ನಾರಾಯಣ ‘ಗುರು ಮಾರ್ಗ’ : ಅನುಭಾವದ ಅನುಭವ (ಭಾಗ 3)

ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್ಈ ಸರಣಿಯ 5ನೇ ಅಧ್ಯಾಯದ ಮೂರನೇ ಭಾಗ ಇಲ್ಲಿದೆ…

ಅಧ್ಯಾಯ 5.3

ದಿನಗಳು ಉರುಳುತ್ತಾ ಹೋದಂತೆ ಹೊಸ ಬದುಕು ಮತ್ತು ಹೊಸ ಭಾವಗಳಿಗೆ ಹೊಂದಿಕೊಳ್ಳುವ ಬಿಕ್ಕಟ್ಟುಗಳು ಮುಗಿದವು. ಮನಸ್ಸನ್ನು ಧ್ಯಾನಸ್ಥ ಸ್ಥಿತಿಯಲ್ಲಿರಿಸಿಕೊಂಡೇ ಸುತ್ತ ನೆರೆಯುವ ಜನರೊಂದಿಗೆ ಸಹಜ ಸಂಭಾಷಣೆ ನಡೆಸಲು ಅವರಿಗೆ ಸಾಧ್ಯವಾಯಿತು. ಈ ಮನೋವ್ಯಾಪಾರಗಳೆಲ್ಲವೂ ನಡೆಯುತ್ತಿರುವಾಗಲೇ ವಾತಾವರಣದ ತೀವ್ರತೆಗಳಿಂದ ರಕ್ಷಣೆ ಪಡೆಯಲು ಗುರುಗಳಿಗೊಂದು ಪರ್ಣಕುಟಿಯನ್ನು ನಿರ್ಮಿಸಿದರು. ಊಟೋಪಚಾರಗಳ ವ್ಯವಸ್ಥೆಯೂ ಅವರಿಂದಲೇ ಆಯಿತು. ಅಲ್ಲಿನ ಚಟುವಟಿಕೆಗಳ ನಿರ್ವಹಣೆಗೆ ಪದಾಧಿಕಾರಿಗಳ ನೇಮಕವೂ ಹಳ್ಳಿಗರಿಂದ ನಡೆಯಿತು. ಜನಗಳು ದೂರದೂರುಗಳಿಂದ ಕಾಲ್ನಡಿಗೆಯಲ್ಲೂ ಎತ್ತಿನ ಗಾಡಿಗಳಲ್ಲೂ ಆಗಮಿಸತೊಡಗಿದರು.

