ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 7ನೇ ಅಧ್ಯಾಯದ ಕೊನೆಯ ಭಾಗ ಇಲ್ಲಿದೆ…
ಅಧ್ಯಾಯ 7.4
ಮಹಾತ್ಮರ ಸಲಹೆಯಂತೆ ತಿರುವಿದಾಂಕೂರು ಸಂಸ್ಥಾನದ ವೈಕಂ ಎಂಬ ಪಟ್ಟಣದಲ್ಲಿದ್ದ ಪ್ರಾಚೀನ ದೇಗುಲದ ಬಳಿ ಸತ್ಯಾಗ್ರಹ ಶಿಬಿರವನ್ನು ಸ್ಥಾಪಿಸಲಾಯಿತು. ಜಾತಿಯ ಕಾರಣಕ್ಕೆ ಎದುರಿಸಬೇಕಾಗಿದ್ದ ಅನ್ಯಾಯದ ತೀವ್ರತೆ ಇಲ್ಲಿ ಹೆಚ್ಚು ಅನುಭವಕ್ಕೆ ಬರುತ್ತಿತ್ತು. ದಕ್ಷಿಣ ಭಾರತದ ವಿವಿಧೆಡೆಗಳಿಂದ ಸತ್ಯಾಗ್ರಹಿಗಳು ಬಂದರು. ಅಹಮದಾಬಾದ್‌ನಲ್ಲಿದ್ದ ಮಹಾತ್ಮ ಗಾಂಧಿಯವರು ನಿರಂತರವಾಗಿ ನಿರ್ದೇಶನಗಳನ್ನು ನೀಡುತ್ತಿದ್ದರು. ವೈಕಂನಲ್ಲಿದ್ದ ಗುರುಗಳಿಗೆ ಸೇರಿದ ಜಮೀನು ಮತ್ತು ಕೇಂದ್ರವನ್ನು ಸತ್ಯಾಗ್ರಹ ಸಮಿತಿಯ ನಿಯಂತ್ರಣಕ್ಕೆ ನೀಡಲಾಗಿತ್ತು. ಗುರುಗಳ ಅನುಯಾಯಿಗಳು ಈ ಹೋರಾಟಕ್ಕೆ ಬೇಕಿರುವ ಜನಸಂಪನ್ಮೂಲವನ್ನು ಪೂರೈಸಿದರು. ಸ್ವತಃ ಗುರುಗಳೇ ಸತ್ಯಾಗ್ರಹ ಶಿಬಿರಕ್ಕೆ ಬಂದು ಹೋರಾಟಗಾರರನ್ನು ಆಶೀರ್ವದಿಸಿದರು. ಆದರೆ ತಮಗೆ ಸಹಜವಾಗಿದ್ದ ಸಂನ್ಯಾಸಿಯ ನಿರ್ಲಿಪ್ತತೆಯನ್ನು ತೊರೆಯಲಿಲ್ಲ
ಭಾರತದ ಬೇರೆ ಬೇರೆ ಪ್ರದೇಶಗಳಿಂದ ಜನರು ಬಂದರು, ಹಾಗೆಯೇ ಹೋರಾಟದ ಖರ್ಚಿಗೆ ಬೇಕಾದ ಹಣವೂ ಬಂತು. ಬಹುಕಾಲದಿಂದ ಅವಡುಗಚ್ಚಿ ಸಹಿಸಿಕೊಂಡಿದ್ದ ಆಕ್ರೋಶವು ಮೊಟ್ಟ ಮೊದಲಬಾರಿಗೆ ಅಭಿವ್ಯಕ್ತಿಗೊಳ್ಳುತ್ತಿತ್ತು. ಬಹುಬೇಗ ಅದು ತೀವ್ರಸ್ವರೂಪವನ್ನು ಪಡೆದುಕೊಂಡಿತು.. ತಿರುವಿದಾಂಕೂರು ಸಂಸ್ಥಾನದ ಆಡಳಿತವು ಮೇಲ್ಜಾತಿಗಳಿಗಾಗಿ ಮೀಸಲಿರಿಸಿದ್ದ ರಸ್ತೆಯನ್ನು ಪ್ರವೇಶಿಸುವುದು ಸತ್ಯಾಗ್ರಹಿಗಳ ಉದ್ದೇಶವಾಗಿತ್ತು. ಪ್ರತಿಭಟನಕಾರರು ಈ ರಸ್ತೆಗೆ ಕಾಲಿಡದಂತೆ ನೋಡಿಕೊಳ್ಳಲು ಸರ್ಕಾರ ದೊಡ್ಡದೊಂದು ಪೊಲೀಸ್ ಪಡೆಯನ್ನೇ ನಿಯೋಜಿಸಿತ್ತು. ಸತ್ಯಾಗ್ರಹಿಗಳು ತಂಡಗಳಾಗಿ ಬಂದು ಪೊಲೀಸರಿಗೆ ಮುಖಾಮುಖಿಯಾಗುತ್ತಿದ್ದರು. ಯಾವುದೇ ರೀತಿಯ ಪ್ರತಿದಾಳಿಗಳನ್ನು ನಡೆಸದೆ ಎಲ್ಲಾ ಹಿಂಸೆಗಳನ್ನು ಸಹಿಸಿಕೊಂಡು ಸತ್ಯಾಗ್ರಹಿಗಳ ಹೋರಾಟ ಮುಂದುವರಿಯಿತು. ಬಿಸಿಲ ಝಳ ಮತ್ತು ಮಳೆಯ ಆರ್ಭಟಗಳ್ಯಾವುದೂ ಸತ್ಯಾಗ್ರಹಿಗಳನ್ನು ಕದಲಿಸಲಿಲ್ಲ. ಸಂಪ್ರದಾಯವಾದಿಗಳ ಮನಸ್ಸು ಬದಲಾಗಬಹುದೆಂದು ಅವರು ಸಹನೆಯಿಂದ ಕಾಯುತ್ತಿರುವಾಗಲೇ ತಿಂಗಳುಗಳು ಉರುಳಿದವು. ದಿನದಿಂದ ದಿನಕ್ಕೆ ಸತ್ಯಾಗ್ರಹಿಗಳ ಪರವಾಗಿ ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳುತ್ತಾ ಹೋದಂತೆ ಉದ್ವಿಗ್ನತೆಯೂ ಹೆಚ್ಚಾಯಿತು. ಆಡಳಿತಾರೂಢರು ಚಳವಳಿಯನ್ನು ಹಣಿಯುವ ಪ್ರಕ್ರಿಯೆಯನ್ನು ಹೆಚ್ಚು ತೀವ್ರಗೊಳಿಸಿದರು.
ಕೊನೆಗೆ ಸ್ವತಃ ಮಹಾತ್ಮಾ ಗಾಂಧಿಯೇ ರಂಗಕ್ಕಿಳಿದರು. ತಿರುವಿದಾಂಕೂರಿಗೆ ಬಂದಿಳಿದ ಅವರು ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಸಂಬಂಧಪಟ್ಟ ಎಲ್ಲರೊಂದಿಗೂ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಗುರುಗಳ ಜೊತೆ ಮಾತನಾಡಲು ವರ್ಕಲದ ಆಶ್ರಮಕ್ಕೆ ಗಾಂಧೀಜಿ ಬಂದರು. ಹೀಗೆ ವರ್ಕಲದ ಮೌನ ಸಂನ್ಯಾಸಿ ಮತ್ತು ಸಾಬರಮತಿಯ ಇತಿಹಾಸ ಪುರುಷನ ಮೊದಲ ಭೇಟಿ ನಡೆಯಿತು.
