ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 4ನೇ ಅಧ್ಯಾಯ ಇಲ್ಲಿದೆ…
ಅಧ್ಯಾಯ 4
ಆಲುವಾದ ಆಶ್ರಮದ ಮಟ್ಟಿಗೆ ಅದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಸುತ್ತಮುತ್ತಲಿನ ಜಿಲ್ಲೆಯ ಉತ್ಸಾಹಿ ಯುವಕರೆಲ್ಲಾ ಅಲ್ಲಿ ಸೇರುತ್ತಲಿದ್ದರು. ಅಂದು ಅಲ್ಲಿ ಆ ಯುವಕರೇ ಕಟ್ಟಿಕೊಂಡಿದ್ದ ವಿಶ್ವ ಭ್ರಾತೃತ್ವ ಸಂಘದ ವಾರ್ಷಿಕೋತ್ಸವವಿತ್ತು. ಸಮಾರಂಭವಿದ್ದದ್ದು ಆ ದಿನ ಸಂಜೆ, ಗುರುಗಳು ಸ್ಥಾಪಿಸಿದ್ದ ಸಂಸ್ಕೃತ ಪಾಠಶಾಲೆಯ ಆವರಣದಲ್ಲಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಪ್ರತಿನಿಧಿಗಳಿಗಾಗಿ ತೆಂಗಿನ ಗರಿಗಳಿಂದ ನಿರ್ಮಿಸಲಾಗಿದ್ದ ವಿಶಾಲವಾದ ಚಪ್ಪರ ಸಿದ್ಧವಾಗಿತ್ತು. ಯಾವ ಅಧಿಕೃತ ಪ್ರಕಟಣೆಗಳಿಲ್ಲದಿದ್ದರೂ ನಾರಾಯಣ ಗುರುಗಳು ಈ ಸಮಾರಂಭದ ಸಾನಿಧ್ಯ ವಹಿಸುವರೆಂಬ ಭಾವ ಎಲ್ಲರಲ್ಲೂ ಮನೆ ಮಾಡಿತ್ತು.
ಆ ದಿನ ಮುಂಜಾನೆಯಿಂದಲೇ ಉತ್ತರ ಮತ್ತು ದಕ್ಷಿಣದ ಕಡೆಯಿಂದ ಬರುವ ರೈಲುಗಳಲ್ಲಿ ಯುವಕರು ತಂಡೋಪತಂಡವಾಗಿ ಬರತೊಡಗಿದ್ದರು. ಹೀಗೇ ಬರುತ್ತಿದ್ದವರೆಲ್ಲಾ ಹೊಳೆಯಲ್ಲೊಂದು ಮುಳುಗು ಹಾಕಿ ಸ್ನಾನ ಮುಗಿಸಿಯೇ ಆಶ್ರಮ ತಲುಪಿ ನಾರಾಯಣ ಗುರುಗಳ ದರ್ಶನ ಮಾಡುತ್ತಿದ್ದರು. ಗುರುಗಳೂ ಯಾವತ್ತೂ ಸೂರ್ಯ ಉದಯಿಸುವ ಮುನ್ನವೇ ಎದ್ದು ಪ್ರಾತಃಕರ್ಮಗಳನ್ನು ಮುಗಿಸಿರುತ್ತಿದ್ದರು. ಮುಂಜಾನೆಯ ಮೌನ ಧ್ಯಾನ ಮುಗಿಯಿತೆಂದರೆ ಭೇಟಿಗಾಗಿ ಬರುವವರನ್ನು ಸ್ವಾಗತಿಸಿ ಮಾತನಾಡುವುದಕ್ಕೆ ಗುರುಗಳು ಸಿದ್ಧರೆಂದೇ ಅರ್ಥ. ಹೀಗೆ ಬಂದವರು ಪ್ರಸ್ತಾಪಿಸುವ ವಿಚಾರ, ಕೇಳುವ ಪ್ರಶ್ನೆಗಳು ಯಾವ ವಿಷಯಕ್ಕೆ ಸಂಬಂಧಿಸಿದ್ದಾದರೂ ಅದನ್ನು ಗಮನವಿಟ್ಟು ಆಲಿಸುವ ಗುರುಗಳು ತಮಗೇ ವಿಶಿಷ್ಟವಾದ ತಮಾಷೆ ಮತ್ತು ಅನುನಯದ ಮಾದರಿಯಲ್ಲಿ ಉತ್ತರಿಸುತ್ತಿದ್ದರು.

