ನಾರಾಯಣ ‘ಗುರು ಮಾರ್ಗ’: ಭೂತದಿಂದ ಭವಿಷ್ಯದ ಕಡೆಗೆ #1

ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್ಈ ಸರಣಿಯ 8ನೇ ಅಧ್ಯಾಯದ ಮೊದಲ ಭಾಗ ಇಲ್ಲಿದೆ…

ಅಧ್ಯಾಯ 8

ಎರಡು ವಿಶಿಷ್ಟ ಬಗೆಯ ಔನ್ನತ್ಯಗಳಿವೆ. ಮೊದಲನೆಯದ್ದು ತನ್ನ ಕಾಲದಲ್ಲಿ ಉಜ್ವಲವಾಗಿ ಬೆಳಗಿ ಪಸರಿಸುತ್ತದೆ. ಎರಡನೆಯದ್ದು ಕಾಲದ ಅನಂತತೆಯೆಂಬ ಮರಳ ಹಾಸಿನಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಶಾಶ್ವತವಾಗಿ ಉಳಿಸಿ ಭವಿಷ್ಯಕ್ಕೂ ಮಾರ್ಗದರ್ಶಕವಾಗುತ್ತದೆ. ಗುರುಗಳು ಸಾಧಿಸಿದ ಔನ್ನತ್ಯ ಎರಡನೇ ಬಗೆಯದ್ದು. ಅದು ಅವರ ಕಾಲದಲ್ಲಿ ಬಹಳ ವ್ಯಾಪಕವಾಗಿತ್ತು ಎನ್ನಲಾಗದು. ಆದರೆ ಅದು ಜನರ ಆದರ್ಶ ಮತ್ತು ಚಿಂತನೆಗಳ ಮೇಲೆ ಗಾಢವಾದ ಪ್ರಭಾವ ಬೀರಿತು. ಆಗೀಗ ಪ್ರಖರವಾದ ಮಿಂಚುಗಳು ಇದನ್ನು ತಾತ್ಕಾಲಿಕವಾಗಿ ಮಂಕಾಗಿಸಿದರೂ ಅದು ದಿಗಂತಕ್ಕೇರಿ ಧ್ರುವ ನಕ್ಷತ್ರದಂತೆ ದಿಕ್ಸೂಚಿಯಾಯಿತು. ಈ ಸಂದೇಶದ ಬೆಳಕು ಎಷ್ಟರ ಮಟ್ಟಿಗೆ ಅದರ ಕಾಲಕ್ಕೆ ಸೇರಿದೆಯೋ ಅದೇ ಪ್ರಮಾಣದಲ್ಲಿ ಭವಿಷ್ಯಕ್ಕೂ ಸೇರಿದೆ. ಇದು ಭೂತ ಮತ್ತು ಭವಿಷ್ಯವನ್ನು ಒಂದುಗೂಡಿಸಿರುವ ಕೊಂಡಿ. ಈಗ ನಾವು ಕಳೆದುಹೋದ ಕಾಲವನ್ನೊಮ್ಮೆ ಸಿಂಹಾವಲೋಕನಕ್ಕೆ ಒಳಪಡಿಸೋಣ.