ಮಕ್ಕಳು ಮತ್ತು ಮಹಿಳೆಯರು ಗುರುಗಳನ್ನು ಸದಾ ಸುತ್ತುವರಿದಿರುತ್ತಿದ್ದರು. ಬಂದವರೆಲ್ಲಾ ಅಲ್ಲೇ ಇರುವ ನದಿಯಲ್ಲಿ ಮಿಂದು ಗುರುಗಳಿಗೆ ಫಲ ಪುಷ್ಪಾದಿಗಳನ್ನು ಅರ್ಪಿಸುತ್ತಿದ್ದರು. ಬರುವವರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅವರನ್ನು ಸ್ವಾಗತಿಸಲು ಮತ್ತು ಆತಿಥ್ಯ ನೀಡುವ ಹೊಣೆಯನ್ನು ಯಾರಾದರೂ ಹೊರಲೇ ಬೇಕಿತ್ತು. ಅದಕ್ಕೂ ಕೆಲ ಸ್ವಯಂಸೇವಕರು ಸಿದ್ಧರಾದರು. ಕೆಲಕಾಲ ಆಶ್ರಮದಲ್ಲಿ ವಾಸಿಸಿ ಗುರುದರ್ಶನಾಕಾಂಕ್ಷಿಗಳ ಆತಿಥ್ಯ ವಹಿಸಿ ತಮ್ಮ ನಿತ್ಯದ ಬದುಕಿಗೆ ಮರಳುತ್ತಿದ್ದರು. ಗುರುಗಳ ಸನ್ನಿಧಿಯಲ್ಲಿ ಶಾಂತರಾಗಿರುವ ಈ ಅವಧಿಯು ಅವರ ದೇಹಕ್ಕೆ ಹೊಸ ಚೈತನ್ಯ ನೀಡಿದರೆ ಗುರುಸೇವೆಯ ಧನ್ಯತೆ ಅವರ ಮನಸ್ಸನ್ನು ಪ್ರಫುಲ್ಲಗೊಳಿಸುತ್ತಿತ್ತು.  ಜನರ ದೈಹಿಕ ಮತ್ತು ಮಾನಸಿಕ ಆಯಾಸಗಳನ್ನು ನಿವಾರಿಸಿ ನವಚೈತನ್ಯ ನೀಡುತ್ತಿದ್ದ ಈ ನದಿ ಬದಿಯ ತಾಣ ನಿಧಾನವಾಗಿ ಒಂದು ಸಂಸ್ಥೆಯಾಗಿ ಬೆಳೆಯಿತು. ಇಂಥದ್ದನ್ನು ಭಾರತದಲ್ಲಿ ಆಶ್ರಮ ಎಂದು ಕರೆಯುತ್ತಾರೆ. ಅರುವಿಪ್ಪುರದಲ್ಲಿ ಮೈದಳೆದಿದ್ದ ಸಂಸ್ಥೆಗೆ ಆಶ್ರಮವೆನಿಸಿಕೊಳ್ಳಲು ಇದ್ದ ದೊಡ್ಡ ಕೊರತೆಯೆಂದರೆ ಆರಾಧನಾಲಯ. ಪರಿವ್ರಾಜಕನಾಗಿದ್ದ ಗುರುಗಳು ಸದಾ ಅಲ್ಲಿರಲೂ ಸಾಧ್ಯವಿಲ್ಲ ಎಂಬ ಅಂಶ ಸ್ಪಷ್ಟವಾದ ಮೇಲಂತೂ ಆರಾಧನಾಲಯದ ಅಗತ್ಯ ಹೆಚ್ಚಿದೆ ಅನ್ನಿಸಿತು. ಗುರುಗಳ ಸಾನಿಧ್ಯವೇ ಆಶ್ರಮದ ಚೈತನ್ಯವಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಅದು ದೊರೆಯುವುದು ಆರಾಧನಾಲಯದಿಂದ ಮಾತ್ರ ಎಂದು ಆಶ್ರಮವನ್ನು ನಿರ್ವಹಿಸುತ್ತಿದ್ದ ಸ್ಥಳೀಯರಿಗೆ ಅನ್ನಿಸಿದ್ದು ಸಹಜವೇ ಆಗಿತ್ತು.

