ಅಮರು ಶತಕ: 2ನೇ ಕಂತಿನ ಪದ್ಯಗಳು

ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 2ನೇ ಭಾಗ ಇಲ್ಲಿದೆ…

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/07/21/amaru/

10.

ಅವನನ್ನು
ತನ್ನ ತೋಳ ಬಳ್ಳಿಯಿಂದ ಬಂಧಿಸಿ
ಎಳೆದುಕೊಂಡು ಬಂದು ಆಕೆ
ನಿಲ್ಲಿಸಿದಳು ಗೆಳತಿಯರ ಮುಂದೆ.
“ಮತ್ತೊಮ್ಮೆ ಹೀಗೆ ಮಾಡಿದರೆ ಎಚ್ಚರ”
ಬೆದರಿಸಿದಳು ತೊದಲುತ್ತ.
“ಇಲ್ಲ ಇಲ್ಲ” ಒಪ್ಪಿಕೊಂಡ ಅವನು ನಗುನಗುತ್ತ,
ಮುದ್ದು ಮುದ್ದಾಗಿ ಅವನನ್ನು ಹೊಡೆಯುತ್ತ
ನೂಕಿಕೊಂಡು ಹೋದಳು ಆಕೆ ಕೋಣೆಯೊಳಗೆ
ಆಕೆಯಿಂದ ತಪ್ಪಿಸಿಕೊಳ್ಳುತ್ತ ತಪ್ಪಿಸಿಕೊಳ್ಳುತ್ತ
ಮುಚ್ಚಿಕೊಂಡ ಅವನು ಕೋಣೆಯ ಬಾಗಿಲು.


11

“ದೂರದೂರಿಗೆ ಹೋದವರು
ಮರಳಿ ಬಾರದಿರುವರೆ? ಅತಿಯಾಯಿತು ನಿನ್ನ ಹಟ”
ಅವಳೆದುರು ನಾನು ಕಠಿಣನಾದಾಗ,
ನನ್ನನ್ನೇ ದಿಟ್ಟಿಸುತ್ತಿತ್ತು ಆಕೆಯ ಶೂನ್ಯ ದೃಷ್ಟಿ
ಅವಳ ಗಂಟಲು ನುಂಗುತ್ತಿತ್ತು ತನ್ನ ಸಂಕಟವನ್ನ
ಮನೆ ಮಾಡಿತ್ತು ಕಣ್ಣಾಲಿಗಳಲ್ಲಿ ನಾಚಿಕೆ, ಬೇಸರ
ನಗುವ ಪ್ರಯತ್ನ ಮಾಡಿದಳು ಆಕೆ
ಸಾವನ್ನೇ ಹಂಗಿಸುವಂತಿತ್ತು ಆ ಉದಾಸೀನ
ಹೆಜ್ಜೆ ಮುಂದಿಡಲಾಗಲಿಲ್ಲ ನನಗೆ.


12

ಮುನಿಸು ನನಗೆ ಅವನ ಮೇಲೆ.
ಮುಖ ನೋಡುವ ಆಸೆ ಇದ್ದರೂ
ತಲೆ ಬಗ್ಗಿಸಿ ದಿಟ್ಟಿಸತೊಡಗಿದೆ ಅವನ ಪಾದಗಳ,
ಅವನ ಮಾತುಗಳ ಕೇಳುವ ಬಯಕೆ ಇದ್ದರೂ
ಮುಚ್ಚಿಕೊಂಡೆ ಬಿಗುಮಾನದಿಂದ ಕಿವಿಗಳನ್ನು,
ಗಲ್ಲದ ಮೇಲಿನ ಬೆವರು ಹನಿಗಳನ್ನು
ಒತ್ತಿಕೊಂಡೆ ಲಗುಬಗೆಯಿಂದ ಕೈಗಳಿಂದ,
ಆದರೆ ಅವನಿಗಾಗಿ ಉಕ್ಕುತ್ತಿರುವ ಪ್ರೇಮ
ಒಂದೊಂದಾಗಿ ಬಿಚ್ಚುತ್ತಿದೆಯಲ್ಲ ಆತಂಕದಲ್ಲಿ
ನನ್ನ ರವಿಕೆಯ ಹೊಲಿಗೆಯನ್ನ
ಏನು ಮಾಡಲಿ ನಾನೀಗ?


13

ಯಾವಾಗ ನೀನು ಬರುವುದು ?
ನಿರೀಕ್ಷಿಸಬಹುದೆ ನಿನ್ನ ಮುಂಜಾನೆ?
ಅಥವಾ ಮಧ್ಯಾಹ್ನ?
ಮುಸ್ಸಂಜೆ ಮೂಡುವುದರೊಳಗಾಗಿ
ಇರಬೇಕು ನೀನಿಲ್ಲಿ,
ಅಥವಾ ಕಾಯಬೇಕೆ ರಾತ್ರಿಯವರೆಗೆ?
ಅವಳ ಗದ್ಗದಿತ ಮಾತುಗಳ ಕೇಳಿ
ನೂರು ದಿನಗಳ ಪ್ರವಾಸಕ್ಕೆ ಸಿದ್ಧವಾಗಿದ್ದ
ಅವನ ಕಾಲುಗಳು ನಾಚಿ
ನಿಶಬ್ದವಾದವು ಅಂತಃಕರಣದಲ್ಲಿ.