ಸಾವಿರಾರು ವರ್ಷಗಳಿಂದ ಸತತವಾಗಿ ದಾಳಿಗಳನ್ನು ಎದುರಿಸಿದ ಭಾರತ ಭೂಖಂಡದ ಇತಿಹಾಸವನ್ನು ನೆನಪಿಸಿಕೊಳ್ಳಿ. ಈ ದಾಳಿಗಳಲ್ಲಿ ಹೆಚ್ಚಿನವು ವಾಯವ್ಯ ದಿಕ್ಕಿನಿಂದ ಬಂದವು. ಪ್ರತೀ ದಾಳಿಯೂ ಬೇರೇ ಬೇರೇ ಪ್ರದೇಶಗಳ ಜನರನ್ನು ಈ ಭೂಭಾಗದೊಳಕ್ಕೆ ತಂದಿತು. ಈಗಾಗಲೇ ಇದ್ದ ಸಂಪ್ರದಾಯಗಳು ಹೊಸತಕ್ಕೆ ಅವಕಾಶ ಮಾಡಿಕೊಡಬೇಕಾಯಿತು. ಈ ಹೊಸತರ ಮೇಲೆ ಮತ್ತೊಂದು ಬಂದು ಕುಳಿತಿತು. ಈ ಪ್ರಕ್ರಿಯೆ ಅಲ್ಲಿಲ್ಲಿ ಮೊಳಕೆಯೊಡೆಯುತ್ತಿದ್ದ ಹೊಸ ವಿಶಿಷ್ಟ ಸಂಸ್ಕೃತಿಗಳನ್ನು ಬೆಳೆಯಲು ಬಿಡುತ್ತಿರಲಿಲ್ಲ. ಈ ಎಲ್ಲಾ ಗದ್ದಲಗಳು ಅಡಗಿದ ಒಂದು ಕಾಲಘಟ್ಟವೂ ಇತ್ತು. ಈ ಅವಧಿಯಲ್ಲಿ ಪರಸ್ಪರ ವಿರುದ್ಧವಾಗಿವೆ ಎಂಬಂತೆ ಕಾಣಿಸುತ್ತಿದ್ದ ಅಂಶಗಳು ಮಿಳಿತವಾಗಿ ಹೊಸತೊಂದು ಅಭಿವ್ಯಕ್ತಿ ರೂಪುಗೊಂಡಿತು. ಇದರ ಆಂತರಿಕ ಸಂಕೇತವಾಗಿ ಬುದ್ಧನಿದ್ದ. ಈ ಪ್ರಶಾಂತ ಯುಗವನ್ನು ಹಿಂಬಾಲಿಸಿ ಬಂದದ್ದೇ ಮಾನವ ಪ್ರಯತ್ನದ ಅತ್ಯುನ್ನತ ಫಲಿತ. ಭರತ ಭೂಮಿಯು ದಯೆ ಮತ್ತು ಧರ್ಮವನ್ನು ಒಂದಾಗಿಸಿತು. ಕಲೆ, ಸಾಹಿತ್ಯ, ವಿಜ್ಞಾನ ಮತ್ತು ತತ್ವಶಾಸ್ತ್ರಗಳು ಈ ನೆಲದಲ್ಲಿ ಅರಳಿದವು. ಈ ಮಹಾ ಸಮ್ಮಿಲನದ ಜೊತೆಯಲ್ಲೇ ನಾಗರಿಕತೆಯ ಉಬ್ಬರದ ಅಲೆಗಳು ಇಡೀ ಭೂಖಂಡವನ್ನು ವ್ಯಾಪಿಸಿದವು. ಇದರ ಬೀಜಗಳು ದೂರದ ಶ್ರೀಲಂಕಾ, ಸಿಯಾಮ್ ಹಾಗೂ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾರಗಳಲ್ಲಿದ್ದ ದ್ವೀಪಗಳನ್ನೂ ತಲುಪಿತು. ಇವು ಬಹುದೂರದಲ್ಲಿ ಹವಾಯಿ ದ್ವೀಪದ ಹೋಗಿವೆಯೆಂದು ಈಗ ಗುರುತಿಸಲಾಗಿದೆ.

