“ನಿಮ್ಮ ಬದುಕು ಪರಿಪೂರ್ಣವಾಗಲು, ಆರೋಗ್ಯ ಪೂರ್ಣವಾಗಲು, ಪ್ರೊಫೆಸರ್ ಜಾಡಿಯನ್ನು ತುಂಬಿಸಿದ ಹಾಗೆ ನೀವೂ ನಿಮ್ಮ ಬದುಕನ್ನ ತುಂಬಿಸಿಕೊಳ್ಳಿ” ಅಂದರು ಪ್ರೊಫೆಸರ್. ಯಾಕೆ ಗೊತ್ತಾ? ಈ ದೃಷ್ಟಾಂತ ಓದಿ… ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಬ್ಬ ಫಿಲಾಸೊಫಿ ಪ್ರೊಫೆಸರ್ ತಮ್ಮ ಕ್ಲಾಸ್ ನಲ್ಲಿ ಒಂದು ದೊಡ್ಡ ಖಾಲೀ ಗಾಜಿನ ಜಾಡಿಯನ್ನು ತಮ್ಮ ಟೇಬಲ್ ಮೇಲೆ ಇಟ್ಟಿದ್ದರು. ಅವರು ಜಾಡಿಯನ್ನು ಮೊದಲು ದೊಡ್ಡ ದೊಡ್ಡ ಕಲ್ಲಿನ ತುಣುಕುಗಳಿಂದ ತುಂಬಿ “ಈಗ ಗಾಜಿನ ಜಾಡಿ ತುಂಬಿದೆಯಾ?” ಎಂದು ತಮ್ಮ ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದರು.
ಎಲ್ಲ ವಿದ್ಯಾರ್ಥಿಗಳು ಹೌದು ಎಂದು ಉತ್ತರಿಸಿದರು.
ನಂತರ ಪ್ರೊಫೆಸರ್ ಜಾಡಿಯಲ್ಲಿ ಸಣ್ಣ ಸಣ್ಣ ಕಲ್ಲಿನ ತುಣುಕು ಹಾಕಿದರು. ಸಣ್ಣ ಕಲ್ಲಿನ ತುಣುಕುಗಳು ಜಾಡಿಯಲ್ಲಿದ್ದ ದೊಡ್ಡ ಕಲ್ಲಿನ ತುಣುಕುಗಳ ಮಧ್ಯೆ ಹೋಗಿ ಸೇರಿಕೊಂಡವು. ಮತ್ತೆ ಪ್ರೊಫೆಸರ್ ಈಗ ಜಾಡಿ ತುಂಬಿದೆಯಾ ಎಂದು ಪ್ರಶ್ನೆ ಮಾಡಿದರು.
ವಿದ್ಯಾರ್ಥಿಗಳು ಹೌದು ಎಂದು ಉತ್ತರಿಸಿದರು.
ಆಮೇಲೆ ಪ್ರೊಫೆಸರ್ ಮರಳನ್ನು ಜಾಡಿಗೆ ಹಾಕತೊಡಗಿದರು. ಸಾಕಷ್ಟು ಮರಳು ಜಾಡಿಯಲ್ಲಿ ಕಲ್ಲಿನ ತುಣುಕುಗಳ ನಡುವೆ ಸೇರಿಕೊಂಡಿತು. ಮತ್ತೆ ಪ್ರೊಫೆಸರ್ ಪ್ರಶ್ನಿಸಿದರು, “ಈಗ ಗಾಜಿನ ಜಾಡಿ ತುಂಬಿದೆಯಾ?”
ಮತ್ತೆ ವಿದ್ಯಾರ್ಥಿಗಳು ಹೌದು ಎಂದು ಕೂಗುತ್ತ ತಲೆಯಲ್ಲಾಡಿಸಿದರು.
ಈ ಕಥೆಯಲ್ಲಿ ಗಾಜಿನ ಜಾಡಿ ನಿಮ್ಮ ಬದುಕನ್ನು ರಿಪ್ರಸೆಂಟ್ ಮಾಡುತ್ತದೆ, ದೊಡ್ಡ ಕಲ್ಲಿನ ತುಣುಕುಗಳು, ಸಣ್ಣ ಕಲ್ಲಿನ ತುಣುಕುಗಳು ಮತ್ತು ಮರಳು ನಿಮ್ಮ ಬದುಕನ್ನು ತುಂಬಿಕೊಂಡಿರುವ ಸಂಗತಿಗಳನ್ನು ರಿಪ್ರಸೆಂಟ್ ಮಾಡುತ್ತವೆ.
ದೊಡ್ಡ ಕಲ್ಲಿನ ತುಣುಕುಗಳು ನಿಮ್ಮ ಬದುಕಿನ ದೊಡ್ಡ ಭಾಗವನ್ನು ಪ್ರತಿನಿಧಿಸುತ್ತವೆ, ಯಾವುದನ್ನು ಬಿಟ್ಟು ನೀವು ಇರಲಾರಿರೋ, ಬದುಕಲಾರಿರೋ ಅಂಥ ಸಂಗತಿಗಳನ್ನು. ಉದಾಹರಣೆಗೆ ನಿಮ್ಮ ಕುಟುಂಬ, ನಿಮ್ಮ ಆರೋಗ್ಯ, ನಿಮ್ಮ ಜೀವನ ಮೌಲ್ಯಗಳು, ನಿಮ್ಮ ಖುಶಿ, ಇತ್ಯಾದಿಯಾಗಿ. ಇದರ ಅರ್ಥ ನಿಮ್ಮ ಬದುಕಿನಲ್ಲಿ ಸಣ್ಣಕಲ್ಲಿನ ತುಣುಕುಗಳು ಮತ್ತು ಮರಳು ಇಲ್ಲವಾದರೂ ನಿಮ್ಮ ಬದುಕು ತುಂಬಿಕೊಂಡಿರುತ್ತದೆ ಮತ್ತು ನಿಮ್ಮ ಬದುಕಿಗೊಂದು ಅರ್ಥವಿದೆ.
ಸಣ್ಣ ಕಲ್ಲಿನ ತುಣುಕುಗಳು ನಿಮ್ಮ ಬದುಕಿನಲ್ಲಿ ಮ್ಯಾಟರ್ ಆಗುವ ಆದರೆ ನೀವು ಅವುಗಳನ್ನು ಬಿಟ್ಟು ಇರಬಹುದಾದಂಥ ಸಂಗತಿಗಳನ್ನು ರಿಪ್ರಸೆಂಟ್ ಮಾಡುತ್ತವೆ. ಸಣ್ಣ ಕಲ್ಲಿನ ತುಣುಕುಗಳು ನಿಮ್ಮ ಬದುಕಿಗೊಂದು ಚಾರ್ಮ ಕೊಡುತ್ತವೆ, ಉದಾಹರಣೆಗೆ ಉದ್ಯೋಗ, ಮನೆ, ಗೆಳೆಯರು, ಹಾಬಿ ಇತ್ಯಾದಿ. ಇವು ಇದ್ದರೆ ಚೆನ್ನ ಆದರೆ ಇವು ಇಲ್ಲದೆ ಇದ್ದರೂ ನೀವು ಬದುಕಬಲ್ಲಿರಿ ನಿಮ್ಮ ಬದುಕು ಅರ್ಥ ಕಳೆದುಕೊಳ್ಳುವುದಿಲ್ಲ. ಈ ಸಂಗತಿಗಳು ನಿಮ್ಮ ಬದುಕಿನಲ್ಲಿ ಬಂದು ಹೋಗುತ್ತಿರುತ್ತವೆ. ಇವು ಶಾಶ್ವತ ಅಲ್ಲ ಮತ್ತು ನಿಮ್ಮ ಬದುಕಿನ ಸಫಲತೆಗೆ ನಿರ್ಣಾಯಕ ಅಲ್ಲ.
ಕೊನೆಗೆ ಮರಳು, ನಿಮ್ಮ ಬದುಕಿನಲ್ಲಿ ಬಾಕಿ ತುಂಬಿಕೊಂಡಿರುವುದನ್ನು ರಿಪ್ರಸೆಂಟ್ ಮಾಡುತ್ತದೆ. ಉದಾಹರಣೆಗೆ, ಟಿ ವಿ ನೋಡುವುದು, ಸಿಗರೇಟು ಸೇದುವುದು, ಸೋಷಿಯಲ್ ಮೀಡಿಯಾ, ಹರಟೆ ಅಥವಾ ಅಲ್ಲಿ ಇಲ್ಲಿ ಸುಮ್ಮನೇ ಓಡಾಡುವುದು ಇತ್ಯಾದಿಯಾಗಿ. ಈ ಸಂಗತಿಗಳು ನಿಮ್ಮ ಬದುಕಿಗೆ ಅಂಥ ಮಹತ್ವದವು ಅಲ್ಲ. ಸುಮ್ಮನೇ ಟೈಂ ಪಾಸ್ ಗಾಗಿ ಇರುವಂಥವು.
ಆದರೆ ನೋಡಿ ನಿಮ್ಮ ಬದುಕಿನ ಜಾಡಿಯನ್ನು ಮೊದಲು ಮೊದಲು ಮರಳಿನಿಂದ ತುಂಬಿ ಬಿಟ್ಟರೆ ಆಮೇಲೆ ಅಲ್ಲಿ ಸಣ್ಣ ಕಲ್ಲಿನ ತುಣುಕುಗಳಿಗೆ ಹಾಗು ದೊಡ್ಡ ಕಲ್ಲಿನ ತುಣುಕುಗಳಿಗೆ ಜಾಗವೇ ಇಲ್ಲ. ಇದು ನಿಮ್ಮ ಬದುಕಿಗೂ ಅನ್ವಯಿಸುತ್ತದೆ. ನೀವು ನಿಮ್ಮ ಬದುಕನ್ನ ಅಷ್ಟೇನು ಮಹತ್ವವಲ್ಲದ ಸಂಗತಿಗಳಿಂದ ಮೊದಲು ತುಂಬಿಕೊಂಡುಬಿಟ್ಟರೆ, ಅತೀ ಮಹತ್ವದ ಸಂಗತಿಗಳಿಗೆ ನಿಮ್ಮ ಬದುಕಿನಲ್ಲಿ ಜಾಗವೇ ಉಳಿಯುವುದಿಲ್ಲ. ಆದ್ದರಿಂದ ನಿಮ್ಮ ಬದುಕು ಪರಿಪೂರ್ಣವಾಗಲು, ಆರೋಗ್ಯ ಪೂರ್ಣವಾಗಲು, ಪ್ರೊಫೆಸರ್ ಜಾಡಿಯನ್ನು ತುಂಬಿಸಿದ ಹಾಗೆ ನೀವೂ ನಿಮ್ಮ ಬದುಕನ್ನ ತುಂಬಿಸಿಕೊಳ್ಳಿ. ಮೊದಲು ದೊಡ್ಡ ಕಲ್ಲಿನ ತುಣುಕುಗಳಿಗೆ ಜಾಗವಿರಲಿ ನಂತರ ಸಣ್ಣ ಕಲ್ಲಿನ ತುಣುಕುಗಳಿಗೆ ಹಾಗು ಆಮೇಲೆ ಮರಳಿಗೆ. ಆಗಲೇ ಬದುಕು ವೈವಿಧ್ಯಮಯ, ಪರಿಪೂರ್ಣ.

