ನಾರಾಯಣ ‘ಗುರು ಮಾರ್ಗ’: ತತ್ವ ಮತ್ತು ಆಚರಣೆ #2

ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್ಈ ಸರಣಿಯ 7ನೇ ಅಧ್ಯಾಯದ ಎರಡನೆಯ ಭಾಗ ಇಲ್ಲಿದೆ…

ಅಧ್ಯಾಯ 7.2

ಗುರುಗಳು ಪ್ರತಿನಿಧಿಸುತ್ತಿದ್ದ ತತ್ವಗಳಿಗೆ ತಮ್ಮನ್ನು ಅರ್ಪಿಸಿಕೊಂಡು, ಗುರುಗಳಂಥದ್ದೇ ಯುದ್ಧದಲ್ಲಿ ನಿರತರಾಗಿದ್ದವರು ಆಶ್ರಮಕ್ಕೆ ಬರುವುದಿತ್ತು. ಹೀಗೆ ಬಂದವರಲ್ಲಿ ಪ್ರಾಚೀನ ದೇಗುಲ ನಗರಿ ಮಧುರೈನವರಿದ್ದರು. ತಮ್ಮ ನಾಯಕನಿಂದ ಬೇರ್ಪಟ್ಟು ಅಸಮಾನತೆ ಮತ್ತು ಮೂಢನಂಬಿಕೆಯೆಂಬ ತಮಸ್ಸಿನ ವಿರುದ್ಧ ವಿಶಿಷ್ಟ ಬಗೆಯಲ್ಲಿ ನಿಧಾವಾಗಿಯಾದರೂ ವಿಜಯದತ್ತ ಸಾಗುತ್ತಿರುವ ಹೋರಾಟವನ್ನು ನಡೆಸುತ್ತಿದ್ದವರಿದ್ದರು. ದೂರದ ದ್ವೀಪ ಶ್ರೀಲಂಕಾ, ಕರಾವಳಿಯಲ್ಲಿದ್ದ ಕನ್ನಡ ಮಾತನಾಡುವ ಪ್ರದೇಶ ಮಂಗಳೂರಿನಿಂದ ಬಂದು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಗುರುಗಳ ಸಹಾಯ ಕೋರುವವರಿದ್ದರು. ಇನ್ನು ಕೆಲವರು ಕಾಶಿ, ಹರಿದ್ವಾರಗಳಂಥ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಫಲ ಪುಷ್ಪ ಪ್ರಸಾದಗಳೊಂದಿಗೆ ಬಂದು ಗುರುಗಳಿಗೆ ಅರ್ಪಿಸುತ್ತಿದ್ದರು. ಬಂದವರೆಲ್ಲರೂ ಗುರುಗಳ ಪದತಲದಲ್ಲಿದ್ದು ತಮ್ಮ ಹೋರಾಟಕ್ಕೆ ಅಗತ್ಯವಿರುವ ಚೈತನ್ಯವನ್ನಾರ್ಜಿಸಿ ತಮ್ಮ ಸಮರಭೂಮಿಗೆ ಮರಳುತ್ತಿದ್ದರು. ಆಶ್ರಮದ ವಾತಾವರಣದಲ್ಲೇ ಸಾಮರಸ್ಯದ ಚೈತನ್ಯ ತುಂಬಿತ್ತು. ನಿತ್ಯವೂ ವಿಸ್ತಾರಗೊಳ್ಳುತ್ತಿದ್ದ ಗುರುಗಳ ಆಧ್ಯಾತ್ಮಿಕ ಕುಟುಂಬದ ಹಿರಿಯ ಮತ್ತು ಕಿರಿಯ ಸದಸ್ಯರು ಆಶ್ರಮಕ್ಕೆ ನೀಡುತ್ತಿದ್ದ ಭೇಟಿಗಳು ಆಶ್ರಮವಾಸಿ ಶಿಷ್ಯರಿಗೆ ಹೊಸ ಅನುಭವನ್ನು ನೀಡುತ್ತಿದ್ದವು. ಗುರುಗಳು ತತ್ವ ಕೇಂದ್ರವಾಗಿದ್ದರೂ ಹೋರಾಟ ನಡೆಯುತ್ತಿದ್ದದ್ದು ಮಾತ್ರ ಅವರವರ ರಣರಂಗದಲ್ಲೇ. ಈ ದೃಷ್ಟಿಯಲ್ಲಿ ಗುರುಗಳು ನಿಸ್ಸಂಗಮೂರ್ತಿ.

ತಮ್ಮ ದಕ್ಷಿಣ ಭಾರತ ಪ್ರವಾಸದ ಸಂದರ್ಭದಲ್ಲಿ ರವೀಂದ್ರನಾಥ ಟ್ಯಾಗೋರ್ ಗುರುಗಳನ್ನು ಭೇಟಿಯಾಗಲು ಆಶ್ರಮಕ್ಕೆ ಬಂದರು. ಬಂಗಾಳದ ಮಹಾಕವಿಯ ಸ್ವಾಗತಕ್ಕಾಗಿ ಸ್ಥಳೀಯರು ಭಾರೀ ವ್ಯವಸ್ಥೆಯನ್ನೇ ಮಾಡಿದ್ದರು. ವಾದ್ಯಗೋಷ್ಠಿಯ ಜೊತೆಗೆ ಆನೆಗಳಿರುವ ಮೆರವಣಿಗೆಯಲ್ಲಿ ಅವರನ್ನು ಆಶ್ರಮದ ತನಕ ಕರೆತರುವ ತೀರ್ಮಾನವಾಗಿತ್ತು. ಸ್ವತಃ ಗುರುಗಳೇ ಆಸಕ್ತಿವಹಿಸಿ ಆಶ್ರಮದಲ್ಲಿದ್ದ ಅತ್ಯುತ್ತಮ ರತ್ನಗಂಬಳಿಗಳನ್ನು ಹೊರತೆಗೆಸಿ ಅದನ್ನು ಕವಿ ನಡೆಯುವ ಹಾದಿಗೆ ಹಾಸುವಂತೆ ನೋಡಿಕೊಂಡಿದ್ದರು. ಆಶ್ರಮವಾಸಿಗಳು ಮತ್ತು ಸ್ಥಳೀಯರೆಲ್ಲಾ ಅಲ್ಲಿ ಸೇರಿ ಗುರುಗಳು ಮತ್ತು ಶಾಂತಿನಿಕೇತನದ ಸಂನ್ಯಾಸಿಯ ಮಾತುಗಳನ್ನು ಆಲಿಸುವ ಆತುರದಲ್ಲಿದ್ದರು. ಅಲ್ಲಿದ್ದ ಪ್ರತಿಯೊಬ್ಬರೂ ತಾನು ಗುರುವೇ ಆರಿಸಿದ ಅನುಯಾಯಿ ಎಂದು ಭಾವಿಸಿದ್ದರು. ಹಾಗಾಗಿ ಅಲ್ಲಿದ್ದ ಚಿಕ್ಕ ಸ್ಥಳದಲ್ಲಿ ಮಾತುಕತೆಗೆ ಅನುವು ಮಾಡಿಕೊಡುವ ನಿಶ್ಶಬ್ದ ನೆಲೆಸಲು ಸ್ವಲ್ಪ ಸಮಯ ಬೇಕಾಯಿತು. ಇಬ್ಬರೂ ಪರಸ್ಪರ ಕೈಮುಗಿದು ವಂದಿಸಿಕೊಂಡು ಮುಖಾಮುಖಿಯಾಗಿ ಕುಳಿತರು. ಬಂಗಾಳದ ಕವಿ ಸಂನ್ಯಾಸಿ ಮೊದಲಿಗೆ ಮೌನ ಮುರಿದು ‘ನೀವು ಮಾಡುತ್ತಿರುವ ಕೆಲಸ ಬಹಳ ಬಹಳ ದೊಡ್ಡದು’ ಎಂದು ಗುರುಗಳನ್ನು ಅಭಿನಂದಿಸಿದರು.