ಆ ದಿನ ಮುಂಜಾನೆ ಗುರುಗಳ ಪರ್ಣಕುಟಿಗೆ ಬಂದು ಅಂಜಲೀಬದ್ಧರಾಗಿ ನಿಂತಿದ್ದ ಯುವಕರಲ್ಲಿ ಸಮಾಜ ಸೇವೆಗೆ ತನ್ನನ್ನು ಮುಡಿಪಾಗಿಟ್ಟಿದ್ದ ಒಬ್ಬ ಯುವಕನೂ ಇದ್ದ. ಆತ ಗುರುಗಳ ಬಳಿ ಆ ದಿನ ನಡೆಯಲಿದ್ದ ಕಾರ್ಯಕ್ರಮದ ಬಗ್ಗೆ ಹೇಳುತ್ತಿದ್ದ. ಗುರುಗಳು ಅವನತ್ತ ತಿರುಗಿ ತಮ್ಮ ಅರ್ಧನಿಮೀಲಿತ ನಯನಗಳಲ್ಲಿ ನೋಡುತ್ತಾ ಕೇಳಿದರು “ಈ ಬಗೆಯ ದೊಡ್ಡ ಸಭೆಗಳನ್ನು ನಡೆಸುವುದರಿಂದ ಏನಾದರೂ ಪ್ರಯೋಜನವಿದೆಯೇ?”
“ಪ್ರಯೋಜನವಿದೆ” ಎಂಬ ಉತ್ತರ ಯುವಕನ ಬಳಿ ಸಿದ್ಧವಾಗಿತ್ತು. ಅದನ್ನಷ್ಟಕ್ಕೇ ನಿಲ್ಲಿಸಿದೆ ಆತ ಮುಂದುವರಿಸಿದ “ಈ ಬಗೆಯ ಸಭೆಗಳು ವಿಚಾರಗಳನ್ನು ಹರಡುವ ಅತ್ಯುತ್ತಮ ಮಾಧ್ಯಮವೆಂಬುದು ನನ್ನ ಭಾವನೆ”
ಗುರುಗಳಂದರು “ಆದರೆ, ಈ ಸಮಾರಂಭಗಳು ಸೃಷ್ಟಿಸುವ ಗದ್ದಲಕ್ಕೆ ಹೋಲಿಸಿದರೆ ಕೃತಿಯಲ್ಲಿ ಅನುಷ್ಠಾನಕ್ಕೆ ಬರುವ ಸಂಗತಿಗಳು ಬಹಳ ಕಡಿಮೆ. ಜನರು ಗುಂಪು ಗುಂಪಾಗಿ ಬಂದು, ಬಹು ಗಾಂಭೀರ್ಯದಲ್ಲಿ ಸಭೆಗಳಲ್ಲಿ ಭಾಗವಹಿಸುತ್ತಾರೆ. ಆವರು ಭಾವುಕರಾಗಿ ಉಚ್ಚ ಧ್ವನಿಯಲ್ಲಿ ಮಾತುಗಳನ್ನೂ ಆಡುತ್ತಾರೆ. ಭಾಷಣ ಮಾಡುವವರಂತೂ ಇಡೀ ಜಗತ್ತಿನ ಸುಧಾರಣೆಯ ಪ್ರಸ್ತಾಪಗಳನ್ನು ಮಂಡಿಸುತ್ತಾರೆ. ಸಭಿಕರು ಉತ್ಸಾಹದಿಂದ ಚಪ್ಪಾಳೆ ತಟ್ಟಿ ಅದಕ್ಕೆ ತಮ್ಮ ಸರ್ವಾನುಮತದ ಬೆಂಬಲವನ್ನೂ ಘೋಷಿಸುತ್ತಾರೆ. ಭಾಷಣದ ವೇಳೆ ರೈಲಿನ ಸೀಟಿಯ ಸದ್ದು ಕೇಳಿದರೆ ಭಾಷಣಕಾರರು ತಮ್ಮ ಮಾತುಗಳನ್ನು ಅರ್ಧಕ್ಕೇ ನಿಲ್ಲಿಸಿ ಚೀಲವೆತ್ತಿಕೊಂಡು ಮನೆಗೆ ಹೊರಡವುದೂ ಸಾಧಾರಣ ಸಂಗತಿಯೇ ಆಗಿಬಿಟ್ಟಿದೆ. ಅನೇಕ ಸಭೆಗಳು ಹೀಗೆಯೇ ಕೊನೆಗೊಳ್ಳುತ್ತವೆ. ಇವುಗಳಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಲಾಗದು. ಜನರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಲು ಆಗೀಗ ಇಂಥ ಸಭೆಗಳನ್ನು ನಡೆಸಬೇಕಾಗುತ್ತದೆ…. ಅಂದ ಹಾಗೆ ನೀವೂ ಈ ಸಭೆಯಲ್ಲಿ ಮಾತನಾಡುತ್ತೀರಾ?”
“ಮಾತನಾಡಲು ಪ್ರಯತ್ನಿಸುತ್ತೇನೆ” ಎಂದು ಆ ಯುವಕ ವಿನಯದಿಂದ ಉತ್ತರಿಸಿದ.
