ಪ್ರೇಮ ಗೀತೆ ಬರೆದ ಕವಿ ಅದನ್ನು ಪರಿಚಿತರಿಗೆಲ್ಲ ಕಳಿಸಿ ಫಜೀತಿಗೆ ಸಿಕ್ಕ ಕತೆ ಇಲ್ಲಿದೆ… । ಮೂಲ: ಖಲೀಲ್ ಗಿಬ್ರಾನನ ‘ಅಲೆಮಾರಿ’ ಕೃತಿ; ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಕವಿಯೊಬ್ಬ ಪ್ರೇಮ ಗೀತೆ ಬರೆದ. ತುಂಬ ಸುಂದರವಾಗಿತ್ತು. ಕವಿತೆಯನ್ನು ಹಲವು ಪ್ರತಿ ಮಾಡಿಸಿ ಗೆಳೆಯರಿಗೆ, ಗುರುತಿನವರಿಗೆ ಕಳಿಸಿದ. ಹಾಗೆ ಕಳಿಸಿದವರಲ್ಲಿ ಅವನು ಒಮ್ಮೆ ಮಾತ್ರ ಭೇಟಿಯಾಗಿದ್ದ ಹುಡುಗಿಯೂ ಇದ್ದಳು. ಅವಳು ಬೆಟ್ಟಸಾಲಿನ ಆಚೆಗೆ ಇದ್ದ ಊರಿನವಳು.
ಒಂದೆರಡು ದಿನ ಕಳೆಯುವುದರೊಳಗೆ ಆ ಹುಡುಗಿ ಬರೆದ ಪತ್ರವನ್ನು ಯಾರೋ ಒಬ್ಬ ತಂದುಕೊಟ್ಟ. ‘ನಿಜ ಹೇಳತೇನೆ, ನನಗಾಗಿ ನೀನು ಬರೆದ ಪ್ರೀತಿಯ ಹಾಡು ನನ್ನ ಮನಸನ್ನು ಮುಟ್ಟಿದೆ. ನಮ್ಮ ಮನೆಗೆ ಬಾ. ಅಪ್ಪ ಅಮ್ಮರನ್ನು ಭೇಟಿ ಮಾಡು. ಮದುವೆ ಮಾಡಿಕೋ ನನ್ನ,’ ಅಂತ ಹುಡುಗಿ ಬರೆದಿದ್ದಳು.
ಕವಿ ಉತ್ತರ ಬರೆದ. ‘ಪ್ರಿಯ ಗೆಳತೀ, ಅದು ಕವಿಯ ಹೃದಯದಲಿದ್ದ ಪ್ರೀತಿಯ ಹಾಡು. ಯಾವ ಗಂಡೂ ಯಾವ ಹೆಣ್ಣನ್ನಾದರೂ ಪ್ರೀತಿಸಿ ಹೇಳಬಹುದಾದ ಹಾಡು ಅದು,’ ಅಂತ ಬರೆದ.
‘ಸುಳ್ಳುಗಾರ, ಮೋಸಗಾರ ನೀನು. ಇವತ್ತೇ ಕೊನೆ. ನಾನು ಮಣ್ಣಾಗುವವರೆಗೆ ಯಾವ ಕವಿಯನ್ನೂ ನಂಬಲ್ಲ. ಇದಕ್ಕೆ ನೀನೇ ಕಾರಣ,’ ಅಂತ ಉತ್ತರ ಬರೆದು ಕಳಿಸಿದಳು ಅವಳು!
ಹಿಂದಿನ ವಾರದ ಕತೆ ಇಲ್ಲಿದೆ: https://aralimara.com/2024/08/11/alemari-2/

