಿ ಲಿಂಗ ಪ್ರತಿಷ್ಠಾಪನೆಗೊಂಡ ಸ್ಥಳದಲ್ಲೇ ದೇಗುಲವೊಂದನ್ನು ಜನಗಳೇ ನಿರ್ಮಿಸಿದರು. ಕೆಲವು ಭಕ್ತರಿಗೆ ತರಬೇತಿ ನೀಡಿ ಅವರನ್ನೇ ದೇಗುಲದಲ್ಲಿ ಅರ್ಚಕರನ್ನಾಗಿಸುವ ಕೆಲಸವೂ ಸ್ವಾಮಿಗಳಿಂದಾಯಿತು. ಶಿಕ್ಷಣ ಪಡೆದಿದ್ದ ಶಿಷ್ಯರನ್ನು ಬಳಸಿಕೊಂಡು ಅಲ್ಲೇ ಒಂದು ಶಾಲೆಯನ್ನು ಕಟ್ಟಿಸಿ ಸ್ಥಳೀಯ ಮಕ್ಕಳಿಗೆ ಮಲಯಾಳಂ ಕಲಿಸುವ ವ್ಯವಸ್ಥೆಯನ್ನೂ ಸ್ವಾಮಿಗಳೇ ಮಾಡಿದರು.
ಈ ಎಲ್ಲವೂ ನಡೆಯುತ್ತಿರುವ ಕಾಲದಲ್ಲೇ ಸ್ವಾಮಿಗಳು ತಮ್ಮ ಮುಖ್ಯ ಕೃತಿಗಳಲ್ಲೊಂದಾದ ‘ಶಿವಶತಕಂ’ ಎಂಬ ಮಣಿಪ್ರವಾಳ ಭಾಷೆಯ ಸ್ತೋತ್ರ ಕೃತಿಯನ್ನೂ ರಚಿಸಿದರು.


[…] ಅಧ್ಯಾಯ ಇಲ್ಲಿದೆ : https://aralimara.com/2024/07/26/guru-37/ ಮುಂದೆ […]
LikeLike