“ನೀವು ಮಾತನಾಡುವುದರಿಂದ ಒಳ್ಳೆಯದಾಗುತ್ತದೆ” ಎಂದು ಗುರುಗಳು ತಮ್ಮ ಮಾತನ್ನು ಮುಂದುವರೆಸಿ “ಮನುಷ್ಯನ ಅತಿಯಾಸೆಯ ಬಗ್ಗೆ ಅವರಿಗೆ ಹೇಳಬೇಕು. ಈ ವಿಷಯದಲ್ಲಿ ಮನುಷ್ಯನೆಂಬ ಪ್ರಾಣಿ ಉಳಿದೆಲ್ಲಾ ಪ್ರಾಣಿಗಳಿಗಿಂತ ಕೆಟ್ಟವನೆಂದು ನಿಮಗನ್ನಿಸುವುದಿಲ್ಲವೇ? ಕಾಡಿನಲ್ಲಿರುವ ಪ್ರಾಣಿಗಳಿಗೆ ಈ ಬಗೆಯ ಆಸೆಗಳಿಲ್ಲ. ಅಂಥದ್ದು ಉಂಟಾಗದಂತೆ ನಿಸರ್ಗ ಸಹಜ ನಿಯಂತ್ರಣಗಳೇ ಅವುಗಳಿಗಿವೆ. ಆನೆಯ ಸಹಜ ಪ್ರಕೃತಿಯೇ ದಪ್ಪಗಿನ ದೇಹ. ಅದು ಹಾಗಾಗಲು ಆನೆಗೆ ಆಸವಗಳೋ ಅರಿಷ್ಠಗಳೋ ಚಿಕಿತ್ಸೆಗಳೋ ಬೇಕಾಗಿಲ್ಲ. ಗುಳ್ಳೇನರಿ ಹಗಲೆಲ್ಲಾ ಕಾಡೊಳಗೆ ಅವಿತಿದ್ದು ರಾತ್ರಿ ಎಲ್ಲ ಸದ್ದುಗಳಡಗಿದ ಮೇಲೆ ಹೊರಬರುತ್ತದೆ. ಅದಕ್ಕೆ ಹೆಚ್ಚಿನ ಆಹಾರವೇನೂ ಬೇಡ. ಕೆಲವು ಏಡಿಗಳು ಸಿಕ್ಕರೆ ಸಾಕು. ಅವುಗಳನ್ನು ತಿಂದು ಬೆಳದಿಂಗಳಲ್ಲಿ ಹೊಳೆವ ಹೊಳೆಯ ನೀರು ಕುಡಿದರೆ ಅದಕ್ಕೆ ಸಂತೃಪ್ತಿ. ಇಷ್ಟಾದ ಮೇಲೆ ಅದು ರಾತ್ರಿ ತನ್ನದೇ ಸಂಗೀತದಲ್ಲಿ ಆನಂದವನ್ನನುಭವಿಸುತ್ತದೆ. ಅದರ ಕುತ್ತಿಗೆಯನ್ನೇ ನೋಡಿ. ತಲೆದಿಂಬಿನಂತೆ ದಷ್ಟಪುಷ್ಟವಾಗಿದೆ. ಕೂದಲುಗಳು ಎಣ್ಣೆ ಹಚ್ಚಿದಂತೆ ಮಿನುಗುತ್ತವೆ.
“ಮುಗಿಯದಷ್ಟು ಬೇಡಿಕೆಗಳಿರುವುದು ಮನುಷ್ಯನಿಗೇ ಹೊರತು ಬೇರಾವ ಪ್ರಾಣಿಗಳಿಗೂ ಅಲ್ಲ. ವಿನಾಶಕ್ಕಾಗಿ ಬಂದ ರಕ್ಕಸನಂತೆ ಮನುಷ್ಯ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದ್ದಾನೆ. ಅವನು ಸಾಗಿದಲ್ಲೆಲ್ಲಾ ವಿನಾಶದ ನೆರಳು ಹಿಂಬಾಲಿಸುತ್ತಿದೆ. ಕಾಡಿನ ಮರಗಳನ್ನೆಲ್ಲಾ ಕಡಿದು, ಬಂಡೆಗಳನ್ನು ಸ್ಫೋಟಿಸಿ ತೋಟಗಳನ್ನೂ, ಹೊಗೆಯಿಂದ ತುಂಬಿದ ಪಟ್ಟಣಗಳನ್ನೂ ಕಾರ್ಖಾನೆಗಳನ್ನೂ ಸ್ಥಾಪಿಸಿ ತನ್ನ ಕೊನೆಯಿಲ್ಲದ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾನೆ. ಭೂಮಿಯ ಮೇಲ್ಮೈ ಸಾಕಾಗದು, ಭೂಗರ್ಭವನ್ನೂ ಕೊರೆದು ಭೂಮಿಯನ್ನು ಪ್ರತಿನಿತ್ಯವೂ ದುರ್ಬಲಗೊಳಿಸುತ್ತಿದ್ದಾನೆ. ಭೂಮಿಯ ಮೇಲ್ಮೈಯಲ್ಲಿ ನೋಟಕ್ಕೆ ಸಿಗುವಲ್ಲೆಲ್ಲಾ ಕಬ್ಬಿಣವನ್ನೂ ಕಲ್ಲಿದ್ದಲ್ಲನ್ನೂ ನಿರಂತರವಾಗಿ ಹರಡುತ್ತಿದ್ದಾನೆ.