ಗುರುಗಳ ಪ್ರತಿಕ್ರಿಯೆ ಅನಿರೀಕ್ಷಿತವೂ ಆಶ್ಚರ್ಯ ಹುಟ್ಟಿಸುವಂಥದ್ದಾಗಿತ್ತು. ‘ಈ ಹಿಂದೆ ನಮಗೇನೂ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಏನು ಮಾಡಲೂ ಸಾಧ್ಯವಿಲ್ಲ. ಈ ಅಸಹಾಯಕತೆ ನಮ್ಮೊಳಗೆ ದುಃಖ ತುಂಬಿದೆ’. ಈ ಮಾತುಗಳು ಹಲವರಲ್ಲಿ ನಿಗೂಢತೆಯನ್ನು ಧ್ವನಿಸಿತು; ಮತ್ತೆ ಕೆಲವರಿಗೆ ಗುರುಗಳು ಹಾಸ್ಯ ಮಾಡುತ್ತಿದ್ದಾರೆಂಬ ಭಾವವನ್ನು ಹುಟ್ಟಿಸಿತು. ಇವುಗಳ ಮಧ್ಯೆಯೇ ಕೆಲವರು ಆ ಮಾತಿನ ತರ್ಕದ ಶೋಧನೆಯಲ್ಲಿ ತೊಡಗಿದರು.  ಗುರುಗಳ ಅನಿರೀಕ್ಷಿತ ಪ್ರತಿಕ್ರಿಯೆಯ ನಂತರ ವಾತಾವರಣದಲ್ಲಿ ಒಂದು ಮೌನವಿತ್ತು.  ಸುತ್ತಲೂ ಇದ್ದವರು ಪರಸ್ಪರರನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿ ಗುರುವಚನದ ಅರ್ಥ ಹುಡುಕಿದರು. ಗುರುಗಳ ಮುಖಭಾವವೇ ಅವರ ಮಾತುಗಳಿಗೆ ಮೌನ ವ್ಯಾಖ್ಯಾನವನ್ನು ನೀಡುತ್ತಿತ್ತು. ಅವರ ಭಾವದಲ್ಲೊಂದು ಆಳವಾದ ಮೌನವೂ ಶ್ರದ್ದೆಯೂ ಮನೆಮಾಡಿತ್ತು. ಆ ಮೌನದಲ್ಲೇ ಸರ್ವರ ಸಂಶಯಗಳೂ ಕರಗಿದವು. ಎಲ್ಲರೂ ಸಮಾನ ಮೌನದಲ್ಲಿ ಮಿಂದೇಳುವುದರ ಜೊತೆಗೆ ಭೇಟಿಯು ಕೊನೆಗೊಂಡಿತ್ತು.

ಗುರುಗಳಿಗೆ ವಿದಾಯ ಹೇಳಿ ಮಹಾಕವಿ ಹೊರಟರು. ಅದರ ಜೊತೆಗೆ ಆಶ್ರಮದಲ್ಲಿ ಸೇರಿದ್ದ ಜನಸಮೂಹವೂ ವಿಸರ್ಜನೆಗೊಂಡಿತು.

