ಖಲೀಲ್ ಗಿಬ್ರಾನನ ಕತೆಗಳು #1: ಅಲೆಮಾರಿ

ಖಲೀಲ್ ಗಿಬ್ರಾನನ ‘ದಿ ವಾಂಡರರ್’ ಸಂಕಲನದ ಕೆಲವು ಅನುವಾದಿತ ಕತೆಗಳು ಅರಳಿಮರದಲ್ಲಿ ಸರಣಿಯಾಗಿ ಮೂಡಿಬರಲಿವೆ. ಓ.ಎಲ್.ನಾಗಭೂಷಣ ಸ್ವಾಮಿಯವರು ಈ ಕತೆಗಳನ್ನು ಅನುವಾದಿಸಿದ್ದು, ಅವರ ಅನುಮತಿ ಮತ್ತು ಸಹಕಾರದ ಮೇರೆಗೆ ಈ ಕತೆಗಳನ್ನು ಪ್ರಕಟಿಸುತ್ತಿದ್ದೇವೆ.

ಮೂರು ಹಾದಿ ಸೇರುವಲ್ಲಿ ಅವನು ಕಂಡ. ಮೈಯ ಮೇಲೊಂದು ನಿಲುವಂಗಿ, ಕೈಯಲೊಂದು ಕೋಲು ಬಿಟ್ಟರೆ ಇನ್ನೇನೂ ಇರಲಿಲ್ಲ. ಮುಖದಲ್ಲಿ ನೋವಿನ ತೆರೆ ಇತ್ತು. ನಮಸ್ಕಾರ ಮಾಡಿದ, ನಾನೂ ಮಾಡಿದೆ.
‘ನಮ್ಮನೆಗೆ ಬಾ ಇವತ್ತು,’ ಅಂತ ಕರೆದೆ.
ಬಂದ.
ಮನೆಯ ಹೊಸ್ತಿಲಲ್ಲೇ ನನ್ನ ಹೆಂಡತಿ, ಮಕ್ಕಳು ಅವನನ್ನು ಎದುರುಗೊಂಡರು. ಅವನ ಮುಖದಲ್ಲಿ ನಗು ಅರಳಿತು. ಅವನು ಬಂದದ್ದು ಅವರಿಗೂ ಸಂತೋಷ.
ಊಟಕ್ಕೆ ಕೂತೆವು. ಅವನಲ್ಲಿ ಮೌನವಿತ್ತು. ನಿಗೂಢ ಅನಿಸುತಿದ್ದ. ಮನೆಯವರಿಗೆಲ್ಲ ಸಂತೋಷ ತಂದಿದ್ದ.

ರಾತ್ರಿಯೂಟ ಮುಗಿಸಿ, ಅಂಗಳದಲ್ಲಿ ಸಣ್ಣದಾಗಿ ಬೆಂಕಿ ಉರಿಸುತ್ತ, ಸುತ್ತಲೂ ಕೂತು ಮಾತಾಡಿದೆವು. ಎಲ್ಲೆಲ್ಲಿ ಸುತ್ತಾಡಿ ಬಂದ ಅಂತೆಲ್ಲ ಕೇಳಿದೆ.
ಅವತ್ತು ರಾತ್ರಿ, ಆಮೇಲೆ ಮಾರನೆಯ ರಾತ್ರಿ ಏನೇನೋ ಕಥೆ ಹೇಳಿದ. ಅದನ್ನೆಲ್ಲ ಬರೆದಿಟ್ಟೆ. ಈಗ ಅವನ ಮನಸಿನಲ್ಲಿ ಪ್ರೀತಿ, ಮರುಕ ತುಂಬಿದ್ದರೂ ಈ ಕಥೆಗಳೆಲ್ಲ ಅವನು ಕಹಿಯನ್ನು ಉಂಡ ಕಾಲದ್ದು. ಈ ಕಥೆಗಳಲ್ಲಿ ಅವನು ಸಾಗಿದ ಕೊನೆಯಿರದ ದಾರಿ, ಅವನಿಗೆ ಅಡರಿದ ಧೂಳು, ಅವನು ಕಲಿತ ತಾಳ್ಮೆ ಎಲ್ಲಾ ಸೇರಿವೆ.

ಮೂರು ದಿನವಾದ ಮೇಲೆ ಹೊರಟ. ಮನೆಗೆ ಬಂದ ಅತಿಥಿ ತೆರಳಿದ ಅನಿಸಲಿಲ್ಲ, ನಮ್ಮವನೇ ಒಬ್ಬನು ಇಲ್ಲೇ ತೋಟ ಸುತ್ತಲು ಹೋಗಿದಾನೆ ಇನ್ನೂ ಮನೆಗೆ ಬಂದಿಲ್ಲ ಅನಿಸುತ್ತಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.