“ಮನುಷ್ಯನಿಗೊಂದು ಸ್ಥಿರ ನಿಲುವಿಲ್ಲ. ಅವನು ಸೃಷ್ಟಿಸಿರುವ ಪ್ರಭುತ್ವವನ್ನೇ ನೋಡಿ. ಅದು ಮಾನವೀಯತೆಗಾಗಿ ಇದೆಯಂತೆ. ಕುಷ್ಠರೋಗಿಯೊಬ್ಬ ಬದುಕಲು ಅಸಾಧ್ಯವಾದ ತನ್ನ ದೇಹವನ್ನು ತ್ಯಜಿಸಬೇಕೆಂದುಕೊಂಡರೆ ಅದನ್ನು ಮಾನವೀಯತೆಯ ಹೆಸರಿನಲ್ಲಿ ತಡೆಯುತ್ತದೆ. ಆದರೆ ಅದೇ ಮನುಷ್ಯ ಮತ ಅಥವಾ ಸಮುದಾಯದ ಪ್ರತಿಷ್ಠೆಯ ಹೆಸರಲ್ಲಿ ನರಮೇಧಕ್ಕೆ ಹೊರಟರೆ ಅದನ್ನು ಬೆಂಬಲಿಸಿಯೂ ಬಿಡುತ್ತದೆ. ಇತರ ಎಲ್ಲಾ ಪ್ರಾಣಿಗಳಿಗಿಂತ ತಾನು ಬುದ್ಧಿವಂತನೆಂದು ಭಾವಿಸಿರುವ ಮನುಷ್ಯನಿಗೆ ತಾನೇನು ಮಾಡುತ್ತಿದ್ದೇನೆಂದು ತಿಳಿದಿಲ್ಲ. ಎಲ್ಲವೂ ಅವನ ಭ್ರಾಂತಿಯ ವಿಪರೀತಗಳು. ಅಯ್ಯೋ… ಮನುಷ್ಯಾ… ನಿನ್ನ ಬದುಕೂ ಸೇರಿ ಎಲ್ಲವೂ ನಾಶವಾದ ಮೇಲಷ್ಟೇ ನಿನಗೆ ತೃಪ್ತಿಯೇ…?”
ಗುರುಗಳು ‘ಮನುಷ್ಯ’ ಎಂಬ ಪದವನ್ನು ಮತ್ತೆ ಮತ್ತೆ ಹೇಳುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆ ಯುವ ಭಾಷಣಕಾರನಿಗೆ ಗುರುಗಳ ಪ್ರಶಾಂತ ಭಾವದಲ್ಲಿ ಅಂತರ್ಗತವಾಗಿದ್ದ ನೋವಿನ ಎಳೆಯನ್ನು ಕಾಣದಿರಲಾಗಲಿಲ್ಲ.