ಗುರುಗಳು ಪ್ರತಿಪಾದಿಸುತ್ತಾ ಬಂದ ‘ಅನುತ್ಪಾದಕ ತತ್ವ’ ಸಾರ್ವತ್ರಿಕವಾಗಿ ಪಕ್ವಗೊಂಡು ಫಲನೀಡಲಾರಂಭಿಸಿತು. ಕೆಲವು ಗುರುಗಳ ಸಂದೇಶದ ಕಾಲೋಚಿತ ಅಭಿವ್ಯಕ್ತಿಗಳಷ್ಟೇ ಆಗಿ ತಾತ್ಕಾಲಿಕವಾದ ಫಲವನ್ನು ನೀಡಿದವು.  ಇನ್ನು ಕೆಲವು ಕಾಲಚಕ್ರದ ಆವರ್ತನದ ಮಿತಿಯನ್ನು ಮೀರಿ ನಿರಂತರತೆಯನ್ನು ಕಾಯ್ದುಕೊಂಡವು. ಗುರುಗಳ ಹೆಸರಿನಲ್ಲಿ ಆರಂಭಗೊಂಡ ವಾಚನಾಲಯಗಳು ಆಧ್ಯಾತ್ಮಿಕ ಕೇಂದ್ರಗಳಾಗಿ ಬೆಳೆದವು. ಈ ಕೇಂದ್ರಗಳ ಸುತ್ತಲೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳಿಗೆ ಹೇತುವಾಗಬಲ್ಲ ಸಂಸ್ಥೆಗಳು ಬೆಳೆದವು. ಇವುಗಳಿಗೆ ಉಸಿರಾಗಿದ್ದವರೆಲ್ಲಾ ಸಾಮಾನ್ಯರಲ್ಲಿ ಸಾಮಾನ್ಯರು. ಹೀಗೆ ಹೊಸತಾಗಿ ಮೊಳಕೆಯೊಡೆದ ಪ್ರತೀ ಸಂಸ್ಥೆಯ ಹಿಂದೆಯೂ ಇದ್ದದ್ದು ಸಾಮಾನ್ಯ ಜನರು. ಅವರೆಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಗುರುಗಳ ಮಾಂತ್ರಿಕ ಸ್ಪರ್ಶವನ್ನು ಅನುಭವಿಸಿದವರು. ಅದೇ ಅವರ ನಿರಂತರ ಶ್ರಮ ಮತ್ತು ತ್ಯಾಗಕ್ಕೆ ಕಾರಣವಾಗಿತ್ತು. ಅವರು ಗುರುಗಳ ಚಿತ್ರವನ್ನು ಮುಂದಿಟ್ಟು ಮೆರವಣಿಗೆಗಳನ್ನು ಸಂಘಟಿಸಿದರು. ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಭಾಗವಹಿಸುವಂಥ ಸಮಾವೇಶಗಳನ್ನು ಸಂಘಟಿಸಿ ಗುರುಗಳು ಪ್ರತಿಪಾದಿಸುವ ಪ್ರಗತಿಯ ದಿಕ್ಕುಗಳನ್ನು ಅನ್ವೇಷಿಸಿದರು. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದವರು ಬಹಬೇಗ ತಮ್ಮ ನಾಯಕರ ಕರೆಗಳಿಗೆ ಸ್ಪಂದಿಸಿ ಸಂಘಟಿತರಾದರು. ಇಂಥ ಅನೇಕ ಸಂಘಟನೆಗಳು ತಿರುವಿದಾಂಕೂರು, ಕೊಚಿ್ಚ, ಮಲಬಾರ್ ಪ್ರಾಂತ್ಯಗಳಲ್ಲಿ ಬಹುಬೇಗ ನೆಲೆಗೊಂಡವು. ಮುಂದೆ ಇವುಗಳು ಶ್ರೀಲಂಕಾ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗೂ ವಿಸ್ತರಿಸಿದವು.

ಗುರುಗಳ ತತ್ವವನ್ನು ಆಧಾರವಾಗಿಟ್ಟುಕೊಂಡ ಶಾಶ್ವತ ಸ್ವರೂಪದ ಸಂಸ್ಥೆಗಳಲ್ಲಿ ಪ್ರಮುಖವಾದುದು ಅರುವಿಪ್ಪುರದ ಶಿವ ದೇಗುಲದ ನಿರ್ವಹಣೆಗಾಗಿ ಹುಟ್ಟಿಕೊಂಡ ಸಂಘಟನೆ. ಇದರ ವಾರ್ಷಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಗುರುಗಳು ಸುಮಾರು ಮೂವತ್ತು ವರ್ಷಗಳ ಕಾಲ ಅದರ ಬೆಳವಣಿಗೆಯ ಗತಿಯನ್ನು ನಿರ್ದೇಶಿಸುತ್ತಿದ್ದರು. ಕೆಲವೊಮ್ಮೆ ಅವರು ಈ ಸಂಘಟನೆಯ ಪದಾಧಿಕಾರಿಗಳ ಜೊತೆ ಭಿನ್ನಮತವನ್ನು ವ್ಯಕ್ತಪಡಿಸಿ ಪ್ರತಿಭಟಿಸಿದ್ದೂ ಇದೆ. ಹಾಗಯೇ ಮತ್ತೆ ಅವರ ಆಹ್ವಾನವನ್ನು ಒಪ್ಪಿ ಅವರ ಪ್ರಯತ್ನಗಳನ್ನು ಆಶೀರ್ವದಿಸಿದ್ದಾರೆ. ಈ ಸಂಘಟನೆಯ ಸದಸ್ಯತ್ವ ಎರಡಂಕೆಗಳಿಂದ ಆರಂಕೆಗೆ ಏರಿತು.

