ದುಃಖವನ್ನು ಕಳೆದುಕೊಳ್ಳಲು ಅವಸರ ಮಾಡಬೇಡಿ. ದುಃಖವನ್ನ ಮರೆಯಲು ಬೇರೆ ಇನ್ನೊಂದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಅವಸರ ಮಾಡಬೇಡಿ. ಆಗ ನೀವು ದುಃಖವನ್ನ ಅರ್ಥಮಾಡಿಕೊಳ್ಳುವ ಉತ್ತಮ ಅವಕಾಶವೊಂದನ್ನು ಕಳೆದುಕೊಳ್ಳುತ್ತೀರಿ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕೆಲ ವಿಶಿಷ್ಟ ಸಂಗತಿಗಳ ಮೇಲೆ ಯಾವಾಗಲೂ ಧ್ಯಾನ ಮಾಡುತ್ತಾ ಇರಿ.
ಆ ವಿಶಿಷ್ಟ ಸಂಗತಿಗಳು ಯಾವವು? ದುಃಖ, ಕೋಪ, ಅಸೂಯೆ, ಕಾಮ ಮುಂತಾದವು ಋಣಾತ್ಮಕ ಸಂಗತಿಗಳಾದರೆ, ಪ್ರೀತಿ, ಚೆಲುವು, ಖುಶಿ, ಸ್ವಾತಂತ್ರ್ಯ ಮುಂತಾದವು ಧನಾತ್ಮಕ ಸಂಗತಿಗಳು.
ಮೊದಲು ಋಣಾತ್ಮಕ ಸಂಗತಿಗಳಿಂದಲೇ ಶುರು ಮಾಡಿ ಏಕೆಂದರೆ ನೀವು ಬದುಕುತ್ತಿರುವುದು ಋಣಾತ್ಮಕ ಸಂಗತಿಗಳ ನಡುವೆ. ನೀವು ದುಃಖದಲ್ಲಿರುವಾಗ ದುಃಖವನ್ನು ಕುರಿತು ಧ್ಯಾನ ಮಾಡಿ.
ದುಃಖವನ್ನು ಕಳೆದುಕೊಳ್ಳಲು ಅವಸರ ಮಾಡಬೇಡಿ. ದುಃಖವನ್ನ ಮರೆಯಲು ಬೇರೆ ಇನ್ನೊಂದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಅವಸರ ಮಾಡಬೇಡಿ. ಆಗ ನೀವು ದುಃಖವನ್ನ ಅರ್ಥಮಾಡಿಕೊಳ್ಳುವ ಉತ್ತಮ ಅವಕಾಶವೊಂದನ್ನು ಕಳೆದುಕೊಳ್ಳುತ್ತೀರ. ಏಕೆಂದರೆ ದುಃಖಕ್ಕೆ ತನ್ನದೇ ಆದ ಆಳ ಇದೆ, ತನ್ನದೇ ಆದ ಸೌಂದರ್ಯವಿದೆ, ತನ್ನದೇ ಆದ ರುಚಿ ಇದೆ. ದುಃಖವನ್ನು ಬದುಕಿ, ದುಃಖದಲ್ಲಿ ರಿಲ್ಯಾಕ್ಸ್ ಆಗಿ, ದುಃಖವೇ ನೀವಾಗಿ, ದುಃಖದಿಂದ ತಪ್ಪಿಸಿಕೊಳ್ಳಲು ಯಾವ ಪ್ರಯತ್ನ ಮಾಡದೆ, ಇನ್ನೊಂದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಯಾವ ಪ್ರಯತ್ನವನ್ನು ಮಾಡದೇ. ದುಃಖ ನಿಮ್ಮನ್ನು ಆವರಿಸಿಕೊಳ್ಳಲಿ, ನೀವು ಅದನ್ನು ಎಂಜಾಯ್ ಮಾಡಿ. ದುಃಖ ನಿಮ್ಮ ಅಸ್ತಿತ್ವದ ಅರಳುವಿಕೆಗೆ ಕಾರಣವಾಗಲಿ.
ನಿಮಗೆ ಆಶ್ಚರ್ಯವಾಗಬಹುದು, ನೀವು ದುಃಖವನ್ನ ತೀವ್ರವಾಗಿ ಧ್ಯಾನಿಸಿದಾಗ ದುಃಖ ತನ್ನ ರಹಸ್ಯಗಳನ್ನ ನಿಮಗೆ ಬಿಟ್ಟುಕೊಡುತ್ತ ಹೋಗುತ್ತದೆ. ಮತ್ತು ಈ ರಹಸ್ಯಗಳ ಮೌಲ್ಯ ಅಪಾರವಾದದ್ದು. ದುಃಖ ಒಮ್ಮೆ ತನ್ನ ರಹಸ್ಯಗಳನ್ನ ನಿಮ್ಮ ಎದುರು ಅನಾವರಣ ಮಾಡಿದ ಮೇಲೆ ಮಾಯವಾಗಿ ಹೋಗಿಬಿಡುತ್ತದೆ. ಅದರ ಕೆಲಸ ಮುಗಿಯಿತು. ಯಾವ ಮೆಸೇಜ್ ನ ಅದು ನಿಮಗೆ ತಲುಪಿಸಬೇಕಿತ್ತೋ ಆ ಮೆಸೇಜ್ ನ ನಿಮಗೆ ತಲುಪಿಸಿ ಆಯ್ತು. ಯಾವಾಗ ದುಃಖ ಮಾಯವಾಗುತ್ತದೆಯೋ ಆ ಜಾಗದಲ್ಲಿಯೇ ಹುಟ್ಚಿಕೊಳ್ಳುತ್ತದೆ ಖುಶಿ.
ಯಾವಾಗ ಧ್ಯಾನ ಕಾರಣವಾಗಿ ದುಃಖ ಮಾಯವಾಗುತ್ತದೆಯೋ ಆಗ ಮಾತ್ರ ಖುಶಿ ಅದನ್ನು ರಿಪ್ಲೇಸ್ ಮಾಡುತ್ತದೆ ; ಇದನ್ನು ಬಿಟ್ಟು ಬೇರೆ ದಾರಿ ಇಲ್ಲ. ಖುಶಿ ಅನಾವರಣಗೊಳ್ಳೊದು, ನೀವು ಅದನ್ನು ಸುತ್ತುವರೆದಿರುವ ದುಃಖದ ಐಸ್ ನ ಬ್ರೇಕ್ ಮಾಡಿದಾಗ. ಹಾಗೆ ನೋಡಿದರೆ ಖುಶಿಯ ಬೀಜವನ್ನು ಸುತ್ತುವರೆದಿರುವ ಶೆಲ್ ನಂತೆ ದುಃಖ. ದುಃಖ, ಖುಶಿಯ ವೈರಿಯಲ್ಲ, ಖುಶಿಯ ರಕ್ಷಾ ಕವಚ. ಒಮ್ಮೆ ಖುಶಿಯ ಬೀಜವನ್ನು ಸುತ್ತುವರೆದಿರುವ ದುಃಖದ ಕವಚ ಒಡೆದು ಮಾಯವಾಯಿತೆಂದರೆ, ಖುಶಿಯ ಬೀಜದ ಸಂಪರ್ಕ ನೇರವಾಗಿ ಮಣ್ಣಿನೊಡನೆ. ಆಗ ಖುಶಿ ಮೊಳಕೆಯೊಡೆಯಲು ಶುರು ಮಾಡುತ್ತದೆ, ಬೇರು ಬಿಡಲು ಆರಂಭಿಸುತ್ತದೆ.
ನಿಮ್ಮ ಒಳಗೆ ನಡೆಯುವ ಪ್ರಕ್ರಿಯೇ ಥೇಟ್ ಇದೇ ಥರ. ನೀವು ಯಾವುದೇ ಋಣಾತ್ಮಕ ಸಂಗತಿಯನ್ನು ಕುರಿತು ಧ್ಯಾನ ಮಾಡಿ, ನಿಮಗೆ ಆಶ್ಚರ್ಯವಾಗುವಂತೆ ಆ ಋಣಾತ್ಮಕ ಸಂಗತಿ ಧನಾತ್ಮಕ ಸಂಗತಿಯಾಗಿ ರೂಪಾಂತರಗೊಳ್ಳುತ್ತದೆ. ದುಃಖ ಖುಶಿಯಾಗಿ ಬದಲಾವಣೆಗೊಂಡರೆ, ಕೋಪ, ಅಂತಃಕರಣವಾಗಿ ಬದಲಾಗುತ್ತದೆ. ಅಸೂಯೆ ಮಾಯವಾಗಿ ಹಂಚುವ ಮನೋಭಾವ ಹುಟ್ಟಿಕೊಳ್ಳುತ್ತದೆ. ಇದು ಋಣಾತ್ಮಕತೆಯನ್ನು ಧನಾತ್ಮಕವಾಗಿಸುವ, ಕಬ್ಬಿಣವನ್ನು ಬಂಗಾರವಾಗಿಸುವ ಒಳಗಿನ ರಸವಿದ್ಯೆಯ ವಿಜ್ಞಾನ.