ಕೆಲ ಕ್ಷಣಗಳ ಮೌನದ ನಂತರ“ತಾನೇನು ಮಾಡುತ್ತಿದ್ದೇನೆಂದು ಮನುಷ್ಯನಿಗೆ ಗೊತ್ತಾಗುತ್ತಿಲ್ಲ” ಎಂದ ಗುರುಗಳು ಮತ್ತೆ ಮೌನಕ್ಕೆ ಜಾರಿದರು. ಕೆಲವೇ ಕ್ಷಣಗಳಲ್ಲಿ ಮೌನ ಮುರಿದ ಅವರು “ಮನುಷ್ಯನ ಅನಾಚಾರಗಳನ್ನು ಮನುಕುಲವನ್ನಷ್ಟೇ ಬಾಧಿಸಿದ್ದರೆ ಯಾವ ತೊಂದರೆಯೂ ಇರಲಿಲ್ಲ. ಕಾಡಿನಲ್ಲಿರುವ ಮುಗ್ಧ ಮಂಗಗಳೂ, ಹಕ್ಕಿಗಳೂ ಮತ್ತಿತ್ತರ ಸಕಲ ಜೀವಿಗಳೂ ಅವುಗಳ ಶಾಂತ ಬದುಕನ್ನು ಮನುಷ್ಯನಿಗಾಗಿ ತ್ಯಜಿಸಬೇಕಾಗಿದೆ. ತನ್ನ ವಿನಾಶದ ಕೆಲಸದಲ್ಲಿ ಮನುಷ್ಯ ತನ್ನನ್ನು ಮಾತ್ರ ನಾಶಪಡಿಸಿಕೊಂಡಿದ್ದರೆ ಪ್ರಕೃತಿ ಅವನಿಗೆ ಕೃತಜ್ಞನಾಗಿರುತ್ತಿತ್ತೇನೋ. ಏಕೆಂದರೆ ಉಳಿದ ಜೀವರಾಶಿಗೆ ಅದರ ಜನ್ಮಸಿದ್ಧ ಹಕ್ಕಾದ ಶಾಂತ ಬದುಕಿಗೊಂದು ಅವಕಾಶವಾದರೂ ದೊರೆಯತ್ತಿತ್ತು…”

ಗುರುಗಳ ಮಾತುಗಳು ಆಲಿಸುತ್ತಿದ್ದ ಯುವಕನ ಮೇಲೆ ನಿರೀಕ್ಷಿತ ಪರಿಣಾಮವನ್ನೇ ಬೀರಿತ್ತು. ಈ ಹೊತ್ತಿಗಾಗಲೇ ಇನ್ನಷ್ಟು ಯುವಕರು ಗುರುಗಳ ಸುತ್ತ ಸೇರಿ ಅವರ ಮಾತುಗಳನ್ನು ಕೇಳತೊಡಗಿದ್ದರು. ಗುರುಗಳು ನಿಧಾನವಾಗಿ ಮೇಲೆದ್ದು ಮೋಡವೊಂದು ಚಲಿಸಿದಂತೆ ಸಂಜೆಯ ಸಮಾರಂಭದ ಸಿದ್ಧತೆಗಳು ನಡೆಯುತ್ತಿದ್ದಲ್ಲಿಗೆ ಸಾಗಿದರು. ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರೆಲ್ಲಾ ಆಶ್ರಮದ ಅತಿಥಿಗಳು. ಆಶ್ರಮದ ಬ್ರಹ್ಮಚಾರಿಗಳು ರಾತ್ರಿಯೂಟಕ್ಕೆ ಬೇಕಿರುವ ಅನ್ನ, ತರಕಾರಿಗಳ ಮೇಲೋಗರ ಹಾಗೂ ಮಜ್ಜಿಗೆಯ ತಯಾರಿಯಲ್ಲಿದ್ದರು. ಬರಲಿರುವ ಅತಿಥಿಗಳ ಸಂಖ್ಯೆಯೂ ದೊಡ್ಡದಾಗಿದ್ದರಿಂದ ಸಿದ್ಥತೆಗಳೂ ಹಾಗೆಯೇ ಇದ್ದವು. ತೆಂಗಿನ ಗರಿಯ ಸೂರಿದ್ದ ಚಪ್ಪರದೊಳಗೆ ತೆಂಗಿನ ಹಸಿರು ಗರಿಗಳ ಅಲಂಕಾರವಿತ್ತು. ಸಿದ್ಧತೆಗಳ ಪರಿಶೀಲನೆ ಮುಗಿಸಿ ಗುರುಗಳು ಅಂಗಳದಲ್ಲಿ ಆಸೀನರಾದರು. ಹಿರಿಯರು ಮತ್ತು ಯುವಕರೆಲ್ಲಾ ಗುರು ವಚನವನ್ನು ಆಲಿಸಲೋಸುಗ ಅವರ ಸುತ್ತ ಸೇರಿದರು. ಗುರುಗಳ ಮಾತು ಮುಂದುವರಿಯಿತು.
