ನಾರಾಯಣ ‘ಗುರು ಮಾರ್ಗ’: ಭೂತದಿಂದ ಭವಿಷ್ಯದ ಕಡೆಗೆ #3

ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್ಈ ಸರಣಿಯ 8ನೇ ಅಧ್ಯಾಯದ ಕೊನೆಯ ಭಾಗ ಇಲ್ಲಿದೆ…

ಅಧ್ಯಾಯ 8.3

ವರ್ಕಲವನ್ನೇ ಕೇಂದ್ರಸ್ಥಾನವಾಗಿಟ್ಟುಕೊಂಡಿದ್ದ ಗುರುಗಳು 1912ರಲ್ಲಿ ಅದನ್ನು ಬದಲಾಯಿಸಿದರು. ಉತ್ತರಾಭಿಮುಖವಾದ ಅವರ ಪ್ರಯಾಣಗಳು ಹೆಚ್ಚಾದವು. ಈ ಬಗೆಯ ಹಲವು ಯಾತ್ರೆಗಳು ಮುಗಿಯುವ ಹೊತ್ತಿಗೆ ಕನ್ಯಾಕುಮಾರಿಯಿಂದ ಮಂಗಳೂರಿನ ತನಕದ ಭೂಭಾಗದಲ್ಲಿ ಎಲ್ಲೆಡೆಯೂ ಜನರು ಅವರನ್ನು ಗುರುವೆಂದು ಗುರುತಿಸಲಾರಂಭಿಸಿದರು. ಆಲುವಾದ ಆಶ್ರಮ ಗುರುಗಳ ಕೇಂದ್ರಸ್ಥಾನವಾಯಿತು. ಅಲ್ಲಿನ  ನದಿ ತಟದಲ್ಲಿ ನಿರ್ಮಿಸಲಾಗಿದ್ದ ತೆಂಗಿನಗರಿಗಳ ಸೂರಿನ ಕಟ್ಟಡವೇ ಗುರುಗಳ ವಾಸ ಸ್ಥಾನವಾಯಿತು. ಅವರು ಮತ್ತೆ ಸುದೀರ್ಘ ಧ್ಯಾನದಲ್ಲಿ ಲೀನರಾದರು.

ಭಕ್ತ ಎಂಬ ಪದದ ಸಾಮಾನ್ಯ ಅರ್ಥವನ್ನು ಗುರುಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ನಿಶ್ಶಬ್ದದ ಮಹಾ ಪ್ರವಾಹವೇ ಅವರ ಹೃದಯದೊಳಕ್ಕೆ ಪ್ರವೇಶಿಸಿತ್ತು. ಆಲುವಾದ ಆಶ್ರಮದಲ್ಲಿ ನದಿಯನ್ನು ದಿಟ್ಟಿಸುತ್ತಾ ಕುಳಿತ ಅವರನ್ನು ಕಂಡರೆ ಮರಳು ಮತ್ತು ಬಂಡೆಗಳ ಆಕಾರಕ್ಕನುಗುಣವಾಗಿ ಏರಿಳಿಯುತ್ತಾ ಹರಿವ ಸ್ಫಟಿಕ ಶುದ್ಧ ನೀರು ತನ್ನ ಮೇಲ್ಮೈಯಲ್ಲಿ ತಡೆಯಿಲ್ಲದೆ ಸೃಷ್ಟಿಸುವ ವಿನ್ಯಾಸಗಳನ್ನು ಆಸ್ವಾದಿಸುತ್ತಿದ್ದಾರೇನೋ ಎಂಬ ಭಾವ ಹುಟ್ಟುತ್ತದೆ. ಅವರು ಕುಳಿತಲ್ಲಿಂದ ನೋಡಿದರೆ ದೂರದಲ್ಲಿರುವ ಹೊಗೆ ಮಂಜಿನೊಳಗೆ ನದಿ ಎರಡಾಗಿ ಒಡೆಯುತ್ತಿತ್ತು. ಎರಡೂ ದಂಡೆಗಳಿಗೂ ದಟ್ಟವಾದ ಹಸಿರಿನ ಹೊದಿಕೆಯಿತ್ತು. ಪ್ರಕೃತಿ ಸಿರಿಯನ್ನು ಆಸ್ವಾದಿಸುತ್ತಾ ಅವರ ಮನಸ್ಸು ಬಹಿರ್ಮುಖಿಯಾಗುವುದರ ಬದಲಿಗೆ ರಸಾನುಭೂತಿಯ ಮೂಲ ಸ್ರೋತಸ್ಸಾದ ಆತ್ಮಾಭಿಮುಖವಾಗಿ ಪೂರ್ಣ ಸಂತೃಪ್ತಿಯನ್ನು ಅನುಭವಿಸುತ್ತಿತ್ತು. ನದಿಯಲ್ಲಿ ಆಗೀಗ ಚಲಿಸುತ್ತಿದ್ದ ದೋಣಿಗಳು ರೈತರಿಂದ ಖರೀದಿಸಿದ ತರಕಾರಿಗಳನ್ನು ಹತ್ತಿರದ ಊರಲ್ಲಿ ನಡೆಯುವ ಸಂತೆಗೆ ಒಯ್ಯುತ್ತಿದ್ದವು. ಆಶ್ರಮ ಸದಾ ಪ್ರಶಾಂತವಾಗಿರುತ್ತಿತ್ತು. ಆ ಪ್ರಶಾಂತಿಯ ಕೇಂದ್ರದಲ್ಲಿ ಗುರುಗಳಿದ್ದರು.

