ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಶವಾಕಿಸ್ ನಗರದ ರಾಜಕುಮಾರನನ್ನು ಕಂಡರೆ ಎಲ್ಲರಿಗೂ ಬಹಳ ಪ್ರೀತಿ. ಗಂಡಸರು, ಹೆಂಗಸರು, ಮಕ್ಕಳು ಮಾತ್ರವಲ್ಲ, ಪ್ರಾಣಿ ಪಕ್ಷಿಗಳೂ ಅವನನ್ನು ಕಂಡು ಇಷ್ಟಪಡುತಿದ್ದವು.
ರಾಜಕುಮಾರನ ಹೆಂಡತಿಗೆ ಮಾತ್ರ ಪ್ರೀತಿ ಇರಲಿಲ್ಲ. ಅವನು ಕಂಡರೂ ಆಗುತಿರಲಿಲ್ಲ. ದ್ವೇಷಮಾಡುತಿದ್ದಳು.
ಒಂದು ದಿನ ಪಕ್ಕದ ಊರಿನ ರಾಜಕುಮಾರಿ ಅವಳನ್ನು ಕಾಣಲು ಬಂದಳು. ಇಬ್ಬರೂ ಮಾತಾಡುತ್ತ ಕೂತರು. ಮಾತು ಗಂಡಂದಿರ ಬಗ್ಗೆ ಹೊರಳಿತು.
ಮಾತಾಡುತ್ತಾ ಶವಾಕಿಸ್‍ನ ರಾಜ ಕುಮಾರಿ ಭಾವ ತುಂಬಿದ ದನಿಯಲ್ಲಿ ಹೀಗಂದಳು. ‘ಮದುವೆಯಾಗಿ ಇಷ್ಟು ವರ್ಷ ಕಳೆದರೂ ನೀನು ನಿನ್ನ ಗಂಡನ ಜೊತೆ ಎಷ್ಟು ಸಂತೋಷವಾಗಿದೀಯ ಅಂತ ನೋಡಿದರೆ ನನಗೆ ಅಸೂಯೆ ಆಗತ್ತೆ. ನನಗೆ ಗಂಡನನ್ನು ಕಂಡರೆ ಆಗಲ್ಲ. ದ್ವೇಷ ಅವನ ಬಗ್ಗೆ. ಅವನು ನನಗೆ ಮಾತ್ರ ಅಂತ ಅಲ್ಲವೇ ಅಲ್ಲ. ಎಲ್ಲರಿಗೂ ಬೇಕು ಅವನು. ನನ್ನ ಹಣೆ ಬರಹ ನೋಡು.’
ಬಂದಿದ್ದ ರಾಜಕುಮಾರಿ ಅವಳ ಮುಖ ದಿಟ್ಟಿಸಿ ನೋಡಿದಳು. ‘ನಿಜ ಗೊತ್ತಾ ನಿನಗೆ? ನೀನು ನಿನ್ನ ಗಂಡನ್ನ ಪ್ರೀತಿ ಮಾಡತೀಯ. ಅವನ ಮೇಲಿರುವ ಪ್ರೀತಿ ತೋರಿಸಲಾಗದೆ ಬಚ್ಚಿಟ್ಟುಕೊಂಡಿದೀಯ. ನಾನೂ ನನ್ನ ಗಂಡ ಒಂದೂ ಮಾತಾಡದೆ ಒಬ್ಬರನ್ನೊಬ್ಬರು ಸಹಿಸಿಕೊಂಡಿದೇವೆ. ಅದನ್ನ ನೋಡಿ ನೀನೂ ಬೇರೆಯವರೂ ‘ಆಹಾ! ಇವರು ಸಂತೋಷವಾಗಿದಾರೆ!’ ಅಂದುಕೊಳ್ಳುತೀರಿ, ಅಷ್ಟೇ,’ ಅಂದಳು.