ಜನರನ್ನು ಆಧ್ಯಾತ್ಮಿಕರನ್ನಾಗಿಸುವ ರಾಜಕೀಯ ಆದರ್ಶವೊಂದರ ಮೂಲಕ ಆರಂಭಗೊಂಡ ಸುಧಾರಣಾ ಮಾದರಿಯನ್ನು ಗಾಂಧೀಜಿ ಪ್ರತಿನಿಧಿಸುತ್ತಿದ್ದರು. ಸತ್ಯಾಗ್ರಹ ಎಂಬುದು ಜನಸಮೂಹದ ಆತ್ಮಶುದ್ಧಿಯ ಮಾರ್ಗ ಎಂಬುದು ಅವರ ನಂಬಿಕೆ. ಸಹಜವಾಗಿಯೇ ಸತ್ಯಾಗ್ರಹ ಮಾರ್ಗವನ್ನು ಅನುಸರಿಸಲು ಅವರು ಜನರನ್ನು ಆಹ್ವಾನಿಸುತ್ತಿದ್ದರು. ಜನಸಾಮಾನ್ಯರ ಕಲ್ಯಾಣವನ್ನು ಸಾಧಿಸಬೇಕೆಂಬ ಅಭಿಲಾಷೆ ಅವರನ್ನು ರಾತ್ರಿ-ಹಗಲೆನ್ನದೆ ಕಾಡುತ್ತಿತ್ತು. ಈ ಕೆಲಸಕ್ಕಾಗಿ ತಮ್ಮ ಕೃಶ ಶರೀರದಲ್ಲಿದ್ದ ಸರ್ವಶಕ್ತಿಯನ್ನೂ ಅವರು ಧಾರೆಯೆರೆದು ಶ್ರಮಿಸುತ್ತಿದ್ದರು. ತಮ್ಮ ಯೋಜನೆಗಳು ಫಲಿತಾಂಶ ನೀಡದೆ ವಿಫಲವಾದಾಗ ಅದರ ಸಂಪೂರ್ಣ ಹೊಣೆಯನ್ನು ತಾವೇ ಹೊತ್ತುಕೊಂಡು ಸಾರ್ವಜನಿಕವಾಗಿ ಪಶ್ಚಾತ್ತಾಪ ಪಡುತ್ತಿದ್ದರಷ್ಟೇ ಅಲ್ಲದೆ ದೈವ ಕರುಣೆಗಾಗಿ ಪ್ರಾರ್ಥಿಸುತ್ತಿದ್ದರು.

ಗುರುಗಳ ಮಟ್ಟಿಗೆ ತಾತ್ವಿಕ ನಿರಂತರತೆ ಎಂಬುದು ನಿರ್ದಿಷ್ಟ ಸಂದರ್ಭಕ್ಕೆ ಸಿದ್ಧಾಂತ ಅಥವಾ ವಿಧಾನವೊಂದನ್ನು ಅನ್ವಯಿಸಿ ಪರೀಕ್ಷಿಸುವುದಕ್ಕಿಂತ ಮುಖ್ಯವಾದುದಾಗಿತ್ತು. ನಿಯಮಗಳು ಸದ್ಯದ ಅಗತ್ಯಗಳನ್ನು ಪೂರೈಸಿರಬಹುದು. ಆದರೆ ಕಾಲದ ಬದಲಾವಣೆಯ ಜೊತೆಗೆ ಅವು ಬದಲಾಗಬೇಕೆಂಬುದು ಅವರ ಆಶಯ. ಪ್ರತಿಯೊಂದು ಸಂದರ್ಭವೂ ವಿಶಿಷ್ಟ. ಆದ್ದರಿಂದ ಆಯಾ ಸಂದರ್ಭದ ಬಿಕ್ಕಟ್ಟುಗಳಿಗೆ ಅದರದ್ದೇ ಆದ ಪರಿಹಾರಗಳನ್ನೂ ಕಂಡುಕೊಳ್ಳಬೇಕಾಗುತ್ತದೆಯೇ ಹೊರತು ಎಲ್ಲದಕ್ಕೂ ಅನ್ವಯಿಸಬಹುದಾದ ಏಕ ಪರಿಹಾರವಿಲ್ಲ. ಮನಸ್ಸನ್ನು ಎಲ್ಲಾ ನಿಯಂತ್ರಣಗಳಿಂದ ಮುಕ್ತಗೊಳಿಸಿದರೆ ಅದು ತನ್ನೆದುರು ಇರುವ ಬಿಕ್ಕಟ್ಟಿನ ವ್ಯೂಹವನ್ನು ಭೇದಿಸಿ ಮುಂದೆ ಸಾಗುತ್ತದೆ. ಪರಿಹಾರಕ್ಕೆ ಅಗತ್ಯವಿರುವುದು ಓರೆಕೋರೆಗಳು ಮತ್ತು ತಿರುವುಗಳನ್ನು ನಿರ್ವಹಿಸುವ ಚಾತುರ್ಯ. ಸರಳರೇಖಾತ್ಮಕವಾದ ನಿಯಮಗಳು ನಮ್ಯತೆಯನ್ನು ಬೇಡುವ ಪರಿಹಾರಕ್ಕೆ ಅಡ್ಡಿಯಾಗಿ ಪರಿಣಮಿಸುತ್ತವೆ.
