ಅಮರು ಶತಕ: 4ನೇ ಕಂತಿನ ಪದ್ಯಗಳು

ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 4ನೇ ಭಾಗ ಇಲ್ಲಿದೆ…

26

ಕೋಪದಲ್ಲಿ
ತುಟಿ ಕೊಂಕಿಸಿಕೊಂಡು
ಹಣೆ ಗಂಟಿಕ್ಕಿಕೊಂಡಿದ್ದರೂ
ಈ ಖದೀಮ ಕಣ್ಣುಗಳು ಹಾತೊರೆಯುತ್ತಿವೆ
ಅವನನ್ನು ನೋಡಲು,
ಮಾತುಗಳು ಮುನಿಸಿಕೊಂಡಿದ್ದರೂ
ನಿಧಾನವಾಗಿ ಮೃದುವಾಗುತ್ತಿದೆ
ನನ್ನ ಬಂಡುಖೋರ ಮುಖ,
ಮನಸ್ಸನ್ನು ಎಷ್ಟೇ ಕಠಿಣ ಮಾಡಿಕೊಂಡರೂ
ಮುಚ್ಚಿಡಲಾಗುತ್ತಿಲ್ಲ ಮೈಯಲ್ಲಿನ ರೋಮಾಂಚನ,
ಹತೋಟಿ ಕಳೆದುಕೊಳ್ಳುತ್ತಿದೆ ನನ್ನ ಕೋಪ
ಕಾಣಿಸಕೊಳ್ಳತೊಡಗಿದಾಗ
ಅವನ ಮುಖ.


27

ಹೃದಯ ಕದ್ದ ಚೋರ ಘಾಸಿ ಮಾಡಿದಾಗ,
ಹೇಗೆ ಕೋಪ ಮಾಡಿಕೊಳ್ಳಬೇಕು
ಹೇಗೆ ಕಟಕಿಯಾಡಬೇಕು
ಹೇಗೆ ಮುನಿಸು ಮೈ ಕೈಗಳಿಂದ ವ್ಯಕ್ತವಾಗಬೇಕು
ಎನ್ನುವುದನ್ನ ಹೇಳಿಕೊಡುವ ಗೆಳತಿಯರಿಲ್ಲದೆ ಆಕೆ
ಒದ್ದೆ ಮಾಡಿದಳು ಒಂದೇ ಸವನೇ ಅಳುತ್ತ
ತನ್ನ ಬರಿಗೆನ್ನೆಯ ಮೇಲೆ ಹಟ ಮಾಡಿಕೊಂಡಿದ್ದ
ಮುಂಗುರಳನ್ನು.


28

ಎಲ್ಲ ಗೊತ್ತಾಗಿದೆ ನನಗೆ
ಹೋಗಿಬಿಡು ಇಲ್ಲಿಂದ ದಯವಿಟ್ಟು,
ಯಾವ ಮಾತುಗಳಿಗೂ ಈಗ ಇಲ್ಲ ಅವಕಾಶ,
ನಿನ್ನ ತಪ್ಪೇನೂ ಇಲ್ಲ ಇದರಲ್ಲಿ
ನನ್ನ ವಿಧಿಯೇ ನನಗೆ ಮೋಸ ಮಾಡಿರುವಾಗ.
ನಿನ್ನ ಅಪಾರ ಪ್ರೀತಿಯೇ
ಇಂಥ ಸ್ಥಿತಿ ತಲುಪಬಹುದಾದರೆ
ನನ್ನ ನೋವಿಗೆ ಈಗ ಎಲ್ಲಿದೆ ಜಾಗ?
ಬದುಕೇ ನಶ್ವರ ಎನ್ನುವುದಾದರೆ
ಎಲ್ಲಿಗೆ ತಾನೇ ಹೋಗಲಿ ನಾನು?


29

ನಿನ್ನ ಉತ್ಕಟ ಎದೆಯ ಮೇಲೆ
ಹಾಲು ಬಣ್ಣದ ಹವಳದ ಹಾರ,
ಸೊಂಟದಲ್ಲಿ ರಿಂಗಣಿಸುತ್ತಿರುವ ಒಡ್ಯಾಣ
ಕಾಲುಗಳಲ್ಲಿ ಘಲ್ ಘಲ್ ಎನ್ನುತ್ತಿರುವ ಗೆಜ್ಜೆ,
ಪ್ರಿಯಕರನ ಕೂಡಲು
ಉನ್ಮತ್ತಳಾಗಿ ಗದ್ದಲ ಮಾಡುತ್ತ
ಮೆರವಣಿಗೆ ಹೊರಟಿರುವ ಹುಡುಗಿ,
ಯಾಕೆ ಮತ್ತೆ ಮತ್ತೆ ನೋಡುತ್ತಿರುವೆ ಹಿಂದಿರುಗಿ ?
ನೋಡಬಹುದು ಯಾರಾದರೂ
ಎನ್ನುವ ಭಯವೆ?
ಸದ್ದು ಮಾಡಬೇಡಿ ಎಂದು ಹೇಳಬಾರದೇ
ನಿನ್ನ ಮೈಯ ಸಂಭ್ರಮಗಳಿಗೆ ?


30

ಪ್ರತಿ ಮುಂಜಾನೆ ನೀನು ಮನೆಗೆ ಬಂದಾಗ
ಮಾಯವಾಗುತ್ತದೆ ನನ್ನ ಕಣ್ಣುಗಳಿಂದ ನಿದ್ದೆ
ಹೂವಾಗುತ್ತದೆ ಮೈ, ಹಗುರಾಗುತ್ತದೆ ನನ್ನ ಮನಸ್ಸು
ಖಾಲಿ ಮಾಡುತ್ತದೆ ಜಾಗ ಆಯಾಸ
ಏನೆಲ್ಲ ಮಾಡಿಲ್ಲ ನೀನು ನನಗಾಗಿ?
ಈಗ ಉಳಿದಿಲ್ಲ ಸಾವಿನ ಅಂಜಿಕೆಯೂ
ಇನ್ನೂ ಯಾಕೆ ಆತಂಕ?
ಇನ್ನು ಮುಂದೆಯಷ್ಟೇ ಗೊತ್ತಾಗಲಿದೆ ನಿನಗೆ
ನಾನು ಹಿಡಿಯಲಿರುವ ಹಾದಿ.


31

ಹೊರಟು ನಿಂತಿದೆ
ನಾನು ತೊಡಿಸಿದ ಕಡಗ
ಸರಸ, ಮುನಿಸು, ಚೇಷ್ಟೆ, ಸಲಿಗೆ
ಜಾಗ ಖಾಲಿ ಮಾಡಿಯಾಗಿದೆ ಆಗಲೇ.
ಧೈರ್ಯ ಮೊದಲೇ ಹೊರಟು ನಿಂತಿತ್ತು
ಎಲ್ಲಕ್ಕಿಂತ ಮೊದಲು ನನ್ನ ಹೃದಯ.

ಎಲ್ಲವೂ ನನ್ನ ಪ್ರೇಮಿಯ ಹಿಂದೆ
ದಿಬ್ಬಣದಂತೆ ಮೆರವಣಿಗೆ ಹೊರಟಿರುವಾಗ
ನಿನ್ನ ಗೆಳೆಯರನ್ನು ಬಿಟ್ಟು
ಯಾಕೆ ನೀನು ಇನ್ನೂ ಇಲ್ಲೇ ನಿಂತಿರುವೆ
ಜೀವ?


32

“ನಿದ್ದೆ ಮಾಡುತ್ತಿದ್ದಾನೆ ಅವನು
ನೀನೂ ಮಲಗಿ ಬಿಡು ಇನ್ನು”

ಅವನ ಹಾಸಿಗೆಯ ಬಳಿ
ಗೆಳತಿಯರು ನನ್ನ ಬಿಟ್ಟು ಹೋದ ನಂತರ
ಉಕ್ಕಿ ಬಂದಿತು ನನಗೆ ಅವನ ಮೇಲೆ ಪ್ರೇಮ.
ಹತ್ತಿರ ಹೋಗಿ ಅವನ ತುಟಿಗಳ ಮೇಲೆ
ನನ್ನ ತುಟಿಗಳನ್ನಿಟ್ಟೆ.
ನಿದ್ದೆಯಲ್ಲಿದ್ದವನಂತೆ ನಟಿಸುತ್ತಿದ್ದವನ
ಕೆನ್ನೆಯ ಮೇಲಿನ ಕಂಪನಗಳನ್ನು ಕಂಡು
ನಾಚಿಕೆಯಾಯಿತು ನನಗೆ.
ಆದರೆ ಅಷ್ಟೊತ್ತಿಗಾಗಲೇ ಅವನು
ನನ್ನ ಆವರಿಸಿಕೊಂಡು
ಮುಚ್ಚಿಹಾಕಿಬಿಟ್ಟಿದ್ದ ಆ ನಾಚಿಕೆಯನ್ನು.


33

ಹಿಂದೊಮ್ಮೆ
ಹುಬ್ಬು ಗಂಟಿಕ್ಕುವುದೆಂದರೆ ಕೋಪ,
ಮೌನ ಎಂದರೆ ಜಗಳ,
ಮುಗುಳ್ನಗು, ಒಪ್ಪಿಗೆ ಪ್ರಸನ್ನತೆಗೆ ಸಂಕೇತ,
ನೋಟದಲ್ಲಿಯೇ ಗುರುತಿಸಬಹುದಿತ್ತು
ಘನತೆ, ಗಂಭೀರತೆಯನ್ನ.

ಈಗ ನೋಡು
ಒದಗಿಬಂದಿದೆ ಪ್ರೇಮಕ್ಕೆ ಎಂಥ ಪರಿಸ್ಥಿತಿ,
ನೀನು ನನ್ನ ಕಾಲ ಮೇಲೆ ಬಿದ್ದಿರುವೆಯಾದರೂ
ಕೋಪದಲ್ಲಿ ಕುದಿಯುತ್ತಿದ್ದೇನೆ ನಾನು
ಇನ್ನೂ.


(ಮುಂದುವರಿಯುವುದು…)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2024/08/04/amaru-3/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.