ಆದರೆ ಇದು ಅನೇಕ ಹೊಸ ಸಮಸ್ಯೆಗಳನ್ನು ಮುಂದಿಟ್ಟಿತು. ಈ ದೇಗುಲದ ಆಕಾರವೇನಾಗಿರಬೇಕು? ಇಲ್ಲಿ ನಡೆಯಬೇಕಾದ ಪೂಜೆ ಯಾವುದಾಗಿರಬೇಕು? ಹಳೆಯ ಆಚಾರಗಳನ್ನು ಹಾಗೆಯೇ ಅನುಸರಿಸಬೇಕೇ? ಹೊಸ ಚಿಂತನೆಗಳು ಮತ್ತು ಒಲವುಗಳಿಗೆ ಎಷ್ಟರ ಮಟ್ಟಿಗೆ ಅವಕಾಶವಿರಬೇಕು? ಈ ಸಮಸ್ಯೆಗಳಿಗೆ ಎಲ್ಲರೂ ಒಪ್ಪುವ ಪರಿಹಾರವೊಂದು ದೊರೆಯುವಂತೆ ಕಾಣಿಸುತ್ತಿರಲಿಲ್ಲ. ಗುರುಗಳ ಸಕ್ರಿಯ ಮಾರ್ಗದರ್ಶನದಲ್ಲಿ ಒಂದೊಂದೇ ರಾಜಿಗಳನ್ನು ಮಾಡಿಕೊಳ್ಳುತ್ತಾ ಮುಂದುವರಿದು ಅಂತಿಮವಾಗಿ ಅವರಿಗೆ ಸಾಧ್ಯವಿರುವ ಅತ್ಯಂತ ಸುಧಾರಿತ ವ್ಯವಸ್ಥೆಯೊಂದನ್ನು ಅನುಷ್ಠಾನಕ್ಕೆ ತರಲು ತೀರ್ಮಾನಿಸಿದರು. ಅದರಂತೆ ಆರಾಧನೆ ಅಗತ್ಯವಿಲ್ಲದ ಮತ್ತು ಅರ್ಥಹೀನವಾಗಿರುವ ಎಲ್ಲಾ ಆಚಾರಗಳನ್ನು ಬೇಡವೆಂದು ಬದಿಗಿರಿಸಿ ಯಾವ ಹಾನಿಯನ್ನೂ ಮಾಡದ ಪುಷ್ಪಾರ್ಚನೆ, ಕರ್ಪೂರಾಧನೆಯಂಥ ಸರಳ ಸಂಪ್ರದಾಯಗಳನ್ನಷ್ಟೇ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದರು. ದೇಗುಲ ನಿರ್ಮಾಣದ ಪ್ರಸ್ತಾಪದ ಹೊತ್ತಿನಲ್ಲಿ ಹಿಮಾಲಯದಂತೆ ಎದುರಾಗಿದ್ದ ಸಮಸ್ಯೆಗಳೆಲ್ಲವೂ ಗುರುಗಳೆದುರು ಮಂಜಾಗಿ ಕರಗಿ ಹೋದವು.

ಅರುವಿಪ್ಪುರದ ಪರ್ವತಗಳ ನಡುವೆ ಪರಿತ್ಯಾಗಿಯಾದ ಶಿವನ ಆರಾಧನಾಲಯವು ನಿರ್ಮಾಣಗೊಳ್ಳಲಿತ್ತು. ಆ ದೇಗುಲಕ್ಕೆ ಮಕ್ಕಳು ಮತ್ತು ಮಹಿಳೆಯರು ಯಾವ ಭಯವೂ ಇಲ್ಲದೆ ಪ್ರವೇಶಿಸಿ ಶಾಂತಚಿತ್ತರಾಗಿ ತಮ್ಮ ಅರ್ಚನೆಗಳನ್ನು ನೆರವೇರಿಸಬಹುದಿತ್ತು. ಪಾವನವಾದ ಆ ವಾತಾವರಣದಲ್ಲಿ ಒಳಹೊರಗನ್ನು ಶುದ್ಧೀಕರಿಸಿಕೊಂಡ ಮಕ್ಕಳು ಚಾರಿತ್ರ್ಯವಂತರಾಗಬಹುದಿತ್ತು. ಈ ಆಶಯವಂತೂ ಸರ್ವರ ಸಮ್ಮತಿ ಪಡೆಯಿತು. ನಾರಾಯಣ ಗುರುಗಳು ಎಲ್ಲಾ ಆಚಾರಗಳಿಂದ ಮುಕ್ತನಾಗಿ ಅಪ್ರಮೇಯ ಪ್ರತಿಷ್ಠಿತಮಾನಸ ಸ್ಥಿತಿಯನ್ನು ತಲುಪಿದ್ದರೂ ಗ್ರಾಮಸ್ಥರ ಬೇಡಿಕೆಯಂತೆ ಸ್ವಹಸ್ತದಿಂದಲೇ ದೇಗುಲ ಪ್ರತಿಷ್ಠಾನೆಗೆ ಒಪ್ಪಿದರು. ದೇಗುಲ ನಿರ್ಮಾಣಕ್ಕೆ ಅಗತ್ಯವಿರುವ ಸ್ಥಳವನ್ನು ಖರೀದಿಸಲಾಯಿತು. ಪ್ರತಿಷ್ಠಾಪನೆಯ ದಿನ ಮುಹೂರ್ತಗಳನ್ನೂ ನಿಶ್ಚಯಿಸಲಾಯಿತು.

