ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 7ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ಸ್ವಾಮಿಗಳಂತೆ ಅಸಾಮಾನ್ಯ ಬುದ್ಧಿಶಕ್ತಿ, ಶಾಸ್ತ್ರಪಾಂಡಿತ್ಯ, ಅನುಷ್ಠಾನ ಮತ್ತು ಅನುಭವಗಳು ಒಂದುಗೂಡಿದ ವೇದಾಂತಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಈ ಕಾರಣದಿಂದಾಗಿಯೇ ಅವರನ್ನು ಭೇಟಿಯಾಗುವುದಕ್ಕೆ ವಿದ್ವಾಂಸರಿಗೂ ಬಹಳ ಕೌತುಕವಿರುತ್ತಿತ್ತು. ಪ್ರಸಿದ್ಧ ತತ್ವಜ್ಞಾನಿ ದಿವಂಗತ ಪ್ರೊಫೆಸರ್ ಸುಂದರ ಪಿಳ್ಳೈ (ಎಂ.ಎ) ಮೊದಲಾದವರ ಶ್ಲಾಘನೆ ಮತ್ತು ಗೌರವಕ್ಕೆ ಸ್ವಾಮಿಗಳು ಪಾತ್ರರಾಗಿದ್ದರು…
ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/27/guru-38/ ಮುಂದೆ ಓದಿ…
ಅಧ್ಯಾಯ ಏಳು : ಸಾತ್ವಿಕನಾದ ಮತ ಸುಧಾರಕ
ಅರುವಿಪ್ಪುರದ ಲಿಂಗ ಪ್ರತಿಷ್ಠಾಪನೆಯ ನಂತರ ಸ್ವಾಮಿಗಳು ಚಿರಯಿನ್ಕೀಳ್ನಲ್ಲಿ ವೇಲಾಯುಧನ್ ಕೋವಿಲ್ ಎಂದು ಗುರುತಿಸಲಾಗುತ್ತಿದ್ದ ಹಳೆಯ ಸುಬ್ರಹ್ಮಣ್ಯಕ್ಷೇತ್ರದ ಪುನರ್ಪ್ರತಿಷ್ಠಾಪನೆ ನಡೆಸಿದರು. ಇದರ ಜೊತೆಗೆ ಸಮೀಪದಲ್ಲಿಯೇ ದೇವೇಶ್ವರಂ ಎಂದು ಕರೆಯಲಾಗುವ ಮತ್ತೊಂದು ಶಿವದೇಗುಲ ಪ್ರತಿಷ್ಠಾಪನೆಯನ್ನೂ ಪೂರೈಸಿದರು. ಈಳವ ಜಾತಿಯವರ ಮಧ್ಯೆ ಸ್ವಾಮಿಗಳ ಖ್ಯಾತಿ ಬಹುಬೇಗ ಹರಡಿತು.
ತಿರುವಿದಾಂಕೂರಿನ ಉತ್ತರದಿಂದ ದಕ್ಷಿಣದ ಕೊನೆಯ ತನಕವೂ ಹಲವೆಡೆ ಇದ್ದ ಪ್ರಮುಖರೆಲ್ಲರೂ ಸ್ವಾಮಿಗಳನ್ನು ಪರಿಚಯಿಸಿಕೊಂಡರು ಇಲ್ಲವೇ ಅವರ ಅನುಯಾಯಿಗಳಾದರು. ಈ ದಿನಗಳಲ್ಲಿ ಉತ್ತರ ಪರವೂರು ಮತ್ತು ಆಲುವಾಗಳನ್ನು ಹಲವು ಬಾರಿ ಸಂದರ್ಶಿಸಿದ್ದ ಸ್ವಾಮಿಗಳು ಅಲ್ಲಿಯೇ ಉಳಿದುಕೊಳ್ಳುವುದೂ ಸಾಮಾನ್ಯವಾಗಿತ್ತು. ಈಗ ಆಲುವಾದಲ್ಲಿ ಅದೈತಾಶ್ರಮವನ್ನು ಸ್ಥಾಪಿಸಿರುವ ಸ್ಥಳದಲ್ಲಿ ಒಂದು ಆಶ್ರಮವಿದ್ದರೆ ಒಳ್ಳೆಯದು ಎಂದು ಸ್ವಾಮಿಗಳಿಗೆ ಅನ್ನಿಸಿದ್ದು ಅವರೊಮ್ಮೆ ಆಲುವಾ ನದಿಯಲ್ಲಿ ಸ್ನಾನ ಮುಗಿಸಿ ಹಿಂದಿರುಗುವ ಹೊತ್ತಲ್ಲಂತೆ. ಈ ವಿಚಾರವನ್ನು ಸ್ವಾಮಿಗಳೇ ಹೇಳಿದ್ದಾರೆ.