ಮೊದಲ ಸಾಹಸಿ ಯಾತ್ರಿಕ ಭಾರತದ ತೀರವನ್ನು ತಲುಪಿದ ಕ್ಷಣ ಹೊಸತೊಂದು ಆರಂಭಕ್ಕೆ ಮುನ್ನುಡಿ ಬರೆಯಿತು. ಕಡಲಾಚೆಯಿಂದ ಆಮದಾದ ಬಹಳ ಭಿನ್ನವೂ ವಿಶಿಷ್ಟವೂ ಆದ ಸಂಸ್ಕೃತಿಗಳು ಕರಾವಳಿಯ ಮೂಲಕ ದೇಶವನ್ನು ಪ್ರವೇಶಿಸಿದವು. ಜನರು ಇವುಗಳನ್ನು ಒಪ್ಪಿಕೊಂಡು ತಮ್ಮದಾಗಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಔನ್ನತ್ಯದ ಹೊಸ ಮಾದರಿಗಳು ಸಾರ್ವಜನಿಕರ ಎದುರು ನಿಂತಿದ್ದವು. ಯುಗ ಯುಗಗಳಿಂದ ನೈತಿಕ ಮಾನದಂಡಗಳೆಂದು ಭಾವಿಸಿದ್ದ ಎಲ್ಲವೂ ನೆಲಕ್ಕುರುಳಿದವು. ಪರಿಷ್ಕರಣೆ ಮತ್ತು ಮರು ಹೊಂದಾಣಿಕೆಯ ಅಗತ್ಯವನ್ನು ಹೇಳುತ್ತಿದ್ದ ಹೊಸ ವಾಸ್ತವಗಳಿಗೆ ಜನರು ಮುಖಾಮುಖಿಯಾದರು. ಉರುಳಿಬಿದ್ದ ಔನ್ನತ್ಯದ ಅವಶೇಷಗಳು ಹಳೆಯ ಶ್ರೀಮಂತ ಪರಂಪರೆಯನ್ನು ಆವರಿಸಿಕೊಂಡಿತು.

ಕಾಲದ ಅಲೆಗಳ ಹೊಡೆತವನ್ನು ತಾಳಿಕೊಂಡು ಜೀವವನೆಂಬ ಅನಂತ ಸಾಗರದಲ್ಲಿ ಸ್ವತಂತ್ರವಾಗಿ ವಿಹರಿಸಲು ಪೂರ್ವಿಕರಿಗೆ ಒದಗಿಬಂದ ಮಹಾನೌಕೆ ಲಂಗರನ್ನೂ ಹಾಯಿ ಮರವನ್ನು ಕಳೆದುಕೊಂಡು ಮುಳುಗಲಾರಂಭಿಸದ ದೃಶ್ಯವನ್ನು ಕಾಣಲಾಗದೆ ಭಾರತದಲ್ಲಿ ವಿವಿಧ ಭಾಗಗಳಲ್ಲಿ ಸಂತರ ಮೇಲೆ ಸಂತರು ಹುಟ್ಟಿ ಬಂದರು. ಕೆಲವರು ಈ ಸಾಗರದ ಮುಂಗರೆಯಲ್ಲಿ ನಿಂತು ಕಾಪಾಡುವಂತೆ ದೇವರನ್ನು ಪ್ರಾರ್ಥಿಸಿದರು. ಇನ್ನು ಕೆಲವರು ದುರಂತ ನಾಯಕರ ಶೈಲಿಯಲ್ಲಿ ತಮ್ಮ ಆಕ್ರೋಶವನ್ನು ಭಾವೋದ್ವೇಗದ ಮೂಲಕ ಅಭಿವ್ಯಕ್ತಿಸಿದರು. ಮತ್ತೆ ಕೆಲವರು ಹುತಾತ್ಮರಾದರು. ಬೆರಳೆಣಿಕೆಯಷ್ಟು ಮಂದಿಗಷ್ಟೇ ಸಾವಧಾನದಿಂದ ಪರಿಸ್ಥಿತಿಯನ್ನು ಅವಲೋಕಿಸಿ ನೀರಿಗಿಳಿದು ನಾವೆಯನ್ನು ರಕ್ಷಿಸಲು  ಸಾಧ್ಯವಿರುವ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವ ಧೈರ್ಯ ಮತ್ತು ಪ್ರಸಂಗಾವದಾನವಿತ್ತು. ವೇಗವಾಗಿ ಮೇಲೇರಿ ಬಂದು ಅದೇ ವೇಗದಲ್ಲಿ ಹಿಂದಕ್ಕೆ ಸರಿಯುವ ಹುಚ್ಚು ಅಲೆಗಳ ಮಧ್ಯೆ ಈಜಿ ಬದುಕುವುದಕ್ಕೆ ನುರಿತ ಈಜುಗಾರರಿಗಷ್ಟೇ ಸಾಧ್ಯ. ನಂದುತ್ತಾ ಬಂದಿದ್ದ ಹಳೆಯ ವೈಭವದ ಕೊನೆಯ ಕಿಡಿಯನ್ನು ಬಳಸಿ ಹೊಸ ದೀವಟಿಗೆ ಹಚ್ಚಿ ಮುಂದಕ್ಕೊಯ್ಯುವುದು ಅರ್ಥಾತ್ ಹಳೆಯ ಶ್ರೇಷ್ಠ ಮೌಲ್ಯಗಳನ್ನು ಭವಿಷ್ಯಕ್ಕೆ ಕೊಂಡೊಯ್ಯುವುದು ತನ್ನ ಪ್ರಾಥಮಿಕ ಕರ್ತವ್ಯ ಎಂದು ಭಾವಿಸಿ ನಾರಾಯಣ ಗುರುಗಳು ಕಾರ್ಯಪ್ರವೃತ್ತರಾದರು.

