ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 8ನೇ ಅಧ್ಯಾಯದ ಎರಡನೇ ಭಾಗ ಇಲ್ಲಿದೆ…
ಅಧ್ಯಾಯ 8.2
ಬಹಳ ಹಿಂದೆಯೇ ಸಂಸ್ಕೃತ ಮತ್ತು ತಮಿಳುಗಳೆಂಬ ಜ್ಞಾನ ತೀರ್ಥಗಳಲ್ಲಿ ಮಿಂದು ಅವುಗಳ ಚೈತನ್ಯವನ್ನು ತಮ್ಮದಾಗಿಸಿಕೊಂಡಿದ್ದ ನಾರಾಯಣ ಗುರುಗಳು ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಸದಾ ಸಿದ್ಧರಿರುತ್ತಿದ್ದರು. ಇದು ಧೈರ್ಯದಿಂದ ಮುನ್ನುಗ್ಗಿ ಗೆಲವು ಸಾಧಿಸ ಬಯಸುವ ಯುವಕರಿಗೆ ದೊಡ್ಡ ಪ್ರೇರಣೆಯಾಗಿತ್ತು. ಈ ದೃಷ್ಟಿಯಲ್ಲಿ ಅವರು ಗುರುಗಳು ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು.
ಆಧ್ಯಾತ್ಮಿಕ ಬದುಕು ಗುರುವಿನ ಪಾತ್ರ ನಿರ್ವಹಿಸಲು ನಾರಾಯಣ ಗುರುಗಳಿಗೆ ಯಾವತ್ತೂ ಅಡ್ಡಿಯಾದುದಿಲ್ಲ. ಅರುವಿಪ್ಪುರದಲ್ಲಿ ತಪೋನಿರತನಾಗಿದ್ದ ದಿನಗಳಲ್ಲಿಯೂ ಅವರೊಳಗಿನ ಶಿಕ್ಷಕ ತನ್ನ ಕರ್ತವ್ಯದಿಂದ ವಿಮುಖನಾಗಿರಲಿಲ್ಲ. ಪರಮಹಂಸಾನುಭೂತಿಯನ್ನು ನಿರ್ವಹಿಸುವ ಒತ್ತಡದ ನಡುವೆಯೂ ಜಿಜ್ಞಾಸುಗಳಿಗೆ ಉತ್ತರಿಸಲು ಅವರಿಗೆ ಸಮಯವಿತ್ತು. ಅವರೊಳಗಿನ ಗುರು ಯಾವತ್ತೂ ವಿಶ್ರಾಂತಿ ಪಡೆಯಲೇ ಇಲ್ಲ ಎಂದು ಹೇಳುವುದೇ ಹೆಚ್ಚು ಸರಿ. ಅವರು ಎಲ್ಲಿಯೇ ಇದ್ದರೂ ಪ್ರತೀ ಮುಂಜಾನೆಯೂ ಶಿಕ್ಷಣಾರ್ಥಿಗಳಾಗಿ ಬರುವವರನ್ನು ಭೇಟಿಯಾಗುತ್ತಿದ್ದರು. ಹೀಗೆ ಬಂದ ಯುವಕರು ಗಹನವಾದ ಗ್ರಂಥಗಳಿಂದ ತಮಗೆ ಅರ್ಥವಾಗದ ಸಾಲುಗಳನ್ನು ಪಠಿಸಿ ವಿವರಣೆ ಬಯಸುತ್ತಿದ್ದರು. ಗುರುಗಳು ತಮ್ಮ ಮೃದುವಾದ, ಧ್ಯಾನಸ್ಥ ಧ್ವನಿಯ ಕಂಠದಲ್ಲಿ ಈ ಸಾಲುಗಳ ಅರ್ಥವನ್ನು ವಿವರಿಸುತ್ತಿದ್ದರು. ಇವು ಸಾಮಾನ್ಯ ವ್ಯಾಖ್ಯಾನಗಳಿಗಿಂತ ಸಂಪೂರ್ಣ ಭಿನ್ನ ಮತ್ತು ಹೊಸತಾಗಿರುತ್ತಿದ್ದವು. ಈ ಪ್ರಕ್ರಿಯೆ ಗುರುಗಳ ಒಳಗಿದ್ದ ಬೌದ್ಧಿಕ ಎಚ್ಚರವನ್ನು ಶಿಷ್ಯರ ಮನಸ್ಸಿಗೆ ದಾಟಿಸುತ್ತಿತ್ತು. ಗುರುಗಳ ಸುಪ್ತ ಆದರೆ ಸತತವಾದ ಪ್ರಭಾವವು ಅನೇಕ ಯುವಕರನ್ನು ಆತ್ಮವಿಶ್ವಾಸದಿಂದ ಹೊಸದಾರಿಯಲ್ಲಿ ಸಾಗಲು ಪ್ರೇರಕವಾಯಿತು.