ನಿಗದಿತ ದಿನದಂದು ನೇಸರನ ಮೊದಲ ಕಿರಣಗಳು ಭೂಮಿಯನ್ನು ತಲುಪುವ ಮೊದಲೇ ಗುರುಗಳು ನದಿಗಿಳಿದು ಸ್ನಾನಾದಿಗಳನ್ನು ಮುಗಿಸಿ ಪ್ರತಿಷ್ಠಾಪನೆಗೆ ತಯಾರಾದರು. ಪ್ರತಿಷ್ಠಾಪನೆಯ ಸ್ಥಳವನ್ನು ಮೊದಲೇ ಗುರುತಿಸಿ ಅಲ್ಲಿ ಶಿವಲಿಂಗವನ್ನೂ ತಂದಿಡಲಾಗಿತ್ತು. ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ಸಾವಿರಾರು ಮಂದಿ ಅಲ್ಲಿ ನೆರೆದಿದ್ದರು. ಪ್ರತಿಷ್ಠಾಪನೆಗೆಂದು ನಿಗದಿ ಪಡಿಸಿದ್ದ ಸ್ಥಳಕ್ಕೆ ಗುರುಗಳು ಬರುವಾಗಲೂ ಆಗಸದಲ್ಲಿ ನಕ್ಷತ್ರಗಳು ಮಿನುಗುತ್ತಲೇ ಇದ್ದವು. ‘ಈಗ ಇಲ್ಲಿ ನಡೆಯಲಿರುವ ಪವಾಡವಾದರೂ ಏನು’ ಎಂಬುದು ನಸುಕಿನ ಚುಕ್ಕಿಗಳ ಬೆಳಕಿನಲ್ಲಿ ನೆರೆದಿದ್ದ ಸಾವಿರಾರು ಗ್ರಾಮಸ್ಥರ ಮನದೊಳಗಿದ್ದ ಪ್ರಶ್ನೆಯಾಗಿತ್ತು. ಇವರ ಮಧ್ಯೆ ಪ್ರತಿಷ್ಠಾಪನಾ ಪೀಠದ ಸಮೀಪವೇ ನಿಂತಿದ್ದು ಗುರುಗಳು ಪ್ರತಿಷ್ಠಾಪನಾ ಕ್ರಿಯೆಯನ್ನು ನಿರ್ವಹಿಸಲು ಸಿದ್ಧರಾಗಿದ್ದರು. ಹೂಗಳ ಮಧ್ಯೆ ಉರಿಯುತ್ತಿದ್ದ ಪಂಚಮುಖಿ ದೀಪದ ಮಂದವಾಗಿ ಜ್ವಲಿಸುತ್ತಿತ್ತು.