ಪ್ರಾಚೀನ ಭಾರತದ ಚಿಂತನೆ ಮತ್ತು ವಿಚಾರಗಳು ಹಲವು ಬಗೆಯಲ್ಲಿ ಜನರನ್ನು ತಲುಪುತ್ತಿತ್ತು. ಇವೆಲ್ಲವುಗಳ ಮೂಲ ಸ್ರೋತಸ್ಸು ಸಂಸ್ಕೃತ ಭಾಷೆಯಾಗಿತ್ತು. ಯುಗಯುಗಳಿಂದ ಈ ಭಾಷೆಯು ತನ್ನ ವಿಶಿಷ್ಠ ಛಂದಸ್ಸು, ಮಂತ್ರ ಮತ್ತು ಸೂತ್ರಗಳಲ್ಲಿ ಶ್ರೇಷ್ಠ ಜ್ಞಾನವನ್ನು ದಾಖಲಿಸಿಟ್ಟಿದೆ. ಹಿರಣ್ಮಯ ಪಾತ್ರೆಯ ಆವರಣವನ್ನು ತೆರವುಗೊಳಿಸಿ  ‘ಋತ’ಕ್ಕೆ ಮುಖಾಮುಖಿಯಾದಾಗ ಆಶ್ಚರ್ಯಗೊಂಡ ನಮ್ಮ ಪೂರ್ವಿಕರ ತುಟಿಯಿಂದ ಮೊದಲ ಮಂತ್ರಗಳು ಹೊರಟವು. ಆ ಕ್ಷಣದಿಂದಲೇ ಆರಂಭಗೊಂಡ ಸಂಸ್ಕೃತ ಸಾಹಿತ್ಯದ ಪರಂಪರೆ ವ್ಯಾಸ, ವಾಲ್ಮೀಕಿ ಮತ್ತು ಕಾಳಿದಾಸರಂಥ ಮಹಾ ಪ್ರತಿಭಾಶಾಲಿಗಳಿಂದ ಶ್ರೀಮಂತಗೊಂಡಿತು. ಆಧುನಿಕ ಕಾಲದಲ್ಲಿ ಸಂಸ್ಕೃತ ತನ್ನ ಶ್ರೀಮಂತ ಪರಂಪರೆಯ ಮೂಲಕವೇ ವಿದ್ವಾಂಸರನ್ನು ಆಕರ್ಷಿಸುತ್ತಿದೆ. ತನ್ನ ಮಾಧುರ್ಯದ ಮೂಲಕ ಮನಸನ್ನು ಕರಗಿಸಿ  ಕಾವ್ಯಾನುಭೂತಿಯ ರೆಕ್ಕೆಗಳನ್ನು ಕಟ್ಟಿಕೊಂಡು ವಿಚಾರಾಗಸದಲ್ಲಿ ವಿಹರಿಸುವಂತೆ ಸಹೃದಯರನ್ನು ಪ್ರೇರೇಪಿಸುವ ಶಕ್ತಿ ಸಂಸ್ಕೃತಕ್ಕೆ ಇದೆ. ಅತ್ಯಂತ ಪ್ರಾಚೀನವಾದುದನ್ನೂ ಅತ್ಯಂತ ಪರಿಶುದ್ಧವಾದುದನ್ನೂ ಒಂದೇ ಮಂತ್ರದಲ್ಲಿ ಸೇರಿಸುವ ಶಕ್ತಿ ಈ ಭಾಷೆಗಿದೆ.