14

ಸುರತ ಸಂಭ್ರಮದ ನಡುವೆ
ನನಗೆ ನೋವಾದಾಗ ಕಿರುಚಿದೆ
“ನಿಲ್ಲಿಸು”
ಹೊರಟೇಬಿಟ್ಟ ಸಿಟ್ಟಿಗೆದ್ದು
ಅವನು ಹಾಸಿಗೆಯಿಂದ.
ಆದರೂ ಸುಂದರ ರಾತ್ರಿಯೊಂದನ್ನು
ಹಾಳುಮಾಡಿದ
ಆ ನಿಷ್ಕರುಣಿ ಗಂಡಸಿನಲ್ಲಿಯೇ
ಸಿಲುಕಿಕೊಂಡಿದೆ ಇನ್ನೂ
ನನ್ನ ನಾಚಿಕೆಯಿಲ್ಲದ ಮನಸ್ಸು.


15

ಇಡೀ ರಾತ್ರಿ
ಅವರು ಹಂಚಿಕೊಂಡ ಪ್ರಣಯದ ಮಾತುಗಳನ್ನೆಲ್ಲ
ಬಾಯಿಪಾಠ ಮಾಡಿದವರಂತೆ
ಒಪ್ಪಿಸುತ್ತಿದೆ ಅತ್ತೆ ಮಾವಂದಿರ ಮುಂದೆ
ಮನೆಯ ಸಾಕು ಗಿಳಿ.
ನಾಚಿ ನೀರಾದ ನವ ವಧು
ಪುಂಡ ಗಿಳಿಯ ಬಾಯಿ ಮುಚ್ಚಿಸಿದಳು
ತನ್ನ ಕಿವಿಯ ಹಿಂದಿನ ಕೆಂಪು ಮಣಿಯನ್ನು
ದಾಳಿಂಬೆ ಹಣ್ಣು ತಿನ್ನಿಸುವಂತೆ
ಗಿಳಿಯ ಕೊಕ್ಕಿನೊಳಗಿಟ್ಟು.


16

ದುಷ್ಟ,
ನಿನ್ನ ಮೂರ್ಖತನವೋ, ಕಪಟತನವೋ
ಸಿಟ್ಟಿನಲ್ಲಿ ಮುಖತಿರುಗಿಸಿಕೊಂಡು ಕುಳಿತಿದ್ದ
ನನ್ನ ಹಿಂದಿನಿಂದ ಬಂದು
ಬರಸೆಳೆದು ಅಪ್ಪಿಕೊಂಡೆಯಲ್ಲಾ
ಸಿಕ್ಕಿಹಾಕೊಂಡಿದೆ ಈಗ ನಿನ್ನ ಮೋಸ.
ನೀನು ಅವಳನ್ನು ಅಪ್ಪಿಕೊಂಡಿದ್ದಾಗ
ನಿನ್ನ ಎದೆಗೆ ಅಂಟಿದ್ದ
ಅವಳು ಮೊಲೆಗೆ ಹಚ್ಚಿಕೊಂಡಿದ್ದ ಬಣ್ಣಕ್ಕೆ
ಈಗ ನನ್ನ ಕೂದಲಿನ ಎಣ್ಣೆಯ ಸುಗಂಧ
ಒತ್ತಿಕೊಂಡಿದೆ,
ಪ್ರೇಮದ ಸೌಭಾಗ್ಯವೇ ನಾಶವಾಗಿದೆ.


17

ಬಹಳ ದಿನಗಳ ನಂತರ
ಅವನು ಬರುತ್ತಿರುವುದನ್ನು ದೂರದಿಂದಲೇ ಗುರುತಿಸಿ
ಪಕ್ಕದಲ್ಲಿ ಬಂದು ಕೂಡದಂತೆ ತಾನೇ
ಸ್ವಾಗತಿಸಿದಳು ಎದ್ದು ನಿಂತು.
ಅವನು ಅಪ್ಪಿಕೊಳ್ಳಲು ಮುಂದಾದಾಗ
ಹೊರಟು ನಿಂತಳು ಕೋಣೆಯೊಳಗೆ ತಾನೇ
ಎಲೆ ಅಡಿಕೆ ತರುವ ನೆಪದಲ್ಲಿ.
ಅವನು ಏನೋ ಕೇಳಿದಾಗ ಮಾತು ಮರೆಸಿದಳು
ಸೇವಕರ ಜೊತೆ ಮಾತು ಮುಂದುವರೆಸುತ್ತ.
ಅಕ್ಕರೆ ತೋರಿಸುತ್ತಲೇ
ಸೇಡು ತೀರಿಸಿಕೊಂಡಳು ಅವನ ಮೇಲೆ
ಹಟಮಾರಿ ಹುಡುಗಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.