ಗುರುಗಳು ಮತ್ತೊಮ್ಮೆ ತಪೋನಿರತರಾಗಿದ್ದರು. ಈ ಕ್ಷಣದಲ್ಲಿ ಅವರು ಪ್ರವೇಶಿಸಿದ್ದ ಸ್ಥಿತಿಯನ್ನು ಪದಗಳಲ್ಲಿ ವಿವರಿಸಲು ಹೊರಡುವುದು ವ್ಯರ್ಥ ಪ್ರಯತ್ನವೆನಿಸುತ್ತದೆ. ವರ್ಷಗಳ ತಪಸ್ಸಿನಿಂದ ಪಡೆದಿದ್ದ ಪ್ರಶಾಂತತೆಯೊಳಗೆ ಸಮಯದ ಸಂಕುಚಿತ ಗಡಿಗಳು ಮುದುಡಿದವು. ವರ್ಷಗಳಷ್ಟು ವಿಸ್ತಾರವಾಗಿದ್ದೆಲ್ಲವೂ ಅವರ ಅರಿವಿನ ಪರಿಧಿಯೊಳಗೆ ಬಂದು ನಿಂತವು. ಕಾಲದ ಮರೆಯಲಿ ಅಡಗಿದ್ದ ಅನಶ್ವರವಾದ ಪ್ರಾಚೀನ ಸತ್ಯಗಳೆಲ್ಲವೂ ನವನವೀನ ಸ್ಫುರಣೆಗಳಾಗಿ ವರ್ತಮಾನದ ಪ್ರಜ್ಞೆಯನ್ನು ಪದಳನ್ನು ಮೀರಿ ಬೆಳಗಿಸುವ ಪ್ರಭೆಯಾಯಿತು. ಈ ಭಾವವನ್ನು ಗುರುಗಳು ಅಭಿವ್ಯಕ್ತಿಸಿರುವುದು ಹೀಗೆ:

ಹತ್ತುಸಾವಿರ ಆದಿತ್ಯರೊಂದಾಗಿ
ಬರುವಂತೆ ಬರುವುದು ವಿವೇಕವೃತ್ತಿ,
ಅರಿವನ್ನು ಮಾಸುವ ಅನಿತ್ಯಮಾಯೆಯೆಂಬ ಈ
ಇರುಳ ಹರಿದೇಳ್ವ ಆದಿಸೂರ್ಯನಹುದು.
(ಆತ್ಮೋಪದೇಶ ಶತಕಂ: 35 | ಅನುವಾದ : ವಿನಯ ಚೈತನ್ಯ )