ತೆರೆಯಲಾರದಷ್ಟು ದುರ್ಬಲಗೊಂಡಿದ್ದ ರೆಪ್ಪೆಗಳಿಗೆ ಬಲನೀಡಿ ಮತ್ತೆ ಕಣ್ತೆರೆಸಿ ಹೊಸ ಬದುಕು ನೀಡುವ ಕೆಲಸವಾರಂಭಿಸಿದ ನಾರಾಯಣ ಗುರುಗಳು ಸಂಸ್ಕೃತವೆಂಬ ಒರತೆಯತ್ತ ಗಮನಹರಿಸಿದ್ದು ಸಹಜವಾಗಿತ್ತು. ಸಾವಿರಾರು ವರ್ಷಗಳ ಕಾಲ ಜನಸಮೂಹದ ಆಧ್ಯಾತ್ಮಿಕ ಬದುಕನ್ನು ಪೊರೆದಿದ್ದ ಸಂಸ್ಕೃತವೆಂಬ ಆ ನದಿ ಪೂರ್ಣವಾಗಿ ಬತ್ತಿ ಹೋಗಿ ಹರಿಯಲು ನೀರೇ ಇಲ್ಲದ ದಕ್ಷಿಣ ಭಾರತದ ಪುಣ್ಯನದಿಗಳಂತೆ ಕಾಣಿಸುತಿತ್ತು. ಒಂದು ಕಾಲದಲ್ಲಿ ಈ ಸಂಸ್ಕೃತಿಗೆ ನಿರಂತರವಾಗಿ ಹರಿದು ಬರುತ್ತಿದ್ದ ಪ್ರೋತ್ಸಾಹದ ಶ್ರೀಮಂತ ಉಪನದಿಗಳೆಲ್ಲವೂ ಬರಡಾಗಿದ್ದವು. ಉಳಿದದ್ದು ಕೇವಲ ಶ್ರೀಮಂತ ಸಂಸ್ಕೃತಿಯ ಒಣ ತೊಗಟೆ ಮಾತ್ರ. ಸಂಸ್ಕೃತವನ್ನು ಬೆಂಬಲಿಸುವವರು ಅದರ ಕಳೇಬರದಲ್ಲಿ ಉಳಿದಿದ್ದ ಔಪಚಾರಿಕತೆಗಳನ್ನು ಪೂಜಿಸುತ್ತಿದ್ದರೆ ಹೊರತು ಆ ಸಂಸ್ಕೃತಿಯ ಜೀವ ಚೈತನ್ಯವನ್ನು ಮರತೇಬಿಟ್ಟಿದ್ದರು.  ಪ್ರಾಚೀನ ಪರಂಪರೆಯಲ್ಲಿದ್ದ ಔನ್ನತ್ಯವನ್ನು ವಿದ್ಯಾರ್ಥಿಗಳಿಗೆ ನೆನಪಿಸಿ ವರ್ತಮಾನದ ಜ್ಞಾನ ಪರಂಪರೆಯನ್ನು ಸೃಷ್ಟಿಸುವ ಕೆಲಸ ಸಂಸ್ಕೃತ ಶಾಲೆಗಳಿಂದಾಗಬೇಕಿತ್ತು. ಆದರೆ ಅವು ಪ್ರಾಚೀನ ಕಾಲದಲ್ಲಿ ರಚಿಸಲಾದ ಮಂತ್ರಗಳನ್ನು ಮತ್ತು ಸೂತ್ರಗಳನ್ನು ಗಿಣಿಯಂತೆ ಪಠಿಸುವ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿದ್ದವು. ಹೀಗೆ ಸಂಸ್ಕೃತ ಕಲಿತು ಬಂದವರು ಪಾರಮಾರ್ಥವನ್ನು ವೃತ್ತಿಯಾಗಿ ಸ್ವೀಕರಿಸಿದರೂ ಅವರ ನಿರ್ಧಾರಗಳನ್ನು ಇಹದ ಹಣವೇ ನಿರ್ದೇಶಿಸುತ್ತಿತ್ತು. ತಕ್ಷಣದ ಉದ್ದೇಶ ಸಾಧನೆಯೆಂಬ ನಿಂತ ನೀರು ಒಂದಾನೊಂದು