ತಕ್ಷಣಕ್ಕೆ ಆಕರ್ಷಣೀಯವೆನಿಸುವ ಸ್ವರೂಪದಲ್ಲಿ ಕೆಲಸ ಮಾಡಿ ಜನರನ್ನು ಸೆಳೆಯು ಬೃಹತ್ ಸಂಘಟನೆಗಳಲ್ಲಿ ಗುರುಗಳಿಗೆ ಅಷ್ಟೇನೂ ನಂಬಿಕೆಯಿರಲಿಲ್ಲ. ಆದರೆ ಸಾಮಾಜಿಕವಾಗಿ ಶೋಷಣೆಗೊಳಗಾಗಿ ಧ್ವನಿ ಎತ್ತಲಾಗದ ಸ್ಥಿತಿಯಲ್ಲಿರುವವರ ಹಕ್ಕುಗಳ ರಕ್ಷಣೆಯಲ್ಲಿ ಈ ಬೃಹತ್ ಸಂಘಟನೆಗಿರುವ ಶಕ್ತಿಯನ್ನು ಅವರು ಗುರುತಿಸಿದ್ದರು. ಈ ಸಂಘಟನೆಯ ಮೂಲಕ ಹಲವು ಪ್ರಯೋಜನಗಳೂ ಜನರಿಗಾಗಿವೆ. ಇದು ಶ್ರೀನಾರಾಯಣ ಧರ್ಮಪರಿಪಾಲನ ಯೋಗಂ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಗುರುಗಳ ತಾತ್ವಿಕತೆ ಒಂದು ಮಹಾಸಾಗರ. ಅದರ ಅಲೆಗಳು ನಿರಂತರವಾಗಿ ಅಪ್ಪಳಿಸುತ್ತಿರುವ ಕಠಿಣವಾದ ಕಲ್ಲುಬಂಡೆಗಳಿಂದ ತುಂಬಿರುವ ತೀರವೇ ಸಾವಿರಾರು ವರ್ಷಗಳ ಗೊಡ್ಡು ಸಂಪ್ರದಾಯಗಳಿಂದ ಜಡ್ಡುಗಟ್ಟಿರುವ ‘ಪಾರಂಪರಿಕ’ ಬದುಕು. ನಿಜವಾದ ಸಂಘರ್ಷ ನಡೆಯುತ್ತಿದ್ದದ್ದೇ ಇಲ್ಲಿ. ಹೋರಾಟವು ಮುನ್ನೇರುತ್ತಿದ್ದದ್ದೂ ಮತ್ತೆ ಹಿಂದೆ ಸರಿಯುತ್ತಿದ್ದದ್ದೂ ಇಲ್ಲಿಯೇ. ಪ್ರತಿಭಟನೆಯ ಅಲೆಗಳ ನಿರಂತರತೆಯ ನಡುವೆಯೇ ನಾಯಕರು ಆವಿರ್ಭವಿಸಿ ಬಂದು ಅಗತ್ಯದ ಕ್ಷಣಕ್ಕೆ ನೇತೃತ್ವ ವಹಿಸುತ್ತಿದ್ದರು. ಅವರು ವಿವಾದಗಳ ಬಿರುಗಾಳಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕ ಸಭೆ ಮತ್ತು ಪ್ರತಿಭಟನಾ ಪ್ರದರ್ಶನಗಳಲ್ಲಿ ನಂಬಿಕೆಯಿಟ್ಟಿದ್ದ ಅವರು ತಮ್ಮ ಗೆಲುವಿಗಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವಂತೆಯೇ ತಾತ್ಕಾಲಿಕ ರಾಜಿಗಳಿಗೂ ಸಿದ್ಧರಿದ್ದರು. ಈ ಎಲ್ಲಾ ಬೆಳವಣಿಗೆಗಳು ಹೊಸ ಆದರ್ಶಗಳ ಬಗ್ಗೆ ಗಾಢವಾಗಿ ಚಿಂತಿಸಲು ಯುವ ಉತ್ಸಾಹಿಗಳನ್ನು ಪ್ರೇರೇಪಿಸಿತು. ಪರಿಣಾಮವಾಗಿ ಅವರು ಹೋರಾಟ ಸಾಗರದ ಭಾಗವಾದರು. ಭಿನ್ನ ಹಂತದ ನಾಯಕತ್ವಗಳು ಅವರಿಗೂ ದೊರೆತವು. ತಮಗೆ ದೊರೆತ ನಾಯಕತ್ವವು ಗುರುಗಳ ಆಶೀರ್ವಾದದ ಫಲವೆಂದು ಭಾವಿಸಿದ ಅವರು ನೈತಿಕ ಮತ್ತು ಬೌದ್ಧಿಕ ಮಾರ್ಗದರ್ಶನಕ್ಕಾಗಿ ಗುರು ಸನ್ನಿಧಿಗೆ ಬರುತ್ತಿದ್ದರು. ಸಂದರ್ಭಕ್ಕೆ ಅನುಸಾರವಾಗಿ ಅವರನ್ನು ಪ್ರೋತ್ಸಾಹಿಸುತ್ತಲೂ ವಿಮರ್ಶಿಸುತ್ತಲೂ ಕಟಕಿಯಾಡುತ್ತಲೂ ಗುರುಗಳವರನ್ನು ಪಾಲಿಸಿದರು.