ಗುರುಗಳಿಂದ ಪ್ರಭಾವಿತರಾದವರ ಪಟ್ಟಿಯಲ್ಲಿರುವ ಮೊದಲ ಹೆಸರು ತಿರುವನಂತಪುರದ ಸಮೀಪದ ಹಳ್ಳಿಯಿಂದ ಬಂದ ಈ ಯುವಕನದ್ದು. ಈತ ತನ್ನಲ್ಲಿದ್ದ ಕೆಲವು ಸಂಶಯಗಳಿಗೆ ಉತ್ತರವನ್ನಪೇಕ್ಷಿಸಿ ಗುರುಗಳನ್ನು ಭೇಟಿಯಾದ. ಅವರು ಆತನಿಗೆ ಅಗತ್ಯವಿರುವ ಸಹಾಯವನ್ನೂ ಮಾಡಿದರು. ಈ ಭೇಟಿ ಆ ಯುವಕನ ಮೇಲೆ ಬೀರಿದ ಪರಿಣಾಮ ಅಗಾಧವಾದದ್ದು. ಆತ ತನ್ನ ಮನೆ ಮತ್ತು ಬಂಧುಗಳನ್ನು ತೊರೆದು ಬ್ರಹ್ಮಚಾರಿಯಾಗಿ ಗುರು ಪರಿವಾರವನ್ನು ಸೇರಿಕೊಂಡ. ಈತನ ಹೆಸರು ಕುಮಾರನ್. ಕೆಲವು ವರ್ಷಗಳ ತರಬೇತಿಯ ನಂತರ ಗುರುಗಳು ಈ ಯುವಕನನ್ನು ಬೆಂಗಳೂರಿಗೆ ಕರೆತಂದು ಸಂಸ್ಕೃತ ಶಾಲೆಗೆ ಸೇರಿಸಿದರು. ಅಲ್ಲಿಂದ ಉನ್ನತ ಶಿಕ್ಷಣಕ್ಕಾಗಿ ಕೊಲ್ಕತ್ತಾಕ್ಕೆ ಕಳುಹಿಸಿದರು. ಕಲಿಕೆ ಮುಗಿದು ಬಂದ ನಂತರ ಈ ಯುವಕ ಜನರನ್ನು ಸಂಘಟಿಸುವ ಕೆಲಸವನ್ನು ಕಲಿತು ಅದರಲ್ಲಿ ತೊಡಗಿಕೊಂಡ. ಗುರುಗಳ ಹೆಸರಿನಲ್ಲಿ ಆರಂಭಗೊಂಡ ಬೃಹತ್ ಸಂಘಟನೆಯ (ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂ) ಪ್ರಧಾನ ಕಾರ್ಯದರ್ಶಿಯಾಗಿಯೂ ಬಹುಕಾಲ ಕೆಲಸ ಮಾಡುವ ಅವಕಾಶವೂ ಈ ಯುವಕನದ್ದಾಯಿತು. ಈ ಎಲ್ಲದಕ್ಕಿಂತಲೂ ಮುಖ್ಯವಾದದ್ದು ಕುಮಾರನ್ ಎಂಬ ಈ ಯುವಕ ಕುಮಾರನ್ ಆಶಾನ್ ಎಂಬ ಮಹಾಕವಿಯಾದದ್ದು. ಆಶಾನ್ ಕವಿತೆಗಳು ಮಲಯಾಳಂ ಸಾಹಿತ್ಯದ ಇತಿಹಾಸದಲ್ಲಿ ಯುಗಪರಿವರ್ತನೆಗೆ ಕಾರಣವಾಗಿ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿವೆ. ಈ ಕವಿಯ ವ್ಯಕ್ತಿತ್ವ ಮತ್ತು ಕಾವ್ಯದಲ್ಲಿರುವ ವೈಶಿಷ್ಟ್ಯವನ್ನು ಗುರುತಿಸಲು ಸಾಧ್ಯವಿರುವವರಿಗೆ ಅವುಗಳ ಮೇಲಿರುವ ಗುರುಗಳ ಪ್ರಭಾವದ ಅರಿವಾಗುತ್ತದೆ. ಸುಪ್ತವಾಗಿರುವ ಗುರುವಿನ ಪ್ರಭಾವ ಸದಾ ಫಲಕಾರಿ.
ಶಿಕ್ಷಣ ಕ್ಷೇತ್ರದಲ್ಲಿ ಗುರುಗಳು ಕೈಗೆತ್ತಿಕೊಂಡ ಕೆಲಸಗಳ ಹಿಂದೆ ಮಾದರಿ ಎನ್ನಬಹುದಾದ, ವಿಶ್ವಾತ್ಮಕ ದೃಷ್ಟಿಕೋನವೊಂದಿತ್ತು. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳಿಗಿಂತ ತಮಗಿದ್ದ ದೃಷ್ಟಿಕೋನದಲ್ಲಿ ಶಿಕ್ಷಣವನ್ನು ನೀಡುವುದು ಅವರ ಮುಖ್ಯ ಕಾಳಜಿಯಾಗಿತ್ತು. ಒಂದರ್ಥದಲ್ಲಿ ಇದುವೇ ಅವರ ಶೈಕ್ಷಣಿಕ ಚಟುವಟಿಕೆಗಳ ಗುಟ್ಟು ಕೂಡಾ. ಇದು ಭೂತಕಾಲದ ಸಂಶ್ಲೇಷಣೆಯನ್ನು ಆಧಾರವಾಗಿ ಹೊಂದಿರುವಂತೆಯೇ ಭವಿಷ್ಯದ ತೌಲನಿಕ ವಿಶ್ಲೇಷಣೆಯನ್ನೂ ಅಳವಡಿಸಿಕೊಂಡಿತ್ತು. ಅತ್ಯಂತ ಅಗತ್ಯವಾಗಿರುವ ಗುಣವೊಂದನ್ನು ಗುಟ್ಟು ಅಥವಾ ರಹಸ್ಯವೆಂದು ಕರೆಯುವುದೊಂದು ವಿರೋಧಾಭಾಸವೇ ಸರಿ. ಆದರೆ ಇದಕ್ಕೊಂದು ಗುಟ್ಟಿನ ಆಯಾಮವೂ ಇದೆ. ಏಕೆಂದರೆ ಇದು ನಿರ್ದಿಷ್ಟ ಕಾಲಘಟ್ಟದಲ್ಲಿ ನಿರ್ದಿಷ್ಟ ಸಮಯದಲ್ಲಿ ಎಲ್ಲರಲ್ಲೂ ಕಾಣಲು ಸಾಧ್ಯವಿರುವ ಗುಣವಲ್ಲ. ಜಗತ್ತಿನ ಚರಿತ್ರೆಯ ವಿವಿಧ ಯುಗಗಳಲ್ಲಿ ವಿಭಿನ್ನ ಜನಾಂಗಗಳು ಮತ್ತು ಸಂಸ್ಕೃತಿಗಳು ಈ ಗುಣದಿಂದಲೇ ಉತ್ಕೃಷ್ಟತೆಯನ್ನ ಸಾಧಿಸಿವೆ. ಆದರೂ ಈ ಗುಣ ಅಥವಾ ತತ್ವವು ಸಾರ್ವಜನಿಕ ಅರಿವಿನ ಭಾಗವಾಗಿರಲಿಲ್ಲ ಎಂಬುದು ವಾಸ್ತವ.
