ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 11ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ಸ್ವಾಮಿಗಳು ಮೇಲ್ ಗಾಡಿಯಲ್ಲಿ ಬರುತ್ತಾರೆಂದು ಅವರನ್ನು ಸ್ವಾಗತಿಸಲು ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲೂ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲೂ ಅಸಂಖ್ಯ ಜನರು ಸೇರಿದ್ದರು. ಆಲುವಾದಲ್ಲಿ ಸ್ವಾಮಿಗಳಿಗೆ ಡಾಕ್ಟರ್ ನೀಡಬಹುದಾದ ಚಿಕಿತ್ಸೆಗಳೆಲ್ಲವೂ ಮುಗಿದಿದ್ದವು. ಕಣ್ಣೀರುಗರೆಯುತ್ತಾ ವಿಷಣ್ಣವದನರಾಗಿ ನಿಂತಿದ್ದ ಶಿಷ್ಯರು ಮತ್ತು ಅನುಯಾಯಿಗಳ ಅಂದಿನ ಮನಃಸ್ಥಿತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/31/guru-42/ ಮುಂದೆ ಓದಿ…
ಅಧ್ಯಾಯ ಹನ್ನೊಂದು
ಮುಂದಿನ ಎರಡು ವರ್ಷಗಳ ಕಾಲ, ಅಂದರೆ ಮಲಯಾಳ ವರ್ಷ 1083ರ ತನಕ (ಕ್ರಿ.ಶ. 1908) ಸ್ವಾಮಿಗಳು ಹೊರೆಗೆಲ್ಲೂ ಹೋಗದೆ ಶಿವಗಿರಿಯಲ್ಲೇ ಇದ್ದರು. ಈ ಅವಧಿಯಲ್ಲಿ ಅಲ್ಲಿನ ಹಳೆಯ ಮಠದ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಂಡರು. ಹಾಗೆಯೇ ಸಂಸ್ಕೃತ ಪಾಠಶಾಲೆಯನ್ನೂ ಆರಂಭಿಸಿದರು. ಚೀಫ್ ಜಸ್ಟೀಸ್ ಸದಾಶಿವ ಅಯ್ಯರ್ ಮುಂತಾದ ಪ್ರಮುಖರು ಈ ದಿನಗಳಲ್ಲೇ ಸ್ವಾಮಿಗಳನ್ನು ಭೇಟಿಯಾಗಿ ತೃಪ್ತಿಯಾಗುವಷ್ಟು ಮಾತನಾಡಿದ್ದು.
ನಾಡಿನ ಉತ್ತರಿಂದ ತೊಡಗಿನ ದಕ್ಷಿಣದ ತನಕವೂ ಹರಡಿದ್ದ ಈಳವ ಸಮುದಾಯಕ್ಕೆ ಸೇರಿದ ಹಲವು ಪ್ರಮುಖರು ಈ ಅವಧಿಯಲ್ಲಿ ಮತ್ತೆ ಮತ್ತೆ ಶಿವಗಿರಿಗೆ ಬಂದು ಸ್ವಾಮಿಗಳನ್ನು ಭೇಟಿಯಾಗುತ್ತಿದ್ದರು. ಶಿವಗಿರಿ ಮಠದಲ್ಲಿ ಒಂದು ಸಾರ್ವಜನಿಕ ದೇವಾಲಯ ಮತ್ತು ಉತ್ಕೃಷ್ಟವಾದ ಸಂಸ್ಕೃತ ವಿದ್ಯಾಮಂದಿರವನ್ನು ಸ್ಥಾಪಿಸಬೇಕು ಮತ್ತು ತಮ್ಮ ಎಲ್ಲಾ ಮತಸಂಬಂಧೀ ಸಂಸ್ಥೆಗಳಿಗೆ ಶಿವಗಿರಿ ಮಠವು ಕೇಂದ್ರವಾಗಿರಬೇಕು ಎಂಬ ತಮ್ಮ ಅಪೇಕ್ಷೆಯನ್ನು ಸ್ವಾಮಿಗಳು ಶಿಷ್ಯರಿಗೆ ತಿಳಿಸಿದ್ದೂ ಇದೇ ಸಮಯದಲ್ಲಿ.
