ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 7ನೇ ಅಧ್ಯಾಯದ ಮೊದಲ ಭಾಗ ಇಲ್ಲಿದೆ…
ಅಧ್ಯಾಯ 7.1
ಗುರುವೆಂಬಾತ ತತ್ವದ ಪ್ರತಿನಿಧಿ. ಎಲ್ಲಾ ಕರ್ಮೋನ್ಮುಖ ಆಚರಣೆಗಳ ಕೇಂದ್ರದಲ್ಲಿ ತತ್ವವು ನಿಶ್ಚಲವಾಗಿಯೂ ಸ್ಥಿರವಾಗಿಯೂ ಇರುವಂತೆ ತೋರುತ್ತದೆ. ವಾಸ್ತವದಲ್ಲಿ ಅದು ಈ ಚಟುವಟಿಕೆಗಳ ಅಂಚು ಅಥವಾ ಪರಿಧಿಯಲ್ಲಿರಬೇಕಾಗಿತ್ತು. ಆಚರಣೆಯೆಂಬುದು ನಿರ್ದಿಷ್ಟ ಘಟನೆಗಳಿಗೆ ಸಂಬಂಧಿಸಿದ್ದು, ಆದರೆ ತತ್ವವೆಂಬುದು ಒಂದು ಚಲನಶೀಲ ಕೇಂದ್ರ, ಅದು ಪ್ರತ್ಯೇಕ ಘಟನೆಗಳಿಗೆ ಒಂದು ಸುಸಂಬದ್ದ ಸಾತತ್ಯವನ್ನು ನೀಡುತ್ತದೆ. ಪೂರ್ಣಗೊಳಿಸಬೇಕಾಗಿರುವ ನಿರ್ದಿಷ್ಟ ಕ್ರಿಯೆಯ ಎದುರು ತತ್ವವೆಂಬುದು ವರ್ಣರಹಿತವಾಗಿ ತಟಸ್ಥವಾಗಿ ನಿಂತಿರುತ್ತದೆ. ಆದರೆ ಅದುವೇ ಸದುದ್ದೇಶದಿಂದ ನಡೆಯುವ ಪ್ರತಿಯೊಂದು ಕೆಲಸಕ್ಕೂ ಬೆಂಬಲವೂ ಆಶೀರ್ವಾದವೂ ಆಗಿರುತ್ತದೆ. ವರ್ಕಲದಲ್ಲಿ ನೆಲೆ ನಿಂತ ಮೇಲೆ ಗುರುಗಳು ಮೇಲೆ ಹೇಳಿದ ‘ತತ್ವ’ವನ್ನು ಹೆಚ್ಚು ಹೆಚ್ಚು ಪ್ರತಿನಿಧಿಸತೊಡಗಿದರು.
ವರ್ಕಲ ಜನನಿಬಿಡವಾದ ಊರೇನೂ ಆಗಿರಲಿಲ್ಲ. ಹಸಿರು ಬೆಟ್ಟಗಳ ಇಳಿಜಾರನ್ನು ಸೀಳಿದಂತೆ ಕರಿಗಲ್ಲಿನ ಬಂಡೆಗಳು ಆಕ್ರಮಿಸಿಕೊಂಡಿದ್ದರಿಂದ ಭೂಮಿಗೆ ಫಲವತ್ತತೆಯಿಲ್ಲವೆಂಬುದು ಸ್ಪಷ್ಟವಾಗಿತ್ತು. ಹಾಗಾಗಿಯೇ ಜನರು ಈ ಪ್ರದೇಶವನ್ನು ಬಿಟ್ಟು ಕಡಲಬದಿಗೆ ತೆರಳಿದ್ದರು. ಅಕ್ಷಯವಾಗಿ ದೊರೆಯುತ್ತಿದ್ದ ಮೀನು, ಬೆಳೆಗಳಿಗೆ ಅನುಕೂಲವಾಗುವಂಥ ನೀರಾವರಿಯಿರುವ ಫಲವತ್ತಾದ ಭೂಮಿ ಮನುಷ್ಯವಾಸಕ್ಕೆ ಹೆಚ್ಚು ಸೂಕ್ತವೂ ಆಗಿತ್ತು. ನಿತ್ಯದ ಬದುಕಿನ ಸ್ಪರ್ಧೆಗಳು, ಕಲಹಗಳು ಮತ್ತು ವ್ಯವಹಾರಗಳಿಂದ ದೂರವಾಗಿ ಜನವಾಸವಿಲ್ಲದ ಬೆಟ್ಟದ ಮೇಲೆ ಗುರುಗಳು ಸ್ಥಿತರಾದರು. ಅವರ ಮಟ್ಟಿಗೆ ಆ ನಿರ್ಲಕ್ಷಿತ ಸ್ಥಳಕ್ಕೆ ಅದರದ್ದೇ ಆದ ಭವ್ಯ ಸೌಂದರ್ಯದ ಆಯಾಮವಿತ್ತು. ಸುಲಭದಲ್ಲಿ ಬದಲಾವಣೆಗೆ ಅವಕಾಶ ಮಾಡಿಕೊಡದಂತೆ ತೋರುವ ಬಂಡೆಗಳ ಹಿಂದೆ ಅಡಗಿದ್ದ ಬದಲಾವಣೆಗಳ ತತ್ವವನ್ನು ನೋಡಲು ಬೇಕಿರುವ ಸೂಕ್ಷ್ಮದೃಷ್ಟಿ ಗುರುಗಳಿರಿಗಿತ್ತು. ದೂರ ಸಾಗರದಲ್ಲೆಲ್ಲೋ ಹುಟ್ಟಿ ಪ್ರಾಚೀನ ಕಾಲದಿಂದಲೂ ಬೀಸುತ್ತಲೇ ಇರುವ ಆ ಮಾರುತಗಳು ಆ ಸ್ಥಳವನ್ನು ಜಾಗವನ್ನು ನೇವರಿಸುತ್ತಿದ್ದವು. ನಕ್ಷತ್ರ ತುಂಬಿರುವ ರಾತ್ರಿಗಳು ಕಡಲ ಅಲೆಗಳ ಮಂದ ಮರ್ಮರದಿಂದ ಶ್ರೀಮಂತವಾಗಿದ್ದವು. ಬಂಜರು ಬಂಡೆಗಳ ತಪ್ಪಲಿನಲ್ಲಿ ಜರೀಗಿಡಗಳ ನಡುವೆ ಅಡಗಿ ಸ್ಫಟಿಕ ಶುದ್ದ ನೀರನ್ನು ಒಸರುವ ಒರತೆಗಳು ಜುಳುಜುಳು ಹರಿಯುವ ತೊರೆಯನ್ನು ಸೃಷ್ಟಿಸಿದ್ದವು. ಈ ಪ್ರದೇಶದ ಅಕ್ಷತ ಸೌಂದರ್ಯವನ್ನು ಕಾಣಲು ಅತ್ಯಾಸೆಯ ಮತ್ತು ಆತುರದ ಕಣ್ಣುಗಳಿಗೆ ಸಾಧ್ಯವಿರಲಿಲ್ಲ. ಆದರೆ ಗುರುಗಳ ಮಟ್ಟಿಗೆ ಇದು ಅವರೇ ಹೇಳಿದಂತೆ ‘ಪುಣ್ಯಭೂಮಿ’. ಮನುಷ್ಯನ ಸಣ್ಣತನ ಮತ್ತು ಅತಿಯಾಸೆಗಳ ಕುರುಹುಗಳಿಲ್ಲದ ಪರಿಶುದ್ಧ ನೆಲ.