“ತನ್ನ ಮತವೇ ಉತ್ತಮವೆಂದು ಘೋಷಿಸುವುದು ಅಹಂಕಾರ. ಎಷ್ಟೇ ಉಚ್ಚಸ್ಥಾಯಿಯಲ್ಲಿ ಘೋಷಿಸಿದರೂ ಯಾವುದೋ ಒಂದು ನಿಲುವು ಅಥವಾ ಯಾವುದೋ ಒಂದು ಮತವು ಎಲ್ಲವನ್ನೂ ಪ್ರತಿನಿಧಿಸುವಂಥದ್ದಾಗಿರುವುದಿಲ್ಲ. ಅದು ಆನೆಯನ್ನು ಮುಟ್ಟಿ ಅರಿಯಲು ಹೊರಟ ಕುರುಡರ ದೃಷ್ಟಾಂತದಂತಿರುತ್ತದೆ. ಒಂದು ಮತ ಸರಿಯೆಂದು ವಾದಿಸಿ ಸಾಬೀತು ಮಾಡಲು ಹೊರಡುವುದೆಂದರೆ ಉಸಿರಿನ ವ್ಯರ್ಥ ಬಳಕೆ ಎಂದರ್ಥ. ಈ ನಿಸರ್ಗದಲ್ಲಿ ಯಾವುದೋ ಒಂದು ಮತವಷ್ಟೇ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಈ ಸರಳ ಸತ್ಯವನ್ನು ಅರಿಯದೆ, ಮನುಷ್ಯರ ಪ್ರಾಥಮಿಕ ಅಗತ್ಯಗಳನ್ನು ಪರಿಗಣಿಸದೆ, ತಮ್ಮ ಮಾತಿಗಷ್ಟೇ ಅಂಗೀಕಾರ ದೊರೆಯಬೇಕೆಂದು ವಿವಿಧ ಗುಂಪುಗಳಾಗಿ ಮನುಷ್ಯರು ಕಾದಾಡುತ್ತಿದ್ದಾರೆ. ಮಾತುಗಳ ಉದ್ದೇಶ ಸೇಡು ಅಥವಾ ದ್ವೇಷವೋ ಆಗಿರಕೂಡದು. ಎಲ್ಲಾ ಭಾಷಣಗಳೂ ತಮ್ಮನ್ನು ಅರಿಯುವ ಮತ್ತು ಇತರರಿಗೂ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿರಬೇಕು. ಮನುಷ್ಯನ ಮಟ್ಟಿಗೆ ಮತವೆಂಬುದು ವೈಯಕ್ತಿಕ ನಂಬಿಕೆ. ಅದು ಅವನ ನೈಸರ್ಗಿಕ ಬೆಳವಣಿಗೆಯ ಹಂತಗಳಿಗೆ ಅನುಗುಣವಾಗಿ ವಿಕಾಸಗೊಳ್ಳುತ್ತದೆ. ಪ್ರಪಂಚದಲ್ಲಿ ಎಷ್ಟು ಮಂದಿ ಮನುಷ್ಯರಿದ್ದಾರೆಯೋ ಅಷ್ಟೂ ಮತಗಳಿವೆ. ಈ ದೃಷ್ಟಿಯಲ್ಲಿ ನೋಡಿದರೆ ಯಾವ ಇಬ್ಬರೂ ಒಂದೇ ಮತಕ್ಕೆ ಸೇರಿರಲು ಸಾಧ್ಯವಿಲ್ಲ.
“ಎಲ್ಲಾ ಮತಗಳೂ ತಮ್ಮ ತಿರುಳಿನ ಬಗ್ಗೆ ಏಕಾಭಿಪ್ರಾಯವನ್ನು ಹೊಂದಿವೆ. ಎಲ್ಲಾ ಮತಗಳೂ ಸತ್ಯ ಮತ್ತು ಧರ್ಮವನ್ನೇ ಬೋಧಿಸುತ್ತವೆ. ಎಲ್ಲಾ ಮತಗಳ ಅಂತಿಮ ಗುರಿಯೂ ಒಂದೇ. ಹಾಗಿರುವಾಗ ಮನುಷ್ಯರೇಕೆ ತಮ್ಮ ಮತಕ್ಕಾಗಿ ಕಾದಾಡಬೇಕು? ಅತೀವ ದಡ್ಡತನದ ಪರಿಣಾಮವೇ ಈ ಜಗಳ. ಅಭಿಪ್ರಾಯಗಳ ಭಿನ್ನತೆಯನ್ನು ಕಂಡು ಗೊಂದಲಕ್ಕೊಳಗಾಗಬಾರದು. ನಿರ್ಲಿಪ್ತರಾಗಿ ಅವನ್ನು ಸ್ವೀಕರಿಸಿ ಇಡೀ ಮನುಕುಲದ ಅಂತಿಮ ಗುರಿಯೇ ಆನಂದವನ್ನು ಸಾಧಿಸುವುದು ಎಂದರಿಯಬೇಕು. ಮನುಷ್ಯರು ಭಿನ್ನ ಬಗೆಯ ಉಡುಪುಗಳನ್ನು ಧರಿಸಬಹುದು, ಕೆಲವರಿಗೆ ಗಡ್ಡ ಬೆಳೆಸುವುದು ಇಷ್ಟವಿರಬಹುದು. ಮತ್ತೆ ಕೆಲವರಿಗೆ ಸಂಪೂರ್ಣ ಮುಂಡನವೇ ಚೆಂದವೆನ್ನಿಸಬಹುದು. ಗಂಭೀರವಾಗಿರುವರಾರೂ ಈ ವಿಚಾರಗಳಿಗೆ ಜಗಳವಾಡುವುದಿಲ್ಲ. ಹೌದು, ಭಾಷೆಗಳೂ ಭಿನ್ನ. ಇಷ್ಟೆಲ್ಲಾ ಭಿನ್ನತೆಗಳಿದ್ದರೂ ಮನುಕುಲವೊಂದೇ ಎಂದು ಅರಿಯಲು ವಿಶೇಷ ಜ್ಞಾನವೋ ಸಾಕ್ಷಿಗಳೋ ಬೇಕಾಗಿಲ್ಲ. ಆದರೆ ಮನುಷ್ಯನೇಕೆ ದ್ವೇಷವನ್ನು ಬೆಳೆಸಿಕೊಳ್ಳುತ್ತಾನೆ? ಅದು ವ್ಯರ್ಥ, ಎಲ್ಲ ಬಗೆಯ ಕಾದಾಟಗಳೂ ವಿನಾಶವನ್ನಷ್ಟೇ ತರುತ್ತವೆಂಬುದನ್ನು ಮನುಷ್ಯನಿನ್ನೂ ಕಲಿಯಬೇಕಾಗಿದೆ. ಈ ಸತ್ಯವನ್ನು ಅರಿತರೆ ಅವನು ಎಲ್ಲಾ ಬಗೆಯ ಕಾದಾಟವನ್ನೂ ನಿಲ್ಲಿಸುತ್ತಾನೆ.