ಗುರುಗಳು ಎರಡು ಬಗೆಯ ಚಿಂತನಾ ಮಾದರಿಗಳಿಗೆ ಒತ್ತು ನೀಡುತ್ತಿದ್ದರು. ಮೊದಲನೆಯದ್ದು ನಿತ್ಯ ಪ್ರಪಂಚದ ವಾಸ್ತವಗಳು. ಇದನ್ನು ಲೌಕಿಕವಾದ ಚಿಂತನಾ ಮಾದರಿ ಎಂದು ಕರೆಯಬಹುದು. ಎರಡನೆಯದ್ದು ಸಾಮಾನ್ಯ ಗ್ರಹಿಕೆಯ ವಾಸ್ತವವನ್ನು ಮೀರಿದ್ದು. ಇದನ್ನು ಪಾರಮಾರ್ಥಿಕ ಚಿಂತನಾ ಮಾದರಿ ಎಂದು ಕರೆಯಬಹುದು. ಲೌಕಿಕವಾದ ನಿತ್ಯದ ಸಮಸ್ಯೆಗಳ ಪರಿಹಾರಕ್ಕೆ ಯಾವುದಾದರೊಂದು ವಿಶೇಷ ತಾತ್ವಿಕತೆಯನ್ನು ಎಳೆದು ತರುವುದು ಅಥವಾ ನಿರ್ದಿಷ್ಟ ನಿಲುವನ್ನು ಮಂಡಿಸುವಂಥ ಕೆಲಸಕ್ಕೆ ಗುರುಗಳು ಯಾವತ್ತೂ ಮುಂದಾಗುತ್ತಿರಲಿಲ್ಲ. ತಾತ್ಕಾಲಿಕ ಪರಿಹಾರಗಳಾಗಿ ರೂಪಿಸಿಕೊಂಡ ಆಚಾರಗಳು ಮತ್ತು ನಿಯಮಗಳನ್ನು ಅವು ಪ್ರಸ್ತುತತೆಯನ್ನು ಕಳೆದುಕೊಂಡ ನಂತರವೂ ಉಳಿಸಿಕೊಂಡದ್ದರ ಪರಿಣಾಮವೇ ಈಗಿನ ಸಮಸ್ಯೆಗಳು. ಅಪ್ರಸ್ತುತವಾದ ಆ ನಿಯಮಗಳೀಗ ಮಾನವನ ಆಲೋಚನಾ ಶಕ್ತಿಯನ್ನೇ ಕುಂದಿಸಿ ನಿಯಂತ್ರಿಸುವ ಅನಾಚಾರ ಮತ್ತು ಮೂಢನಂಬಿಕೆಗಳಾಗಿ ಪರಿಣಮಿಸಿವೆ. ಜನರೇ ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಸಮಸ್ಯೆಗಳನ್ನು ಎದುರಿಸುವಾಗ ಎಲ್ಲರಿಗೂ ಅನುಸರಿಸಲು ಸಾಧ್ಯವಿರುವ ಮಾರ್ಗವೊಂದನ್ನು ಬಳಸಬೇಕು. ಬದಲಿಗೆ ನಿರ್ದಿಷ್ಟ ತಾತ್ವಿಕ ಚೌಕಟ್ಟನ್ನು ಆಧಾರವಾಗಿಟ್ಟುಕೊಂಡ ಮಾರ್ಗವನ್ನೇ ಅನುಸರಿಸಬೇಕೆಂಬ ಹಟ ಸಲ್ಲದು ಎಂಬುದು ನಾರಾಯಣ ಗುರುಗಳ ನಿಲುವಾಗಿತ್ತು.