ಕಾಲದಲ್ಲಿ ಪರಿಶುದ್ಧವಾಗಿದ್ದ ನೀರಿನ ಒರತೆಗಳನ್ನೂ ಮಲಿನಗೊಳಿಸಿತ್ತು. ಈ ಮಾಲಿನ್ಯದಿಂದ ಒರತೆಗಳನ್ನು ರಕ್ಷಿಸಿ ಮತ್ತೆ ಶುದ್ಧ ನೀರು ಹರಿಯುವಂತೆ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಗುರುಗಳು ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದೆಂದು ತೋರಿಸಿಕೊಟ್ಟರು. ತಮ್ಮ ಆರಂಭಿಕ ದಿನಗಳಲ್ಲೇ ಅವರು ಈ ಕೆಲಸಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಬಾಲಕನಾಗಿದ್ದಾಗಲೇ ಅವರು ಸಂಸ್ಕೃತ ಮತ್ತು ತಮಿಳನ್ನು ಅಭ್ಯಾಸ ಮಾಡಿ ಎರಡೂ ಭಾಷೆಗಳಲ್ಲಿದ್ದ ಪ್ರಾಚೀನ ಜ್ಞಾನವನ್ನು ಮೂಲದಲ್ಲೇ ಮನೋಗತ ಮಾಡಿಕೊಂಡಿದ್ದರು. ಚಿಂತನೆಯ ಇತಿಹಾಸದೊಂದಿಗೆ ದಕ್ಷಿಣ ಭಾರತ ಜನಸಮೂಹವನ್ನು ಬೆಸೆದದ್ದು ಈ ಎರಡು ಭಾಷೆಗಳು. ಕಾಲ ಕ್ರಮೇಣ ಈ ಎರಡು ಭಿನ್ನ ಸಾಂಸ್ಕೃತಿಕ ಧಾರೆಗಳು ದೊಡ್ಡ ನದಿಗಳಂತೆ ಸಂಗಮಿಸಿದವು. ಒಂದರ ವಿಚಾರಗಳು ಮತ್ತೊಂದರೊಳಗೆ ಅವಿಭಾಜ್ಯವಾಗಿ ಹೆಣೆದುಕೊಂಡವು. ತಿರುವಳ್ಳುವರ್ ಮತ್ತು ತಾಯುಮಾನವರ್ ಅವರಂಥ ಸಂತ ಕವಿಗಳು ವೈದಿಕ ಸಂಸ್ಕೃತಿಯೊಳಗಿದ್ದ ಅತ್ಯುತ್ತಮವಾದುದನ್ನು ತಮ್ಮ ಕಾವ್ಯದಲ್ಲಿ ಧ್ವನಿಸಿದರು. ಶತಮಾನಗಳ ಕಾಲ ನಡೆದ ಶೋಧನೆ ಮತ್ತು ಶುದ್ಧೀಕರಣಗಳು ಎರಡೂ ಸಂಸ್ಕೃತಿಗಳ ಮೂಲಭೂತ ಲಕ್ಷಣಗಳನ್ನು ಒಂದೇ ಆಗಿಸಿಬಿಟ್ಟಿತು.

(ಮುಂದುವರಿಯುವುದು… )


ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/18/guru-60/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