ಅರುವಿಪ್ಪುರಲ್ಲಿ ದೇಗುಲಕ್ಕೆ ಹೊಂದಿಕೊಂಡಂತೆ ಮಠವಿರಬೇಕು. ಅದರ ಮೂಲಕ ಜನಗಳಲ್ಲಿ ಧಾರ್ಮಿಕ ಸಂಬಂಧಿ ವಿಚಾರಗಳ ಅರಿವನ್ನು ಹೆಚ್ಚಿಸಿ ದೇಗುಲಗಳಲ್ಲಿ ನಡೆಯುವ ಹಿಂಸಾತ್ಮಕ ಆಚರಣೆಗಳನ್ನು ತಡೆಯಬೇಕು. ದುರ್ದೇವತಾರಾಧನೆ (ಕ್ಷುದ್ರದೇವತೆಗಳ ಆರಾಧನೆ) ನಿಲ್ಲಿಸಿ ಸಾತ್ವಿಕವಾದ ಆರಾಧನಾಕ್ರಮಗಳನ್ನು ಪ್ರಚಾರಕ್ಕೆ ತರಬೇಕೆಂಬ ತೀರ್ಮಾನಗಳನ್ನು ಸ್ವಾಮಿಗಳು ಕೈಗೊಂಡದ್ದನ್ನು ಅಲ್ಲಿನ ಚಟುವಟಿಕೆಗಳೇ ಹೇಳತೊಡಗಿದವು.
ಪರವೂರ್ನಿಂದ ತೊಡಗಿ ನೈಯ್ಯಾಟಿಂಕರದ ತನಕ ಈಳವರಿಗೆ ಸೇರಿದ ಹಲವು ಹಳೆಯ ದೇವಿ ಗುಡಿಗಳಲ್ಲಿ ನಡೆಸುತ್ತಿದ್ದ ಆಡು, ಕೋಳಿ ಮೊದಲಾದ ಪ್ರಾಣಿಬಲಿಯಂಥ ಆನಾಚಾರಗಳನ್ನು ಸ್ವಾಮಿಗಳ ಮಾತಿನಂತೆ ಅನೇಕರು ನಿಲ್ಲಿಸಿಬಿಟ್ಟರು. ಹಿಂಸೆ ಮತ್ತು ಕ್ಷುದ್ರದೇವತೆಗಳ ಆರಾಧನೆಯ ದೋಷದ ಬಗ್ಗೆ ಸ್ವಾಮಿಗಳೇ ಪುಟ್ಟ ಬರಹಗಳನ್ನು ಬರೆದು ಭಾಷಣಕಾರರಿಗೆ ಕೊಟ್ಟು ಧಾರ್ಮಿಕ ಸುಧಾರಣೆಗಳ ವಿಚಾರದಲ್ಲಿ ಭಾಷಣಗಳನ್ನು ಏರ್ಪಡಿಸುತ್ತಿದ್ದರು.
ಅರುವಿಪ್ಪುರ ಕ್ರಮೇಣ ಒಂದು ಮಠವಾಗಿ ಬದಲಾಗತೊಡಗಿತು. ವಿದ್ಯೆ ಮತ್ತು ಭಕ್ತಿಯಿದ್ದ ಹಲವು ಯುವಕರು ಅಲ್ಲಿಗೆ ಬಂದು ಸ್ವಾಮಿಗಳ ಶಿಷ್ಯರಾಗಿ ಮಠದ ಅಂತೇವಾಸಿಗಳಾದರು. ಪರಿಣಾಮವಾಗಿ ಶಿಷ್ಯವಾಸಕ್ಕೆ ಬೇಕಿರುವ ಅನುಕೂಲಗಳಿರುವ ಶಾಶ್ವತ ವ್ಯವಸ್ಥೆಯ ಅಗತ್ಯ ಹೆಚ್ಚಿತು.