ತಮ್ಮ ಸತ್ಯಾಗ್ರಹ ಮಾರ್ಗ ಮತ್ತು ಆತ್ಮಶಕ್ತಿಯ ತಾತ್ವಿಕತೆಯನ್ನು ಬೋಧಿಸುತ್ತಿದ್ದ ಮಹಾತ್ಮಾ ಗಾಂಧಿ ತಾನೊಬ್ಬ ಹಿಂದೂ ವೈಷ್ಣವ ಎಂದು ಗುರುತಿಸಿಕೊಳ್ಳುವುದರಲ್ಲಿ ಕೆಲವು ವಿಶೇಷ ಅನುಕೂಲಗಳಿವೆಯೆಂದು ಭಾವಿಸಿದ್ದರು. ಅವರಿಗೆ ‘ವರ್ಣಾಶ್ರಮ ಧರ್ಮ’ದಲ್ಲಿ ನಂಬಿಕೆಯಿತ್ತು. ಈ ‘ಧರ್ಮ’ವನ್ನು ಅವರು ತಮ್ಮ ಭಾಷಣ ಮತ್ತು ಬರಹಗಳಲ್ಲಿ ವ್ಯಾಖ್ಯಾನಿಸಿ ವಿವರಿಸಿದ್ದಾರೆ. ಆದರೆ ಗುರುಗಳು ತಮ್ಮನ್ನು ‘ಮನುಷ್ಯ’ ಎಂದಷ್ಟೇ ಗುರುತಿಸಿಕೊಳ್ಳುವುದಕ್ಕೆ ಇಚ್ಛಿಸುತ್ತಿದ್ದರು. ಜನರು ದೇವರನ್ನು ಮತ್ತು ಬದುಕಿನ ಸರಳ ವಾಸ್ತವಗಳನ್ನು ಅರಿತು ಗ್ರಹಿಸಲಿ ಎಂಬುದು ಅವರ ಬೋಧನೆಯಾಗಿತ್ತು. ಪರಿಧಿಯಲ್ಲಿ ನಿಂತು ವಿವಿಧ ಮಾರ್ಗಗಳನ್ನು ಬಳಸಿ ಜನಸಮೂಹದ ಹೃದಯದಲ್ಲಿ ಸ್ಥಾನಗಳಿಸಲು ಒಬ್ಬರು ಪ್ರಯತ್ನಿಸುತ್ತಿದ್ದರೆ ಮತ್ತೊಬ್ಬರು ಆತ್ಮದ ಏಕತೆಯೆಂಬ ಎರಡಲ್ಲದ ಬಾಗಿಲಿನ ಮೂಲಕ ಜನ ಹೃದಯನ್ನು ಪ್ರವೇಶಿಸಿದರು. ಅಖಿಲ ಭಾರತ ಮಟ್ಟದ ರಾಜತಂತ್ರವನ್ನು ನಿರ್ವಹಿಸಬೇಕಾಗಿದ್ದ ಗಾಂಧೀಜಿಯ ದೃಷ್ಟಿಕೋನ ಮತ್ತು ಏಕಾಂತ ಧ್ಯಾನದಲ್ಲಿ ಒಳ-ಹೊರಗನ್ನು ಅನುಸಂದಾನಿಸಿದ ಗುರುವಿನ ದೃಷ್ಟಿಕೋನಗಳಲ್ಲಿ ಭಿನ್ನತೆ ಇರುವುದು ಸಹಜವೇ ಆಗಿತ್ತು. ಅವರಿಬ್ಬರೂ ಒಂದೇ ತತ್ವದ ಬೇರೆ ಬೇರೆ ನೆಲೆಗಳಲ್ಲಿ ನಿಂತಿದ್ದರು. ಒಬ್ಬರು ಆ ತತ್ವದ ಪರಿಧಿಯಲ್ಲಿದ್ದರೆ ಮತ್ತೊಬ್ಬರು ಕೇಂದ್ರದಲ್ಲಿದ್ದುಕೊಂಡು ಅದರ ಜತೆ ಅನುಸಂಧಾನ ನಡೆಸಿದರು. ಮಹಾತ್ಮ ಗಾಂಧಿ ದೇಶವ್ಯಾಪಿ ಭಾವನೆಯೊಂದನ್ನು ಗುರುತಿಸಿ ಪ್ರತಿಪಾದಿಸಿದರೆ, ಗುರುಗಳು ಸಾಗಿದ ಹಾದಿಯಲ್ಲಿ ನಿರ್ಲಿಪ್ತತೆ ಇತ್ತು. ಇಬ್ಬರ ಅಭಿಪ್ರಾಯ ಭೇದಗಳು ತತ್ತ್ವಕ್ಕೆ ಸೀಮಿತವಾಗಿ ಆಚರಣೆಯ ವಿಚಾರದಲ್ಲಿ ಪರಸ್ಪರ ಸಂಧಿಸಿದವು
ಭಾವನೆಗಳಿಗೆ ತಮ್ಮದೇ ಆದ ತರ್ಕವಿದೆ. ಇದರ ಅಗತ್ಯ ಅಂಶಗಳೊಂದಿಗೆ ಶುದ್ಧ ವೈಚಾರಿಕ ತರ್ಕವೂ ಹೆಣೆದುಕೊಂಡ ವಿಶಿಷ್ಟ ವಿದ್ಯಮಾನವೊಂದನ್ನು ಮಹಾತ್ಮಾ ಗಾಂಧಿ ಪ್ರತಿನಿಧಿಸುತ್ತಿದ್ದರು. ಈ ಎರಡೂ ಬಗೆಯ ತರ್ಕಗಳ ಸತ್ವ ಪರೀಕ್ಷೆ ನಡೆಯುವುದು ಅವುಗಳ ಅನುಷ್ಠಾನದಲ್ಲಿ. ಮಹಾತ್ಮ ಮತ್ತು ಗುರುಗಳನ್ನು ಒಟ್ಟು ಸೇರಿಸುವ ಬಿಂದು ಕೂಡಾ ಇದುವೇ ಆಗಿದೆ. ಗುರುಗಳ ಜೊತೆ ವರ್ಕಲದ ಆಶ್ರಮದಲ್ಲಿ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ ಮಕ್ಕಳಿದ್ದಂತೆ ಗಾಂಧೀಜಿಯ ಸಾಬರಮತಿ ಆಶ್ರಮದಲ್ಲಿಯೂ ಅಸ್ಪೃಶ್ಯ ಮಕ್ಕಳಿದ್ದರು. ಹಿಂದೂ-ಮುಸ್ಲಿಂ ಏಕತೆಯನ್ನು ಗಾಂಧೀಜಿ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಗುಡಿ ಕೈಗಾರಿಕೆಗಳ ಬಗ್ಗೆ ಗಾಂಧೀಜಿಗೆ ಇದ್ದ ಆಸಕ್ತಿಯೇ ಗುರುಗಳಿಗೂ ಇತ್ತು. ಇಬ್ಬರಲ್ಲಿಯೂ ಇದ್ದ ಸಂತತ್ವದ ಗುಣಗಳು ಒಂದೇ ಪರಂಪರೆಯನ್ನು ಸೂಚಿಸುತ್ತಿದ್ದವು. ಇಬ್ಬರೂ ಭೇಟಿಯಾಗಿ ಚರ್ಚಿಸಿದಾಗ ಹಿಂದೂ ಧರ್ಮ, ವರ್ಣಾಶ್ರಮ ಧರ್ಮ ಮತ್ತು ಸತ್ಯಾಗ್ರಹ ಪರಿಕಲ್ಪನೆಯಲ್ಲಿರುವ ಅತಾರ್ಕಿಕ ಆಯಾಮಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಗುರುಗಳ ನಿಲುವನ್ನು ಗಾಂಧೀಜಿ ಒಪ್ಪಲಿಲ್ಲ. ಕ್ರಿಯೆಯಲ್ಲಿ ಒಂದಾಗುವ ತನಕವೂ ಈ ಸೈದ್ಧಾಂತಿಕ ವ್ಯತ್ಯಾಸಗಳು ಏಕಪಕ್ಷೀಯವೇ ಆಗಿದ್ದವೆಂಬುದು ನಿಜ. ಉದಾಹರಣೆಗೆ ಗುರುಗಳು ಗಾಂಧೀಜಿ ಪ್ರತಿಪಾದಿಸಿದ ಖಾದಿ ಆಂದೋಲನವನ್ನು ಒಪ್ಪಿ ಅನುಸರಿಸಿದರು. ಇದು ಸಂಭವಿಸಿದ್ದು ಮಾತುಕತೆ ಮುಗಿಸಿ ಪರಸ್ಪರ ವಂದಿಸಿ ಗಾಂಧಿ ಹೊರಡಲು ಅನುವಾದಾಗ.
ಆಂಶಿಕವಾಗಿ ದೊರೆತ ಗೆಲುವನ್ನೂ ಜನ ಸಮೂಹದ ಹಿತವನ್ನೂ ಅನುಲಕ್ಷಿಸಿ ವೈಕಂ ಸತ್ಯಾಗ್ರಹವನ್ನು ಕೊನೆಗೊಳಿಸಲಾಯಿತು. ಈ ಐತಿಹಾಸಿಕ ಸಂಗ್ರಾಮಕ್ಕೆ ಮೂಕ ಸಾಕ್ಷಿಯಾಗಿದ್ದ ನೆಲದಲ್ಲಿ ಗುರುಗಳು ಸ್ಥಳೀಯ ಬಡ ವಿದ್ಯಾರ್ಥಿಗಳಿಗಾಗಿ ಒಂದು ಶಾಲೆಯನ್ನು ಕಟ್ಟಿಸಿದರು. ಸತ್ಯಾಗ್ರಹಿಗಳಾಗಿ ಭಾಗವಹಿಸಿದ ಧೀರ ಯುವಕರ ಉದಾತ್ತ ಪ್ರಯತ್ನಗಳ ಸ್ಮಾರಕವಾಗಿ ಈ ಶಾಲೆ ಇಂದಿಗೂ ಇದೆ. ಪೂರ್ಣತೆಯತ್ತ ತುಡಿಯುವ ಮನುಷ್ಯ ಪ್ರಯತ್ನದ ನಿರಂತರತೆ ಗುರುಗಳ ಮಟ್ಟಿಗೆ ಮುಖ್ಯವಾಗಿತ್ತು. ಏಕೆಂದರೆ ಅವರು ಪ್ರತಿನಿಧಿಸು ತತ್ವದ ಬಹುಮುಖ್ಯ ಅಂಶವೇ ಸಾತತ್ಯ. ತಕ್ಷಣದ ಆವೇಶದಿಂದ ಹುಟ್ಟುವ ಯಾವುದನ್ನು ಅವರು ಪ್ರೋತ್ಸಾಹಿಸುತ್ತಿರಲಿಲ್ಲ. ತೀರಕ್ಕೆ ಬಂದು ಅಪ್ಪಳಿಸುವ ಅಲೆಗಳಿಗೆ ಉಬ್ಬರವಿಳಿತಗಳಿವೆ. ಆದರೆ ಸಾಗರ ಹೃದಯ ಸದಾ ಶಾಂತ ಮತ್ತು ಸ್ಥಿರ. ವರ್ಕಲದ ಆಶ್ರಮದ ಮೇಲೆ ಸಂದೇಶವಾಹಕ ಮಾರುತಗಳು ಎಂದಿನಂತೆ ಬೀಸುತ್ತಲೇ ಇದ್ದವು. ಅಲ್ಲಿನ ತೊರೆಯಲ್ಲಿ ಜುಳುಜುಳು ಹರಿಯುತ್ತಿದ್ದ ನೀರು ಗುರುಗಳ ನಿಶ್ಶಬ್ದ ಧ್ಯಾನದ ನಿರಂತರತೆಯನ್ನು ಅರ್ಥೈಸುತ್ತಿತ್ತು.