ಅಲ್ಲಿದ್ದ ಕೆಲವರಿಗೆ ಇದೆಲ್ಲವೂ ಹೊಸತು ಮತ್ತು ನಂಬಲಾಗದಂಥ ಘಟನೆಯಾಗಿ ತೋರುತ್ತಿತ್ತು. ಈ ಯುವ ಯೋಗಿಗೆ ಇಂಥದ್ದೊಂದು ಗಂಭೀರ ಕರ್ಮವನ್ನು ನಿರ್ವಹಿಸುವ ಅರ್ಹತೆಯಿದೆಯೇ? ಪ್ರತಿಷ್ಠಾಪನೆಯನ್ನು ನಿರ್ವಹಿಸಲು ಬೇಕಿರುವ ಪರಂಪರೆ ಅವನಿಗಿದೆಯೇ? ಶಿವನನ್ನು ಈತ ನಿಜಕ್ಕೂ ದೇವರೆಂದು ಪರಿಗಣಿಸಿದ್ದಾನೆಯೇ? ಅನಾದಿಕಾಲದಲ್ಲಿ ಹಿಮಾಲಯದಲ್ಲಿದ್ದ ಬೇಟೆಗಾರನೇ ಶಿವ. ಅವನು ಸದ್ಗುಣಗಳಿಂದಾಗಿ ತನ್ನ ಜನರ ನಾಯಕನಾಗಿ ಬೆಳೆದ. ಜನಗಳ ಪ್ರೀತಿಪಾತ್ರನಾಗಿ ಅವರಿಂದ ದೇವರಂತೆ ಪೂಜೆಗೊಳಗಾದ ಎಂದೆಲ್ಲಾ ಹೇಳುತ್ತಿದ್ದದ್ದು ಈ ಸನ್ಯಾಸಿಯೇ ತಾನೇ? ಇವನೇಕೆ ಈಗ ಶಿವಭಕ್ತಿಯನ್ನು ನಟಿಸುತ್ತಿದ್ದಾನೆ? ಸಂಪ್ರದಾಯಗಳನ್ನು ಮುರಿಯುವುದರಿಂದ ಗ್ರಾಮಸ್ಥರ ಮೇಲೆ ದೈವ ಕೋಪದ ಬೆಂಕಿಮಳೆ ಸುರಿಯದೇ? ಈ ಬಗೆಯ ಪ್ರಶ್ನೆಗಳಿಂದ ಬಾಧಿತರಾಗಿದ್ದವರು ಗುರುಗಳ ಸಮೀಪವೇ ನಿಂತು ಅವರ ಅಂಗಭಂಗಿಯಲ್ಲಿ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಿದರು.

ಆದರೆ ಈ ಬಗೆಯ ಹುಚ್ಚು ಪ್ರಶ್ನೆಗಳಿಗೆ ಗುರುಗಳಿಂದ ಅವರಿಗೆ ಯಾವ ಉತ್ತರವೂ ದೊರೆಯಲಿಲ್ಲ. ತಮ್ಮ ತೇಜಸ್ವೀ ಮುಖಭಾವದೊಂದಿಗೆ ಕಣ್ಣುಗಳನ್ನು ದಿಗಂತಕ್ಕೆ ನೆಟ್ಟು ಮೌನ ಪ್ರಾರ್ಥನೆಗೆ ತೊಡಗಿದರು.

“ಭಗವಂತಾ ನಿನ್ನ ಅನುಗ್ರಹಧಾರೆ ಈ ಜನರ ಮೇಲೆ ಹರಿಯುವಂತಾಗಲಿ. ಬಡತನ ಮತ್ತು ಕಷ್ಟಗಳಿಂದ ಬಾಧಿತರಾದವರು ಅವುಗಳಿಂದ ಮುಕ್ತಿಪಡೆಯಲಿ. ಅವರ ಬದುಕಿನ ಸಮೃದ್ದಿ ಹೆಚ್ಚಲಿ. ಅವರ ನಿತ್ಯದ ಆಹಾರ ಅಕ್ಷಯವಾಗಲಿ. ಸತ್ಯಸಂಧರಾಗಿ ಆನಂದದ ಹಾದಿ ಕಂಡುಕೊಳ್ಳಲಿ. ಒಬ್ಬರು ಮತ್ತೊಬ್ಬರಿಗೆ ಸಹಕರಿಸಿ ಅನಾರೋಗ್ಯಕರ ಸ್ಪರ್ಧೆಗಳಿಂದ ದೂರವುಳಿಯಲಿ. ದಿನದಿಂದ ದಿನಕ್ಕೆ ಪರಿಶುದ್ಧರಾಗುತ್ತಾ ಸಾಗಲಿ. ಎಲ್ಲಾ ದ್ವೇಷ ಮತ್ತು ವೈಮನಸ್ಸುಗಳು ಅವರಿಂದ ಮಾಯವಾಗಲಿ. ಜಗತ್ತಿನ ಅತ್ಯಂತ ಕ್ಷುದ್ರಜೀವಿಗೂ ಇವರ ಕರುಣೆ ದೊರೆಯಲಿ. ಪರಮಸತ್ಯದ ಕಿರಣಗಳು ಅವರೊಳಕ್ಕೆ ಪ್ರವೇಶಿಸಿ ಅವರನ್ನು ಧನ್ಯರನ್ನಾಗಿಸಲಿ”

