ನಾವು ಕ್ಷಮೆಯನ್ನು ಆಯ್ಕೆ ಮಾಡಿಕೊಂಡಾಗ, ನೆಗೆಟಿವ್ ಇಮೋಷನ್ ಗಳನ್ನು ಹೊರುವ ಭಾರದಿಂದ ನಮ್ಮನ್ನು ನಾವು ರಿಲೀಸ್ ಮಾಡಿಕೊಳ್ಳುತ್ತ, ಹಗುರ ಹೃದಯ ಮತ್ತು ಸ್ವಾತಂತ್ರ್ಯದ ಭಾವದೊಂದಿಗೆ ಮುನ್ನಡೆಯಲು ನಮಗೆ ನಾವೇ ಅವಕಾಶ ಮಾಡಿಕೊಡುತ್ತೇವೆ… । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಸತ್ಯದ ಹಾದಿಯ ಮೇಲೆ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ಹೃದಯವೇ ಹೊರತು
ಬುದ್ಧಿಯಲ್ಲ.
ಈ ಪ್ರಯಾಣದಲ್ಲಿ ಹೃದಯ
ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ.
‘ಅಹಂ’ ತಕರಾರು ಮಾಡಿದರೆ
ಮುಟ್ಟಿ ಮಾತನಾಡಿಸಿ, ಒಪ್ಪಿಸಿ
ಸಾಧ್ಯವಾಗದಿದ್ದರೆ ಸವಾಲು ಹಾಕಿ
ಭೀಕರ ಯುದ್ಧವಾದರೂ ಚಿಂತೆಯಲ್ಲ
ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ
ವಿಜಯ ಸಾಧಿಸಲಿ.
ನಿಮ್ಮೊಳಗಿನ
‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ
ಗುರುತಿಸಬಲ್ಲಿರಾದರೆ,
ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು
ಯಶಸ್ವಿಯಾಗಿ ನಿಭಾಯಿಸಿದಂತೆ.
~ ಶಮ್ಸ್ ತಬ್ರೀಝಿ
ಕ್ಷಮೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಸ್ವಯಂ ವಿಮೋಚನೆಯ ಪ್ರಕ್ರಿಯೆ. ಏಕೆಂದರೆ ಇನ್ನೊಬ್ಬರ ಕುರಿತಾದ ಕೋಪಕ್ಕೆ, ಅಸಮಾಧಾನಕ್ಕೆ, ನೆಗೆಟಿವ್ ಇಮೋಷನ್ ಗಳಿಗೆ ಅಂಟಿಕೊಳ್ಳುವುದೆಂದರೆ ನಮ್ಮ ಚೈತನ್ಯವನ್ನು ನಾವೇ ಭಾರ ಮಾಡಿಕೊಂಡಂತೆ, ನೋವು-ಸಂಕಟಗಳ ಚಕ್ರದಲ್ಲಿ ನಮ್ಮನ್ನು ನಾವೇ ಬಂಧಿಯಾಗಿಸಿಕೊಂಡಂತೆ.
ಸೆಲ್ಫ್ ಲವ್ ಮತ್ತು ಕ್ಷಮೆ ಒಂದರೊಳಗೊಂದು ಹಾಸುಹೊಕ್ಕಾಗಿರುವಂಥವು, ಈ ಎರಡು ಕೂಡ ಕಹಿ ಮುಕ್ತ ಬದುಕಿನ ಪ್ರಯಾಣದಲ್ಲಿ ನಮ್ಮನ್ನು ಮುನ್ನಡೆಸುವ ನಮ್ಮ ಪ್ರಬಲ ಬಯಕೆಯನ್ನು ಗಟ್ಟಿಗೊಳಿಸುವಂಥವು.
ನಾವು ಕ್ಷಮೆಯನ್ನು ಆಯ್ಕೆ ಮಾಡಿಕೊಂಡಾಗ, ನೆಗೆಟಿವ್ ಇಮೋಷನ್ ಗಳನ್ನು ಹೊರುವ ಭಾರದಿಂದ ನಮ್ಮನ್ನು ನಾವು ರಿಲೀಸ್ ಮಾಡಿಕೊಳ್ಳುತ್ತ, ಹಗುರ ಹೃದಯ ಮತ್ತು ಸ್ವಾತಂತ್ರ್ಯದ ಭಾವದೊಂದಿಗೆ ಮುನ್ನಡೆಯಲು ನಮಗೆ ನಾವೇ ಅವಕಾಶ ಮಾಡಿಕೊಡುತ್ತೇವೆ.
