ನೀರು ಕುಡಿಯಲೊಲ್ಲದ ಕುದುರೆಯನ್ನು ಪಳಗಿಸಬೇಕಾದವರು ಯಾರು?

ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತವೋ, ದಾರಿಯ ದೂರ ತಿಳಿದಿಲ್ಲವೋ, ದಾಹ ತಣಿಸಿಕೊಳ್ಳುವ ಅಗತ್ಯ ಮನಗಾಣಲಿಲ್ಲವೋ…. ಒಟ್ಟಾರೆ ನೀರು ಕುಡಿಯುತ್ತಿಲ್ಲ. ಹಾಗೆಯೇ ನಾವು ಕೂಡಾ…. ~ ಗಾಯತ್ರಿ

ಇವತ್ತಿನ ದಿನವನ್ನು ಆದಷ್ಟು ಎಚ್ಚರಿಕೆಯಿಂದ ಕಳೆಯಬೇಕು, ಕೆಲಸಗಳನ್ನು ಫಲಿತಾಂಶದೊಡನೆ ತಾಳೆ ಹಾಕಿ ಮಾಡಬೇಕು ಎಂದೆಲ್ಲ ನೀವು ನಿರ್ಧರಿಸಿ ಆಗಿದೆ. ಇನ್ನು ಮುಂದಿನ ಹಂತ…. ಈಗ ನೀವು ಕೊಳದ ಎದುರು ನಿಂತ ಕುದುರೆಯನ್ನು ನೆನೆಯಿರಿ. ಅದರ ಪಕ್ಕ ಒಬ್ಬ ಕುದುರೆಸವಾರನನ್ನೂ.

ನೀವು ಕುದುರೆ. ಕುದುರೆ ಸವಾರ ನಿಮ್ಮ ನಿಯತಿ. ಅಥವಾ ಪರಿಸ್ಥಿತಿ. ಸನ್ನಿವೇಶ, ಅವಕಾಶ, ವಿದ್ಯೆ, ಬುದ್ಧಿ – ಏನೆಲ್ಲವೂ.

ಅವೆಲ್ಲವೂ ನಿಮ್ಮನ್ನು ಒಂದು ಕಾರ್ಯಕ್ಷೇತ್ರದವರೆಗೆ ಕರೆದೊಯ್ಯಬಲ್ಲವು. ಒಂದು ಹುದ್ದೆಯಲ್ಲಿ ಕೂರಿಸಬಲ್ಲವು. ಒಂದು ಅಧಿಕಾರವನ್ನು ಗಿಟ್ಟಿಸಿಕೊಡಬಲ್ಲವು. ಕೊಳ ಅವೆಲ್ಲವನ್ನು ಪ್ರತಿನಿಧಿಸುತ್ತದೆ.

ನೀವು ಅವೆಲ್ಲವುಗಳ ಮೂಲಕ ಕೊಳದವರೆಗೆ ಬಂದಿದ್ದೀರಿ. ಕುದುರೆ ಸಾಕಷ್ಟು ದೂರ ಪ್ರಯಾಣಿಸಿದೆ; ಇನ್ನೂ ಬಹಳ ದೂರದವರೆಗೆ ಪ್ರಯಾಣ ಮಾಡಬೇಕಿದೆ. ಆದ್ದರಿಂದಲೇ ಸವಾರ ದಾರಿಯಲ್ಲಿ ನೀರಡಿಕೆಯಾಗದಿರಲೆಂದು ಮುನ್ನೆಚ್ಚರಿಕೆಯಿಂದ ಕೊಳದ ಬಳಿ ಕರೆತಂದಿದ್ದಾನೆ. ಸ್ವಲ್ಪ ನೀರು ಕುಡಿದು ದಾಹ ತಣಿಸಿಕೊಂಡರೆ ಮುಂದಿನ ಪ್ರಯಾಣ ಸಲೀಸು. ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತವೋ, ದಾರಿಯ ದೂರ ತಿಳಿದಿಲ್ಲವೋ, ದಾಹ ತಣಿಸಿಕೊಳ್ಳುವ ಅಗತ್ಯ ಮನಗಾಣಲಿಲ್ಲವೋ…. ಒಟ್ಟಾರೆ ನೀರು ಕುಡಿಯುತ್ತಿಲ್ಲ.