ಈ ಹೊತ್ತಿಗೆ ಗುರುಗಳು ಯಾರಿಂದಲೂ ನಿರ್ಲಕ್ಷಿಸಲಾಗದ ಸಾಮಾಜಿಕ ಶಕ್ತಿಯಾಗಿ ರೂಪುಗೊಂಡಿದ್ದರು. ಸಂಪ್ರದಾಯಗಳನ್ನು ಬದಲಾಯಿಸಲು ಬೇಕಾದ ಆದೇಶ ನೀಡಲು ಅವರಿಗೆ ಸಾಧ್ಯವಿತ್ತು. ಮದುವೆ ಅಥವಾ ಅಂತ್ಯಸಂಸ್ಕಾರದ ವಿಧಿಗಳಲ್ಲಿ ಅವರು ಸೂಚಿಸಿದ ಬದಲಾವಣೆಗಳನ್ನು ಜನರು ಒಪ್ಪಿಕೊಂಡರು. ಮೊದಮೊದಲಿಗೆ ಭಿನ್ನಮತ ಮತ್ತು ಪ್ರತಿರೋಧಗಳು ಪಿಸುಧ್ವನಿಯಲ್ಲಿ ಕೇಳಿಸಿದವಾದರೂ ಅವು ಸತ್ಯ ಮತ್ತು ನ್ಯಾಯದ ಸ್ಪಷ್ಟ ಧ್ವನಿಯೆದುರು ಮಹತ್ವ ಕಳೆದುಕೊಂಡವು. ಕ್ರಮೇಣ ಸುಧಾರಣೆಗಿದ್ದ ಪ್ರತಿರೋಧ ಇಲ್ಲವಾಗಿ ಗುರುಗಳ ಹೃದಯದಲ್ಲಿ ಜ್ವಲಿಸುತ್ತಿದ್ದ ತತ್ವವೇ ಮೌನ ವಿಜಯ ಸಾಧಿಸಿತು.

(ಮುಂದುವರಿಯುವುದು…)


ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2024/08/15/guru-57/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.