ಮಲಯಾಳ ವರ್ಷ 1083ರ ಸಿಂಹ ಮಾಸದ 13ನೇ ದಿನದಂದು ಶಿವಗಿರಿ ಮಠದಲ್ಲಿ ಕೈಗೊಳ್ಳಲಾಗುತ್ತಿರುವ ಮಹತ್ವದ ಕೆಲಸಗಳಿಗಾಗಿ ಸ್ವಜನರಿಂದ ಧನ ಸಹಾಯವನ್ನು ಕೇಳುವ ವಿನಂತಿಯೊಂದನ್ನು ಪ್ರಕಟಿಸಿದರು.
ಈ ಹೊತ್ತಿಗಾಗಲೇ ತಲಶ್ಶೇರಿಯ ಈಳವ ಸಮುದಾಯವು ನಿರ್ಮಿಸುತ್ತಿದ್ದ ದೇಗುಲದ ಕೆಲಸ ಪೂರ್ಣವಾಗುತ್ತಿತ್ತು. ಕೋಝಿಕ್ಕೋಡ್ನಲ್ಲಿ ದೇವಾಲಯವೊಂದರ ನಿರ್ಮಾಣಕ್ಕೆ ಅಗತ್ಯವಿರುವ ಪೂರ್ವಭಾವಿ ಕೆಲಸಗಳೆಲ್ಲಾ ಮುಗಿದು ಗುದ್ದಲಿಪೂಜೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಇದಕ್ಕಾಗಿ ಸ್ವಾಮಿಗಳನ್ನು ಆಹ್ವಾನಿಸಲು ಮ.ರಾ.ರಾ. ಕಲ್ಲಿಂಕಲ್, ರಾರಿಚ್ಚನ್, ಮೂಪ್ಪನ್ ಮೊದಲಾದ ಪ್ರಮುಖರು ಶಿವಗಿರಿಗೆ ಆಗಮಿಸಿದ್ದರು. ಅವರೆಲ್ಲರನ್ನೂ ಮೊದಲೇ ನಿರ್ಧರಿಸಿದಂತೆ ಮರಳುವಂತೆ ನೋಡಿಕೊಂಡ ಸ್ವಾಮಿಗಳು 1088ರ ತುಲಾ ಮಾಸದ 24ನೇ ದಿನದಂದು (ಕ್ರಿ.ಶ. ನವೆಂಬರ್ 7, 1912) ರಾತ್ರಿ ತಮ್ಮ ಕೆಲವು ಅನುಯಾಯಿಗಳ ಜೊತೆ ಪ್ರವಾಸ ಆರಂಭಿಸಿದರು.
ಜೊತೆಗಾರರ ಒತ್ತಾಯಕ್ಕಾಗಿ ಹೊರಡಬೇಕೇ ಹೊರತು ತನ್ನೊಳಗೆ ಉತ್ಸಾಹದ ಲವಲೇಷವೂ ಇಲ್ಲ ಎಂದು ಹೇಳುತ್ತಲೇ ಬಂದ ಅವರು ಹಾಗೂ ಹೀಗೂ ತುಲಾ ಮಾಸದ 27ನೇ ದಿನ (ನವೆಂಬರ್ 10, 1912) ಆಲುವಾ ತಲುಪಿದರು. ಮರುದಿನವೇ ಮೇಲ್ ಗಾಡಿಯಲ್ಲಿ ಕೋಝಿಕ್ಕೋಡ್ಗೆ ಹೋಗುವುದೆಂದು ನಿರ್ಧರಿಸಿ ಜೊತೆಗಾರರೊಂದಿಗೆ ರೈಲು ನಿಲ್ದಾಣದ ಸಮೀಪವಿದ್ದ ಕಟ್ಟಡವೊಂದರಲ್ಲಿ ರಾತ್ರಿ ಕಳೆಯಲು ತೀರ್ಮಾನಿಸಿದರು. ಆ ಕಟ್ಟಡದಲ್ಲೀಗ ಆಲುವ ಅದ್ವೈತಾಶ್ರಮದ ವತಿಯಿಂದ ಸ್ಥಾಪಿಸಿರುವ ಮಠವಿದೆ.
ಆ ರಾತ್ರಿ 12ರ ವೇಳೆಗೆ ಸ್ವಾಮಿಗಳಲ್ಲಿ ಅತಿಸಾರದ ಲಕ್ಷಣಗಳು ಕಾಣಿಸಿಕೊಂಡವು. ಒಂದು ಗಂಟೆ ಕಳೆಯುವ ಹೊತ್ತಿಗೆ ವಾಂತಿ ಆರಂಭವಾಯಿತು. ಇದರೊಂದಿಗೆ ಅವರಿಗೆ ಬಾಧಿಸಿರುವುದು ತೀವ್ರ ಸ್ವರೂಪದ ಕಾಲರಾ ಎಂಬುದೂ ಖಚಿತವಾಯಿತು. ಅತಿಸಾರದ ಲಕ್ಷಣಗಳು ಕಂಡಾಗಲೇ ಸ್ಥಳೀಯ ಫಾರ್ಮಾಸಿಸ್ಟ್ ಒಬ್ಬರ ಸಹಾಯದಿಂದ ಬಹಳ ಜಾಗರೂಕತೆಯಿಂದ ಇಂಗ್ಲಿಷ್ ಔಷಧಿಯ ಶುಶ್ರೂಷೆಯನ್ನು ಆರಂಭಿಸಲಾಗಿತ್ತು. ಜೊತೆಗಿರುವವರು ಚಿಕಿತ್ಸೆಯಲ್ಲಿ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಕಾಯಿಲೆ ಮಾತ್ರ ತೀವ್ರಗೊಳ್ಳುತ್ತಲೇ ಹೋಯಿತು. ಮರುದಿನ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಪ್ರಜ್ಞೆಗೆಟ್ಟು ನಾಡಿಯೂ ನಿಂತಂತಾಯಿತು. ದೇಹ ತಣ್ಣಗಾಗತೊಡಗಿತು.
ಈ ಹೊತ್ತಿಗಾಗಲೇ ಸ್ವಾಮಿಗಳಿಗೆ ಪ್ರಯಾಣಕ್ಕೆ ಜೊತೆಯಾಗಿದ್ದ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಕೊಚ್ಚುಮಾಯಿರಟ್ಟಿ ಆಶಾನ್ ಕಾಲರಾ ಬಾಧೆಯಿಂದ ತೀರಿಕೊಂಡಿದ್ದರು. ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಕಾಯಿಲೆ ವಾಸಿಯಾಗುವುದೆಂಬ ಭರವಸೆ ಕೊಟ್ಟ ಮೇಲೂ ಆಶಾನ್ ತೀರಿಕೊಂಡಿದ್ದರು. ಅದೇ ಡಾಕ್ಟರ್ ಸ್ವಾಮಿಗಳಿಗೆ ಬಾಧಿಸಿರುವ ಕಾಯಿಲೆ ವಾಸಿಯಾಗುವುದು ಕಷ್ಟ ಎಂದೂ ಹೇಳಿದ್ದರು.
ಸ್ವಾಮಿಗಳು ಮೇಲ್ ಗಾಡಿಯಲ್ಲಿ ಬರುತ್ತಾರೆಂದು ಅವರನ್ನು ಸ್ವಾಗತಿಸಲು ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲೂ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲೂ ಅಸಂಖ್ಯ ಜನರು ಸೇರಿದ್ದರು. ಆಲುವಾದಲ್ಲಿ ಸ್ವಾಮಿಗಳಿಗೆ ಡಾಕ್ಟರ್ ನೀಡಬಹುದಾದ ಚಿಕಿತ್ಸೆಗಳೆಲ್ಲವೂ ಮುಗಿದಿದ್ದವು. ಕಣ್ಣೀರುಗರೆಯುತ್ತಾ ವಿಷಣ್ಣವದನರಾಗಿ ನಿಂತಿದ್ದ ಶಿಷ್ಯರು ಮತ್ತು ಅನುಯಾಯಿಗಳ ಅಂದಿನ ಮನಃಸ್ಥಿತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.


[…] ಅಧ್ಯಾಯ ಇಲ್ಲಿದೆ : https://aralimara.com/2024/08/01/guru-43/ ಮುಂದೆ […]
LikeLike
[…] ಅಧ್ಯಾಯ ಇಲ್ಲಿದೆ : https://aralimara.com/2024/08/01/guru-43/ ಮುಂದೆ […]
LikeLike