ಮತ-ಧರ್ಮದಲ್ಲೊಂದು ರಹಸ್ಯವಿದೆ. ಅದರ ಅಭಿವ್ಯಕ್ತಿ ಒಂದು ಬಗೆಯ ಮೌನ ಅಥವಾ ನಿಶ್ಚಲತೆಯಲ್ಲಿದೆ. ಇದೇ ಬಗೆಯ ರಹಸ್ಯ ಗುಣವು ಕಲಾಕೃತಿಗಳಿಗೆ ಮಾಂತ್ರಿಕ ಸ್ಪರ್ಶವನ್ನು ನೀಡಿ ಅವನ್ನು ಉತ್ಕೃಷ್ಟ ಕೃತಿಯಾಗಿಸುತ್ತದೆ. ಇದು ಒಬ್ಬ ಪಂಡಿತ ಅಥವಾ ಪ್ರೊಫೆಸರ್ನ ವಿಶ್ಲೇಷಣಾ ಕೌಶಲ ಮತ್ತು ಜ್ಞಾನಾಭಿವ್ಯಕ್ತಿಯ ರಹಸ್ಯವೂ ಹೌದು. ಈ ರಹಸ್ಯ ನಿಶ್ಚಲತೆಯು ಧ್ಯಾನಸ್ಥ ಬುದ್ಧನ ಚಿತ್ರಗಳಿರುವ ಸಾವಿರಾರು ದೇಗುಲಗಳನ್ನು ತುಂಬಿಕೊಂಡಿದೆ. ಮಡೋನ್ನಾಳ ಅಭಿವ್ಯಕ್ತಿಗೆ ಧಾರ್ಮಿಕ ಸ್ಪರ್ಶ ದೊರೆತಿರುವುದೂ ಈ ಗುಣದಿಂದಲೇ. ಯೇಸುಕ್ರಿಸ್ತನ ಚಿತ್ರಣವನ್ನು ಅಂತಿಮಗೊಳಿಸಲು ಲಿಯನಾರ್ಡೋ ಡಾ ವಿಂಚಿ ತನ್ನ ಕುಂಚವನ್ನು ಇದೇ ರಹಸ್ಯಕ್ಕೆ ಅದ್ದಬೇಕಾಯಿತು.
ಈ ನಿಶ್ಚಲತೆಯ ರಹಸ್ಯವು ಆಯ್ದ ಮಹಾಪುರಷರಿಗಷ್ಟೇ ಸೀಮಿತವಾದ ಗುಣವೇನೂ ಅಲ್ಲ. ಇಡೀ ಸೃಷ್ಟಿಯ ಪ್ರತಿಯೊಂದರಲ್ಲೂ ಈ ನಿಶ್ಚಲತೆಯು ನೈಸರ್ಗಿಕವಾಗಿಯೇ ಅಡಗಿಕೊಂಡಿದೆ. ಬೃಹತ್ ಯಂತ್ರದ ಪ್ರಧಾನ ಚಕ್ರ ಅತಿವೇಗದಲ್ಲಿ ತಿರುಗುವಾಗ ಚಲಿಸದೆ ನಿಂತಂತೆ ಕಾಣಿಸುತ್ತದೆ. ಅಚ್ಚು ತಿರುಗುತ್ತಿರುವಾಗ ಗಾಲಿಯ ಅಂಚು ಸುಷುಪ್ತಿಯಲ್ಲಿರುತ್ತದೆ. ಭೋರ್ಗರೆವ ಪ್ರವಾಹದೊಳಗೂ ಒಂದು ಮೌನವಿದೆ. ಹೃದಯದ ಎರಡು ಬಡಿತಗಳ ನಡುವೆ ಒಂದು ವಿರಾಮವಿದೆ. ನಿರಂತರವೆಂದು ಬಣ್ಣಿಸಬಹುದಾದ ಎಲ್ಲಾ ಚಲನೆಗಳೊಳಗೂ ವಿರಾಮವೆಂದು ಗುರುತಿಸಬಹುದಾದ ನಿಶ್ಚಲತೆಯ ಅಂಶವಿದೆ. ಇದು ಏಕಕಾಲದಲ್ಲಿ ಧನಾತ್ಮಕವೂ ಚಲನಶೀಲವೂ ಆಗಿರುತ್ತದೆ. ಈ ರಹಸ್ಯ ನಿಶ್ಚಲತೆ, ಮೌನ ಅಥವಾ ನಿರ್ಲಿಪ್ತತೆ ಎಂದು ಗುರುತಿಸಬಹುದಾದ ಗುಣವು ಗುರುಗಳೊಳಗೆ ಅಕ್ಷಯವಾಗಿತ್ತು. ಅವರು ಅದನ್ನು ತಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಸ್ರೋತವನ್ನಾಗಿ ಪರಿವರ್ತಿಸಿದರು. ಈ ಶಕ್ತಿಯೇ ಅವರನ್ನು ಬಹಳ ಯಶಸ್ವಿ ಶಿಕ್ಷಕನನ್ನಾಗಿ ಮಾಡಿತ್ತು. ಇದೇ ರಹಸ್ಯ ಶಕ್ತಿ ಅವರನ್ನು ಗುರುವನ್ನಾಗಿಸಿತು.
ಈ ಹೊತ್ತಿಗಾಗಲೇ ಗುರುಗಳ ಅನುಭಾವದ ಜೊತೆಗಿನ ಪಯಣ ಹಲವು ಮಜಲುಗಳನ್ನು ದಾಟಿ ಬಂದಿತ್ತು. ಅರುವಿಪ್ಪುರದ ನದೀ ತಟದಲ್ಲಿ ಮಾಡುತ್ತಿದ್ದ ತಪಸ್ಸಿಗೆ ಇದ್ದದ್ದು ಆರಾಧನೆಯಲ್ಲೇ ಕರಗಿ ಭಗವದ್ದರ್ಶನಕ್ಕಾಗಿ ಹಾತೊರೆಯುತ್ತಿರುವ ಭಕ್ತನ ಯಾಚನೆಯ ಸ್ವರೂಪ. ವರ್ಕಲಕ್ಕೆ ಅವರು ಬಂದಾಗ ಭಾವನೆಗಳೆಲ್ಲಾ ಸುಕೋಮಲ ಮೃದುತ್ವವನ್ನು ಪಡೆದಿದ್ದವು. ಕರುಣಾಳುವಾದ ತಾಯಿಯ ಅನಂತ ವಾತ್ಸಲ್ಯದಲ್ಲಿ ಸಾಂತ್ವನವನ್ನು ಹುಡುಕುವ ಮಗುವಿನಂಥಾ ಸ್ಥಿತಿಯದು. ಚಿಪ್ಪಿನೊಳಗೆ ಮುತ್ತು ರೂಪುಗೊಳ್ಳುವ ಪ್ರಕ್ರಿಯೆಯಂತೆ ಗುರುಗಳೂ ತಮ್ಮನ್ನು ವಿವಿಧ ಸ್ಥಿತಿಗಳಿಗೆ ಒಡ್ಡಿಕೊಂಡು ಅವುಗಳೆಲ್ಲವನ್ನೂ ಮೀರಿ ಹರಳಾದರು.
(ಮುಂದುವರಿಯುವುದು…)
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/08/21/guru-61/


[…] ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/22/guru-62/ […]
LikeLike