ಗುರುಗಳ ಹಾಸಿಗೆಯ ಬಳಿ ಪಾರಾಯಣ ನಿರತನಾಗಿದ್ದ ಬ್ರಹ್ಮಚಾರಿಗೆ ಉಚ್ಚಾರ ಮತ್ತು ವ್ಯಾಕರಣದ ಪಾಠ ಎಂದಿನಂತೆ ನಡೆಯುತ್ತಿತ್ತು. ಗುರುಗಳು ತಮ್ಮೊಳಗಿನ ತೇಜಸ್ಸಿನಲ್ಲಿ ಲೀನರಾಗಿದ್ದರೂ ಸುತ್ತಲಿನ ಎಲ್ಲಾ ಕ್ರಿಯೆಗಳ ಮೇಲೂ ಅವರ ಪ್ರಭಾವವಿರುತ್ತಿತ್ತು. ತತ್ವ ಮತ್ತು ಅನುಷ್ಠಾನ, ಗುರಿ ಮತ್ತು ದಾರಿಗಳ ನಡುವಣ ಸಂಬಂಧವು ಮಹಾ ವೃಕ್ಷದ ಕಾಂಡ ಮತ್ತು ಕೊಂಬೆಯಂತೆ ಬೇರ್ಪಡಿಸಲಾಗದ್ದು ಎಂಬುದನ್ನು ಗುರುಗಳು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳಿಂದ ದೂರವುಳಿದು ಅವುಗಳ ಕೇಂದ್ರಬಿಂದುವಾದ ತತ್ವದಲ್ಲಿ ನೆಲೆಸುವ ಧ್ಯಾನಾತ್ಮಕ ಮೌನವಾಗಿತ್ತು ಗುರುಗಳ ಬದುಕು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಸರ್ವಕರ್ಮಾಣಿ ಮನಸಾ ಸಂನ್ಯಾಸ್ಯಾಸ್ತೇ/ ಸುಖಂ ವಶೀ| ನವದ್ವಾರೇ ಪುರೇ ದೇಹಿ/ ನೈವ ಕುರ್ವನ್ನ ಕಾರಯನ್ (ಭಗವದ್ಗೀತೆ 5:13)* ಎಂಬ ಗೀತಾಶ್ಲೋಕದ ಜೀವಂತ ನಿದರ್ಶನವೆಂಬಂತೆ ಗುರುಗಳ ಬದುಕಿತ್ತು.
* ಮಾನಸಿಕವಾಗಿ ಎಲ್ಲಾ ಕ್ರಿಯೆಗಳನ್ನು ತ್ಯಜಿಸಿ ಮತ್ತು ಸ್ವಯಂ-ನಿಯಂತ್ರಿತನಾಗಿ, ಸಾಕಾರಗೊಂಡವನು ಒಂಬತ್ತು-ದ್ವಾರಗಳ ನಗರದಲ್ಲಿ ಸಂತೋಷದಿಂದ ವಿಶ್ರಾಂತಿ ಪಡೆಯುತ್ತಾನೆ, ಇತರರನ್ನು (ದೇಹ ಮತ್ತು ಇಂದ್ರಿಯಗಳು) ಕಾರ್ಯನಿರ್ವಹಿಸುವಂತೆ ಮಾಡುವುದಿಲ್ಲ.)
(ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/17/guru-59/ )


[…] ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/18/guru-60/ […]
LikeLike