ಇದಕ್ಕೆ ಯಾರು ಹೊಣೆ?

ನಾವು ಕೂಡಾ. ನಮ್ಮ ಕುಟುಂಬ, ಪರಿಸರ, ವಿದ್ಯೆ ಇತ್ಯಾದಿಗಳೆಲ್ಲ ನಮ್ಮನ್ನು ಒಂದು ಹಂತದವರೆಗೆ ಬೆಳೆಸಿ ಮುಂದಿನ ಬದುಕಿಗೆ ಸಜ್ಜುಗೊಳಿಸುತ್ತವೆ. ನಮ್ಮನ್ನು ತಂದು ನಿಲ್ಲಿಸಲಾಗಿರುವ ಕಾರ್ಯಕ್ಷೇತ್ರದೊಳಕ್ಕೆ ಧುಮುಕುವ, ಜವಾಬ್ದಾರಿ ಹೊರುವ ಅಗತ್ಯ ನಮಗೂ ಇದೆ. ಆದರೆ ನಾವು ಮನಸ್ಸು ಮಾಡುತ್ತಿಲ್ಲ. ಉಳಿದ ಸಂಗತಿಗಳೆಲ್ಲ ನಮ್ಮನ್ನು ಕೊಳದವರೆಗೆ ತಂದು ನಿಲ್ಲಿಸಬಲ್ಲವು. ಸವಾರ ಹೆಚ್ಚೆಂದರೆ ನಮ್ಮ ಮನವೊಲಿಸಬಲ್ಲ, ಛಡಿಯೇಟು ಕೊಟ್ಟು ಒತ್ತಾಯವನ್ನೂ ಮಾಡಬಲ್ಲ. ಆದರೆ, ನೀರು ಕುಡಿಯಬೇಕಿರೋದು ಕುದುರೆಯೇ. ಕೆಲಸ ಮಾಡಬೇಕಿರೋದು ನಾವೇ!

ಕುದುರೆಯ ದಾಹ ತಣಿಯಬೇಕೆಂದರೆ, ಕುದುರೆಯೇ ನೀರು ಕುಡಿಯಬೇಕು. ನಮ್ಮ ಬದುಕು ಸಾಗಬೇಕೆಂದರೆ, ನಾವೇ ದುಡಿಯಬೇಕು. ಎದುರಿಗೆ ಕೊಳವಿದ್ದೂ, ಗಂಟಲು ಒಣಗಿದ್ದೂ, ಸುಮ್ಮನೆ ನಿಲ್ಲುವ ಮೂರ್ಖತನ ಮಾಡಬಾರದು.

ದಿನದ ಕೆಲಸ ನಿಮ್ಮ ಮುಂದೆ ಹರವಿಕೊಂಡಿದೆ. ಅದನ್ನು ನೀವೇ ಮಾಡಿ ಮುಗಿಸಬೇಕು. ಅವನ್ನು ಸುಸೂತ್ರವಾಗಿ ಮಾಡಿ ಮುಗಿಸಿದರಷ್ಟೆ ಜೀವನ ಯಾನದ ಮತ್ತೂ ಒಂದು ದಿನ ಯಶಸ್ವಿಯಾಗಿ ಕಳೆದು ಮುಂದಿನ ದಾರಿ ಸುಗಮವಾಗುವುದು. ನಿಮ್ಮ ಕೆಲಸಗಳಿಗೆ ನೀವೇ ಜವಾಬ್ದಾರರು. ಬಾಕಿಯಂತೆ ಎಷ್ಟೇ ಬೆಂಬಲ ಮತ್ತು ಸಹಾಯ ಪಡೆದರೂ ಮುನ್ನಡಿಗೆಯ ಪ್ರಶ್ನೆ ಬಂದಾಗ, ಹೆಜ್ಜೆ ಎತ್ತಿಡಬೇಕಾದವರು ನೀವೇ… ನೀರು ಕುಡಿಯಬೇಕಾದ ಆ ಕುದುರೆಯೂ ನೀವೇ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.