ಗುರುಗಳ ಮೆಲುದನಿಯ ಈ ಮಾತುಗಳಿಗೆ ಭಾಷಣಕಾರರ ಮಾತುಗಳಿಗಿರುವಂಥ ಓಘವಿರಲಿಲ್ಲ. ಮಧ್ಯೆ ಮಧ್ಯೆ ಮೌನಕ್ಕೆ ಜಾರುತಿದ್ದುದು ಮಾತಿನ ಹರಿವಿಗೆ ಅಡ್ಡಿಯಾದಂತೆ ಕಂಡರೂ ಅವರ ಮಾತುಗಳು ಸುತ್ತ ನೆರೆದಿದ್ದ ಜನಸಾಮಾನ್ಯರ ಹೃದಯವನ್ನು ತಟ್ಟಿತ್ತು. ಗುರುಗಳ ಅಂತರಾಳದಲ್ಲಿ ಘನೀಭವಿಸಿದ್ದ ವಿಚಾರಗಳು ಅಡಿಗಡಿಗೆ ಮೌನದಲ್ಲಿ ಮುಳುಗುತ್ತಿದ್ದ ಮಾತುಗಳ ಮೂಲಕವೇ ಕೇಳುಗರ ಹೃದಯಕ್ಕೆ ಆಶೀರ್ವಚನವಾಗಿ ಪ್ರವಹಿಸಿತು.
ಇಂಥ ಸಂದರ್ಭಗಳಲ್ಲಿ ಗುರುಗಳು ಪ್ರಸ್ತಾಪಿಸುತ್ತಿದ್ದ ಮತ್ತೊಂದು ವಿಚಾರವೆಂದರೆ ಜಾತಿ ಮತ್ತು ಜನಾಂಗಿಯ ಭೇದ. ಮನುಷ್ಯ ಮನುಷ್ಯರ ನಡುವಣ ಎಲ್ಲಾ ಕಲ್ಪಿತ ಭಿನ್ನತೆಗಳನ್ನೂ ಅವರು ನಿರಾಕರಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ಜಗತ್ತಿನ ಬಹುತೇಕ ಕಷ್ಟಗಳು ಮತ್ತು ಗಲಭೆಗಳಿಗೆ ಇದೇ ಕಾರಣ. ಭಾರತವನ್ನು ಕಾಡುತ್ತಿದ್ದ ಅತ್ಯಂತ ಹೇಯವಾದ ಜಾತಿ ಪದ್ಧತಿಗೆ ಮದ್ದಾಗುವಂಥ ಸಂದೇಶವೊವಂದನ್ನು ಗುರುಗಳಿಂದ ಪಡೆದಿದ್ದ ಆ ಯುವಕರ ಗುಂಪು ಆ ಸಂದೇಶವನ್ನು ಗುರುಗಳದ್ದೇ ಹಸ್ತಾಕ್ಷರದಲ್ಲಿ ಮುದ್ರಿಸಿ ಹಂಚುವ ವ್ಯವಸ್ಥೆಯನ್ನೂ ಮಾಡಿಕೊಂಡಿತ್ತು. ಆ ಸಂದೇಶದ ಮುದ್ರಿತ ಪಠ್ಯ ಹೀಗಿತ್ತು:
ಮನುಷ್ಯರ ಉಡುಪು, ಭಾಷೆ ಮುಂತಾದುವುಗಳು ಬೇರೆ ಬೇರೆಯಾಗಿದ್ದರೂ ಅವರೆಲ್ಲರೂ ಮನುಷ್ಯ ಜಾತಿಗೇ ಸೇರಿರುವುದರಿಂದ ಪರಸ್ಪರ ಮದುವೆಯಾಗುವುದು ಮತ್ತು ಒಂದೇ ಪಂಕ್ತಿಯಲ್ಲಿ ಊಟ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ ~ ನಾರಾಯಣ ಗುರು