ಈ ಪ್ರಾರ್ಥನೆಯನ್ನು ಮುಗಿಸುವ ಹೊತ್ತಿಗೂ ಗುರುಗಳ ದೃಷ್ಟಿ ಆಕಾಶದತ್ತಲೇ ನೆಟ್ಟಿತ್ತು. ಅವರಂದು ಭೂತ ಮತ್ತು ಭವಿಷ್ಯದ ಜೊತೆಗೆ ಕೋಟ್ಯಂತರ ಶೋಷಿತರ ಅಂತರಾಳದಲ್ಲಿ ಹುದುಗಿದ್ದ ಕನಸುಗಳಿಗೂ ವರ್ತಮಾನದ ಕೊಂಡಿಯಾಗಲು ತೀರ್ಮಾನಿಸಿದ್ದರು. ಅಂದು ನಿರ್ವಹಿಸಿದ ಚಾರಿತ್ರಿಕ ಕರ್ಮ ಇದೇ ತೀರ್ಮಾನದ ಬಹಿರಂಗ ಘೋಷಣೆಯಾಗಿತ್ತು. ತಮ್ಮ ಕರ್ಮಪಥದ ಆರಂಭದ ಆ ಕ್ಷಣದಲ್ಲಿ ಅವರೆಷ್ಟು ಲೀನರಾಗಿದ್ದರೆಂಬುದದನ್ನು ಮೌನವಾಗಿ ಪ್ರವಹಿಸುತ್ತಿದ್ದ ಅಶ್ರುಧಾರೆಯೇ ಹೇಳುತ್ತಿತ್ತು.

ಗುರುಗಳ ಭಾವಪರವಶತೆಯಲ್ಲಿ ನೆರೆದಿದ್ದ ಜನಸಮೂಹವೂ ಸೇರಿಹೋಯಿತು. ನಿಶ್ಶಬ್ದವಾಗಿದ್ದ ಆ ವಾತಾವರಣದಲ್ಲಿ ಧನ್ಯತೆಯ ನೋಟಗಳ ಮೂಲಕ ಪ್ರತಿಯೊಬ್ಬರು ಪರಸ್ಪರ ಅಭಿನಂದನೆಗಳನ್ನು ವಿನಿಮಯ ಮಾಡಿಕೊಂಡರು. ಪ್ರತಿಷ್ಠಾಪನೆ ಮುಗಿಯುವ ಹೊತ್ತಿಗೆ ಸೂರ್ಯೋದಯವಾಯಿತು. ಶಂಖ ಧ್ವನಿಗಳು ದಿಗಂತವ್ಯಾಪಿಯಾಗುವಷ್ಟು ಉಚ್ಚಸ್ಥಾಯಿಯಲ್ಲಿ ಮೊಳಗಿದವು. ಶುಭ್ರ ಶ್ವೇತ ವಸ್ತ್ರಧಾರಿಗಳಾಗಿದ್ದ ಭಕ್ತರು ನಿಧಾನವಾಗಿ ಗುಡ್ಡಗಳ ನಡುವೆ ಸಾಗಿ ಮರೆಯಾದರು. ಒಬ್ಬೊಬ್ಬರ ಮನಸ್ಸಿನಲ್ಲೂ ಹೊಸ ಭರವಸೆಯ ಹೂವು ನಿಧಾನವಾಗಿ ಅರಳುತ್ತಿರವಂತೆ ಭಾಸವಾಯಿತು. ಅದು ವಿಜಯ ವೈಜಯಂತಿಯ ವಿಲಾಸವೇ ಸರಿ!

(ಮುಂದುವರಿಯುವುದು…)


ಹಿಂದಿನ ಅಧ್ಯಾಯ ಇಲ್ಲಿ ನೋಡಿ: https://aralimara.com/2024/08/10/guru-52/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