ಮಲಯಾಳ ವರ್ಷ 1068ರಲ್ಲಿ (ಕ್ರಿ.ಶ.1893) ತಿರುವನಂತಪುರದ ಹತ್ತಿರವಿರುವ ಕುಳತ್ತೂರಿನಲ್ಲಿ ಈಳವರಿಗೆ ಸೇರಿದ ಹಾಗೂ ಬಹಳ ಹಳೆಯ ಕೋಲತ್ತುಕ್ಕರ ಭಗವತೀ ಕ್ಷೇತ್ರವನ್ನು ತೆರವುಗೊಳಿಸಿ ಸ್ವಾಮಿಗಳು ಅಲ್ಲೊಂದು ಶಿವದೇಗುಲ ಕಟ್ಟಿಸಿ ದೇವ ಪ್ರತಿಷ್ಠೆಯನ್ನು ಪೂರ್ಣಗೊಳಿಸಿದರು.
ಮಲಯಾಳ ವರ್ಷ 1069ರಲ್ಲಿ (ಕ್ರಿ.ಶ.1894) ಅರುವಿಪ್ಪುರಂ ಮಠದ ಧಾರ್ಮಿಕ ಚಟುವಟಿಕೆಗಳನ್ನು ನೋಡಿಕೊಳ್ಳಲು ಮತ್ತು ಮಠದ ಅಭಿವೃದ್ಧಿಗಾಗಿ ಜನರಿಂದ ಹಣ ಸಂಗ್ರಹಿಸುವುದಕ್ಕಾಗಿ ಅಗತ್ಯವಿರುವ ವ್ಯವಸ್ಥೆಗಳನ್ನು ಸ್ವಾಮಿಗಳು ರೂಪಿಸಿದರು. ಅವರು ಇದಕ್ಕಾಗಿ 1070ರಲ್ಲಿ (ಕ್ರಿ.ಶ.1895) ಶಿಷ್ಯರ ಜೊತೆಗೆ ಪರವೂರ್ ತನಕ ಹೋಗಿದ್ದರು. ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಸ್ವಾಮಿಗಳು ಡಾಕ್ಟರ್ ಪಲ್ಪು ಅವರನ್ನು ಭೇಟಿಯಾದರು. ಹಿಂದಿರುಗುವಾಗ ಚಿದಂಬರಂ, ಮಧುರೈ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ತಿರುನಲ್ವೇಲಿ ಮಾರ್ಗವಾಗಿ ಕೇರಳ ತಲುಪಿದರು. ಈ ಸಂದರ್ಭದಲ್ಲಿ ತಮ್ಮ ಕೆಲ ಶಿಷ್ಯರಿಗೆ ಅಗತ್ಯವಿರುವ ಅತ್ಯುನ್ನತ ಶಿಕ್ಷಣಕ್ಕಾಗಿ ಬೇಕಿರುವ ಏರ್ಪಾಡುಗಳನ್ನು ಮಾಡಿದ್ದಷ್ಟೇ ಅಲ್ಲದೆ ಅವರಿಂದ ಮಠದ ಅಭಿವೃದ್ಧಿಯ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು.
ತಿರುವನಂತಪುರದ ದಕ್ಷಿಣದಲ್ಲಿರುವ ಕೋವಳಂ ಎಂಬ ವಿಹಾರಧಾಮದ ಸಮೀಪವೇ ಮುಟ್ಟಯ್ಕಾಡ್ ಎಂಬ ಸ್ಥಳವಿದೆ. ಅಲ್ಲಿನ ಸುಂದರ ದಿಣ್ಣೆಯೊಂದರ ಮೇಲೆ ಕೆಲಕಾಲದ ಹಿಂದೆಯೇ ಸ್ವಾಮಿಗಳು ಒಂದು ಸುಬ್ರಹ್ಮಣ್ಯ ಪ್ರತಿಷ್ಠೆಯನ್ನು ನೆರವೇರಿಸಿದ್ದರು. ಈ ದೇವಸ್ಥಾನದ ನಿರ್ವಹಣೆಗಾಗಿ ಅದು ಇದ್ದ ಭೂಮಿಯೂ ಸೇರಿದಂತೆ ಸ್ವಲ್ಪ ಜಮೀನನ್ನು ಅದರ ಮಾಲಿಕರಾಗಿದ್ದ ಕೊಚ್ಚುಕುಟ್ಟಿ ವೈದ್ಯರ್ ಮಲಯಾಳ ವರ್ಷ 1074ರಲ್ಲಿ (ಕ್ರಿ.ಶ.1899) ದಾನಪತ್ರ ಮಾಡಿಕೊಟ್ಟರು. ಈ ಪ್ರದೇಶದಲ್ಲಿ ಬಂಡೆಗಳ ನಡುವಿನಿಂದ ಶುದ್ಧಜಲವನ್ನು ಹರಿಸುವ ಒರತೆಯೊಂದಿದೆ. ಇದರ ಹತ್ತಿರವೇ ಸುಂದರವೂ ಸಕಲ ಸೌಲಭ್ಯಗಳೂ ಇರುವ ಮಠವೊಂದನ್ನು ಕೊಚ್ಚುಕುಟ್ಟಿ ವೈದ್ಯರ್ ಕಟ್ಟಿಸಿದ್ದಾರೆ.