ಮಾಯೆಯ ಬೇರುಗಳನ್ನು ತುಂಡರಿಸಿಕೊಂಡ ಮೇಲೆ ಗುರುಗಳ ಮಟ್ಟಿಗೆ ಸತ್ಯದ ಮುಂಬೆಳಗು ಕೇವಲ ಭವಿಷ್ಯದ ಭರವಸೆಯಾಗಿ ಉಳಿಯಲಿಲ್ಲ. ವಿಶ್ವಾತ್ಮಕವಾದ ಸತ್ಯ ಅರ್ಥಾತ್ ಜ್ಞಾನೋದಯವೆಂಬುದು ನಿತ್ಯದ ಅನುಭವವಾಗಿ ಶಾಶ್ವತವಾಗಿ ಹೆಣೆದುಕೊಂಡಿತು. ಮರುಭೂಮಿಯಲ್ಲಿ ಹನಿ ನೀರು ದೊರೆಯದೆ ಬಾಯಾರಿದ ಯಾತ್ರಿಕನೆದುರು ಭೋರ್ಗರೆದು ಪ್ರವಹಿಸುವ ನದಿಯೊಂದು ಪ್ರತ್ಯಕ್ಷಗೊಂಡಂಥ ಸ್ಥಿತಿಯಲ್ಲಿ ಗುರುಗಳಿದ್ದರು. ಅವರೊಂದು ನಾದಲೋಕದೊಳಕ್ಕೆ ಪ್ರವೇಶಿಸಿದ್ದರು. ಅವರ ಕಿವಿಯ ತಮಟೆಗಳನ್ನು ಜಾಗೃತಗೊಳಿಸಿದ ಆ ಸಂಗೀತವು ಅವರ ಕಣ್ಣನ್ನೂ ತೆರೆಸಿತು. ಅದನ್ನವರು ವಿವರಿಸಿರುವುದು ಹೀಗೆ:

ಧ್ವನಿಮಯವಾಗಿ ಗಗನ ಜ್ವಲಿಸುವುದಂ
ದಿಗೆ ಕೆಡುವುದದರೊಳೆಲ್ಲ ದೃಶ್ಯಜಾಲವು,
ಮತ್ತಲ್ಲಿ ತ್ರಿಪುಟಿಗೆ ಪೂರ್ಣತೆ ನೀಡುವ
ಸ್ವರವು ಅಡಗುವೆಡೆ ಸ್ವಯಂಪ್ರಕಾಶವು.

(ಅನುವಾದ : ವಿನಯ ಚೈತನ್ಯ )

ಭಕ್ತಿ ಪರವಶತೆಯು ಕೊನೆಗೊಂಡ ಕ್ಷಣವಿದು. ಪಾಪ, ಕೇಡು ಮತ್ತು ಯಾತನೆಗಳೆಂಬ ಅನುಭೂತಿಗಳಿಗೆ ಅವಕಾಶವಿಲ್ಲದ ಸ್ಥಿತಿಯಿದು. ಒಳಿತು ಮತ್ತು ಕೆಡುಕು ಹಾಗೆಯೇ ಜ್ಞಾತಾಜ್ಞಾತಗಳೆಲ್ಲವೂ ಭೇದವಳಿದು ಎರಡಲ್ಲದ ತತ್ವದಲ್ಲಿ ಒಂದಾದವು. ದೃಶ್ಯಾತ್ಮಕ ಜಗತ್ತು ಕರಗಿ ಈ ದರ್ಶನದಲ್ಲಿ ಒಂದಾಯಿತು. ಇದು ಬಂದು ಹೋಗುವ ದೃಷ್ಟಿಯಲ್ಲ. ಇದು ಶಾಶ್ವತವಾಗಿ ಉಳಿಯುವುದಕ್ಕೆ ಗುರುಗಳೊಳಗೆ ಪ್ರವೇಶ ಪಡೆದ ದರ್ಶನ. ಇಲ್ಲಿ ಎಲ್ಲಾ ಬಣ್ಣಗಳೂ ಒಂದಾಗಿ ಶ್ವೇತ ಪ್ರಭೆಯಾದವು. ಗುರುಗಳ ಅನುಭವವನ್ನು ಪದಗಳಲ್ಲಿ ವಿವರಿಸುವುದು ಅಸಾಧ್ಯ. ಒಂದು ವೇಳೆ ಅದಕ್ಕೆ ಪ್ರಯತ್ನಿಸಿದರೂ ಕತ್ತಲಿನ ರೂಪ ಭೇದಗಳನ್ನು ಮಾನದಂಡವಾಗಿಟ್ಟುಕೊಂಡು ಬೆಳಕಿನ ಸ್ವಭಾವವನ್ನು ವರ್ಣಿಸಿದಂತಾಗುತ್ತದೆ. ಕೆಲವರು ಇದನ್ನು ವಿವರಿಸಲು ಪ್ರಯತ್ನಿಸಿ ‘ನಿರ್ವಿಕಲ್ಪ ಸಮಾಧಿ’ ಎಂದು ಹೆಸರಿಸಿದ್ದಾರೆ. ಇನ್ನು ಕೆಲವರು ಇದನ್ನು ‘ಪರಮಹಂಸಾನುಭೂತಿ’ ಎನ್ನುತ್ತಾರೆ. ಬೌದ್ಧರು ಈ ಸ್ಥಿತಿಯನ್ನು ‘ನಿರ್ವಾಣ’ ಎಂದು ಕರೆಯುತ್ತಾರೆ. ಅಮಿತಾಬನ ಅಸೀಮ ಬೆಳಕಿನೊಳಗೆ ವ್ಯಕ್ತಿಗತ ಅಸ್ಮಿತೆಯು ಲೀನವಾಗುವ ಸ್ಥಿತಿಯಿದು. ಇಷ್ಟೆಲ್ಲಾ ಸಂಕೀರ್ಣತೆಗಳು ಬೇಡವೆಂದುಕೊಂಡವರು ಇದನ್ನು ‘ಪರಮಾನಂದ’ ಎಂದು ಸರಳವಾಗಿ ಬಣ್ಣಿಸುತ್ತಾರೆ.

ಹೆಚ್ಚಿನವರು ಈ ಸ್ಥಿತಿಯನ್ನು ತಲುಪುವುದಕ್ಕೆ ತಮ್ಮ ಇಹದ ವ್ಯಾಪಾರಗಳಿಗೆ ವಿದಾಯ ಹೇಳಬೇಕಾಗುತ್ತದೆ. ಆ ಮೂಲಕ ಅವರು ಪಡೆಯುವುದು ಮುಕ್ತಿ ಅಥವಾ ಸ್ವರ್ಗ ಪ್ರಾಪ್ತಿ. ಇದನ್ನು ಸಂಸ್ಕೃತದಲ್ಲಿ ಮೋಕ್ಷ ಎಂದು ಕರೆಯುತ್ತಾರೆ. ಈ ಪರಿಕಲ್ಪನೆಯ ಪ್ರಕಾರ ಭೂಮಿಯಲ್ಲಿ ಬದುಕಿರುವಾಗಲೇ ಮನುಷ್ಯ ಮೋಕ್ಷದ ಮಟ್ಟಕ್ಕೇರಲು ಸಾಧ್ಯವಿದೆ. ಈ ಸ್ಥಿತಿಯನ್ನು ಮೋಕ್ಷ ಎನ್ನುವ ಬದಲಿಗೆ ‘ಜೀವನ್ಮುಕ್ತಿ’ ಎಂದು ಗುರುತಿಸಲಾಗುತ್ತದೆ. ಯಾವ ಹೆಸರಿನಿಂದ ಕರೆದರೂ ಆ ಅನುಭವದ ಸ್ವರೂಪದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಆಧುನಿಕ ಪರಿಭಾಷೆಯಲ್ಲಿ ಈ ಅನುಭವವನ್ನು Cosmic Consciousness (ವಿಶ್ವ ಪ್ರಜ್ಞೆ) ಎಂದು ವಿವರಿಸುವುದಿದೆ. ಏನನ್ನೂ ಉಳಿಸದೆ ಎಲ್ಲವನ್ನೂ ಒಳಗೊಂಡು ಸಮಷ್ಟಿಯಾದ ಪ್ರಜ್ಞೆಯ ಒಳಹೊಕ್ಕು ಆ ಪ್ರಜ್ಞೆಯೇ ಆಗಿಬಿಡುವ ಸ್ಥಿತಿಯಿದು. ಮೇಲೆ ವಿವರಿಸಲಾದ ಸಕಲ ಅನುಭವಗಳನ್ನು ಹಿಡಿದಿಟ್ಟುಕೊಳ್ಳಬಹುದಾದ ಪರಮಾರ್ಥ ದರ್ಶನವಿದು. ಇದನ್ನು ಬಹುಮಟ್ಟಿಗೆ ವಿವರಿಸಬಹುದಾದ ಸಂಸ್ಕೃತ ಪದವೊಂದಿದೆ- ‘ಅದ್ವೈತ’. ಎರಡಲ್ಲದ ಸ್ಥಿತಿ ಎಂದು ಹೇಳುವ ಪದವಿದು. ಉಪನಿಷತ್ತುಗಳು ಈ ಸ್ಥಿತಿಯನ್ನು ‘’ತತ್-ತ್ವಂ-ಅಸಿ’ ಎಂದು ಬಹಳ ಸ್ಪಷ್ಟತೆಯಿಂದ ವಿವರಿಸಿವೆ. ಈ ಅನಶ್ವರ ಮತ್ತು ವಿಶ್ವಾತ್ಮಕ ತತ್ವಕ್ಕೆ ಗುರುಗಳ ಬದುಕೇ ಅಭಿವ್ಯಕ್ತಿಯಾಗಿತ್ತು. ಅವರ ಬರವಣಿಗೆಯೂ ಇದೇ ತಾತ್ವಿಕತೆಯನ್ನು ಪ್ರತಿಪಾದಿಸಿದೆ. ಆವರ ‘ಆತ್ಮೋಪದೇಶ ಶತಕಂ’ನಲ್ಲಿ ಪ್ರಾಚೀನ ಕಾಲದಲ್ಲೇ ಕಂಡುಕೊಂಡದ್ದರ ಬಗ್ಗೆ ಹೇಳುವುದು ಹೀಗೆ:

ಅರಿವು ನಿಜಸ್ಥಿತಿಯನ್ನರಿಯಲೋಸುಗ ಇಲ್ಲಿ
ಧರೆ ಮೊದಲಾದ ವಿಭೂತಿಯಾಗಿ ತಾನೇ
ಉರುಳುವವಸ್ಥೆಯೊಳೇರಿ ಬದಲಾಗಿ ಸುತ್ತಿ
ತಿರುಗುವ ಅಲಾತದಂತೆ ತಿರುಗುತಿಹುದು.

ಈ ಅದೈತ ಪ್ರಜ್ಞೆಯೆಂಬುದು ಗುರುಗಳೊಳಗೆ ಸದಾ ಬೆಳಗುತ್ತಿತ್ತು. ಅವರು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿಯೂ ಅದ್ವೈತಾಭಿವ್ಯಕ್ತಿಯ ಮುದ್ರೆಯಿರುತ್ತಿತ್ತು. ಆಲುವಾ ಅದ್ವೈತಾಶ್ರಮವೇ ಇದರ ಮೊದಲ ಅಭಿವ್ಯಕ್ತಿ. ಈ ಆಶ್ರಮದೊಳಗೆ ವಸತಿ ಶಾಲೆಯೊಂದನ್ನೂ ಗುರುಗಳು ಆರಂಭಿಸಿದರು. ಬ್ರಹ್ಮಚರ್ಯ ಪಾಲನೆಯೊಂದಿಗೆ ಇಲ್ಲಿಯೇ ವಾಸಿಸಬೇಕಾಗಿದ್ದ ವಿದ್ಯಾರ್ಥಿಗಳು ಸಂಸ್ಕೃತ, ಇಂಗ್ಲಿಷ್ ಹಾಗೂ ಮತ್ತಿತರ ವಿಷಯಗಳನ್ನು ಕಲಿಯುತ್ತಿದ್ದರು. ಇಲ್ಲಿನ ಶಾಲಾ ಕಟ್ಟದ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಗುರುಗಳು ವಿಶೇಷ ಆಸಕ್ತಿವಹಿಸಿದ್ದರು. ಇಲ್ಲಿ ಮುಸ್ಲಿಮರು, ಕ್ರೈಸ್ತರು, ಕೆಳ ಮತ್ತು ಮೇಲ್ಜಾತಿ ಹಿಂದೂಗಳೆಲ್ಲರೂ ಒಟ್ಟಾಗಿ ಬದುಕುತ್ತಿದ್ದರು. ಪ್ರತೀ ಮುಂಜಾನೆಯೂ ಆಶ್ರಮದ ಬದಿಯಲ್ಲೇ ಹರಿಯುವ ನದಿಯಲ್ಲಿ ಮಿಂದು ಕಲಿಯಲು ಆರಂಭಿಸುತ್ತಿದ್ದ ವಿದ್ಯಾರ್ಥಿಗಳು ತಾವು ಕಲಿಯುವ ಸ್ಥಳವು ಪ್ರತಿಪಾದಿಸುತ್ತಿದ್ದ ವಿಶಾಲ ಮನೋಭಾವದ ಆದರ್ಶಗಳನ್ನು ಮೈಗೂಡಿಸಿಕೊಂಡು ಬುದ್ಧಿಶಾಲಿಗಳಾದರು. ಜನರು ಅದೈತದ ಆದರ್ಶಗಳನ್ನು ಈ ಬಗೆಯಲ್ಲಿ ರೂಢಿಸಿಕೊಳ್ಳಬೇಕೆಂದು ಗುರುಗಳು ಆಶಿಸುತ್ತಿದ್ದರು. ಈ ಸಂಸ್ಥೆಯ ಬಗ್ಗೆ ಹಿಂದಿನ ಅಧ್ಯಾಯದಲ್ಲಿಯೇ ವಿವರಿಸಲಾಗಿದೆ.