ಸೆಲ್ಫ್ ಲಿಬರೇಷನ್ ಎನ್ನುವುದು ಒಂದು ಘನವೆತ್ತಾದ ಪ್ರಯಾಣ, ಏಕೆಂದರೆ ನೋವನ್ನು ಮೀರಲು, ಗಾಯಗಳನ್ನ ಹೀಲ್ ಮಾಡಿಕೊಳ್ಳಲು ಮತ್ತು ನಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ಇದರಿಂದಾಗಿ ಸಾಧ್ಯವಾಗುತ್ತದೆ. ಕೋಪ, ಅಸಮಾಧಾನಗಳಿಗೆ ಅಂಟಿಕೊಳ್ಳುವುದೆಂದರೆ, ನಮ್ಮನ್ನು ನಾವು ಭಾರವಾಗಿಸಿಕೊಳ್ಳುವುದು, ಬದುಕು ಆಫರ್ ಮಾಡುವ ಪ್ರೇಮ ಮತ್ತು ಖುಶಿಯ ಎಲ್ಲ ಬಣ್ಣಗಳನ್ನು ಅನುಭವಿಸುವುದರಿಂದ ದೂರ ಉಳಿಯುವುದು.
ಕ್ಷಮೆ ಎನ್ನುವುದು ಒಬ್ಬರ ಸ್ವಾತಂತ್ರ್ಯವನ್ನು ಕಟ್ಟಿಕೊಡುವಂಥದು ; ಕ್ಷಮೆ ಎನ್ನುವುದು ನಮ್ಮ ಕೈಯಲ್ಲಿರುವ ನಾವಿರುವ ಜೈಲಿನ ಕೀಲಿಕೈ.
ಖಲೀಲ್ ಜಿಬ್ರಾನ್ ಒಂದು ಕಥೆ ಹೇಳುತ್ತಾನೆ…..।
ಪುರಾತನ ಶಹರ ಅಫ್ಕರ್ ನಲ್ಲಿ ಇಬ್ಬರು ಅಪಾರ ತಿಳುವಳಿಕೆಯ ಮನುಷ್ಯರು ವಾಸವಾಗಿದ್ದರು. ಇಬ್ಬರಿಗೂ ಪರಸ್ಪರರನ್ನು ಕಂಡರೆ ಆಗುತ್ತಿರಲಿಲ್ಲ, ಭೇಟಿಯಾದಾಗಲೆಲ್ಲ ಶರಂಪರ ಜಗಳಾಡುತ್ತಿದ್ದರು. ಒಬ್ಬನಿಗೆ ದೇವರ ಅಸ್ತಿತ್ವದಲ್ಲಿ ಅಪಾರ ನಂಬಿಕೆ, ಇನ್ನೊಬ್ಬ ಭಗವಂತನ ಇರುವಿಕೆಯನ್ನ ಸಾರಾಸಗಟಾಗಿ ನಿರಾಕರಿಸುತ್ತಿದ್ದ.
ಒಂದು ದಿನ ಮಾರುಕಟ್ಟೆಯ ಕೂಡು ರಸ್ತೆಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಎದುರಾದರು. ತಮ್ಮ ತಮ್ಮ ಹಿಂಬಾಲಕರಿಂದ ಸುತ್ತುವರೆದು, ಭಗವಂತನ ಇರುವಿಕೆ ಮತ್ತು ಇಲ್ಲದಿರುವಿಕೆಯ ಬಗ್ಗೆ ಭೀಕರವಾಗಿ ಗಂಟೆಗಟ್ಟಲೆ ವಾದ ಮಾಡಿ, ಕೊನೆಗೆ ಚರ್ಚೆ ನಿಲ್ಲಿಸಿ ಪರಸ್ಪರ ವಿದಾಯ ಹೇಳಿದರು.
ಆ ಸಂಜೆ, ಭಗವಂತನ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದಿರುವವ, ದೇವಾಲಯಕ್ಕೆ ಹೋಗಿ ಭಗವಂತನ ಮೂರ್ತಿಯ ಎದುರು ದಿರ್ಘದಂಡ ನಮಸ್ಕಾರ ಮಾಡಿ ತನಗಿದ್ದ ತಪ್ಪು ತಿಳುವಳುಕೆಯ ಬಗ್ಗೆ ಭಗವಂತನಲ್ಲಿ ಕ್ಷಮೆ ಕೇಳಿದ.
ಮತ್ತು, ಅದೇ ಸಮಯದಲ್ಲಿ ಭಗವಂತನ ಅಸ್ತಿತ್ವದಲ್ಲಿ ಅಪಾರ ನಂಬಿಕೆ ಇದ್ದ ಮನುಷ್ಯ, ತನ್ನ ಬಳಿ ಇದ್ದ ಎಲ್ಲ ಧಾರ್ಮಿಕ , ಪವಿತ್ರ ಗ್ರಂಥಗಳಿಗೆ ಬೆಂಕಿ ಹಾಕಿ, ನಾಸ್ತಿಕನಾದ.
ಕ್ಷಮೆ ಇಬ್ಬರನ್ನೂ ಅವರು ಹೊತ್ತುಕೊಂಡಿದ್ದ ಭಾರದಿಂದ ಮುಕ್ತಮಾಡಿ ಬಿಡುಗಡೆಯ ಹಾದಿಯಲ್ಲಿ ಮುನ್ನಡೆಸಿತು ಮತ್ತು ಸತ್ಯ ಇರುವುದು ಬಿಡುಗಡೆಯ ದಾರಿಯ ಮೊದಲ ಕ್ರಾಸಿನಲ್ಲಿಯೇ.
Source: St. Pope John Paul II