ಮಲಯಾಳ ವರ್ಷ 1074ರಲ್ಲಿಯೇ ಅರುವಿಪ್ಪುರಂ ದೇವಾಲಯ ಮತ್ತು ಮಠದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ನೈಯ್ಯಾಟಿಂಕರ ಮತ್ತು ತಿರುವನಂತಪುರಂ ತಾಲೂಕಿನ ಈಳವ ಪ್ರಮುಖರನ್ನು ಒಟ್ಟುಗೂಡಿಸಿ ‘ಅರುವಿಪ್ಪುರ ಕ್ಷೇತ್ರಯೋಗಂ’ ಎಂಬ ಹೆಸರಿನ ಸಂಘಟನೆಯೊಂದನ್ನು ಸ್ಥಾಪಿಸಲಾಯಿತು. ಈ ಸಂಘಟನೆಯೇ ಅರುವಿಪ್ಪುರ ದೇಗುಲದ ಉತ್ಸವಾದಿ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದೆ.
ಈ ನಡುವೆ ಮಧ್ಯ ತಿರುವಿದಾಂಕೂರು ಮತ್ತು ಉತ್ತರ ತಿರುವಿದಾಂಕೂರಿನ ಹಲವು ಪ್ರದೇಶಗಳ ಜನರ ಅಪೇಕ್ಷೆಯ ಮೇರೆಗೆ ಸ್ವಾಮಿಗಳು ಹಲವು ದೇಗುಲ ಪ್ರತಿಷ್ಠಾಪನೆ ಮಾಡಿದರು. ಈ ಎಲ್ಲಾ ದೇಗುಲಗಳಲ್ಲಿಯೂ ಸುಧಾರಿತ ಆರಾಧನಾ ಕ್ರಮಗಳಲ್ಲಿಯೇ ಪೂಜಾದಿ ಕ್ರಿಯೆಗಳು ನಡೆಯುವ ವ್ಯವಸ್ಥೆಯೂ ಆಯಿತು.
ಮಲಯಾಳ ವರ್ಷ 1076ರ (ಕ್ರಿ.ಶ. 1901) ತಿರುವಿದಾಂಕೂರು ಜನಗಣತಿ ವರದಿಯಲ್ಲಿ ಈಳವ ಸಮುದಾಯದ ಬಗ್ಗೆ ಇರುವ ವಿವರಣೆಯಲ್ಲಿ ಸ್ವಾಮಿಗಳನ್ನು “A pious religious reformer” (ಸಾತ್ವಿಕ ಮತ ಸುಧಾರಕ) ಎಂದು ವರ್ಣಿಸಲಾಗಿದೆ. ಈ ಮಾತುಗಳು ಸ್ವಾಮಿಗಳ ಧಾರ್ಮಿಕ ಸುಧಾರಣೆಗಳಿಗೆ ಆ ದಿನಗಳಲ್ಲೇ ದೊರೆತ ಖ್ಯಾತಿ ಎಂಥದ್ದೆಂಬುದರ ಚಿತ್ರಣವನ್ನು ನೀಡುತ್ತದೆ.


[…] ಅಧ್ಯಾಯ ಇಲ್ಲಿದೆ : https://aralimara.com/2024/07/28/guru-39/ ಮುಂದೆ […]
LikeLike