ಗುರುಗಳ ಕಾರ್ಯಕ್ಷೇತ್ರವು ಬಹಳ ವಿಸ್ತಾರವಾಗಿ ಬೆಳೆದಿತ್ತು. ಹೊಸ ದೇಗುಲ ಪ್ರತಿಷ್ಠಾಪನೆ, ಶಾಲೆಯ ಆರಂಭ ಅಥವಾ ಇಂಥದ್ದೇ ಯಾವುದಾದರೊಂದು ಕಾರ್ಯಕ್ರಮಕ್ಕಾಗಿ ಗುರುಗಳ ಆಶೀರ್ವಾದವನ್ನು ಅಪೇಕ್ಷಿಸಿ ಕರೆದೊಯ್ಯಲು ಯಾರಾದರೂ ಇದ್ದೇ ಇರುತ್ತಿದ್ದರು. ಈ ರೀತಿಯ ಆಹ್ವಾನಗಳಿಲ್ಲದ ದಿನಗಳು ಇರಲೇ ಇಲ್ಲ. ಬಡಜನರ ನಾಯಕರೊಬ್ಬರಿಗೆ ತಮ್ಮ ಸಾರ್ವಜನಿಕ ಸಭೆಯಲ್ಲಿ ಗುರುಗಳ ಉಪಸ್ಥಿತಿ ಬೇಕನ್ನಿಸುತ್ತಿತ್ತು. ಧಾರ್ಮಿಕ ಆಚರಣೆಯೊಂದರ ವಿಧಿ ವಿಧಾನಗಳ ಕುರಿತ ವಿವಾದ ಇಡೀ ಹಳ್ಳಿಯನ್ನೇ ಎರಡಾಗಿ ಒಡೆದಿದ್ದಾಗ ಅದನ್ನು ಪರಿಹರಿಸುವುದಕ್ಕೂ ಗುರುಗಳ ಸಾನಿಧ್ಯ ಅವಶ್ಯವೆಂದು ಜನರಿಗನ್ನಿಸುತ್ತಿತ್ತು. ಕುಟುಂಬದೊಳಗಿನ ಜಗಳ ಸದಸ್ಯರನ್ನು ದೂರವಾಗಿಸಿದ್ದಾಗ ಅವರನ್ನು ಮತ್ತೆ ಸೇರಿಸಿ ಕೌಟುಂಬಿಕ ಭದ್ರತೆಯನ್ನೊದಗಿಸುವ ಕೆಲಸಕ್ಕೂ ಗುರುಗಳ ಮಾತೇ ಪ್ರಮಾಣ. ಗುರುಗಳ ಜನಸಂಪರ್ಕಕ್ಕೆ ನೂರಾರು ಮುಖಗಳಿದ್ದವು. ಪ್ರತಿಯೊಂದು ಮುಖವೂ ಜನರೊಂದಿಗಿನ ಗುರುಗಳ ಸಂಬಂಧವನ್ನು ಹೆಚ್ಚು ಗಾಢವಾಗಿಸುತ್ತಿತ್ತು. ನಿತ್ಯವೂ ವಿಸ್ತಾರಗೊಳ್ಳುತಿದ್ದ ಭಕ್ತರ ವಲಯವು ಗುರುಗಳನ್ನು ಪ್ರೀತಿ ಗೌರವಗಳೊಂದಿಗೆ ನಾಯಕನನ್ನಾಗಿ ಸ್ವೀಕರಿಸಿತು.

ಗುರುಗಳ ಸಂಪರ್ಕಕ್ಕೆ ಬರುವುದೆಂದರೆ ಬದುಕಿಡೀ ಅವರ ಪ್ರಭಾವಕ್ಕೆ ಒಳಗಾಗುವುದೆಂದೇ ಅರ್ಥ!

(ಎಂಟನೇ ಅಧ್ಯಾಯ ಮುಕ್ತಾಯ)


ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/22/guru-62/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.