ಗುರುಗಳು ನಿಷ್ಕ್ರಿಯರು ಅಥವಾ ಹೆಚ್ಚೇನೂ ಕೆಲಸವಿಲ್ಲದೇ ಇರುವುದರಿಂದ ಸದಾ ವಿಶ್ರಾಂತ ನಿರತರೆಂದು ಅಪರಿಚಿತರು ಭಾವಿಸಬಹುದಿತ್ತು. ಆದರೆ ಕೆಲಕಾಲ ಆಶ್ರಮದಲ್ಲಿ ವಾಸಿಸಿದರೆ ಅವರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಲೇ ಬೇಕಿತ್ತು. ಸೂರ್ಯನ ಬೆಳಕು ಬೆಟ್ಟದ ಮೇಲೆ ಬೀಳುವುದಕ್ಕೂ ಮೊದಲೇ ಗುರುಗಳು ಪ್ರಾತಃಕರ್ಮಗಳನ್ನು ಮುಗಿಸಿ ತಮ್ಮ ಕೋಣೆಯಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತು ಆಶ್ರಮದ ಬ್ರಹ್ಮಚಾರಿಗಳಲ್ಲೊಬ್ಬರು ನಡೆಸಿಕೊಡುವ ಪುರಾಣ ಕಾವ್ಯದ ಗಮಕವನ್ನು ಆಲಿಸುತ್ತಿರುತ್ತಾರೆ. ಅರ್ಧಕ್ಕೆ ಇಳಿಸಿಟ್ಟಿರುವ ಬುಡ್ಡಿ ದೀಪದ ಬತ್ತಿ, ಮೂಲೆಗೆ ಒರಗಿ ನಿಂತಿರುವ ಗುರುಗಳ ಊರುಗೋಲು ಮತ್ತು ಬದಿಯಲ್ಲಿರುವ ಪಾದುಕೆಗಳು ಗುರುಗಳ ಧ್ಯಾನದ ಸ್ಥಿರಚಿತ್ರಕ್ಕೆ ಪೂರಕವಾಗುತ್ತವೆ. ಹೊರಗಿದ್ದ ಮಾವಿನ ತೋಪಿನ ನೆಲದಲ್ಲಾಡುವ ಬೆಳಗಿನ ನೆರಳೂ ಈ ವಾತಾವರಣದ ಭಾಗವೇ.
ಗುರುಗಳು ಇಡೀ ದಿನ ತಮ್ಮನ್ನು ಕಾಣಲು ಬರುತ್ತಿದ್ದ ಯುವಕರು, ಹಿರಿಯರು, ಮಕ್ಕಳು ಮುಂತಾದವರ ಜೊತೆ ಕುಶಲ ವಿಚಾರಿಸುತ್ತಾ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಲೌಕಿಕ ವ್ಯವಹಾರದ ಒತ್ತಡದಲ್ಲಿ ಆತುರವಂತರಾದವರಿಗೆ ಗುರುಗಳ ಮಾತನ್ನು ಆಳಕ್ಕಿಳಿಸಿಕೊಂಡು ಅರ್ಥ ಮಾಡಿಕೊಳ್ಳುವುಗು ಅಸಾಧ್ಯವಾಗಿತ್ತು. ಇಂಥವರಿಗೆ ಗುರುಗಳ ಮಾತುಗಳನ್ನು ಆಲಿಸುವುದು ಸಹನೆಯ ಪರೀಕ್ಷೆಯಂತೆ ತೋರುತ್ತಿದ್ದದ್ದೂ ನಿಜವೇ. ಗುರುಗಳು ಮಧ್ಯಾಹ್ನದ ಆಹಾರ ಸೇವನೆಯ ನಂತರ ಅಲ್ಲಿದ್ದ ತೋಪಿನ ಮಾವಿನ ಮರದ ನೆರಳಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು, ಕತ್ತಲಾಗುತ್ತಿದ್ದಂತೆಯೇ ಹಾಸಿಗೆ ಸೇರುತ್ತಿದ್ದ ಅವರು ಶಿಷ್ಯರ ಪಠಣ ಅಥವಾ ಸಂಗೀತಾಲಾಪವನ್ನು ಅಲಿಸುತ್ತಾ ನಿದ್ರಿಸುತ್ತಿದ್ದರು. ಲೋಕದ ಪರಿವೇ ಇಲ್ಲದೆ ವಿಶ್ರಾಂತಿಯಲ್ಲಿರುವಂತೆ ಕಾಣುತ್ತಿದ್ದ ಗುರುಗಳು ಸದಾ ಜಾಗೃತರಾಗಿಯೇ ಇರುತ್ತಿದ್ದರು. ಶಿಷ್ಯನ ಪಠಣದಲ್ಲಿ ವ್ಯಾಕರಣದ ತಪ್ಪು ನುಸುಳಿದರೆ, ಗಮಕದ ಶ್ರುತಿ ತಪ್ಪಿದರೆ ಅಥವಾ ಉಚ್ಚಾರ ತಪ್ಪಿದರೆ ಅದರ ವಿಮರ್ಶೆ ಕಠಿಣವಾಗಿಯೇ ಇರುತ್ತಿತ್ತು. ಹಾಗೆಯೇ ಯಾವ ಚೆಂದದ ಸಂಗತಿಯೂ ಗುರುಗಳ ಶ್ಲಾಘನೆಯನ್ನು ಪಡೆಯದೇ ಇರಲೂ ಸಾಧ್ಯವಿರಲಿಲ್ಲ. ಅವರೊಳಗೆ ಸದಾ ಸಕ್ರಿಯವಾಗಿರುವ ಶಾಂತತೆಯಲ್ಲಿ ದಿನಗಳು ತಮ್ಮ ಪರಿಧಿಗಳನ್ನು ಮರೆತು ಲೀನವಾದವು. ಅದೊಂದು ಶಾಶ್ವತ ಯೋಗಾತ್ಮಕ ಸ್ಥಿತಿ. ಸೂರ್ಯಾದಿ ನಕ್ಷತ್ರಗಳಂತೆ, ಅದ್ಯಾವುದೋ ನಿಯಮಕ್ಕೆ ಅಧೀನವಾದ ಬದುಕದು. ಅವರೊಳಗೆ ಪ್ರಜ್ವಲಿಸುತಿದ್ದದ್ದು ಬೆಳಕಿನ ಒಂದು ಅಗಾಧ ಪ್ರಭೆ. ಹೊರಜಗತ್ತಿನ ಅವರ ಕ್ರಿಯೆಗಳಲ್ಲಿ ಕಾಣಿಸುತಿದ್ದದ್ದು ಆ ಪ್ರಭೆಯ ಹೊರಾವರಣದ ನೆರಳು ಮಾತ್ರ.
ಇದರ ಅರ್ಥ ಅವರು ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಂಡಿರಲಿಲ್ಲ ಎಂದಲ್ಲ. ಪರಿಶ್ರಮವನ್ನು ಬೇಡುವ ಚಟುವಟಿಕೆಗಳು ಅವರು ಹಗಲು ರಾತ್ರಿಯೆನ್ನದೆ ತೊಡಗಿಸಿಕೊಂಡಿದ್ದ ಯೋಗಾಭ್ಯಾಸದ ಮತ್ತೊಂದು ಸ್ವರೂಪವೇ ಆಗಿತ್ತು. ಸದಾ ಎಚ್ಚರದಿಂದಿರುವ ಗುಣದಿಂದಾಗಿ ಇತರರು ಸಾಮಾನ್ಯವಾಗಿ ಮರೆತು ಬಿಡುವ ಕೆಲಸಗಳಲ್ಲಿ ಗುರುಗಳು ತೊಡಗಿಸಿಕೊಂಡಿರುತ್ತಿದ್ದರು. ಹಾಗೆ ನೋಡಿದರೆ ಅವರ ಹೆಚ್ಚಿನ ಸಮಯವನ್ನು ಇಂಥ ಕೆಲಸಗಳೇ ಆವರಿಸಿಕೊಂಡಿರುತ್ತಿದ್ದವು. ಬಿರುಮಳೆಯ ದಿನ ಹೆಚ್ಚಿನವರೆಲ್ಲಾ ಮನೆಯೊಳಗೇ ಇರಲು ಇಚ್ಛಿಸಿದರೆ ಗುರುಗಳು ಹೊರಬಂದು ಮಳೆ ನೀರು ಸುಲಲಿತವಾಗಿ ಹರಿದು ಹೋಗುವಂತೆ ಕಟ್ಟಿಕೊಂಡ ಕಾಲುವೆಗಳನ್ನು ಬಿಡಿಸುವ ಕೆಲಸದಲ್ಲಿ ತೊಡಗುತ್ತಿದ್ದರು. ಶಾಲಾ ಕಟ್ಟದ ನಿರ್ಮಾಣದ ಮೇಲ್ವಿಚಾರಕರು ಬಾರದಿದ್ದರೆ ಬಿರುಬಿಸಿಲನ್ನೂ ಲೆಕ್ಕಿಸದೆ ಕಲ್ಲುಗಳನ್ನು ಒಡೆದು ಕಾಮಗಾರಿಯ ಸ್ಥಳಕ್ಕೆ ಸಾಗಿಸುವ ಮೇಲ್ವಿಚಾರಣೆಗೆ ಗುರುಗಳಿರುತ್ತಿದ್ದರು. ಮರಮುಟ್ಟುಗಳನ್ನು ಸರಿಯಾಗಿಡಲು ಕೆಲಸಗಾರರು ಮರೆತಿದ್ದರೆ ಅದನ್ನು ಸರಿಪಡಿಸುವ ಕೆಲಸ ಗುರುಗಳಿಂದಲೇ ನಡೆಯುತ್ತಿತ್ತು. ಶಾರದಾ ಮಂದಿರದ ಆವರಣ ಗೋಡೆ ಪಾಚಿಗಟ್ಟದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತಿದ್ದ ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳಿಗೆ ಹಾಲುಬಾಯಿ ತಿನ್ನಿಸಲು ಗುರುಗಳೇ ಹಾಜರಿರುತ್ತಿದ್ದರು. ಹೀಗೆ ದೊಡ್ಡದೂ ಚಿಕ್ಕದೂ ಶ್ರಮದಾಯಕವೂ ಸುಲಭದ್ದೂ ಆದ ನಿತ್ಯದ ಚಟುವಟಿಕೆಗಳ ಸಹಜ ಹರಿವಿನಲ್ಲಿ ಉಪಸ್ಥಿತರಿರುತ್ತಿದ್ದ ಗುರುಗಳು ಆ ತಪೋವನದ ನಿತ್ಯದ ಬದುಕನ್ನು ಶಾಂತವಾಗಿ ಹೆಣೆಯುತ್ತಿದ್ದರು.
ಆಶ್ರಮವಾಸಿಗೆಳೆಲ್ಲರೂ ಸದಾ ದುಡಿಯುತ್ತಿರಬೇಕೆಂಬ ಭಾವ ಗುರುಗಳದ್ದಾಗಿರಲಿಲ್ಲ. ಏನಾದರೂ ಮಾಡದೆ ಸುಮ್ಮನಿರಲು ಮನುಷ್ಯ ಪ್ರಕೃತಿಗೆ ಸಾಧ್ಯವಿಲ್ಲ ಎಂಬುದು ಅವರ ನಿಲುವಾಗಿತ್ತು. ‘ನಮ್ಮ ಕೈ, ಕಾಲು ಮತ್ತು ಬೆರಳುಗಳು ಸದಾ ಕೆಲಸವನ್ನು ಕೇಳುತ್ತಿರುವಾಗ ನಮಗೇನು ಮಾಡಲು ಸಾಧ್ಯ? ಈ ಅಂಗಗಳೆಲ್ಲವೂ ದಣಿವರಿಯದ ಕುದುರೆಗಳಿದ್ದಂತೆ. ಅವುಗಳಿಗೆ ಕೆಲಸ ಕೊಡದಿದ್ದರೆ ನಾವು ಕಾಯಿಲೆ ಬೀಳುತ್ತೇವೆ’ ಎಂದವರು ಹೇಳುತ್ತಿದ್ದರು. ಹೀಗಾಗಿಯೇ ಅವರರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅಡುಗೆಯಿಂದ ತೊಡಗಿ ಬಟ್ಟೆತೊಳೆಯುವ ಕೆಲಸದ ಯಾವುದನ್ನೂ ಭಕ್ತರು ಮಾಡದಂತೆ ಕಟ್ಟುನಿಟ್ಟಾಗಿ ನಿರ್ಬಂಧಿಸಿದ್ದರು. ಗುರುಸೇವಾಕಾಂಕ್ಷಿ ಭಕ್ತರಿಂದ ತಪ್ಪಿಸಿಕೊಳ್ಳಲೋಸುಗ ಅವರು ಮೈಲುಗಟ್ಟಳೆ ನಡೆದದ್ದೂ ಇದೆ.
(ಮುಂದುವರಿಯುವುದು…)
ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/14/guru-56/


[…] ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2024/08/15/guru-57/ […]
LikeLike