ಮನುಷ್ಯನ ಸ್ವಯಂಕೃತ ಸಮಸ್ಯೆಗಳ ಕುರಿತ ತಮ್ಮ ಚಿಂತನೆಗಳನ್ನು ಗುರುಗಳು ಮುಂದುವರಿಸಿದ್ದರು. ಅವರು ಕುಳಿತು ಮಾತನಾಡುತ್ತಿರುವಾಗ ವೃದ್ಧರೊಬ್ಬರು ಮತ್ತೊಂದು ಬದಿಯಲ್ಲಿ ನಿಂತು ಗುರುಗಳಿಗೆ ಗಾಳಿ ಬೀಸುತ್ತಿದ್ದರು. ಹಳೆಯ ಕಾಲದ ಪ್ರತಿನಿಧಿಯಂತಿದ್ದ ಅವರಿಗೆ ಸಮತಾವಾದಿ ಯುವಕರ ಬಗ್ಗೆ ಅತೀವವಾದ ತಿರಸ್ಕಾರವಿತ್ತು. ಅಷ್ಟೇ ಅಲ್ಲ ಅವರು ಹಳ್ಳಿಯಲ್ಲಿ ತಮಗಿದ್ದ ಎಲ್ಲಾ ಪ್ರಭಾವವನ್ನು ಬಳಸಿ ‘ದುಡುಕಿನ’ ಯುವಕರು ಪ್ರತಿಪಾದಿಸುವ ಸಮತೆಯ ತತ್ವವನ್ನು ನಿರಾಕರಿಸಿ ಸಂಪ್ರದಾಯವನ್ನು ರಕ್ಷಿಸಲು ಎಲ್ಲಾ ಬಗೆಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದವರು. ಅವರ ಎದುರಾಗಿ ನಿಂತಿದ್ದ ‘ದುಡುಕಿನ’ ಯುವಕರೆಲ್ಲರೂ ಗುರುಗಳೆದುರು ವಿನೀತರಾಗಿ ನಿಂತು ಮಾತುಗಳನ್ನು ಆಲಿಸುತ್ತಿದ್ದರು. ಸಂಪ್ರದಾಯವಾದಿ ಹಿರಿಯರು ಮತ್ತು ಸುಧಾರಣವಾದಿ ಯುವಕರ ಮಧ್ಯೆ ಗುರುಗಳಿದ್ದರು. ಅವರಿಗಿದ್ದ ಮನುಷ್ಯ ಪ್ರೀತಿಯೇ ಎಲ್ಲಾ ವೈರತ್ವಗಳನ್ನೂ ಇಲ್ಲವಾಗಿಸಿ ಶಾಂತಿಯನ್ನು ತರುವ ಶಕ್ತಿಯನ್ನು ನೀಡಿತ್ತು. ಆದರೆ ಈ ಗುಣ ಕಠಿಣ ನಿಲುವುಗಳನ್ನು ತಳೆಯುವುದರಿಂದ ಗುರುಗಳನ್ನು ತಡೆದಿರಲಿಲ್ಲ.
ಗುರುಗಳ ಮಾತು ಮುಂದುವರಿಯುತ್ತಿರುವಾಗಲೇ ಮಧ್ಯಾಹ್ನವಾಯಿತು. ಅವರು ನದಿ ಬದಿಯಲ್ಲಿರುವ ತಮ್ಮ ವಿಶ್ರಾಂತಿ ಸ್ಥಳದತ್ತ ನಡೆಯಲಾರಂಭಿಸಿದರು. ಪ್ರತಿನಿಧಿಗಳು ಆಗಮನಿಸುವ ದ್ವಾರದ ಅಲಂಕಾರದಲ್ಲಿ ಕೆಲಸದಲ್ಲಿ ತೊಡಗಿದ್ದ ಬಾಲಕರನ್ನು ನೋಡಿ ಅರೆಕ್ಷಣ ನಿಂತ ಅವರು “ದ್ವಾರದ ಕಮಾನಿನ ಮೇಲೆ ಬರೆಯುವ ‘ಓಂ’ ಆನೆಯ ತಲೆಯಷ್ಟು ದೊಡ್ಡದಿರಲಿ ಮತ್ತು ಅದರ ಕೆಳಗೆ ‘ಸಹೋದರ್ಯಂ ಸರ್ವತ್ರ’ ಎಂಬ ಘೋಷಣೆ ಇರಲಿ” ಎಂದು ಹೇಳಿದರು.
“ಓಂ, ಸಹೋದರ್ಯಂ ಸರ್ವತ್ರ”
(ಮುಂದುವರಿಯುವುದು… )
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/07/guru-49/


[…] ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/08/08/guru-50/ […]
LikeLike